Homeಮುಖಪುಟಮಂಟೋನ ಪುಗ್ಸಟ್ಟೆ ಧೂಮಲೀಲೆಯ ಕಥೆಗಳು ಮತ್ತು ಲಾಕ್‌ಡೌನ್ ಕಾಲದಲ್ಲಿ ಸಿಗರೇಟ್

ಮಂಟೋನ ಪುಗ್ಸಟ್ಟೆ ಧೂಮಲೀಲೆಯ ಕಥೆಗಳು ಮತ್ತು ಲಾಕ್‌ಡೌನ್ ಕಾಲದಲ್ಲಿ ಸಿಗರೇಟ್

- Advertisement -
- Advertisement -

1945ರ ಎರಡನೇ ಜಾಗತಿಕ ಮಹಾಯುದ್ಧದ ಕಾಲದಲ್ಲಿ ಮಂಟೋ “ಮುಫ್ತ್ನೋಶ್” ಎಂಬ ಶೀರ್ಷಿಕೆಯಲ್ಲಿ ಎಂಟು ಕಿರುಗತೆಗಳನ್ನು ಬರೆದಿದ್ದ. ಅವು ಮೇಲ್ನೋಟಕ್ಕೆ ಅತ್ಯಂತ ಸರಳ ಕತೆಗಳಾಗಿ ಕಾಣುತ್ತವೆಯಾದರೂ ಮಂಟೋನ ಸೂಕ್ಷ್ಮಗ್ರಾಹಿತ್ವಕ್ಕೆ ಅವು ಅದ್ಭುತ ಉದಾಹರಣೆಗಳಾಗಿ ನಮ್ಮ ಮುಂದೆ ನಿಲ್ಲುತ್ತವೆ. ಮನುಷ್ಯ ಸ್ವಭಾವವನ್ನು ಮಂಟೋನಷ್ಟು ಸೂಕ್ಷ್ಮವಾಗಿ ಅಭ್ಯಸಿಸಿ ಕತೆ ಬರೆದ ಕತೆಗಾರರೇ ವಿರಳ. ಸಿಗರೇಟಿನ ಉತ್ಪಾದನೆ ಮತ್ತು ವಿತರಣೆಯಲ್ಲಿ ವ್ಯತ್ಯಯವುಂಟಾಗಿ ಅದು ಕಪ್ಪು ಮಾರುಕಟ್ಟೆಯಲ್ಲಿ ಮಾರಲ್ಪಡುತ್ತಿದ್ದಾಗ ಸಿಗರೇಟಿನ ದಾಸರು ಪುಗಸಟ್ಟೆ ಸಿಗಬಹುದಾದ ಸಿಗರೇಟಿಗಾಗಿ ಅದ್ಯಾವ ಪರಿ ಹಾತೊರೆಯುತ್ತಿದ್ದರು ಎಂಬುವುದರ ಮೇಲೆ ಮಂಟೋ ಬರೆದ ಕಿರುಗತೆಗಳೇ “ಮುಫ್ತ್ನೋಶ್”.

ಕೊರೋನಾ ಲಾಕ್‌ಡೌನ್ ಸಂದರ್ಭದಲ್ಲೂ ಅಂತಹ ಪರಿಸ್ಥಿತಿಯೆದುರಾಗಿತ್ತು. ಸಾಮಾನ್ಯ ಸಮಯದಲ್ಲಿ ಹದಿನೇಳರಿಂದ ಇಪ್ಪತ್ತು ರೂಪಾಯಿ ಬೆಲೆಗೆ ಮಾರಲಾಗುವ ಒಂದು ಗೋಲ್ಡ್ ಫ್ಲೇಕ್ ಕಿಂಗ್ ಸಿಗರೇಟಿನ ಬೆಲೆ ಒಂದೇ ಏಟಿಗೆ ಕಪ್ಪು ಮಾರುಕಟ್ಟೆಯಲ್ಲಿ ಮೂವತ್ತು ರೂಪಾಯಿಗೇರಿತ್ತು. ಇನ್ನು ನಮ್ಮ ದಕ್ಷಿಣ ಕನ್ನಡದಲ್ಲಿ ಅತ್ಯಂತ ಬೇಡಿಕೆಯಿರುವ ಕೂಲ್ ಲಿಪ್ ಎಂಬ ಫಿಲ್ಟರ್ ತಂಬಾಕಿನ ಕತೆ ಕೇಳುವುದೇ ಬೇಡ. ಇಪ್ಪತ್ತು ರೂಪಾಯಿ ಬೆಲೆಯ ಪೊಟ್ಟಣದ ಬೆಲೆಯನ್ನು ಕಾಳ ದಂಧೆಕೋರರು ಏಕಾಏಕಿ ಎಪ್ಪತ್ತು ರೂಪಾಯಿಗೇರಿಸಿದ್ದರು. ಆ ಸಂದರ್ಭದಲ್ಲಿ ಸಿಗರೇಟು ಮತ್ತು ತಂಬಾಕಿನ ಬಡಪಾಯಿ ದಾಸರು ಅವುಗಳ ಅಭ್ಯಾಸವಿರುವ ಇತರ ದಾಸರಿಗೆ ಎಡತಾಕುವುದನ್ನೂ ನೋಡಿದ್ದೇನೆ. ಒಂದು ಸಿಗರೇಟು ಕೇಳಿದಾಗ ಸಿಗರೇಟು ಪೊಟ್ಟಣದ ಮಾಲೀಕ ಪೊಟ್ಟಣವನ್ನು ಕೈಗಿತ್ತರೆ ಮೂರ್ನಾಲ್ಕು ಸಿಗರೇಟನ್ನು ಎಗರಿಸುತ್ತಿದ್ದರು. ಒಂದು ಫಿಲ್ಟರ್ ತಂಬಾಕು ಅಪೇಕ್ಷಿಸಿದಾಗ ಅದರ ಪೊಟ್ಟಣ ಕೊಟ್ಟರೆ ಐದಾರು ಫಿಲ್ಟರ್‌ಗಳನ್ನು ಎಗರಿಸುತ್ತಿದ್ದರು. ಇವನ್ನೆಲ್ಲಾ ಗಮನಿಸುತ್ತಾ ಮಂಟೋನ ‘ಮುಫ್ತ್ನೋಶ್’ ಕಿರುಗತೆಗಳು ಈ ಕಾಲಕ್ಕೂ ಬಹಳ ಪ್ರಸ್ತುತ ಎಂದೆನಿಸದೆ ಇರದು.

ಪ್ರಸ್ತಾವನೆ ಮತ್ತು ಅನುವಾದ: ಇಸ್ಮತ್ ಪಜೀರ್

ಮಂಟೋನ ಪುಗ್ಸಟ್ಟೆ ಧೂಮಲೀಲೆಯ ಕಥೆಗಳು

ವಿಷಯ ಎರಡನೇ ಜಾಗತಿಕ ಮಹಾಯುದ್ಧ ಕಾಲದ್ದು. ಭಾರತ ಆಗಿನ್ನೂ ಬ್ರಿಟಿಷ್ ಪ್ರಭುತ್ವದ ಅಧೀನದಲ್ಲಿತ್ತು. ಬ್ರಿಟಿಷ್ ಪ್ರಭುತ್ವವು ದಿನಬಳಕೆಯ ವಸ್ತುಗಳನ್ನು ಯುರೋಪಿನ ಯುದ್ಧ ಪೀಡಿತ ಪ್ರದೇಶಗಳಿಗೆ ಸಾಗಿಸುತ್ತಿತ್ತು. ಇದರಿಂದಾಗಿ ದೇಶದಲ್ಲಿ ದಿನಬಳಕೆಯ ವಸ್ತುಗಳ ಅಭಾವವುಂಟಾಗಿತ್ತು. ಅದರ ಜೊತೆಗೆ ಸಿಗರೇಟಿನಂತಹ ವಸ್ತುಗಳಿಗೂ ಅಭಾವವುಂಟಾಗಿ, ಕಪ್ಪು ಮಾರುಕಟ್ಟೆಯಲ್ಲಿ ಮಾತ್ರ ಲಭ್ಯವಿರುತ್ತಿತ್ತು. ಇದರಿಂದಾಗಿ ಅತೀ ಹೆಚ್ಚು ಚಡಪಡಿಸಿದ್ದು ಕವಿಗಳು, ಸಾಹಿತಿಗಳು, ಕಲಾವಿದರು ಮತ್ತು ನನ್ನಂತಹ ಕತೆಗಾರರು. ನನ್ನಂತಹ ಕತೆಗಾರರಿಗೆ ಎರಡು ಧಂ ಸೇದದ ಹೊರತಾಗಿ ನಮ್ಮ ಲೇಖನಿಯಿಂದ ಒಂದು ವಾಕ್ಯವೂ ಹೊರಬರುತ್ತಿರಲಿಲ್ಲ. ಅಂತಹ ಸಂದಿಗ್ಧ ದಿನಗಳಲ್ಲಿ ಕೆಲಜನರು ತಮ್ಮ ಸ್ವಾಭಿಮಾನವನ್ನು ಬದಿಗಿಟ್ಟು ಹೊಸ ದಾರಿ ಕಂಡುಕೊAಡರು. ಅದೇ ಮುಫ್ತ್ನೋಶ್ ಅರ್ಥಾತ್ ಪುಗ್ಸಟ್ಟೆ ಧೂಮ.

 

ಪುಗ್ಸಟ್ಟೆ ಧೂಮ -1

ಹಾಸ್ಟೆಲ್‌ನ ದಾರಿಯಲ್ಲಿದ್ದ ಪಾನ್‌ವಾಲಾನ ಪೆಟ್ಟಿಗೆ ಅಂಗಡಿಯ ಮುಂದೆ ಸೈಕಲ್ ಸ್ಟಾಂಡ್ ಹಾಕಿ ಸಿಗರೇಟು ಖರೀದಿಸಲೆಂದು ಹೋದೆ. ರಸ್ತೆಯಲ್ಲಿ ಮರ್ಯಾದಸ್ಥನೊಬ್ಬ ದಿನಪತ್ರಿಕೆಯನ್ನು ಓದುತ್ತಾ ಬರುತ್ತಿದ್ದ. ನಾನೋ ಸಿಗರೇಟು ಖರೀದಿಸಿ ನನ್ನ ಸೈಕಲ್‌ನತ್ತ ಬಂದು ಪೊಟ್ಟಣದಿಂದ ಸಿಗರೇಟೊಂದನ್ನು ತೆಗೆದು ತುಟಿಗಳೆಡೆಗೆ ಸಿಕ್ಕಿಸಿ ಬೆಂಕಿ ಪೊಟ್ಟಣಕ್ಕೆಂದು ಜೇಬಿಗೆ ಕೈಹಾಕಿ ತಡಕಾಡಿದೆ. ಛೆ…ಬೆಂಕಿಪೊಟ್ಟಣ ಎಲ್ಲಿ ಹೋಯಿತಪ್ಪಾ ಎಂದು ಗೊಣಗುತ್ತಾ ನನ್ನ ಮರೆವಿಗಾಗಿ ನನ್ನನ್ನು ನಾನು ಶಪಿಸುತ್ತಿದ್ದೆ. ರಸ್ತೆಯಲ್ಲಿ ಪತ್ರಿಕೆಯೋದುತ್ತಾ ಬರುತ್ತಿದ್ದ ಮರ್ಯಾದಸ್ಥನೊಬ್ಬ ನಾನು ಸಿಗರೇಟು ಖರೀದಿಸಿದ್ದನ್ನು ಗಮನಿಸಿರಬೇಕು. ಆತ ನನ್ನ ಸನಿಹ ತಲುಪಿದ್ದ. ಆತ ಕೂಡಲೇ ತನ್ನ ಜೇಬಿನಿಂದ ಬೆಂಕಿಪೊಟ್ಟಣ ತೆಗೆದು ಕಡ್ಡಿ ಗೀರಿ ನನ್ನ ಮುಖದತ್ತ ತಂದ. ನಾನು ಆತನ ಮುಖವನ್ನೊಮ್ಮೆ ನೋಡಿ ಸಿಗರೇಟಿಗೆ ಆತ ಗೀರಿದ ಕಡ್ಡಿಯಿಂದ ಬೆಂಕಿ ಹೊತ್ತಿಸಿದೆ. ಆತ ನನ್ನ ಮುಖವನ್ನೇ ದಿಟ್ಟಿಸುತ್ತಾ ನಿಂತ. ಕೃತಜ್ಞತಾಭಾವವೆಂಬಂತೆ ಆತನಿಗೆ ಔಪಚಾರಿಕವಾಗಿ ಸಿಗರೇಟಿನ ಪೊಟ್ಟಣ ತೋರಿಸಿದೆ. ಆತ ಒಂದಿನಿತೂ ತಡಮಾಡದೇ ಪೊಟ್ಟಣದಿಂದ ಸಿಗರೇಟೊಂದನ್ನು ತೆಗೆದು ತುಟಿಗಳ ಮಧ್ಯೆಯಿಟ್ಟು ಬೆಂಕಿ ಹೊತ್ತಿಸಿ ಮತ್ತೆ ನನ್ನ ಮುಖವನ್ನೂ ನೋಡದೇ ಬಿರಬಿರನೇ ನಡೆಯುತ್ತಾ ಹೋದ.

ಪುಗ್ಸಟ್ಟೆ ಧೂಮ -2

ಅಂದು ರಾತ್ರಿ ನಾನು ನನ್ನ ಕೊಠಡಿಯಲ್ಲಿ ಇಂಕ್ವಿ ಲಾಬ್ ಪಸಂದ್ ಕತೆಗೆ ಅಂತಿಮ ಸ್ಪರ್ಶ ಕೊಡುತ್ತಿದ್ದೆ. ಒಂದರ ಮೇಲೊಂದರಂತೆ ಸಿಗರೇಟುಗಳು ಬೂದಿಯಾಗಿ ಆಶ್ ಟ್ರೇ ಸೇರುತ್ತಿದ್ದವು. ಪಕ್ಕದ ಕೊಠಡಿಯ ಮಿರ್ಜಾ ಸಿಗರೇಟಿನ ಕಮ್ಮನೆ ಆಘ್ರಾಣಿಸುತ್ತಾ ನನ್ನ ಕೊಠಡಿಗೆ ನುಗ್ಗಿ ಬಂದು ಒಂದು ಸಿಗರೇಟಿಗಾಗಿ ವಿನೀತವಾಗಿ ಬೇಡಿಕೆಯಿಟ್ಟ. ನಾನು ಇಲ್ಲವೆನ್ನುತ್ತಿದ್ದರೂ ದೈನ್ಯನಾಗಿ ವಿನಂತಿಸಿದ. ಗೆಳೆಯಾ…ಡಾಕ್ಟರ್ ಹೆಚ್ಚು ಸಿಗರೇಟು ಸೇದಬಾರದೆಂದು ಖಡಕ್ಕಾಗಿ ಆದೇಶಿಸಿದ್ದಾರೆ. ನಾನು ನನ್ನ ಬಳಿ ಸಿಗರೇಟಿನ ಪೊಟ್ಟಣ ತೆಗೆದಿಟ್ಟರೆ ಒಂದರಮೇಲೊಂದರಂತೆ ಸೇದುತ್ತಿರುತ್ತೇನೆ. ಆದುದರಿಂದ ಪೊಟ್ಟಣ ಇಡುತ್ತಿಲ್ಲವೆಂದ.. ನಾನು ನನ್ನ ಬೆರಳುಗಳೆಡೆಯಲ್ಲಿ ಉರಿಯುತ್ತಿದ್ದ ಅರ್ಧ ಬೂದಿಯಾದ ಸಿಗರೇಟನ್ನು ಆಶ್ ಟ್ರೇಯ ದಂಡೆಯ ಮೇಲಿಟ್ಟೆ. ಆತ ತಡಮಾಡದೇ ಅದನ್ನೆತ್ತಿ ದೀರ್ಘವಾದ ಧಂಗಳನ್ನು ಒಳಗೆಳೆಯುತ್ತಾ ಸುರುಳಿ ಸುರುಳಿಯಾಗಿ ಹೊಗೆಯುಗುಳಿ ಸಂತೃಪ್ತನಾದ..

ಪುಗ್ಸಟ್ಟೆ ಧೂಮ-3
ಕೊರೆವ ಚಳಿಯ ರಾತ್ರಿ. ನಾನು ಮತ್ತು ಜಾಫ್ರಿ ಶೀತಲ ಹವೆಯನ್ನು ಆಸ್ವಾದಿಸುತ್ತಾ ನಿರ್ಜನ ರಸ್ತೆಯಲ್ಲಿ ರಾಜಕೀಯ ಮಾತನಾಡುತ್ತಾ ನಡೆಯುತ್ತಿದ್ದೆವು. ರಾಜಕೀಯ ಚರ್ಚೆಯ ಮಧ್ಯೆ ನಾವಿಬ್ಬರೂ ಪೊಟ್ಟಣದಿಂದ ಒಂದೊಂದು ಸಿಗರೇಟುಗಳನ್ನು ತೆಗೆದು ತುಟಿಗಿಟ್ಟು ಬೆಂಕಿ ಹಚ್ಚಿದ್ದುಂಟು. ಸಿಗರೇಟಿನ ಕಮ್ಮನೆ ಮೂಗಿಗೆ ಬಡಿದದ್ದಂಟು. ಆಗ ತಾನೇ ನಮ್ಮನ್ನು ದಾಟಿ ಮುಂದೆ ಸಾಗಿದ್ದ ವ್ಯಕ್ತಿ ಕುಂಟುತ್ತಾ ವಿಚಿತ್ರವಾಗಿ ವರ್ತಿಸುತ್ತಾ ಮರಳಿ ನಮ್ಮ ಬಳಿ ಬಂದ. ನಮ್ಮ ಬಳಿ ಬಂದವನೇ ಏನೊಂದು ಮಾತನಾಡದೇ ನಮ್ಮ ಮುಖ ನೋಡಿದ. ಆಗಷ್ಟೇ ಹೊತ್ತಿಸಿ ತುಟಿಗಿಟ್ಟಿದ್ದ ಸಿಗರೇಟನ್ನು ನನ್ನ ತುಟಿಗಳೆಡೆಯಿಂದ ಎಳೆದು ಧಂ ಎಳೆಯುತ್ತಾ ಬಂದಷ್ಟೇ ವೇಗವಾಗಿ ಮುಂದೆ ನಡೆದ. ಜಾಫ್ರಿ ಆತನನ್ನು ತಡೆದು ವಿಚಾರಿಸಲೆಂಬಂತೆ ಒಂದು ಹೆಜ್ಜೆ ಮುಂದಿಟ್ಟ. ನಾನು ಜಾಫ್ರಿಯ ಕೈ ಹಿಡಿದೆಳೆದು ನಿಲ್ಲಿಸಿದ. ಜಾಫ್ರಿ ಇದೆಂತಹ ಹುಚ್ಚು ವರ್ತನೆಯೆಂದ. ಇದು ಸಾದಾ ಹುಚ್ಚಲ್ಲ ಇದು ಮುಫ್ತ್ನೋಶಿ ಎಂದೆ.

ಪುಗ್ಸಟ್ಟೆ ಧೂಮ-4
ಹೋಟೆಲಿನ ಮೂಲೆಯೊಂದರಲ್ಲಿ ತಿಂಡಿ ತಿನ್ನುತ್ತಾ ಕೂತಿದ್ದೆ. ಟೇಬಲ್ ಮೇಲಿಟ್ಟ ಬಿಸಿ ಬಿಸಿ ಚಹಾ ಇನ್ನೂ ಹಬೆಯಾಡುತ್ತಿತ್ತು. ಸಿಗರೇಟು ಹಚ್ಚಿ ಒಂದು ಧಂ ಸೇದಿದ್ದೆನಷ್ಟೇ. ಸಿಗರೇಟಿನ ಪೊಟ್ಟಣವನ್ನು ಟೇಬಲ್ ಮೇಲಿಟ್ಟಿದ್ದೆ. ಬಹಳ ವರ್ಷಗಳಿಂದ ನೋಡಿರದ ಹಳೇ ಗೆಳೆಯ ವಲಿ ಹೋಟೆಲ್ ಪ್ರವೇಶಿಸಿದ. ಒಂದು ಮೂಲೆಯಲ್ಲಿ ಕೂತು ಸಿಗರೇಟು ಸೇದುತ್ತಿದ್ದ ನನ್ನನ್ನು ಕಂಡವನೇ ನನ್ನತ್ತ ಧಾವಿಸಿ ಬಂದ. ಅಸ್ಸಲಾಮು ಅಲೈಕುಂ ಸಾದತ್ ಬಾಯ್ ಎನ್ನುತ್ತಾ ನನ್ನ ಟೇಬಲ್ ಮುಂದಿನ ಖುರ್ಚಿಯಲ್ಲಿ ಕೂತ. ಕುಶಲೋಪರಿ ಮಾತುಗಳಿಗಿಳಿದಿದ್ದರೂ ನನ್ನ ನಿಗಾ ಇನ್ನೂ ಬಹಳ ಕಷ್ಟದಿಂದ ಖರೀದಿಸಿ ಟೇಬಲ್ ಮೇಲಿಟ್ಟ ಸಿಗರೇಟು ಪೊಟ್ಟಣದ ಮೇಲಿತ್ತು. ನನಗೆ ನಾನೇ “ಈತ ಲಂಡನ್‌ನಿAದ ಬಂದವನಲ್ವಾ…ವಿಶೇಷ ಬ್ರ‍್ಯಾಂಡಿನ ಸಿಗರೇಟು ಸೇದುವವನೇ ಇರಬೇಕು” ಎಂದು ನನ್ನನ್ನು ನಾನೇ ಸಂತೈಸಿದೆ. ಆದರೆ ಅವನೆಲ್ಲಿ ಅವನ ಹಳೆಯ ಅಭ್ಯಾಸ ಬಿಡುತ್ತಾನೆ…ದೇಶ ಬಿಟ್ಟು ದೂರವಾದರೂ ಅದೇ ಹಳೇ ಅಭ್ಯಾಸ ಆತನಿಗಿನ್ನೂ ಇತ್ತು. ಟೇಬಲ್ ಮೇಲಿದ್ದ ನನ್ನ ಸಿಗರೇಟಿನ ಪೊಟ್ಟಣ ನೋಡಿ “ವ್ಹಾ…. ಗೋಲ್ಡ್ ಫ್ಲೇಕ್ ಸಿಗರೇಟು ಎನ್ನುತ್ತಾ ಅದರಿಂದ ಒಂದು ಸಿಗರೇಟೆತ್ತಿ ಹಚ್ಚಿಯೇ ಬಿಟ್ಟ. ಅಷ್ಟಾದರೆ ಪರವಾಗಿರಲಿಲ್ಲ. ಈಗೀಗ ಇಂತಹ ಸಿಗರೇಟಿಗೆ ಬಲು ಅಭಾವ ಮಾರಾಯ ಎನ್ನುತ್ತಾ ನನ್ನ ಪೊಟ್ಟಣದಿಂದ ನಾಲ್ಕಾರು ಸಿಗರೇಟುಗಳನ್ನೆತ್ತಿ ಆತನ ಆಧುನಿಕ ಲೈಟರ್‌ನೊಳಗಿನ ಸಿಗರೇಟು ಶೇಖರಿಸಿಡುವ ಕಂಪಾರ್ಟ್ಮೆಂಟ್ ತೆರೆದು ಅದರೊಳಗೆ ಪೇರಿಸಿಡಬೇಕೇ…?

ಪುಗ್ಸಟ್ಟೆ ಧೂಮ-5
ಎಲ್ಲಿ ಹೋದರೂ ಅಲ್ಲೆಲ್ಲಾ ಬೇತಾಳನಂತೆ ಕಾಡುವ ಈ ಪುಗ್ಸಟ್ಟೆ ಧೂಮಪಾನಿಗಳು ಹಿಂಬಾಲಿಸುತ್ತಿರುತ್ತಾರೆ. ಈ ಅಕ್ರಮಿಗಳಿಗೇನು ಗೊತ್ತು ನನ್ನ ಕಷ್ಟ…. ನನ್ನ ತಾಪತ್ರಯಗಳು….ಈ ಪುಗ್ಸಟ್ಟೆ ಧೂಮದ ಅಕ್ರಮಿಗಳಿಂದ ಬೇಸತ್ತು ಒಮ್ಮೆ ಹೆಚ್ಚು ಕಡಿಮೆ ನಿರ್ಜನವಾಗಿದ್ದ ಕಟ್ಟಡವೊಂದರ ಹಿಂಬದಿಗೆ ತೆರಳಿ ಅಲ್ಲಿ ಯಾರೂ ಇಲ್ಲವೆಂದು ಖಾತರಿಪಡಿಸಿ. ನೆಮ್ಮದಿಯಿಂದ ಸಿಗರೇಟು ಸೇದೋಣವೆಂದು ಕೂತು ಪೊಟ್ಟಣದಿಂದ ಸಿಗರೇಟೊಂದನ್ನು ತೆಗೆದು ಧೂಮವನ್ನು ಆಸ್ವಾದಿಸುತ್ತಿದ್ದೆ. ನನ್ನ ನೆಮ್ಮದಿ ಹೆಚ್ಚು ಹೊತ್ತು ಉಳಿಯಲಿಲ್ಲ. ಮರ್ಯಾದಸ್ಥನೊಬ್ಬ ನನ್ನ ಪಕ್ಕಕ್ಕೆ ಬಂದುದನ್ನು ನೋಡಿ ಆತ ಖಾಲಿ ಪೊಟ್ಟಣವೆಂದು ಬಗೆಯಲಿ ಎಂದು ಆಶಿಸುತ್ತಾ ಸಿಗರೇಟಿನ ಪೊಟ್ಟಣವನ್ನು ಪಕ್ಕದ ದಾರಿಗೆಸೆದೆ. ನನ್ನ ಪಕ್ಕ ಬಂದವನೇ ಸುಮಾರು ಹೊತ್ತು ಅದೂಇದೂ ಮಾತನಾಡುತ್ತಲೇ ಇದ್ದ. ಮಾತಿನ ಮಧ್ಯೆಯೂ ನನ್ನ ಮನಸೆಲ್ಲಾ ಎಸೆದ ಸಿಗರೇಟು ಪೊಟ್ಟಣದ ಮೇಲಿತ್ತು. ಅದರೊಳಗೆ ಇನ್ನೂ ಎರಡು ಸಿಗರೇಟುಗಳಿತ್ತು. ಆತ ಮಾತು ಮುಗಿಸಿ ಹೊರಟವನೇ ಕಾಲುದಾರಿಯಲ್ಲಿ ಕಾಲಿಗೆ ತೊಡರಿದ ಸಿಗರೇಟು ಪೊಟ್ಟಣವನ್ನೆತ್ತಿ ಅಲುಗಾಡಿಸಿ ನೋಡಿದ. ಅದರಲ್ಲಿ ಸಿಗರೇಟುಗಳಿರುವುದನ್ನು ಖಚಿತಪಡಿಸಿ ಪೊಟ್ಟಣವನ್ನು ಜೇಬಿಗೆ ತುಂಬಿಸುತ್ತಾ ನನ್ನ ಮುಖ ನೋಡಿದ. ನನ್ನ ಮಗನಿಗೆ ಸಿಗರೇಟಿನ ಖಾಲಿ ಪೊಟ್ಟಣಗಳಲ್ಲಿ ಆಡುವುದೆಂದರೆ ಇಷ್ಟ. ಹೇಗಿದ್ದರೂ ಖಾಲಿ ಪೊಟ್ಟಣ ತಾನೇ… ಮಗನಿಗೆ ಆಡಲಾದರೂ ಆಡೀತು ಎಂದ. ನನ್ನ ಅಸಹನೆ ಮಿತಿ ಮೀರುತ್ತಿತ್ತು. ಆದರೆ ಏನೂ ಮಾಡುವಂತಿರಲಿಲ್ಲ. ಈ ಪುಗ್ಸಟ್ಟೆ ಗಿರಾಕಿಗಳ ದೆಸೆಯಿಂದಾಗಿ ನೆಮ್ಮದಿಯಿಂದ ಸಿಗರೇಟು ಸೇದುವಂತಿಲ್ಲ ಎಂದು ಬೆರಳುಗಳೆಡೆಯಲ್ಲಿದ್ದ ಮುಕ್ಕಾಲು ಭಾಗ ಉರಿದು ಬೂದಿಯಾಗಿದ್ದ ಸಿಗರೇಟನ್ನು ಅಸಹನೆಯಿಂದ ನೆಲಕ್ಕೆಸೆದೆ. ಅಲ್ಲಿಗೂ ಬರಬೇಕೇ…. ಇನ್ನೊಬ್ಬ ಪುಗ್ಸಟ್ಟೆ ಗಿರಾಕಿ…. ನಾನು ಎಸೆದಿದ್ದ ಸಿಗರೇಟಿನ ತುಂಡನ್ನೆತ್ತಿ ಪುಗ್ಸಟ್ಟೆ ಧೂಮದ ಸುಖಃವನ್ನು ಆಸ್ವಾದಿಸತೊಡಗಿದ..

ಪುಗ್ಸಟ್ಟೆ ಧೂಮ -6
ನಾನೊಮ್ಮೆ ಒಂದು ಆರ್ಟ್ ಗ್ಯಾಲರಿಗೆ ಹೋಗಿದ್ದೆ. ಅಲ್ಲಿ ಕಲಾವಿದರ ಕುಂಚದಿಂದ ಅರಳಿದ ವಿಧ ವಿಧ ಚಿತ್ರಗಳನ್ನು ನೋಡುತ್ತಾ ಮುಂದೆ ಸಾಗುತ್ತಿದ್ದೆ. ಅಲ್ಲಿದ್ದ ಸಿಗರೇಟಿನ ಕಲಾಕೃತಿಯೊಂದು ನನ್ನ ಗಮನ ಸೆಳೆಯಿತು. ಅದನ್ನು ನೋಡುತ್ತಾ ನಿಂತವನಿಗೆ ಒಂದು ಧಂ ಹೊಡೆಯೋಣ ಎಂದೆಣಿಸಿತು. ಜೇಬಿನಿಂದ ಸಿಗರೇಟಿನ ಪೊಟ್ಟಣವನ್ನು ಹೊರತೆಗೆಯುತ್ತಿದ್ದಂತೆ ಸುಂದರಿಯೊಬ್ಬಳು ನನ್ನ ಪಕ್ಕವೇ ಬಂದು ನಿಂತು.. ನನ್ನ ಸಿಗರೇಟಿನ ಪೊಟ್ಟಣದತ್ತ ಇಣುಕತೊಡಗಿದಳು. ಕಣ್ಣಲ್ಲೇ ಆಕೆಯನ್ನು ಪ್ರಶ್ನಾರ್ಥಕವಾಗಿ ನೋಡಿದೆ. ನಮಸ್ಕಾರ ಮಾಡಿದಳು. ಆಕೆ ತಮ್ಮದು ಯಾವ ಬ್ರ‍್ಯಾಂಡ್ ಎಂದು ಪ್ರಶ್ನಿಸಿದಳು. ಪೊಟ್ಟಣವನ್ನು ತೋರಿಸಿದೆ. ವ್ಹಾವ್ ಗೋಲ್ಡ್ ಫ್ಲೇಕ್ ಎಂದು ಕಣ್ಣರಳಿಸುತ್ತಾ ಬಹುದಿನಗಳಿಂದ ಈ ಬ್ರ‍್ಯಾಂಡ್‌ಗಾಗಿ ಹುಡುಕುತ್ತಿದ್ದೆ ಎಲ್ಲೂ ಸಿಗಲಿಲ್ಲ ಎಂದಳು. ಆಕೆಯ ವರ್ತನೆಯಿಂದ, ಆಕೆಯೂ ಪುಗ್ಸಟ್ಟೆ ಧೂಮದ ಬಯಕೆಯಿಂದಲೇ ಈ ಅತಿವಿನಯ ತೋರುತ್ತಿದ್ದಾಳೆಂದು ಮನವರಿಕೆಯಾಯಿತು. ಒಂದು ಅಮಾಯಕ ಸಿಗರೇಟನ್ನು ಆಕೆ ಬಲಿಪಡೆದೇ ಬಿಟ್ಟಳು.

ಪುಗ್ಸಟ್ಟೆ ಧೂಮ -7
ಲೇಖನಿಯಿಂದ ಪದಗಳೇ ಹೊರಬರುತ್ತಿರಲಿಲ್ಲವೆಂದು ಪಾರ್ಕ್‌ನತ್ತ ಬಂದೆ. ಸೊಂಟಕ್ಕೆ ರಿವಾಲ್ವರ್ ಸಿಕ್ಕಿಸಿದ್ದ ವ್ಯಕ್ತಿಯೊಬ್ಬ ಅಲ್ಲಿ ಕೂತಿದ್ದ. ನನ್ನನ್ನು ನೋಡುತ್ತಿದ್ದಂತೆಯೇ ತನ್ನ ಮೈಗೆ ಹೊದ್ದುಕೊಂಡಿದ್ದ ರುಮಾಲಿನಿಂದ ರಿವಾಲ್ವರನ್ನು ಮುಚ್ಚಿ ಅಡಗಿಸಿದ. ನಾನು ತುಸು ದೂರ ಕೂತು ಸಿಗರೇಟು ಹಚ್ಚುತ್ತಿದ್ದಂತೆಯೇ ಕಡ್ಡಿ ಗೀರುವ ಸದ್ದು ಕೇಳಿಸಿ ಕೂತಲ್ಲಿಂದ ಕೂತ ಭಂಗಿಯಲ್ಲೇ ಅಂಡೆಲೆಯುತ್ತಾ ನನ್ನ ಬಳಿ ಬಂದು ಅತ್ಯಂತ ವಿನೀತನಾಗಿ “ನನ್ನ ಸಿಗರೇಟಿನ ಪೊಟ್ಟಣವನ್ನು ಮರೆತು ಕೊಠಡಿಯಲ್ಲೇ ಬಿಟ್ಟು ಬಂದಿರುವೆ”ನೆಂದ. ಆತನ ಇಂಗಿತದ ಅರಿವಾಗಿ ನನ್ನ ಪೊಟ್ಟಣ ತೋರಿಸಿದೆ. ಅದರಿಂದ ಒಂದು ಸಿಗರೇಟನ್ನು ಎಳೆದು ತುಟಿಗಿಟ್ಟು ಕಡ್ಡಿ ಗೀರಿ ಏನೇನೋ ಅಸಂಬದ್ಧವಾಗಿ ಮಾತನಾಡುತ್ತಾ.. ಕೊನೆಗೆ ನನ್ನ ಪೊಟ್ಟಣದಿಂದ ಇನ್ನೊಂದು ಸಿಗರೇಟನ್ನೂ ಎಗರಿಸಿಬಿಟ್ಟ. ಲೇಖನಿಯಿಂದ ಪದಗಳು ಹೊರಬರುತ್ತಿಲ್ಲವೆಂದು ಪಾರ್ಕ್ನತ್ತ ಬಂದವನಿಗೆ ಈ ಪುಗ್ಸಟ್ಟೆ ಧೂಮ ಗಿರಾಕಿಯಿಂದ ಎರಡು ಸಿಗರೇಟುಗಳ ನಷ್ಟವಾಯಿತೇ ಹೊರತು ಒಂದು ವಾಕ್ಯವೂ ಹೊಳೆಯಲಿಲ್ಲ..

ಪುಗ್ಸಟ್ಟೆ – 8
ಅದೊಂದು ಸಂಜೆ.. ಒಳ್ಳೆಯ ವಾತಾವರಣವಿತ್ತು. ಬಜಾರಿನತ್ತ ನಡೆಯುತ್ತಿದ್ದೆ. ಟಾಂಗಾದಲ್ಲಿ ಪ್ರಯಾಣಿಸುತ್ತಿದ್ದ ನವಾಬ್ ಸಾಬ್ ಒತ್ತಾಯದಿಂದ ಕರೆದು ಟಾಂಗಾಕ್ಕೇರಿಸಿದ. ನವಾಬನೋ ಮಹಾ ಹೃದಯವಂತ ಮತ್ತು ಉದಾರಿ ಮನುಷ್ಯ. ಟಾಂಗಾ ಏರುತ್ತಿದ್ದಂತೆಯೇ ಇಂದು ಪುಗ್ಸಟ್ಟೆ ಧೂಮದ ಸುಖ ನಾನೂ ಅನುಭವಿಸಬೇಕೆಂದು ಮನದಲ್ಲಿ ಮಂಡಿಗೆ ಮೆಲ್ಲುತ್ತಿದ್ದೆ. ನವಾಬ್ ಸಾಹೇಬ ಅದೂ ಇದೂ ಮಾತನಾಡುತ್ತಾ ಮಾತನ್ನು ಸಿಗರೇಟಿನತ್ತ ಹೊರಳಿಸಿದ. ಆತ ತನ್ನ ಚೇಲಾನಿಗೆ ಮಂಟೋ ಮಿಯಾನಂತಹ ಸ್ಪೆಶಲ್ ಬ್ರ‍್ಯಾಂಡ್ ಸಿಗರೇಟು ಸೇದುವವರು ಈ ಊರಲ್ಲೇ ಇಲ್ಲ ಎಂದ. ಹಾಗೆಂದು ಮಂಟೋ ಮಿಯಾ ನಿಮ್ಮ ಸಿಗರೇಟು ಯಾವುದು ತೋರಿಸಿ ಎಂದ. ನಾನು ಅಳುಕಿದೆ. ಆತ ಒತ್ತಾಯಪೂರ್ವಕವಾಗಿ ಜೇಬಿನಿಂದ ಸಿಗರೇಟಿನ ಪೊಟ್ಟಣವನ್ನು ಹೊರತೆಗೆಸಿದ. ನನ್ನದಾದರೋ ಮಾಮೂಲಿ ಬ್ರ‍್ಯಾಂಡ್.. ಆತ ಕಣ್ಣಗಲಿಸಿ ಮಂಟೋ ಮತ್ತು ಗೋಲ್ಡ್ ಫ್ಲೇಕ್ ಎನ್ನುತ್ತಾ ನನ್ನ ಪೊಟ್ಟಣವನ್ನು ನನ್ನ ಕೈಯಿಂದ ಒತ್ತಾಯದಿಂದಲೇ ಪಡೆದ. ಅದರಿಂದ ಒಂದು ಸಿಗರೇಟನ್ನು ಎತ್ತಿ ಮೂಗಿನ ಬಳಿ ಅಡ್ಡಲಾಗಿ ಹಿಡಿದು ಮೂಸಿದ.. ಬಳಿಕ ಅದನ್ನು ತುಟಿಗಳೆಡೆಗೆ ಸಿಕ್ಕಿಸಿ ಬೆಂಕಿಪೊಟ್ಟಣಕ್ಕಾಗಿ ನನ್ನ ಮುಖ ನೋಡಿದ. ಅಷ್ಟರಲ್ಲೇ ಆತನ ಚೇಲಾ ಕಡ್ಡಿ ಗೀರಿ ಈತನ ಮುಖದ ಬಳಿ ತಂದ. ತಾನು ಸಿಗರೇಟು ಹಚ್ಚಿ ಅಷ್ಟಕ್ಕೇ ಬಿಡದೇ ತನ್ನ ಚೇಲಾನಿಗೂ ನನ್ನ ಪೊಟ್ಟಣ ತೋರಿಸಿದ. ಆತನೂ ಅದರಿಂದ ಒಂದು ಸಿಗರೇಟು ಎತ್ತಿದ. ಏನು ಮಾಡಲಿ ದೇವನೇ ನನ್ನಿಂದ ಹಳೇ ಬಾಕಿ ಚುಕ್ತಾ ಮಾಡಿರಬೇಕೇನೋ.


ಇದನ್ನೂ ಓದಿ: ಸ್ವತಃ ‘ಲಾಕಪ್’ ಅನುಭವದಿಂದ ಹೋರಾಟದವರೆಗೂ: ವಿಸಾರಣೈ ಕಥೆಗಾರ ಚಂದ್ರಕುಮಾರ್ ಸಂದರ್ಶನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...