Homeಸಂದರ್ಶನಸಂವಿಧಾನ ಇಲ್ಲದಿದ್ರೆ ಮೋದಿ ಸಾಹೇಬ್ರೇ, ನೀವು ಸಹಾ ಪ್ರಧಾನಿ ಆಗ್ತಿದ್ದಿಲ್ಲ

ಸಂವಿಧಾನ ಇಲ್ಲದಿದ್ರೆ ಮೋದಿ ಸಾಹೇಬ್ರೇ, ನೀವು ಸಹಾ ಪ್ರಧಾನಿ ಆಗ್ತಿದ್ದಿಲ್ಲ

- Advertisement -
- Advertisement -

ಪತ್ರಿಕೆ: ದೇಶದ ಸಂವಿಧಾನವೇ ಅಪಾಯದಲ್ಲಿದೆ ಎಂಬ ಮಾತು ಕೇಳಿಬರುತ್ತಿದೆ. ನಿಮ್ಮ ಅನಿಸಿಕೆ ಏನು ಸಾರ್?
ಮಲ್ಲಿಕಾರ್ಜುನ ಖರ್ಗೆ: ನೀವು ಟಿವಿ ನೋಡೋದಿಲ್ಲವೇನು? ಈ ಮಾತನ್ನ ನಾನು ಪಾರ್ಲಿಮೆಂಟಲ್ಲೇ ಹೇಳಿದ್ದೇನೆ. ‘ಸಂವಿಧಾನ ಇಲ್ಲದಿದ್ರೆ ಮೋದಿ ಸಾಹೇಬ್ರೇ, ನೀವು ಸಹಾ ಪ್ರಧಾನಿ ಆಗ್ತಿದ್ದಿಲ್ಲ; ನನ್ನಂತಹ ಬಡ ಕುಟುಂಬದ ಕಾರ್ಮಿಕನ ಮಗ ಅಪೊಸಿಷನ್ ಲೀಡರ್ ಆಗೋಕಾಗ್ತಿರ್ಲಿಲ್ಲ’ ಅಂತ. ಆದ್ರೆ ಅವ್ರು ಸಂವಿಧಾನ ಡಿಸ್ಟ್ರಾಯ್ ಮಾಡೋಕೆ ನಿಂತಿದ್ದಾರೆ. ಆದ್ರೆ ನಾವು ಇಂಥವಕ್ಕೆ ಒಂದೇ ಸಾರಿ ಕ್ವಿಕ್ ಆಗಿ ರಿಯಾಕ್ಟ್ ಮಾಡಲ್ಲ. ಕೇರ್‍ಫುಲಿ ರಿಯಾಕ್ಟ್ ಮಾಡ್ತೀವಿ.
ಸಂವಿಧಾನ ಹೋದ್ರೆ ದೇಶಾನೇ ಉಳಿಯಲ್ಲ. ಬಹಳ ಜನ ಈ ರಿಸರ್ವೇಶನ್‍ಗಾಗಿ ನಮ್ಮಂಥವರು ಸಂವಿಧಾನದ ಪರ ನಿಂತಿದ್ದೀವಿ ಅಂದ್ಕೋತಾರೆ. ಸಂವಿಧಾನದಲ್ಲಿ ರಿಸರ್ವೇಷನ್‍ದು ಎರಡು ಕ್ಲಾಸ್ó ಇರಬಹುದು ಅಷ್ಟೇ. ಅದೂ ಸಹಾ ಸಂವಿಧಾನದ ಜೊತೆಗೆ ಬಂದಿದ್ದಲ್ಲ. ಪೂನಾ ಪ್ಯಾಕ್ಟ್ ನಂತರ ಸ್ವಾತಂತ್ರ್ಯ ಪೂರ್ವದಲ್ಲೇ ಬಂತು. ಬಾಂಬೆ ಪ್ರಾವಿನ್ಸ್‍ನೊಳಗೆ ಚುನಾವಣೇಲೇ ರಿಸರ್ವೇಶನ್ ಇತ್ತು.
ಸಂವಿಧಾನ ದೇಶದ ಎಲ್ಲರಿಗೂ ಬೆಳವಣಿಗೆ ತರುವ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನ, ಮೂಲಭೂತ ಹಕ್ಕುಗಳನ್ನ ಕೊಡ್ತದೆ. ಆಧುನಿಕ ಪ್ರಪಂಚದಲ್ಲಿ ಮನುಷ್ಯರ ಬೆಳವಣಿಗೆಗೆ ಬೇಕಾಗುವ ನೀತಿ ಅದು. ವೀಕರ್ ಇರುವವರಿಗೆ ಸ್ವಲ್ಪ ಅನುಕೂಲಗಳನ್ನ ಮಾಡಿಕೊಡಬೇಕು ಅಂತ ಅದು ಹೇಳ್ತದೆ ಅಷ್ಟೇ. ಇದು ಎಲ್ಲರನ್ನೂ ಉಳಿಸುವ ನೀತಿ ಸಂಹಿತೆ ಅಂತ ಅರ್ಥ ಮಾಡ್ಕೋಬೇಕಿದೆ.
ಸಂವಿಧಾನಬದ್ಧವಾಗಿ ಕೊಟ್ಟಿರುವ ಹಕ್ಕುಗಳ ರಕ್ಷಣೆ ಮಾಡ್ತಿಲ್ಲ; ಟಿವಿಯವರು ಮಾಧ್ಯಮದವರು ರಿಯಾಲಿಟಿ ಚೆಕ್ ಮಾಡಿ ವಾಸ್ತವ ಹೇಳಿದ್ರೆ ಅವರ ಮೇಲೆ ನಿರ್ಬಂಧ ಹಾಕೋದು, ಎಬಿಪಿ ಚಾನೆಲ್ ಮತ್ತೆ ಎನ್‍ಡಿಟಿವಿಯವರ ಮೇಲೆ ಒತ್ತಡ ಹೇರೋದು ಇಂಥವು ನಡೆಯುತ್ತಿದೆ. ನಿಮಗೆ ಅವರು ತಪ್ಪು ಹೇಳ್ತಿದ್ದಾರೆ ಅನ್ಸಿದ್ರೆ ಮಾನನಷ್ಟ ಮೊಕದ್ದಮೆ ಹಾಕಲಿಕ್ಕೆ, ಕ್ರಿಮಿನಲ್ ಮೊಕದ್ದಮೆ ಹಾಕಲಿಕ್ಕೂ ಸಂವಿಧಾನಬದ್ಧವಾಗಿ ಕಾನೂನುಗಳು ಅವಕಾಶ ಮಾಡಿಕೊಟ್ಟಿವೆ. ಅದನ್ನು ಮಾಡಲ್ಲ.
ವಾಜಪೇಯಿ ಇದ್ದಾಗ ಸಹಾ ಇಂಥದ್ದು ನಡೆಯಲಿಲ್ಲ. ನಾನು ಭಾಳ ಟೀಕಿಸಿದ ಪಂಡಿತ್ ನೆಹರೂ ಅವರು, ನಂತರ ಭೋಜನಕೂಟದಲ್ಲಿ ಸಿಕ್ಕಾಗ ನನ್ನನ್ನು ಮೆಚ್ಚಿಕೊಂಡ್ರು ಅಂತ ವಾಜಪೇಯಿ ಭಾಷಣ ಮಾಡಿದ್ದನ್ನ ನೀವೆಲ್ಲಾ ನೋಡಿದ್ದೀರಿ. ಆದ್ರೆ ಇವತ್ತು ಇಲ್ಲಿ ಉಲ್ಟಾ ಆಗ್ತಿದೆ. ಅಟಾನಮಸ್ ಇನ್ಸ್‍ಟಿಟ್ಯೂಷನ್ಸ್‍ಅನ್ನೇ ಉಳಿಸ್ತಿಲ್ಲ. ಹೀಗಾಗಿ ನಾವು ಮೋದಿಯನ್ನ ಸರ್ವಾಧಿಕಾರಿ ಅಂತೀವಿ. ಆದ್ರೆ, ನಾನು ಶಿಸ್ತಿನ ಆಡಳಿತ ಕೊಡುತ್ತಿರೋದಕ್ಕೆ ಸರ್ವಾಧಿಕಾರಿ ಅಂತಿದೀರಿ ಅಂತ ಅವ್ರು ಹೇಳ್ತಿದಾರೆ.

ಪತ್ರಿಕೆ: ಇವತ್ತು ಬೀದಿಯಲ್ಲೂ ಸರ್ಕಾರವನ್ನ ಬಗ್ಗಿಸುವಂತಹ ಜನಾಂದೋಲನಗಳಿಲ್ಲ; ಪಾರ್ಲಿಮೆಂಟಲ್ಲೂ ವಿರೋಧ ಪಕ್ಷಗಳ ಬಲ ಭಾಳ ಕಡಿಮೆ ಇದೆ. ಹೀಗಿರುವಾಗ ವಿರೋಧ ಪಕ್ಷದ ನಾಯಕರಾಗಿ ನಿಮಗೆ ಎದುರಾಗಿರುವ ಸವಾಲುಗಳು ಏನು?
ಖರ್ಗೆ: ಇವತ್ತು ಅವ್ರಿಗೆ (ಬಿಜೆಪಿ) Massive indigestive majority ಸಿಕ್ಕಿದೆ. ಮೊಟ್ಟ ಮೊದಲ ಬಾರಿಗೆ ಸ್ಪೀಕರ್ ಸಹಾ ಸಂಸದರ ಮಾತು ಕೇಳದಂತೆ ನೋಡಿಕೊಳ್ತಿದಾರೆ. ನಾವು ಎಷ್ಟೇ ಮಹತ್ವದ ಪ್ರಶ್ನೆ ಕೇಳಿದ್ರೂ, ನಿಮ್ಮ ಕಡೆಯಿಂದ ಟಿವಿ ಕ್ಯಾಮೆರಾನೇ ಬೇರೆ ಕಡೆಗೆ ತಿರುಗಿಸಿದ್ರೆ? ನಿಮ್ಮ ಮೈಕ್ ಆಫ್ ಮಾಡಿದ್ರೆ ಏನು ಮಾಡೋಕಾಗುತ್ತೆ? ಅಂಥದ್ದು ನಡೆಯುತ್ತಿದೆ. ಹಿಂದೆ point of order rise ಮಾಡಿದ್ರೆ, ಉತ್ತರ ಕೊಟ್ಟೇ ಕ್ಲೋಸ್ ಮಾಡ್ಬೇಕಿತ್ತು. ಈಗ ಅಂಥದ್ದೇನೂ ಇಲ್ಲ. ಸಂಸದೀಯ ಸಚಿವರೂ ಮಾತಾಡಲ್ಲ; ಅವರ ಮಾತು ನಡೆಯುತ್ತೋ ಇಲ್ಲವೋ ಅದೂ ಗೊತ್ತಿಲ್ಲ.
ನಮ್ಮ ಸಂಖ್ಯಾಬಲ ಕಡಿಮೆ ಇರೋದ್ರಿಂದ ನಿಯಮಗಳ ಪ್ರಕಾರ ನಮಗೆ ಕಡಿಮೆ ಸಮಯ ಸಿಗುತ್ತೆ. ಕಲಾಪ ಸಲಹಾ ಸಮಿತಿಯಲ್ಲೂ ಸಹಾ ಬೇರೆ ರೀತಿ ನಡೆಯುತ್ತದೆ. ಪ್ರಮುಖ ವಿರೋಧ ಪಕ್ಷದ ನಾಯಕನಾದ ನನಗೆ ಅವಕಾಶ ತಪ್ಪಿಸಲು ಅವರಿಗೆ ಅನುಕೂಲಕರ ಪ್ರಶ್ನೆ ಕೇಳಲು ಇನ್ನೊಬ್ಬರಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಇಂಥದ್ದೆಲ್ಲಾ ನಡೆದರೂ, ನಾವು ಸಾಕಷ್ಟು ತಯಾರಿ ಮಾಡಿಕೊಂಡು ಹೋಗುತ್ತಿದ್ದೇವೆ. ಯಾರಾದ ಮೇಲೆ ಯಾರು, ಯಾವ ಪಾಯಿಂಟ್ಸ್ ರೈಸ್ ಮಾಡಬೇಕೆಂದು ಮಾತಾಡಿಕೊಂಡು, ಸಂಸತ್ತಿನಲ್ಲಿ ಜನರ ಸಮಸ್ಯೆಗಳು ಬರುವಂತೆ ಮಾಡುತ್ತಿದ್ದೇವೆ.
ಆದ್ರೆ ಸಂಸತ್ತಿನ ಹೊರಗಡೆಯೇ ಅಷ್ಟು ರೆಸ್ಪಾನ್ಸ್ ಇಲ್ಲ. ಮುಖ್ಯವಾಗಿ ಮಾಧ್ಯಮಗಳಲ್ಲಿ. ಸಾಮಾನ್ಯ ಜನರನ್ನ ಅಲ್ಲಲ್ಲಿ ಕೊಲ್ಲುತ್ತಿರುವುದು, ಬುದ್ಧಿಜೀವಿಗಳ ಮೇಲೆ ದಾಳಿ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಾಳಿ ಇಂಥವು ಹಲವು ಪ್ರಶ್ನೆಗಳನ್ನು ಎತ್ತುತ್ತಿದ್ದೇವೆ. ಆದರೆ ಇದಕ್ಕೆ ಮಾಧ್ಯಮಗಳಲ್ಲಿ ಪ್ರಚಾರ ಸಿಗಲ್ಲ. ಒಂದು ವೇಳೆ ಬಂದರೂ ಅವರಿಗೆ ಫೋನ್ ಬರುತ್ತೆ. ನಂತರ ಅದನ್ನು ತೆಗೀತಾರೆ.
ಇವತ್ತು ಆಂದೋಲನವಾಗದಿರೋದಕ್ಕೆ ಮುಖ್ಯವಾಗಿ ನಮ್ಮ ಯುವಕರಲ್ಲಿ ideological conviction ಇಲ್ಲ. ಅವ್ರೆಲ್ಲಾ ಫೋನಿನಲ್ಲಿ ಮುಳುಗಿ ಹೋಗಿದ್ದಾರೆ. ಅದ್ರಲ್ಲಿ ಬರೋದನ್ನೇ ನಿಜ ಅಂದ್ಕೊಂಡು ರಾಜಕೀಯವಾಗಿಯೂ ತಪ್ಪು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ, ದೇಶದ ಬಗ್ಗೆ! ಹಾಗಾಗಿಯೇ ನಮ್ಮ ಪಕ್ಷದ ಕಾರ್ಯಕರ್ತರಿಗೂ ಸಹಾ ನಾನು ಹೇಳೋದು ಮನೆ ಮನೆ ಬಾಗಿಲಿಗೆ ಹೋಗಿ, ಬಾಯಿಂದ ಬಾಯಿಗೆ ವಿಚಾರ ಹಬ್ಬಲಿ. ನಾವು ಇದೇ ಕೆಲ್ಸ ಮಾಡ್ಬೇಕು ಅಷ್ಟೇ.

ಪತ್ರಿಕೆ: ಹೈದ್ರಾಬಾದ್ ಕರ್ನಾಟಕಕ್ಕೆ 371 ಜೆ ಸಂವಿಧಾನ ತಿದ್ದುಪಡಿ ಮೂಲಕ ವಿಶೇಷ ಸ್ಥಾನಮಾನ ಸಿಗುವುದ್ರಲ್ಲಿ ನಿಮ್ಮ ಪಾತ್ರವೂ ಮಹತ್ವದ್ದಾಗಿತ್ತು. ಆದ್ರೆ, ಈಗ ಅದರ ಜಾರಿ ವಿಚಾರದಲ್ಲಿ ನೀವು ಅಷ್ಟು ಗಮನ ಕೊಡುತ್ತಿಲ್ಲ ಎಂಬ ಆರೋಪವಿದೆಯಲ್ಲಾ ಸಾರ್?
ಖರ್ಗೆ: ಒಂದ್ವಿಚಾರ ಎಲ್ರೂ ಮರೀತಾರೆ. ಇದು ಸಂವಿಧಾನ ತಿದ್ದುಪಡಿ. ಇದನ್ನು ಮಾಡ್ಬೇಕಂದ್ರೆ ಸಂಸತ್ತಿನಲ್ಲಿ ನಮ್ಗೆ ಮೂರನೇ ಎರಡು ಭಾಗ ಮೆಜಾರಿಟಿ ಬೇಕು. ನಮ್ಮ ಪಾರ್ಟಿಗೆ ಮೆಜಾರಿಟೀನೇ ಇರ್ಲಿಲ್ಲ. ಆದ್ರ ನನಗೆ ಹೆಮ್ಮೆ ಅನ್ನಿಸ್ತದೆ. ನಾನು ಮೊದ್ಲು ಪಾರ್ಟಿ ಒಳ್ಗೆ ಮನವರಿಕೆ ಮಾಡಿಕೊಟ್ಟೆ. ಸೋನಿಯಾಗಾಂಧಿಯವರಿಗೆ ಇದರ ಕ್ರೆಡಿಟ್ ಹೋಗ್ಬೇಕು. ನಂತರ ಅವರು ಇತರ ಪಾರ್ಟಿಗಳನ್ನೂ convince ಮಾಡಿದ್ರು. ಸರ್ವಾನುಮತದಿಂದ ಈ ತಿದ್ದುಪಡಿ ಆಯ್ತು. ಪ್ರೆಸಿಡೆಂಟ್ ಸಹಿ ಆಯ್ತು. ನಂತರ ಇಲ್ಲಿ ಉಪಸಮಿತಿ ಮಾಡಿದ್ರು, ನಿಯಮಗಳನ್ನ ಮಾಡಿದ್ರು. ನಂತರ ಗರ್ವನರ್ ಹತ್ತಿರ ಹೋಯಿತು. ಈಗ 3 ವರ್ಷದಿಂದ ಸಾಕಷ್ಟು ಕೆಲ್ಸಾ ನಡೆಯುತ್ತಿದೆ.
ಆದ್ರೆ, ಯಸ್, ಇನ್ನೂ ಚೆನ್ನಾಗಿ ಕೆಲ್ಸಾ ಆಗ್ಬೇಕು. ನಮ್ಮ ಅಧಿಕಾರಿಗಳಿಗೆ ಬೀದರ್, ಗುಲ್ಬರ್ಗಾ ಅನ್ನೋದು ಹೇಗಂದ್ರೆ ಅಂಡಮಾನ್ ನಿಕೋಬಾರ್ ಇದ್ದಂತೆ. ಅವ್ರು ಹೋಗ್ಲಿ ನಿಮ್ಮ ಪತ್ರಕರ್ತರೇ ಆ ಭಾಗಕ್ಕೆ ವರ್ಗಾವಣೆ ಅಂದ್ರೆ ಇಷ್ಟಪಡಲ್ಲ; ಬೇಕಂದ್ರ ಕೇಳಿ ನೋಡಿ ನಿಮ್ಮ ಕೊಲೀಗ್ಸ್‍ನ. ಈ ಮೆಂಟಾಲಿಟಿಯಲ್ಲಿ ಸಮಸ್ಯೆ ಇದೆ. ಜೊತೆಗೆ ಕೆಲವು ಬೇರೆ ಸಮಸ್ಯೆಗಳೂ ಇವೆ.
ಕಾರ್ಯದರ್ಶಿ ಮಟ್ಟದ ಒಬ್ಬ ಅಧಿಕಾರಿಗೆ ತನ್ನ ಇಲಾಖೆಯಲ್ಲಿ 10 ಕೋಟಿ ತನಕ ಖರ್ಚು ಮಾಡುವ ಅಧಿಕಾರ ಇದೆ. ಅದೇ ಮಟ್ಟದ ಹೈದ್ರಾಬಾದ್ ಕರ್ನಾಟಕ ಬೋರ್ಡ್‍ನ ಮುಖ್ಯಸ್ಥರಿಗೆ ಬರೀ 2 ಕೋಟಿ. ಸರ್ಕಾರದಿಂದ ಮಂಜೂರಾಗ್ತಿರೋ ಹಣ, ಅದ್ರಲ್ಲಿ ನಂತರ ಬಿಡುಗಡೆಯಾಗೋ ಹಣ ಇದ್ರಲ್ಲೂ ಸಮಸ್ಯೆ ಇದೆ. ಮಂತ್ರಿಗಳ ನೇಮಕ ಆದ ತಕ್ಷಣ ಹೈ.ಕ ಬೋರ್ಡಿಗೂ ಅಧ್ಯಕ್ಷರ ನೇಮಕ ಆಗಬೇಕು. ಸ್ಕೀಮುಗಳಿಗೆ ಕಾನೂನಿನ ಚೌಕಟ್ಟಿನೊಳಗೇ ಫ್ಲೆಕ್ಸಿಬಿಲಿಟಿ ತೋರಿಸ್ಬೇಕು. ಇವೆಲ್ಲದರ ಬಗ್ಗೆ ನಾನು 3 ಸಾರಿ ಪತ್ರ ಬರೆದಿದ್ದೀನಿ. ಅವನ್ನೆಲ್ಲಾ ನಾನು ಪತ್ರಿಕೆಗಳಿಗೆ ಬಿಡುಗಡೆ ಮಾಡಲ್ಲ.
ನೇಮಕಾತಿಯಲ್ಲಿ, ಆರ್ಥಿಕ ಅನುದಾನದಲ್ಲಿ, ಶಿಕ್ಷಣದಲ್ಲಿ ಸಾಕಷ್ಟು ಅನುಕೂಲ ಆಗ್ತಿದೆ. ಹಲವು ಅಧಿಕಾರಿಗಳು ಈ ಭಾಗದಿಂದ ಆಯ್ಕೆಯಾಗ್ತಿದ್ದಾರೆ. ನೀರಾವರಿ ಇನ್ನೂ ಚೆನ್ನಾಗಿ ಆಗ್ಬೇಕು. ಕೈಗಾರಿಕೆಗಳು ಬರಬೇಕು. ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಉದ್ಯೋಗ ಕೊಡಬೇಕು. ಅದಿನ್ನೂ ಸಾಲದು. ಹಂತ ಹಂತವಾಗಿ ಆಗುವಂತೆ ನಾವೆಲ್ಲರೂ ಪ್ರಯತ್ನ ಪಡಬೇಕು.
ಒಂದ್ ಗಮನಿಸ್ಬೇಕು. ಅಡ್ವಾಣಿಯವರು ಯಾವುದನ್ನು ರಿಜೆಕ್ಟ್ ಮಾಡಿ ಆಗಲ್ಲ ಅಂತ ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ಹೇಳಿದ್ರೋ ಅದನ್ನ ನಮ್ ಸರ್ಕಾರ ಇದ್ದಾಗ ಮಾಡಿದ್ದೇವೆ.

ಪತ್ರಿಕೆ: ನೀವು ಗುರುಮಿಠಕಲ್‍ನಿಂದ 8 ಸಾರಿ ಗೆದ್ದಿದ್ರಿ. ಆದ್ರೆ, ಅದು ಮೀಸಲು ಕ್ಷೇತ್ರವಾಗುಳಿಯದೇ ಚಿತ್ತಾಪುರ ಮೀಸಲು ಕ್ಷೇತ್ರವಾದಾಗ ನೀವು ಕ್ಷೇತ್ರ ಬದಲಾಯಿಸಿದ್ರಿ. ಯಾಕೆ? ಇದು ನಿಮ್ಮ ವ್ಯಕ್ತಿಗತ ಆಯ್ಕೆಯೋ, ಈ ದೇಶದ ಸಾಮಾಜಿಕ ರಾಜಕೀಯ ಪರಿಸ್ಥಿತಿಯೇ ಹಾಗಿದೆಯೋ?
ಖರ್ಗೆ: ನೋಡಿ, ನಾನು ಕ್ಷೇತ್ರ ಬದಲಾವಣೆ ಮಾಡಿದಾಗ ಗುರುಮಿಠಕಲ್ ಜನರೂ ಬಂದು ತಮ್ಮಲ್ಲಿಗೇ ಬರಬೇಕೆಂದು ಒತ್ತಾಯಿಸಿದರು. ನಾಮಿನೇಷನ್ ಹಾಕಕ್ಕೆ ಬಿಡದೇ ಹಠ ಮಾಡಿದ್ರು. ಆದ್ರೆ, ನಾನು ಬೇರೆ ತೀರ್ಮಾನ ತಗೊಂಡೆ. ನನಗೆ ಓಟು ಹಾಕಿದ ಜನಕ್ಕೆ ಅಲ್ಲಿ ಎಂ.ಎಲ್.ಎ ಆಗೋಕೆ ಅವಕಾಶ ಇರಲಿಲ್ಲ. ಈಗಲೂ ನಾನು ಅಲ್ಲೇ ಸ್ಪರ್ಧಿಸಿದ್ರೆ ಕೆಲವರಿಗೆ ಅಸಮಾಧಾನ ಇರುತ್ತದೆ. ಅದು ಹೊರಗೆ ಬರದಿದ್ರೂ ಬೂದಿ ಮುಚ್ಚಿದ ಕೆಂಡದ ರೀತಿ ಇರುತ್ತದೆ. ಏನಪ್ಪಾ ಇಷ್ಟು ವರ್ಷ ಇವ್ರಿಗೇ ಕೊಟ್ಟೀವಿ. ಈಗಲೂ ನಮಗೆ ಅವಕಾಶವಿಲ್ಲ ಅಂತ ಬರುತ್ತೆ. ಮೇಲಾಗಿ ಆ ಸಾರಿ ಕಲಬುರಗಿ ಜಿಲ್ಲೇಲಿ 3 ಕ್ಷೇತ್ರಗಳು ರಿಸರ್ವ್ ಆಗಿಬಿಟ್ಟವು. ಅದರ ಮೇಲೆ ಇನ್ನೂ ಒಂದು ಕ್ಷೇತ್ರದಲ್ಲಿ ನಾನು ಸ್ಪರ್ಧಿಸ್ತೇನೆ ಎಂದ್ರೆ ಸಮಸ್ಯೆ ಆಗ್ತಿತ್ತು.
ಇಷ್ಟರ ಮೇಲೂ ನಿಮ್ಗೆ ಹೇಳ್ಬೇಕು. ಮೊದಲ ಸಾರಿ ನಾನು ಅಲ್ಲಿಂದ ಗೆದ್ದಾಗ 9,000 ಮಾರ್ಜಿನ್‍ನಲ್ಲಿ ಗೆದ್ದಿದ್ದೆ. 8ನೇ ಸಾರಿ ಗೆದ್ದಾಗ 49,000 ಮಾರ್ಜಿನ್. ಪ್ರತೀ ಸಾರಿ (ಒಂದ್ಸಾರಿ ಬಿಟ್ಟು) ಮಾರ್ಜಿನ್ ಜಾಸ್ತಿಯೇ ಆಗ್ತಿತ್ತು. ಹಾಗಿದ್ರೂ ನಾವು ಪರಿಸ್ಥಿತೀನೂ ನೋಡಬೇಕು. ಕೆ.ಎಚ್.ರಂಗನಾಥ್ ಅವರು ಜನರಲ್ ಕ್ಷೇತ್ರದಲ್ಲೇ ಮುಂದುವರೆದ್ರು; ರಮೇಶ್ ಜಾರಕಿಹೊಳಿ ಹಂಗೇ ಮುಂದುವರೆದ್ರು. ಇದನ್ನೆಲ್ಲಾ ನೋಡ್ಬೇಕು. ಇಲ್ಲಾಂದ್ರೆ ಟಿಕೆಟ್ ಕೊಟ್ಟು ಅವರು ಸೋತು ಹತಾಶರಾಗುವುದಕ್ಕಿಂತ ಬದಲಾವಣೆ ಮಾಡೋದು ಒಳ್ಳೇದು.

ಪತ್ರಿಕೆ: ನೀವು ಸುದೀರ್ಘಕಾಲ ರಾಜ್ಯದಲ್ಲೂ ಸಚಿವರಾಗಿದ್ರಿ. ಕೇಂದ್ರದಲ್ಲೂ ಎರಡು ಮುಖ್ಯ ಖಾತೆಗಳನ್ನು ನಿಭಾಯಿಸಿದ್ರಿ. ಈಗ ವಿರೋಧ ಪಕ್ಷದ ನಾಯಕರಾಗಿದ್ದೀರಿ. ಮುಖ್ಯಮಂತ್ರಿ ಸ್ಥಾನಕ್ಕಿಂತ ಹೆಚ್ಚಿನದ್ದನ್ನೇ ಪಡೆದುಕೊಂಡಿದ್ದೀರಿ ಅನ್ನಿಸುತ್ತಾ?
ಖರ್ಗೆ: ನಾನು ಕಾಂಗ್ರೆಸ್‍ಗೆ ಸೇರ್ದಾಗ ನನಗೆ ಏನು ಸಿಗುತ್ತೆ ಅಂತ ಆಲೋಚ್ನೆ ಮಾಡಿ ಸೇರ್ಲಿಲ್ಲ. 8ನೇ ತರಗತಿಯಲ್ಲಿ ಇದ್ದಾಗಿಂದ ನಾನು ಲೀಡರ್ರೇ ಆಗಿದ್ದೆ. ಕಾಲೇಜು ಸ್ಟೂಡೆಂಟ್ ಯೂನಿಯನ್ ಪ್ರೆಸಿಡೆಂಟ್ ಆಗಿ ಗೆದ್ದು ಬಂದಿದ್ದೆ. ನಂತ್ರ ಅಲ್ಲಿ ಕಾರ್ಮಿಕರ ಸಂಘಟನೆ ಮಾಡ್ತಿದ್ದೆ. ಸಾಮಾನ್ಯ ಜನರ ಪರವಾಗಿ ಕೆಲ್ಸ ಮಾಡ್ತಿದ್ದಾಗ ಧರ್ಮ್‍ರಾಜ್ ಅಫ್ಜಲ್‍ಪುರ್‍ಕರ್ ಅನ್ನೋ ಕಾಂಗ್ರೆಸ್ ಲೀಡ್ರು, ‘ನೀನು ಮಾಡ್ಬೇಕೂಂತಿರೋದ್ನೆಲ್ಲಾ ನಮ್ ಪಾರ್ಟೀನೇ ಮಾಡ್ಲಿಕ್ಕತ್ತದಾ. ನೀನು ಕಾಂಗ್ರೆಸ್ ಸೇರು’ ಅಂತ ಹೇಳಿದ್ರು. ಬ್ಯಾಂಕ್ ರಾಷ್ಟ್ರೀಕರಣ, ಜೀತ ವಿಮುಕ್ತಿ, ಭೂಸುಧಾರಣೆ ಇವೆಲ್ಲಾ ನಡೀತಿದ್ದ ಕಾಲ ಅದು. ಶೋಷಿತ ಸಮುದಾಯಗಳಿಗೆ ಹಲವಾರು ಪ್ರೋಗ್ರಾಮ್ಸ್ ಇದ್ವು. ಹಾಗಾಗಿ ನಾನು ಕಾಂಗ್ರೆಸ್ ಸೇರಿದೆ. ಸೇರೋವಾಗ್ಲೇ ನಾನು ಲೀಡ್ರು. ಹಾಗಾಗಿ ಅಲ್ಲಿಂದ ಒಂದ್ ಸಾರೀನೂ ಸೋಲದೆ ಗೆದ್ದು ಬಂದೆ, ಇಲ್ಲೀತನಕ ಬಂದಿದ್ದೇನೆ. ಹೈಕಮ್ಯಾಂಡ್ ಕೊಟ್ಟಿರುವ ಜವಾಬ್ದಾರಿ ಇವು.

ಪತ್ರಿಕೆ: ರಾಜಕಾರಣ ಬಿಟ್ಟರೆ ನಮ್ಮ ಹವ್ಯಾಸಗಳೇನು?
ಖರ್ಗೆ: ನಾನು ಹಿಂದೆ ಹಾಕಿ ಆಡ್ತಿದ್ದೆ. ಸ್ಟೂಡೆಂಟ್ ಆಗಿದ್ದಾಗ ಗುಲ್ಬರ್ಗಾ ಡಿವಿಜನ್ ಟೀಂಗೆ ಆಡಿದ್ದೆ. ಮೈಸೂರಿಗೆ ಹೋಗಿ 1963-64ರಲ್ಲಿ ಮೈಸೂರು ಡಿವಿಜನ್ ಮೇಲೆ ಗೆದ್ದಿದ್ವಿ. ಆಗ ಕೂರ್ಗ್ ತಂಡವೇ ಟಾಪ್. ಆದ್ರೆ, ಡಿವಿಜನಲ್ ಟೀಂ ಆಗಿ ನಾವು ಎರಡು ಸಾರಿ ಅವರ ಮೇಲೆ ಗೆದ್ವಿ. ಆಮೇಲೆ ಆಟ ಎಲ್ಲಾ ಆಡ್ಲಿಕ್ಕೆ ಆಗ್ಲಿಲ್ಲ.
ಓದ್ತೀನಿ. ಈಗಂತೂ ಭಾಳಾ ಓದ್‍ಬೇಕು. (ಅಲ್ಲೇ ಇದ್ದ ಅವರ ಪತ್ನಿ ರಾತ್ರಿ 2ರ ತನಕ ಓದ್ತಾರೆ ಅಂತ ಹೇಳಿದ್ರು. ಅವರನ್ನಾ ತೋರಿಸಿ) ನಮ್ ಮನೇವ್ರು ದಪ್ಪ ದಪ್ಪ ಪುಸ್ತಕ ಓದ್ತಾರೆ. ದುರ್ಗಾಸ್ತಮಾನ ಕಾದಂಬರಿ ಓದ್ತಾ ಇದ್ರು. ನನಗನ್ನಿಸೋದು ನಮ್ಮ್ ಜನರಿಗೆ ಬದುಕಿಸ್ಬೇಕು ಅಂದ್ರೆ ನಾನು ಅಂಥಾ ಪುಸ್ತಕ ಓದಿ ಪ್ರಯೋಜ್ನ ಏನು? ಅದಕ್ಕೆ ಬೇಕಿರೋ ಪುಸ್ತಕಾ ತುಂಬಾ ಓದ್ತೀನಿ. ಅದ್ರಲ್ಲೂ ಸೈಂಟಿಫಿಕ್ ಥಿಂಕಿಂಗ್ ಇರೋ ಧಾರ್ಮಿಕ ಪುಸ್ತಕಗಳನ್ನ ಓದ್ತೀನಿ.

ಪತ್ರಿಕೆ: ಸರ್, ಕಂಬಾಲಪಲ್ಲಿ ಘಟನೆ ನಡೆದಾಗ ನೀವೇ ಗೃಹ ಸಚಿವರು. ಆ ಕೇಸಿನಲ್ಲಿ ಯಾರಿಗೂ ಶಿಕ್ಷೆಯಾಗಲಿಲ್ಲ. ಇಂತಹ ಇನ್ನೂ ಹಲವಾರು ಹತ್ಯಾಕಾಂಡಗಳ ಕಥೆ ಹೀಗೇ ಆಗಿದೆ.
ಖರ್ಗೆ: ಹೌದು, ಮಹಿಳೆಯರ ಮೇಲಿನ ಅತ್ಯಾಚಾರದ ವಿಷಯದಲ್ಲಿ, ಬೇರೆ ಬೇರೆ ರೀತಿಯ ಗೂಂಡಾಗಿರಿ ನಡೆದಾಗಲೂ ಹೀಗೆಯೇ. ಕೂಡಲೇ ಕೆಲವು ಪ್ರತಿಭಟನೆಗಳು ಆಗ್ತವೆ. ಆ ನಂತರ ಕಾನೂನು ಪ್ರಕ್ರಿಯೆಯೂ ನಿಧಾನಕ್ಕೆ ದುರ್ಬಲಗೊಳ್ಳುತ್ತದೆ. ಸಮಾಜದ ಪ್ರತಿಕ್ರಿಯೆಯೂ ಇಲ್ಲವಾಗುತ್ತದೆ. ಹಾಗಾಗಿ ಯಾರು ಬಲಿಪಶುಗಳೋ ಅವರೇ ಸಾಕ್ಷಿ ಹೇಳಲ್ಲ. ಯಾಕಂದ್ರೆ ಅಷ್ಟೊತ್ತಿಗೆ ಭಾಳಾ ವರ್ಷ ಆಗಿರುತ್ತೆ. ಆಗಿದ್ದು ಆಗೋಯ್ತು, ಇರೋರು ಚೆನ್ನಾಗಿರಾಣ ಅಂತ ಹಳ್ಳೀಲಿ ಜನಾ ಹೇಳ್ತಿರ್ತಾರೆ. ಇದು ಬಹಳ ಕೆಟ್ಟದು. ಯಾಕಂದ್ರೆ ಇದರಿಂದ ಏನ್ ಮಾಡಿದ್ರೂ ಪರ್ವಾಗಿಲ್ಲ ಅಂತ ಅನ್ನಿಸತ್ತೆ. ನಾವೆಲ್ಲರೂ ಒಂದೇ ಧರ್ಮ ಅಂತ ಹೇಳೋರೂ, ಇಂತಹ ಸಮಯದಲ್ಲಿ ಜಾತಿಗಳಾಗಿಬಿಡ್ತಾರೆ.
ಅಟ್ರಾಸಿಟಿ ಕಾಯ್ದೆಯದ್ದೂ ದುರುಪಯೋಗ ಆಗಿರಬಹುದು; ಯಾರೋ ಎತ್ತಿಕಟ್ಟಿಯೂ ಮಾಡಿಸಿರಬಹುದು. ಆದ್ರೆ 90% ಅಟ್ರಾಸಿಟಿ ನಿಜವಾಗಿ ಆಗಿರುತ್ತಲ್ಲಾ. ಅದಕ್ಕೇನು ಮಾಡೋದು.

ಪತ್ರಿಕೆ: 1985ರ ನಂತರ ಕೇಂದ್ರದಲ್ಲಿ ಕಾಂಗ್ರೆಸ್‍ಗೆ ಬಹುಮತ ಬಂದಿಲ್ಲ. ಕಾಂಗ್ರೆಸ್‍ನ ನಾಯಕರುಗಳಲ್ಲೇ ಶರದ್‍ಪವಾರ್, ಮಮತಾ ಬ್ಯಾನರ್ಜಿ, ವೈಎಸ್‍ಆರ್ ಥರದವರು ಪ್ರಾದೇಶಿಕ ಪಕ್ಷಗಳನ್ನು ಮಾಡಿಕೊಂಡಿದ್ದಾರೆ. ಈಗ ಕಾಂಗ್ರೆಸ್‍ಗೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸುವ ಕಾಲ ಮುಗಿದು ಹೋಗಿದೆಯಾ?
ಖರ್ಗೆ: ನೋಡ್ರೀ ಕಾಂಗ್ರೆಸ್‍ಗೊಂದು ವಿಚಾರಧಾರೆಯಿದೆ. ಗಾಂಧಿಯವರು ಈ ಪಕ್ಷದಲ್ಲಿದ್ರು. ವಿಶೇಷವಾಗಿ ಪಂಡಿತ್ ನೆಹರೂ ಅವರು ಈ ವಿಚಾರಧಾರೆಯನ್ನು ರೂಪಿಸಿದ್ರು. ಈಗ ಏನೇನೋ ಹೇಳ್ಲಿಕ್ಕತ್ತಾರ. ಇವರ ಸೆಕ್ಯುಲರಿಸಂ ಅಂದ್ರೆ ಆಂಟಿ ರಿಲಿಜನ್ ಇದೆ ಇತ್ಯಾದಿ. ಅದು ವಾಸ್ತವ ಅಲ್ಲ. ಇದು ಇನ್‍ಕ್ಲುಸಿವ್ ಪಾರ್ಟಿ. ನಮ್ಮಿಂದ ಕೆಲವ್ರು ಒಡೆದ್ ಹೋಗಿರೋದು ನಿಜ. ಹಾಗಂತ ನಾವು ನಮ್ಮ ತತ್ವ ಬಿಡೋಕಾಗಲ್ಲ. ಸ್ಥಳೀಯ ಪಾರ್ಟಿಗಳು ಸಮಯಕ್ಕೆ ತಕ್ಕಂತೆ ಅಡ್ಜಸ್ಟ್‍ಮೆಂಟ್ ಮಾಡ್ಕೋತಾರೆ. ನಾವು ಈಗ ದುರ್ಬಲರಾಗಿರ್ಬೋದು. ವಿ ವಿಲ್ ಫೈಟ್ ಅಂಡ್ ಆರ್ಗನೈಸ್.
ಸೀತಾರಾಂ ಕೇಸರಿಯವರು ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್ ಮುಗಿದೋಯ್ತು ಅಂತಿದ್ರು. ಆದ್ರೆ ಸೋನಿಯಾಗಾಂಧಿಯವರು ಬಂದು ಎಲ್ಲರನ್ನೂ ಉಳಿಸ್‍ಕೊಂಡು ಪಾರ್ಟೀನ ದೊಡ್ಡದಾಗಿ ಕಟ್ಟಿದ್ರು. 10 ವರ್ಷಗಳ ಕಾಲ ಒಳ್ಳೇ ಆಡಳಿತ ಕೊಟ್ರು. ಮನಮೋಹನಸಿಂಗ್ ಅವರೂ ಉದಾರೀಕರಣ ಮತ್ತು ಜನರ ಸಮಸ್ಯೆಗಳಿಗೆ ಪರಿಹಾರ ಎರಡನ್ನೂ ಮಿಕ್ಸ್ ಮಾಡಿ ನಡೆಸಿದ್ರು. ಕಮ್ಯುನಿಸ್ಟ್ ಪಾರ್ಟಿಯೋರು ಏನು ಹೇಳ್ತಾರೆ. ಎಲ್ರಿಗೂ ರೊಟ್ಟಿ, ಬಟ್ಟೆ, ಮತ್ತೆ ವಸತಿ. ಇವೆಲ್ಲವನ್ನೂ ಒದಗಿಸೋಕೆ ಹಲವಾರು ಯೋಜನೆಗಳು ಬಂದ್ವು. ಇದು ನಮ್ಮ ಕಮಿಟ್‍ಮೆಂಟ್. ಈ ತತ್ವ ಬಿಡೋಕಾಗಲ್ಲ.

ಪತ್ರಿಕೆ: ನೀವು ರಾಹುಲ್‍ಗಾಂಧಿಯವರ ಅಜ್ಜಿ ಇದ್ದಾಗಲೇ ಪ್ರಮುಖ ಸ್ಥಾನಗಳಿಗೆ ಬಂದೋವ್ರು. ಈಗ ಅವರ ಮೊಮ್ಮಗ ಪಕ್ಷದ ಅಧ್ಯಕ್ಷರು. ನಿಮ್ಮಂತಹ ಸೀನಿಯರ್ ಅವರ ನಾಯಕತ್ವದಲ್ಲಿ ಕೆಲ್ಸಾ ಮಾಡ್ಬೇಕಿದೆ. ಅದರ ಬಗ್ಗೆ ಏನನ್ನಿಸ್ತದೆ?
ಖರ್ಗೆ: ಅದ್ರಲ್ಲೇನು ಸಮಸ್ಯೆ? ನಿಮಗೆ ಕಮಿಟ್‍ಮೆಂಟ್ ಇದ್ರೆ if you want to implement certain programmes for your people, if you want to oppose those who are destroying democracy and constitution ಅದನ್ನ ಸಾಧಿಸೋಕೆ ನಮ್ ಪಕ್ಷ ಲೀಡ್ ಮಾಡ್ತಿದೆ. ಮತ್ತು ರಾಹುಲ್‍ಗಾಂಧಿ ಅದಕ್ಕಾಗಿ ನಮಗೆ ನಾಯಕ ಅಷ್ಟೇ. ಇದ್ರಲ್ಲಿ ಸೀನಿಯರ್ ಜೂನಿಯರ್ ಎಲ್ಲಾ ಇರಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...