ಮಾಲೆಗಾಂವ್: 2008ರ ಮಾಲೆಗಾಂವ್ ಸ್ಫೋಟ ಪ್ರಕರಣದ ಎಲ್ಲಾ ಆರೋಪಿಗಳು ಖುಲಾಸೆಗೊಂಡ ನಂತರ, ಸಂತ್ರಸ್ತರ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 17 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರವೂ “ನ್ಯಾಯ ನಿರಾಕರಣೆ” ಆಗಿದೆ ಎಂದು ಆರೋಪಿಸಿರುವ ಅವರು, ಈ ತೀರ್ಪನ್ನು ಸಂಭ್ರಮಿಸಿದ ಹಿಂದುತ್ವ ಸಂಘಟನೆಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಸಂತ್ರಸ್ತರ ಕುಟುಂಬದ ಸದಸ್ಯರು ಮಹಾರಾಷ್ಟ್ರದ ಮಾಲೆಗಾಂವ್ ನಲ್ಲಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಮೈನಾರಿಟಿ ಡಿಫೆನ್ಸ್ ಕಮಿಟಿ (MDF) ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಸಂತ್ರಸ್ತರು ಪ್ಲೇಕಾರ್ಡ್ ಮತ್ತು ಬ್ಯಾನರ್‌ಗಳನ್ನು ಹಿಡಿದು, ರಾಜ್ಯ ಸರ್ಕಾರ ಕೂಡಲೇ ಎನ್‌ಐಎ ವಿಶೇಷ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಬೇಕು ಎಂದು ಆಗ್ರಹಿಸಿದ್ದಾರೆ.
ಸರ್ಕಾರಕ್ಕೆ ಗಡುವು
ಎಂಡಿಎಫ್ ಸಹ-ಸಂಸ್ಥಾಪಕ ಮುಸ್ತಾಕೀಮ್ ಡಿಗ್ನಿಟಿ ಮಾತನಾಡಿ, ಆಗಸ್ಟ್ 14ರೊಳಗೆ ಸರ್ಕಾರವು ಎನ್‌ಐಎ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಸರ್ಕಾರ ವಿಫಲವಾದರೆ, ಎಂಡಿಎಫ್ ಪ್ರಜಾಸತ್ತಾತ್ಮಕ ಮತ್ತು ಶಾಂತಿಯುತ ಹೋರಾಟಗಳನ್ನು ನಡೆಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಕರಣದ ಹಿನ್ನೆಲೆ
ಸೆಪ್ಟೆಂಬರ್ 29, 2008ರಂದು ರಂಜಾನ್ ಮಾಸ ಮತ್ತು ಈದ್ ಹಬ್ಬದ ಎರಡು ದಿನಗಳ ಮೊದಲು ಮಾಲೆಗಾಂವ್‌ನ ಭಿಕ್ಕು ಚೌಕ್‌ನಲ್ಲಿರುವ ಮಸೀದಿಯ ಬಳಿ ನಿಲ್ಲಿಸಿದ್ದ ಮೋಟರ್‌ಸೈಕಲ್‌ನಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟಗೊಂಡಿತ್ತು. ಈ ಭಯೋತ್ಪಾದಕ ದಾಳಿಯಲ್ಲಿ ಆರು ಮುಸ್ಲಿಂ ಭಕ್ತರು ಮೃತಪಟ್ಟು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.
ಆರಂಭದಲ್ಲಿ ಈ ಪ್ರಕರಣವನ್ನು ಮಹಾರಾಷ್ಟ್ರದ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಕರ್ಕರೆ ತಮ್ಮ ತನಿಖೆಯಲ್ಲಿ, ಈ ಕೃತ್ಯದಲ್ಲಿ ಹಿಂದೂಗಳ ಕೈವಾಡ ಇರುವುದನ್ನು ಬಯಲಿಗೆಳೆದಿದ್ದರು. ಎಟಿಎಸ್ ಸಲ್ಲಿಸಿದ ಆರೋಪಪಟ್ಟಿಯಲ್ಲಿ, ಬಾಂಬ್‌ಗಾಗಿ ಬಳಸಿದ ಮೋಟರ್‌ಸೈಕಲ್ ಮಾಜಿ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರ ಹೆಸರಿನಲ್ಲಿ ನೋಂದಣಿಯಾಗಿತ್ತು ಎಂದು ಉಲ್ಲೇಖಿಸಲಾಗಿತ್ತು. ನಂತರ, ಸೇನಾಧಿಕಾರಿ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಲಾಗಿತ್ತು.
2014ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಹಸ್ತಾಂತರಿಸಲಾಯಿತು. ಈ ಅವಧಿಯಲ್ಲಿ, ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ರೋಹಿಣಿ ಸಾಲಿಯನ್ ಅವರು, ಆರೋಪಿಗಳ ವಿಷಯದಲ್ಲಿ “ಮೃದು ಧೋರಣೆ ಅನುಸರಿಸಲು” ತಮ್ಮ ಮೇಲೆ ಒತ್ತಡ ಹೇರಲಾಗಿದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದರು.
ನ್ಯಾಯಾಲಯದ ತೀರ್ಪು ಮತ್ತು ಆಕ್ರೋಶ
ಜುಲೈ 31, 2025ರಂದು ಎನ್‌ಐಎ ವಿಶೇಷ ನ್ಯಾಯಾಲಯವು ಪ್ರಕರಣದ ಏಳು ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿತು. 1,000 ಪುಟಗಳ ತೀರ್ಪಿನಲ್ಲಿ, ನ್ಯಾಯಾಧೀಶ ಎ.ಕೆ. ಲಹೋಟಿ, “ಆರೋಪಿಗಳ ವಿರುದ್ಧ ಬಲವಾದ ಅನುಮಾನಗಳಿವೆ. ಆದರೆ, ಕೇವಲ ಅನುಮಾನದ ಆಧಾರದ ಮೇಲೆ ಶಿಕ್ಷೆ ನೀಡಲಾಗದು” ಎಂದು ಹೇಳಿ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ “ಸಂಶಯದ ಲಾಭ” ನೀಡಿ ಎಲ್ಲರನ್ನು ಬಿಡುಗಡೆ ಮಾಡಿದರು.
ಈ ತೀರ್ಪು, 17 ವರ್ಷಗಳಿಂದ ನ್ಯಾಯಕ್ಕಾಗಿ ಕಾಯುತ್ತಿದ್ದ ಸಂತ್ರಸ್ತರಿಗೆ ತೀವ್ರ ಆಘಾತವನ್ನುಂಟು ಮಾಡಿದೆ. ಆದಾಗ್ಯೂ, ನಗರದಲ್ಲಿ ಶಾಂತಿ ಕಾಯ್ದುಕೊಳ್ಳಲಾಗಿದೆ. ಆದರೆ, ತೀರ್ಪನ್ನು ಸಂಭ್ರಮಿಸಿ ಸಿಹಿ ಹಂಚಿದ ಬಲಪಂಥೀಯ ಹಿಂದುತ್ವ ಗುಂಪುಗಳ ವಿರುದ್ಧ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಇದು ನಮ್ಮ ಗಾಯಗಳ ಮೇಲೆ ಉಪ್ಪು ಸುರಿದಂತೆ” ಎಂದು ಎಂಡಿಎಫ್ ಸಂಚಾಲಕ ಆಸಿಫ್ ಶೇಖ್ ಹೇಳಿದ್ದಾರೆ. 2006ರ ಮುಂಬೈ ರೈಲು ಸ್ಫೋಟ ಪ್ರಕರಣವನ್ನು ಉದಾಹರಣೆಯಾಗಿ ನೀಡಿದ ಅವರು, “ಆ ಪ್ರಕರಣದಲ್ಲಿ ಖುಲಾಸೆಗೊಂಡವರೆಲ್ಲರೂ ಮುಸ್ಲಿಮರಾಗಿದ್ದರು, ಆದರೆ ದೇಶದಲ್ಲಿ ಯಾವ ಮುಸ್ಲಿಂ ಕೂಡ ಅದನ್ನು ಸಂಭ್ರಮಿಸಲಿಲ್ಲ. ಆದರೆ ಇಲ್ಲಿ, ಆರೋಪಿಗಳು ‘ನಿರ್ದೋಷಿ’ ಎಂದು ಸಾಬೀತಾಗದಿದ್ದರೂ, ಸಂಶಯದ ಲಾಭದಿಂದ ಬಿಡುಗಡೆ ಹೊಂದಿದರೂ ಸಂಭ್ರಮಾಚರಣೆ ನಡೆಸಲಾಗುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಭ್ರಮಾಚರಣೆಯು ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಯತ್ನ ಎಂದು ಅವರು ಆರೋಪಿಸಿದ್ದಾರೆ.
ಸಂಭಾಲ್ ದೇವಸ್ಥಾನ-ಮಸೀದಿ ವಿವಾದ: ಪ್ರಕರಣದ ವಿಚಾರಣೆಯನ್ನು ಆಗಸ್ಟ್ 21ಕ್ಕೆ ನಿಗದಿಪಡಿಸಿದ ನ್ಯಾಯಾಲಯ


