Homeಕರ್ನಾಟಕಮಂಗಳೂರು| ವಕ್ಫ್‌ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶ: ಭಾರೀ ಸಂಖ್ಯೆಯಲ್ಲಿ ಜನರು ಭಾಗಿ

ಮಂಗಳೂರು| ವಕ್ಫ್‌ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶ: ಭಾರೀ ಸಂಖ್ಯೆಯಲ್ಲಿ ಜನರು ಭಾಗಿ

- Advertisement -
- Advertisement -

ವಕ್ಫ್‌ ತಿದ್ದುಪಡಿ ಕಾಯ್ದೆ-2025ರ ವಿರುದ್ದ ಮಂಗಳೂರು ನಗರದ ಹೊರವಲಯ ಅಡ್ಯಾರ್‌ ಕಣ್ಣೂರಿನ ಶಾ ಗಾರ್ಡನ್‌ ಮೈದಾನದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಶುಕ್ರವಾರ (ಏ.18) ನಡೆಯಿತು.

ಸಂಜೆ 4 ಗಂಟೆಗೆ ಪ್ರಾರಂಭಗೊಂಡ ಸಮಾವೇಶದಲ್ಲಿ ವಿಶಾಲವಾದ ಶಾ ಗಾರ್ಡನ್‌ ಮೈದಾನ ಸಂಪೂರ್ಣ ತುಂಬಿದ್ದ ಪರಿಣಾಮ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಜನ ಜಂಗುಳಿ ಕಂಡು ಬಂತು.

ಗಮನಾರ್ಹವಾಗಿ, ಕರ್ನಾಟಕ ಸುನ್ನೀ ಮುಸ್ಲಿಮರ ಎರಡು ಬೃಹತ್ ವಿಭಾಗಗಳಾದ ಎಪಿ ಮತ್ತು ಇಕೆಯ ಉಲಮಾ (ಧಾರ್ಮಿಕ), ಉಮರಾ (ಸಾಮುದಾಯಿಕ) ನಾಯಕರು ಒಂದಾಗಿ ಪ್ರತಿಭಟನೆಯನ್ನು ಆಯೋಜಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ಉಡುಪಿ, ಚಿಕ್ಕಮಗಳೂರು, ಹಾಸನ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ (ಮಾಣಿ ಉಸ್ತಾದ್) ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪ್ರತಿಭಟನಾ ನಿರತರ ಕೈಗಳಲ್ಲಿ ರಾಷ್ಟ್ರ ಧ್ವಜಗಳು ರಾರಾಜಿಸಿತು.

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿಯ ಮಾಜಿ ಅಧ್ಯಕ್ಷ ಎನ್‌ಕೆ.ಎಂ ಶಾಫಿ ಸಅದಿ ಬೆಂಗಳೂರು “ಭಾರತ ಕಾನೂನಿನ ಮೇಲೆ ನಮಗೆ ಭರವಸೆ ಇದೆ. ಮೇ 5ರಂದು ಬರುವ ಸುಪ್ರೀಂ ಕೋರ್ಟ್‌ನ ಆದೇಶ ನಮ್ಮ ಪರ ಇರಲಿದೆ ಎಂಬ ವಿಶ್ವಾಸ ನಮಗಿದೆ” ಎಂದರು.

ಕೇಂದ್ರ ಸರ್ಕಾರ ವಕ್ಫ್‌ ತಿದ್ದುಪಡಿ ಕಾಯ್ದೆಗೆ ಸುಂದರವಾದ ಹೆಸರೊಂದನ್ನು ನೀಡಿ ನಮ್ಮ ಆಸ್ತಿಗಳನ್ನು ಕಬಳಿಸಲು ಸಂಚು ರೂಪಿಸಿದೆ. ಕೆಲ ಮಾಧ್ಯಮಗಳು ಮತ್ತು ಸಹೋದರ ಧರ್ಮಿಯರು ನಮ್ಮದು ಹಿಂದೂಗಳ ವಿರುದ್ದ ಅಥವಾ ಒಂದು ಪಕ್ಷದ ವಿರುದ್ದದ ಹೋರಾಟ ಅಂದುಕೊಂಡಿದ್ದಾರೆ. ನಮ್ಮ ಹೋರಾಟ ಯಾವುದೇ ಧರ್ಮ, ಜಾತಿ, ಪಕ್ಷದ ವಿರುದ್ದವಲ್ಲ. ಈ ಹೋರಾಟ ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ಛಿದ್ರ ಛಿದ್ರಗೊಳಿಸಿ ಬುಲ್ಡೋಜರ್ ಚಕ್ರದ ಅಡಿಗೆ ಸಿಲುಕಿಸಿದ ಕೆಲವು ನಾಮಧಾರಿಗಳ, ಕೆಲವು ಕೋಮುವಾದಿಗಳ ಹಾಗೂ ಕೆಲವು ಫ್ಯಾಸಿಸ್ಟರ ವಿರುದ್ಧ ಮಾತ್ರವಾಗಿದೆ ಎಂದು ಸ್ಪಷ್ಟಪಡಿಸಿದರು.

1986ರಲ್ಲಿ ಶಾಬಾನು ಪ್ರಕರಣದ ಬಂದಾಗ ಅವತ್ತಿನ ರಾಜೀವ್ ಗಾಂಧಿ ಸರ್ಕಾರದ ವಿರುದ್ದ ಉಲಮಾಗಳು ಹೋರಾಟ ನಡೆಸಿದ್ದಾರೆ. ಆ ಪ್ರಕರಣದಲ್ಲಿ ಕುರ್‌ಆನ್‌ಗೆ ವಿರುದ್ದ ಇದ್ದ ಆದೇಶವನ್ನು ಹಿಂತೆಗೆಸಿದ್ದೇವೆ. ಅದೇ ರೀತಿ ವಕ್ಫ್‌ ಕಾಯ್ದೆಯ ತಿದ್ದುಪಡಿಗಳನ್ನು ನಾವು ಹಿಂತೆಗೆಸಬೇಕಾಗಿದೆ ಎಂದರು.

ಸಂಸದರೊಬ್ಬರು ಮಾತನಾಡುತ್ತಾ..ಯಾವುದೇ ಜಾಗವನ್ನು ತೋರಿಸಿ ಅದು ವಕ್ಫ್‌ ಎಂದರೆ ವಕ್ಫ್‌ ಆಸ್ತಿಯಾಗುತ್ತದೆ ಎಂದು ಬೊಬ್ಬಿರಿದು ಭಾಷಣ ಮಾಡಿದ್ದಾರೆ. ನಾನು ಅವರಿಗೆ ಸವಾಲು ಹಾಕುತ್ತೇನೆ. 1995ರ ವಕ್ಫ್‌ ಕಾಯ್ದೆಯಲ್ಲಿ ಎಲ್ಲಾದರು ದಾಖಲೆಗಳಿಲ್ಲದ, ಹಿಂದೂಗಳ, ರೈತರ ಅಥವಾ ಇತರ ಸಮುದಾಯಗಳ ಆಸ್ತಿಗಳನ್ನು ವಕ್ಫ್‌ ಮಂಡಳಿ ಕಿತ್ತುಕೊಳ್ಳಬಹುದು ಎಂದು ಇದ್ದರೆ ಅವರು ತೋರಿಸಿಕೊಡಲಿ ಎಂದು ಹೇಳಿದರು.

ಇದುವರೆಗೆ ಯಾವುದೇ ಹಿಂದೂಗಳು, ರೈತರ ಆಸ್ತಿಯನ್ನು ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ ಮುಟ್ಟಿಲ್ಲ. ಇತರ ವಕ್ಫ್‌ ಬೋರ್ಡ್‌ಗಳೂ ಈ ಕೆಲಸವನ್ನು ಮಾಡಿಲ್ಲ. ದೇಶದ ಮುಸಲ್ಮಾನರ ವಕ್ಫ್‌ ಆಸ್ತಿ 36 ಲಕ್ಷ ಎಕರೆ ಜಾಗ ಎಂದು ಇತ್ತೀಚೆಗೆ ಕೇಂದ್ರ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ತನ್ನ ವೆಬ್‌ ಸೈಟ್‌ನಲ್ಲಿ ಘೋಷಣೆ ಮಾಡಿದೆ. ಆದರೆ, ಸಚಿವ ಕಿರಣ್‌ ರಿಜಿಜು ಕೇವಲ 9 ಲಕ್ಷ ಎಕರೆ ಜಾಗ ಎಂದು ಹೇಳುತ್ತಿದ್ದಾರೆ. ಹಾಗಾದರೆ, ಹೊಸ ತಿದ್ದುಪಡಿಯ ಮೂಲಕ ವಕ್ಫ್‌ ಆಸ್ತಿಯನ್ನು ಕಬಳಿಸುವ ಗೂಡಾಲೋಚನೆ ಇದೆಯಾ? ಎಂದು ಶಾಫಿ ಸಅದಿ ಪ್ರಶ್ನಿಸಿದರು.

1995ರ ವಕ್ಫ್‌ ಕಾಯ್ದೆಯಲ್ಲಿ ಯಾವುದೇ ಸಮಸ್ಯೆಗಳು ಇರಲಿಲ್ಲ. ಹೊಸ ತಿದ್ದುಪಡಿಯಲ್ಲಿ ಬಳಕೆದಾರರಿಂದ ವಕ್ಫ್‌ (Waqf By User) ಅನ್ನು ನಮ್ಮಿಂದ ಕಿತ್ತುಕೊಳ್ಳಲಾಗಿದೆ. ಬಳಕೆದಾರರಿಂದ ವಕ್ಫ್‌ ಅನ್ನು ತಿದ್ದುಪಡಿಯಲ್ಲಿ ಹೊರಗಿಡುವ ಮೂಲಕ ಉತ್ತರ ಪ್ರದೇಶ, ಬಿಹಾರದಂತಹ ರಾಜ್ಯಗಳ ಬಡ ಮುಸ್ಲಿಮರ ಮಸೀದಿ, ಮದ್ರಸಗಳ ಮೇಲೆ ಬುಲ್ಡೋಜರ್ ಹತ್ತಿಸುವ ಉದ್ದೇಶ ನಿಮ್ಮದಾಗಿದ್ದರೆ, ಮೇ 5ರಂದು ಪ್ರಕಟಿಸುವ ಆದೇಶದಲ್ಲಿ ಸುಪ್ರೀಂ ಕೋರ್ಟ್‌ ನಿಮಗೆ ಮಂಗಳಾರತಿ ಮಾಡಲಿದೆ ಎಂಬ ವಿಶ್ವಾಸ ನಮಗಿದೆ ಎಂದರು.

ಯಾವುದೇ ಆಸ್ತಿಯನ್ನು ಯಾರಾದರು ವಕ್ಫ್‌ ಮಾಡಬೇಕಾದರೆ ಅವರು 5 ವರ್ಷ ಇಸ್ಲಾಂ ಧರ್ಮ ಪಾಲಿಸಿರಬೇಕು ಎಂದು ಹೊಸ ತಿದ್ದುಪಡಿ ತರಲಾಗಿದೆ. ಈ ದೇಶದ ಹಿಂದೂಗಳು, ಸಿಖ್ಖರು ಸೇರಿದಂತೆ ಯಾರಿಗೂ ಇಲ್ಲದ ಕಾನೂನು ಮುಸ್ಲಿಮರಿಗೆ ಏಕೆ? ಎಂದು ಶಾಫಿ ಸಅದಿ ಪ್ರಶ್ನಿಸಿದರು. ವಕ್ಫ್ ಮಂಡಳಿಗಳಲ್ಲಿ ಮುಸ್ಲಿಮೇತರರನ್ನು ಸೇರಿಸಿಲು ಅವಕಾಶ ನೀಡುವ ತಿದ್ದುಪಡಿಯನ್ನು ಅವರು ಕಟುವಾಗಿ ವಿರೋಧಿಸಿದರು.

ಭಾರತದಲ್ಲಿ ಈಗಾಗಲೇ ಸುನ್ನೀ ಮತ್ತು ಶಿಯಾ ವಕ್ಫ್‌ ಮಂಡಳಿಗಳು ಇವೆ. ಈ ನಡುವೆ ಶಿಯಾ ಪಂಗಡದಲ್ಲಿ ಬೊಹ್ರಾ ಮತ್ತು ಆಗಾಖಾನಿಗಳ ಪ್ರತ್ಯೇಕ ವಕ್ಫ್‌ ಮಂಡಳಿ ರಚಿಸುವ ಅವಕಾಶವನ್ನು ತಿದ್ದುಪಡಿ ಕಾನೂನಿನಲ್ಲಿ ನೀಡಲಾಗಿದೆ. ಇದು ಶಿಯಾಗಳನ್ನು, ಮುಸ್ಲಿಮರನ್ನು ಒಡೆದು ಆಳುವ ತಂತ್ರ ಎಂದು ಶಾಫಿ ಸಅದಿ ಕಿಡಿಕಾರಿದರು. ಬೊಹ್ರಾ ಸಮುದಾಯದ ಕೆಲವರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ವಕ್ಫ್‌ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿದ್ದಾರೆ. ಈ ಮೂಲಕ ಮುಸ್ಲಿಮರು ಕಾಯ್ದೆಯ ಪರ ಇದ್ದಾರೆ ಎಂದು ಬಿಂಬಿಸಲಾಗುತ್ತಿದೆ. ಈ ಷಡ್ಯಂತ್ರ ನಮಗೆ ಗೊತ್ತಿದೆ ಎಂದು ಹೇಳಿದರು.

ವಕ್ಫ್‌ ಟ್ರಿಬ್ಯೂನಲ್‌ಗಳಲ್ಲಿ ಮುಸ್ಲಿಮರೇ ಇದ್ದಾರೆ. ಟ್ರಿಬ್ಯೂನಲ್ ಕೊಟ್ಟ ತೀರ್ಪು ಅಂತಿಮ ಎಂದು ಸುಳ್ಳು ಹರಡಲಾಗಿದೆ. ನಾನು 10 ವರ್ಷಗಳ ಕಾಲ ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ ಸದಸ್ಯನಾಗಿದ್ದೆ, ಒಂದು ವರ್ಷ ಅಧ್ಯಕ್ಷನಾಗಿ ಅಧಿಕಾರ ನಡೆಸಿದ್ದೇನೆ. ಕರ್ನಾಟಕದಲ್ಲಿ ನಾಲ್ಕು ವಕ್ಫ್‌ ಟ್ರಿಬ್ಯೂನಲ್‌ಗಳಿವೆ. ಅವುಗಳಲ್ಲಿ ಒಬ್ಬರನ್ನು ಬಿಟ್ಟು ಬೇರೆ ಯಾರೂ ಮುಸ್ಲಿಂ ನ್ಯಾಯಾಧೀಶರು ಇಲ್ಲ. ಇರುವ ಒಬ್ಬರು ಸಿವಿಲ್ ನ್ಯಾಯಾಧೀಶರು ಎಂದು ವಿವರಿಸಿದರು.

ದೇಶ ವಿಭಜನೆಯಾದಾಗ ಪಾಕಿಸ್ತಾಕ್ಕೆ ತೆರಳಿದ ಮುಸ್ಲಿಮರ ವಕ್ಫ್‌ ಆಸ್ತಿಗಳು ವಕ್ಫ್‌ ಆಸ್ತಿಗಳಲ್ಲ ಎಂದು ತಿದ್ದುಪಡಿ ಕಾನೂನಿನಲ್ಲಿ ಹೇಳಲಾಗಿದೆ. ವಕ್ಫ್‌ ಮಂಡಳಿ ಮತ್ತು ಪುರಾತತ್ವ ಇಲಾಖೆಯ ನಡುವೆ ವಿವಾದ ಉಂಟಾದರೆ, ಅಲ್ಲಿ ಪುರಾತತ್ವ ಇಲಾಖೆಗೆ ಮಾತ್ರ ವಾದ ಮಂಡಿಸಲು ಅವಕಾಶ ನೀಡಲಾಗಿದೆ. ಈ ಮೂಲಕ ತಾಜ್‌ ಮಹಲ್‌, ಖುತುಬ್ ಮಿನಾರ್‌ನಂತಹ ಮುಸ್ಲಿಮರ ಕುರುಹುಗಳನ್ನು ಅಳಿಸುವ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಗಾಂಧೀಜಿ, ಅಂಬೇಡ್ಕರ್ ಅವರ ಈ ಭಾರತದಲ್ಲಿ ವಕ್ಫ್‌ ತಿದ್ದುಪಡಿ ಕಾಯ್ದೆಯನ್ನು ಕಾರ್ಯರೂಪಕ್ಕೆ ತರಲು ನಾವು ಬಿಡುವುದಿಲ್ಲ ಎಂದು ಪುನರುಚ್ಚರಿಸಿದರು.

ಉಲಮಾ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಯು.ಕೆ ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು ಮಾತನಾಡಿ, “ಸಂಚಿನ ಬಗ್ಗೆ ಈ ಸಮಾಜಕ್ಕೆ ಗೊತ್ತು ಗುರಿ ಇದೆ ಎನ್ನುವುದಕ್ಕೆ ಈ ಸಮಾವೇಶ ಸಾಕ್ಷಿ. ನಮ್ಮ ದೇಶದ ಪ್ರಧಾನಿ ಪಂಕ್ಚರ್ ಹಾಕುವ ಮುಸ್ಲಿಮರ ಬಗ್ಗೆ ಮಾತನಾಡಿದ್ದಾರೆ. ಆದರೆ, ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನೇ ಪಂಕ್ಚರ್ ಮಾಡಲು ಹೊರಟಿದ್ದಾರೆ. ಅಲ್ಪ ಸಂಖ್ಯಾತರ ಹಕ್ಕುಗಳನ್ನು ಸಂರಕ್ಷಿಸಿದಾಗ ಸಂವಿಧಾನಕ್ಕೆ ಬೆಲೆ ಬರುತ್ತದೆ ಎಂದು ಅಂಬೇಡ್ಕರ್ ಹೇಳಿದ್ದಾರೆ. ಆ ಬೆಲೆಯನ್ನಾದರು ಉಳಿಸಿಕೊಳ್ಳಿ ಎಂದು ನಾವು ಪ್ರಧಾನಿಯಲ್ಲಿ ಹೇಳುತ್ತಿದ್ದೇವೆ ಎಂದರು.

ಪ್ರಧಾನಿ ಮೋದಿಯವರೇ ನೀವು ಹುಟ್ಟುವ ಮೊದಲೇ ಈ ಮುಸ್ಲಿಂ ಸಮುದಾಯ ಟಿಪ್ಪುವಿನ ಮೂಲಕ ರಾಕೆಟ್ ಉಡಾಯಿಸಿದೆ. ಮುಸ್ಲಿಮರ ವಿರುದ್ಧ ನಿರಂತರ ಸಂಚು ಹೂಡಲಾಗುತ್ತಿದೆ. ಆದರೆ, ನಮ್ಮನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ ಎಂಬುವುದನ್ನು ಈ ಜನಸ್ತೋಮ ತೋರಿಸಿದೆ. ಬ್ರಿಟಿಷರ ವಿರುದ್ಧ ದೇಶ ಹೋರಾಟ ಮಾಡುತ್ತಿದ್ದ ಸಮಯ, ಬ್ರಿಟಿಷರ ಪರವಾಗಿ ಕೆಲವರು ಕೆಲಸ ಮಾಡುತಿದ್ದರು. ಆದರೆ, ನಾವು ಅಂತವರಲ್ಲ ಎಂದು ಹೇಳಿದರು.

ಎಷ್ಟೇ ದಾಳಿ ಮಾಡಿದರು ನಾವು ಮುನ್ನುಗ್ಗುತ್ತೇವೆ. ಎಷ್ಟೇ ಕುಗ್ಗಿಸಿದರೂ ನಾನು ಮತ್ತೆ ಗಟ್ಟಿಯಾಗುತ್ತೇವೆ. ಸಂವಿಧಾನ ಇರುವವರೆಗೂ ನಾವು ಹೋರಾಟ ಮಾಡುತ್ತೇವೆ. ಸಂವಿಧಾನವನ್ನು ಕಾಪಾಡುತ್ತೇವೆ ಎಂದರು.

ಡಾ. ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಮಾತನಾಡಿ, “ದೇಶ ಗಂಡಾಂತರ ಎದುರಿಸಿದ ಎಲ್ಲಾ ಸಮಯದಲ್ಲಿ ಉಲಮಾಗಳು ಧ್ವನಿ ಎತ್ತಿದ್ದಾರೆ, ಹೋರಾಟ ಮಾಡಿದ್ದಾರೆ. ಇದನ್ನು ಭಾರತದ ಹೋರಾಟದ ಚರಿತ್ರೆಯಲ್ಲಿ ಪರಿಶೀಲಿಸಬಹುದು ಎಂದರು.

ಸರ್ಕಾರದ ಎಲ್ಲಾ ಹುನ್ನಾರಗಳನ್ನು ಈ ದೇಶದ ಜನರು ಜಾತಿ, ಧರ್ಮಗಳನ್ನು ಮರೆತು ಸೋಲಿಸುತ್ತಾರೆ.ಈ ದೇಶದ ಮುಸ್ಲಿಮರನ್ನು ಇಲ್ಲವಾಗಿಸಲು ಸಾಧ್ಯವಿಲ್ಲ. ದೆಹಲಿಯಲ್ಲಿ ಅಧಿಕಾರ ನಡೆಸುವವರೆ ನಾವು ಈ ದೇಶದ ಮಾಲೀಕರು, ನೀವು ಸೇವಕರಷ್ಟೆ ಎಂದು ಹೇಳಿದರು.

ಬ್ರಿಟಿಷರ ವಿರುದ್ಧ ಮೊತ್ತ ಮೊದಲು ಹೋರಾಟ ಮಾಡಿದವರು ಮುಸ್ಲಿಮರು ಆಗಿದ್ದಾರೆ. ಈ ದೇಶಕ್ಕಾಗಿ ಹುತಾತ್ಮರಾದ ಮೊತ್ತ ಮೊದಲ ವ್ಯಕ್ತಿ ಮುಸ್ಲಿಂ. ಈ ದೇಶಕ್ಕೆ ಜೈ ಹಿಂದ್ ಎಂಬ ಘೋಷಣೆ ಕೊಟ್ಟವರು ಮುಸ್ಲಿಂ. ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧದ ಈ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ. ಭಾರತ ಭಾರತಾಗುವ ತನಕ ನಾವು ಈ ಹೋರಾಟ ಮುಂದುವರೆಸುತ್ತೇವೆ ಎಂದರು.

ನಮ್ಮ ಹೋರಾಟ ಹಿಂದೂಗಳ ವಿರುದ್ಧ ಅಲ್ಲ. ಇದು ಸಂವಿಧಾನದ ವಿರುದ್ಧದ ಮತ್ತು ಹಿಂದೂಗಳ ವಿರುದ್ಧದ ಹೋರಾಟ ಎಂದು ಬಿಂಬಿಸಲಾಗುತ್ತಿದೆ. ಈ ಎಲ್ಲಾ ಹುನ್ನಾರಗಳನ್ನು ನಾವು ಸೋಲಿಸುತ್ತೇವೆ ಎಂದು ಪುನರುಚ್ಚರಿಸಿದರು.

ಪ್ರತಿಭಟನಾ ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳು 

  • ವಕ್ಫ್‌ ತಿದ್ದುಪಡಿ ಕಾಯ್ದೆಯು ಸಂವಿಧಾನದತ್ತ ಹಕ್ಕುಗಳ ಉಲ್ಲಂಘನೆಯಾಗಿದ್ದು, ಕೂಡಲೇ ಕೇಂದ್ರ ಸರ್ಕಾರ ಇದನ್ನು ಹಿಂತೆಗೆದುಕೊಳ್ಳಬೇಕು. ದೇಶದ ಅತಿ ದೊಡ್ಡ ಅಲ್ಪ ಸಂಖ್ಯಾತ ವಿಭಾಗವಾದ ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆಯನ್ನು ಖಚಿತಪಡಿಸಿಬೇಕು.
  • ಯಾವ ಪ್ರಭಾವಕ್ಕೂ ಒಳಗಾಗದೆ ಜಾತಿ ಗಣತಿ ವರದಿಯನ್ನು ಜಾರಿಗೆ ತಂದು ಮುಸ್ಲಿಮರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸಬೇಕು.
  • ಹಿಂದೂ -ಮುಸ್ಲಿಂ ಭಾವಕ್ಯತೆಯ ಕೇಂದ್ರವಾಗಿರುವ ಬಾಬಾ ಬುಡನ್‌ಗಿರಿಯಲ್ಲಿ ಪರಂಪರಾಗತವಾದ ಸೌಹಾರ್ದತೆಯನ್ನು ಕಾಪಾಡಲು ಸಾಧ್ಯವಾಗುವಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು
  • ಕೋಮು ಪ್ರಚೋದನಕಾರಿ ಭಾಷಣಗಳು ಮತ್ತು ಹೇಳಿಕೆಗಳು, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಸರ್ಕಾರ ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು. ಅಂತಹ ಸಂದೇಶ ಹರಡುವವರ ವಿರುದ್ದ ಕ್ರಮ ಕೈಗೊಳ್ಳಬೇಕು.
  • ಹಿಂದೂ, ಮುಸ್ಲಿಂ, ಕ್ರೈಸ್ತರೆನ್ನದೆ ಎಲ್ಲರೂ ಪ್ರೀತಿ, ವಿಶ್ವಾಸದಿಂದ ಬದುಕುತ್ತಾ ಬಂದಿರುವ ಸೌಹಾರ್ಧ ಪರಂಪರೆ ಭಾರತೀಯರಾದ ನಮ್ಮೆಲ್ಲರದ್ದು. ಶತ ಶತಮಾನಗಳಿಂದ ಕಾಯ್ದುಕೊಂಡು ಬಂದಿರುವ ಈ ಸೌಹಾರ್ದ ಪರಂಪರೆಯನ್ನು ಮುಂದೆಯೂ ಮುಂದುವರೆಸಿಕೊಂಡು ಹೋಗಲು ಯಾವುದೇ ರಾಜಕೀಯ ಅಥವಾ ಕೋಮು ಸ್ವಾರ್ಥ ಹಿತಾಸಕ್ತಿಗಳ ಬಲೆಗೆ ಬಲಿಯಾಗದೆ ದೇಶದ ಪರಂಪರೆಯನ್ನು ಉಳಿಸಲು ಪ್ರತಿಜ್ಞಾ ಬದ್ದರಾಗಬೇಕು ಎಂದು ಸರ್ವ ಭಾರತೀಯ ಸಹೋದರ, ಸಹೋದರಿಯರಲ್ಲಿ ಈ ಉಲಮಾ ಒಕ್ಕೂಟವು ಮನವಿ ಮಾಡುತ್ತದೆ.

ಮನುಸ್ಮೃತಿಯ ಜಾತಿ ವಿಷದ ಕಾರಣಕ್ಕೇ ಮಡಿವಾಳ ಸಮಾಜ ಹಿಂದುಳಿದಿದೆ: ಸಿಎಂ ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...