ಮತಗಟ್ಟೆಗಳಲ್ಲಿ ನಡೆದ ಗುಂಡಿನ ದಾಳಿಯಿಂದ ಇವಿಎಂಗಳಯ ಧ್ವಂಸಗೊಂಡಿದ್ದು, ಏಪ್ರಿಲ್ 22ರಂದು ಇನ್ನರ್ ಮಣಿಪುರ ಲೋಕಸಭಾ ಕ್ಷೇತ್ರದ 11 ಮತಗಟ್ಟೆಗಳಲ್ಲಿ ಮರು ಮತದಾನ ಮಾಡುವುದಾಗಿ ಮಣಿಪುರ ಮುಖ್ಯ ಚುನಾವಣಾಧಿಕಾರಿ ಘೋಷಿಸಿದ್ದಾರೆ.
ಏಪ್ರಿಲ್ 19 ರಂದು ಈ ಕೇಂದ್ರಗಳಲ್ಲಿ ನಡೆದ ಚುನಾವಣೆಗಳನ್ನು ಶೂನ್ಯ ಮತ್ತು ಅನೂರ್ಜಿತ ಎಂದು ಘೋಷಿಸಲಾಗಿದ್ದು, ಹೊಸ ಮತದಾನದ ದಿನಾಂಕವನ್ನು ನಿಗದಿಪಡಿಸಲು ಚುನಾವಣಾ ಆಯೋಗದ ನಿರ್ದೇಶನವನ್ನು ಅನುಸರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಖುರೈ ಕ್ಷೇತ್ರದ ಮೊಯಿರಂಗ್ಯಾಂಪು ಸಾಜೆಬ್ ಮತ್ತು ತೊಂಗಮ್ ಲೈಕೈ, ಕ್ಷೇತ್ರಗಾವೊದಲ್ಲಿ ನಾಲ್ಕು ಮತ್ತು ಇಂಫಾಲ್ ಪೂರ್ವ ಜಿಲ್ಲೆಯ ತೊಂಗ್ಜುನಲ್ಲಿ ಒಂದು, ಉರಿಪೋಕ್‌ನಲ್ಲಿ ಮೂರು, ಇಂಫಾಲ್ ಪಶ್ಚಿಮ ಜಿಲ್ಲೆಯ ಕೊಂತೌಜಮ್‌ನಲ್ಲಿ ಒಂದು ಮತಗಟ್ಟೆಗಳು ಗುಂಡಿನ ದಾಳಿಯಿಂದ ಬಾಧಿತವಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕೆಲವು ಮತಗಟ್ಟೆಗಳಲ್ಲಿ ಗುಂಡಿನ ದಾಳಿ, ಬೆದರಿಕೆ, ಇವಿಎಂಗಳನ್ನು ನಾಶಪಡಿಸಿದ ಘಟನೆಗಳು ಮತ್ತು ಬೂತ್ ವಶಪಡಿಸಿಕೊಂಡ ಆರೋಪಗಳು ಸಂಘರ್ಷ ಪೀಡಿತ ಮಣಿಪುರದಿಂದ ವರದಿಯಾಗಿವೆ. ಶುಕ್ರವಾರದಂದು ಎರಡು ಲೋಕಸಭಾ ಕ್ಷೇತ್ರಗಳಾದ ಒಳ ಮಣಿಪುರ ಮತ್ತು ಹೊರ ಮಣಿಪುರದಲ್ಲಿ ಶೇಕಡಾ 72 ರಷ್ಟು ಮತದಾನವಾಗಿದೆ.
ಇದಕ್ಕೂ ಮುನ್ನ 47 ಮತಗಟ್ಟೆಗಳಲ್ಲಿ ಬೂತ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ಮರು ಮತದಾನಕ್ಕೆ ಒತ್ತಾಯಿಸಿತ್ತು.
ಮಣಿಪುರ ಕಾಂಗ್ರೆಸ್ ಅಧ್ಯಕ್ಷ ಕೆ.ಮೇಘಚಂದ್ರ ಮಾತನಾಡಿ, ಮಣಿಪುರದ ಒಳ ಕ್ಷೇತ್ರದ 36 ಮತ್ತು ಹೊರ ಮಣಿಪುರ ಕ್ಷೇತ್ರದ 11 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಒತ್ತಾಯಿಸಿ ಮುಖ್ಯ ಚುನಾವಣಾಧಿಕಾರಿಗೆ ಪಕ್ಷವು ದೂರು ನೀಡಿದೆ ಎಂದರು.
ಇದನ್ನೂ ಓದಿ; ಬಿಜೆಪಿಗೆ ಅನುಕೂಲವಾಗಲು ಏಳು ಹಂತಗಳಲ್ಲಿ ಮತದಾನ: ಚುನಾವಣಾ ಆಯೋಗದ ವಿರುದ್ಧ ಮಮತಾ ಬ್ಯಾನರ್ಜಿ ಆರೋಪ


