ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಶಸ್ತ್ರಸಜ್ಜಿತ ಬಂಡುಕೋರರು ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳನ್ನು ಅಪಹರಿಸಿದ ಬೆನ್ನಲ್ಲೇ, ಮೂವರ ಮೃತದೇಹಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ.
ಮಣಿಪುರ-ಅಸ್ಸಾಂ ಗಡಿಯಲ್ಲಿ ಶುಕ್ರವಾರ (ನ.15) ಮೂವರು ಮಹಿಳೆಯರ ಕೊಳೆತ ಶವಗಳು ಪತ್ತೆಯಾಗಿವೆ. ಅದು ಅಪಹರಣಕ್ಕೆ ಒಳಗಾದವರದ್ದೇ? ಎಂಬುವುದು ಇನ್ನೂ ದೃಢಪಟ್ಟಿಲ್ಲ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಅಸ್ಸಾಂನ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇನ್ನೂ ಕೆಲ ವರದಿಗಳು ಒಬ್ಬರು ಮಹಿಳೆ ಮತ್ತು ಇಬ್ಬರು ಮಕ್ಕಳ ಮೃತದೇಹಗಳು ಶುಕ್ರವಾರ ಸಂಜೆ ಜೀರಿ ನದಿಯಲ್ಲಿ ತೇಲಿ ಬಂದಿದೆ ಎಂದು ಹೇಳಿವೆ. ಹಾಗಾಗಿ, ಶವಗಳು ದೊರೆತಿರುವುದು ಮಹಿಳೆಯರದ್ದಾ? ಇಲ್ಲಾ ಮಕ್ಕಳು ಮತ್ತು ಮಹಿಳೆಯದ್ದಾ? ಎಂಬ ಗೊಂದಲ ಏರ್ಪಟ್ಟಿದೆ.
ಜಿರಿಬಾಮ್ ಜಿಲ್ಲೆಯಲ್ಲಿ ಮೈತೇಯಿ ಸಮುದಾಯಕ್ಕೆ ಸೇರಿದ ಆರು ಮಂದಿ ಸೋಮವಾರದಿಂದ (ನ.11) ನಾಪತ್ತೆಯಾಗಿದ್ದಾರೆ. ಅವರನ್ನು ಬಂಡುಕೋರರು ಅಪಹರಿಸಿದ್ದಾರೆ ಎಂದು ವರದಿಯಾಗಿದೆ. ಜಿರಿಬಾಮ್ ಅಸ್ಸಾಂನ ಕ್ಯಾಚಾರ್ ಜಿಲ್ಲೆಯೊಂದಿಗೆ ಗಡಿ ಹಂಚಿಕೊಂಡಿದೆ. ಸಿಲ್ಚಾರ್ ಕ್ಯಾಚಾರ್‌ನ ಜಿಲ್ಲಾ ಕೇಂದ್ರವಾಗಿದೆ.
ಬಂಡುಕೋರರು ಅಪಹರಿಸಿದ್ದಾರೆ ಎನ್ನಲಾಗಿರುವ ಆರು ಮಂದಿಯನ್ನು ರಕ್ಷಿಸುವಂತೆ ವಿವಿಧ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವ ನಡುವೆ ಮೂವರು ಮಹಿಳೆಯರ ಶವಗಳು ಪತ್ತೆಯಾಗಿರುವ ಸುದ್ದಿ ಹೊರಬಿದ್ದಿದೆ. ಇದು ಇನ್ನಷ್ಟು ಉದ್ವಿಗ್ನತೆಗೆ ಕಾರಣವಾಗಿದೆ.
ಆರು ಮಂದಿಯ ಅಪಹರಣ ಘಟನೆ ಬಳಿಕ ಕಳೆದ ಬುಧವಾರ (ನ.13) 13 ನಾಗರಿಕ ಸಂಘಟನೆಗಳು ಇಂಫಾಲ್ ಕಣಿವೆಯಲ್ಲಿ ಬಂದ್ ನಡೆಸಿತ್ತು. ಅಪಹರಣಕ್ಕೊಳಗಾದವರ ಸುರಕ್ಷಿತ ಬಿಡುಗಡೆಗೆ ಸರ್ಕಾರದ ಮಧ್ಯಸ್ಥಿಕೆ ವಹಿಸುವಂತೆ ಒತ್ತಾಯಿಸಿತ್ತು.
ಇದನ್ನೂ ಓದಿ : ಗ್ರೇಟರ್ ಹೈದರಾಬಾದ್‌ನ ಟ್ರಾಫಿಕ್ ಸ್ವಯಂಸೇವಕರಾಗಿ ಟ್ರಾನ್ಸ್‌ಜೆಂಡರ್‌ಗಳ ನೇಮಕ


