ದೇಶಾದ್ಯಂತ ಕೋವಿಡ್ ಎರಡನೇ ಅಲೆ ಭುಗಿಲೆದ್ದಿದೆ. ಪಶ್ಚಿಮ ಬಂಗಾಳದಲ್ಲಿಯೂ ಪ್ರಕರಣಗಳಲ್ಲಿ ದಿಢೀರ್ ಏರಿಕೆಯಾದ ಹಿನ್ನೆಲೆಯಲ್ಲಿ ಇನ್ನು ಮುಂದೆ ಕೋಲ್ಕತ್ತಾದಲ್ಲಿ ನಡೆಯುವ ಯಾವುದೇ ಚುನಾವಣಾ ಪ್ರಚಾರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಭಾಗವಹಿಸುವುದಿಲ್ಲ ಎಂದು ಟಿಎಂಸಿ ಸಂಸದ ಡೆರೆಕ್ ಒ’ಬ್ರಿಯೆನ್ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, “ಮಮತಾ ಬ್ಯಾನರ್ಜಿ ಇನ್ನು ಮುಂದೆ ಕೋಲ್ಕತ್ತಾದಲ್ಲಿ ಪ್ರಚಾರ ಮಾಡುವುದಿಲ್ಲ. ನಗರದಲ್ಲಿ ಏಪ್ರಿಲ್ 26 ರಂದು ಪ್ರಚಾರದ ಕೊನೆಯ ದಿನದಂದು ಕೇವಲ ಒಂದು ‘ಸಾಂಕೇತಿಕ’ ಸಭೆ ನಡೆಸಲಿದ್ದಾರೆ. ಟಿಎಂಸಿಯು ಎಲ್ಲಾ ಜಿಲ್ಲೆಗಳಲ್ಲಿ ತನ್ನ ಎಲ್ಲಾ ಚುನಾವಣಾ ರ್ಯಾಲಿಗಳಿಗೆ ಸಮಯವನ್ನು ಕಡಿತಗೊಳಿಸಿ, ಕೇವಲ 30 ನಿಮಿಷಗಳಿಗೆ ನಿರ್ಬಂಧಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
Mamata Banerjee will NOT campaign in Kolkata anymore. Only one ‘symbolic’ meeting on the last day of campaigning in the city on April 26.
Slashes time for all her election rallies in all districts. Restricted to just 30 minutes. #BengalElection2021 #Covid— Derek O'Brien | ডেরেক ও'ব্রায়েন (@derekobrienmp) April 18, 2021
ಪಶ್ಚಿಮ ಬಂಗಾಳದಲ್ಲಿ COVID-19 ಪ್ರಕರಣಗಳಲ್ಲಿ ಹಠಾತ್ ಏರಿಕೆ ಕಂಡುಬಂದಿದೆ. ಭಾನುವಾರ ರಾಜ್ಯದಲ್ಲಿ ಅತಿ ಹೆಚ್ಚು 8,419 ಹೊಸ ಸೋಂಕುಗಳು ದಾಖಲಾಗಿದ್ದರಿಂದ ಒಟ್ಟು ಪ್ರಕರಣಗಳ ಸಂಖ್ಯೆ 6,59,927 ಕ್ಕೆ ಏರಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.
ಬಂಗಾಳದ ಸಿಪಿಎಂ ಪಕ್ಷವು ಬೃಹತ್ ಚುನಾವಣಾ ರ್ಯಾಲಿಗಳನ್ನು ನಡೆಸುವುದಿಲ್ಲ ಎಂದು ತೀರ್ಮಾನಿಸಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸಹ ಬಂಗಾಳದ ತನ್ನ ಎಲ್ಲಾ ಚುನಾವಣಾ ರ್ಯಾಲಿಗಳನ್ನು ರದ್ದುಗೊಳಿಸಿದ್ದಾರೆ. ಆ ಪಟ್ಟಿಗೆ ಇಂದು ಮಮತಾ ಬ್ಯಾನರ್ಜಿ ಕೂಡ ಸೇರಿದ್ದಾರೆ.
ಆದರೆ ಬಿಜೆಪಿ ಪಕ್ಷ ಮಾತ್ರ ಹೆಚ್ಚುತ್ತಿರುವ ಕೊರೊನಾ ನಡುವೆಯೂ ಬಂಗಾಳದಲ್ಲಿ ಬೃಹತ್ ರ್ಯಾಲಿಗಳನ್ನು ಆಯೋಜಿಸುವತ್ತ ಗಮನ ಹರಿಸಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಬಂಗಾಳದಲ್ಲಿ ಪ್ರಚಾರ ಮಾಡಿದ್ದು, ಅಸನ್ಸೋಲ್‌ನಲ್ಲಿ ನಡೆದ ಬೃಹತ್ ರ‍್ಯಾಲಿಯಲ್ಲಿ ಹೆಚ್ಚಿನ ಜನಸಮೂಹವನ್ನು ನೋಡಿ, ನಾನು ಇಂತಹ ರ‍್ಯಾಲಿ ಎಂದೂ ನೋಡಿರಲಿಲ್ಲ ಎಂದು ಉದ್ಘರಿಸಿದ್ದಾರೆ. “ಲೋಕಸಭಾ ಚುನಾವಣೆಯ ಸಮಯದಲ್ಲಿ ನಾನು ಎರಡು ಬಾರಿ ಇಲ್ಲಿಗೆ ಬಂದಿದ್ದೇನೆ. ಕೊನೆಯ ಬಾರಿ ನಾನು ಬಾಬುಲ್ಜಿಗೆ ಮತ ಕೇಳಲು ಬಂದಿದ್ದೆ. ಆಗ ಜನಸಮೂಹವು ಇದರಲ್ಲಿ ಕಾಲು ಭಾಗ ಮಾತ್ರವಿತ್ತು” ಎಂದು ಅವರು ಹೇಳಿದ್ದಾರೆ.
ನರೇಂದ್ರ ಮೋದಿಯವರ ಈ ನಡೆಗೆ ಪ್ರತಿಪಕ್ಷಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿವೆ. ಕೊರೊನಾದಿಂದಾಗಿ ಜನ ಸಾಯುತ್ತಿದ್ದಾರೆ. ಆಮ್ಲಜನಕ, ರೆಮ್‌ಡಿಸಿವಿರ್, ಲಸಿಕೆ ಕೊರತೆಯಿಂದ ರಾಜ್ಯಗಳು ಕಂಗಾಲಾಗಿದ್ದರೆ ಮೋದಿ ಮಾತ್ರ ಚುನಾವಣಾ ರ್ಯಾಲಿಗಳಲ್ಲಿ ಸಮಯ ಕಳೆಯುತ್ತಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ.
ಇದನ್ನೂ ಓದಿ: ರ‍್ಯಾಲಿಯಲ್ಲಿ ಬೃಹತ್ ಜನಸ್ತೋಮ ಕಂಡು ಉಲ್ಲಸಿತರಾದ ಪ್ರಧಾನಿ: ಮೋದಿಯನ್ನು ರೋಮ್ ದೊರೆ ನೀರೊಗೆ ಹೋಲಿಸಿದ ಕಾಂಗ್ರೆಸ್


