ಗುಜರಾತ್‌ನ ಬನಸ್ಕಾಂತದಲ್ಲಿ ಗುರುವಾರ (ಮೇ 23) ಎಮ್ಮೆಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಸ್ವಯಂಘೋಷಿತ ಗೋರಕ್ಷಕರು ಹತ್ಯೆಗೈದಿದ್ದಾರೆ ಎಂದು ವರದಿಗಳು ತಿಳಿಸಿವೆ.
ಗುರುವಾರ ಮುಂಜಾನೆ 40 ವರ್ಷದ ಮಿಶ್ರಿಖಾನ್ ಬಲೋಚ್ ಎಂಬಾತ ಎಮ್ಮೆಗಳನ್ನು ರಾಸುಗಳ ಮಾರುಕಟ್ಟೆಗೆ ಸಾಗಿಸುತ್ತಿದ್ದಾಗ ಐವರ ಗುಂಪು ಹತ್ಯೆಗೈದಿದೆ ಎಂದು ಸ್ಥಳೀಯ ಪೊಲೀಸರನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಹತ್ಯೆಯಾದ ಮಿಶ್ರಿಖಾನ್ ಜೊತೆಯಲ್ಲಿ ಹುಸೇನ್ ಖಾನ್ ಬಲೋಚ್ ಎಂಬ ವ್ಯಕ್ತಿ ಕೂಡ ಇದ್ದರು. ಆತ ದಾಳಿಕೋರರಿಂದ ತಪ್ಪಿಸಿಕೊಂಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿ ಹೇಳಿದೆ.
ಆರೋಪಿಗಳ ವಿರುದ್ದ ಕೊಲೆ, ಶಸ್ತ್ರಾಸ್ತ್ರಗಳ ಸಂಗ್ರಹ ಮತ್ತು ಗಲಭೆಗೆ ಸಂಬಂಧಿಸಿದ ಸೆಕ್ಷನ್‌ಗಳಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳ ಪೈಕಿ ಒಬ್ಬನನ್ನು ಅಖೇರಾಜ್‌ಸಿನ್ಹ್ ಪರ್ಬತ್‌ಸಿನ್ಹ್ ವಘೇಲಾ ಎಂಬ ಗುರುತಿಸಲಾಗಿದೆ. ಈತ ಕಳೆದ ವರ್ಷ ಜುಲೈನಿಂದ ಗೋರಕ್ಷಣೆ ಸಂಬಂಧಿತ ಹಿಂಸಾಚಾರದ ಘಟನೆಯಲ್ಲಿ ಆರೋಪಿಯಾಗಿದ್ದ. ಆದರೆ, ಆತನ ಮೇಲಿನ ಪ್ರಕರಣವನ್ನು ಗುಜರಾತ್ ಹೈಕೋರ್ಟ್ ರದ್ದುಗೊಳಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.
ಪ್ರಕರಣದಲ್ಲಿ ಐವರು ಆರೋಪಿಗಳ ಪೈಕಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಇತರ ಮೂವರಿಗಾಗಿ ಶೋಧ ನಡೆಸುತ್ತಿದ್ದಾರೆ. ಪೊಲೀಸರು ಮಿಶ್ರಿಖಾನ್ ಬಲೋಚ್ ಹತ್ಯೆಯನ್ನು ಗುಂಪು ಹತ್ಯೆ ಎಂಬುವುದನ್ನು ನಿರಾಕರಿಸಿದ್ದಾರೆ. ಹತ್ಯೆಯಾದ ವ್ಯಕ್ತಿ ಮತ್ತು ಆರೋಪಿಗಳ ನಡುವೆ ಹಳೆಯ ವೈಷ್ಯಮ್ಯವಿತ್ತು ಎಂದಿದ್ದಾರೆ.
ಇದನ್ನೂ ಓದಿ : ಅದಾನಿ ಕಲ್ಲಿದ್ದಲು ವಿವಾದ: 21 ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಸಿಜೆಐ ಡಿವೈ ಚಂದ್ರಚೂಡ್‌ಗೆ ಪತ್ರ


