ಮೂರು ವಾರಗಳ ಹಿಂದೆ ಇದೇ ಪುಟದಲ್ಲಿ ‘ನಿರೀಕ್ಷಿತ ಕೀಳು ಮಟ್ಟದ ನಡವಳಿಕೆ ಮತ್ತು ಅನಿರೀಕ್ಷಿತ ಪ್ರಬುದ್ಧತೆ’ ಎಂಬ ಬರಹವನ್ನು ಬರೆಯಲಾಗಿತ್ತು. ದೆಹಲಿ ಚುನಾವಣೆಯ ಹಿನ್ನೆಲೆಯಲ್ಲಿ ದೊಡ್ಡ ಸ್ಥಾನದಲ್ಲಿರುವವರೇ ಇಲ್ಲಿ ಬಟನ್ ಒತ್ತಿದರೆ ಅಲ್ಲಿ ಷಾಕ್ ಹೊಡೆಯಬೇಕು; ಅಲ್ಲಿ ಧರಣಿ ಕೂತಿರುವವರು ರೇಪ್ ಮಾಡುವವರು ಇತ್ಯಾದಿ ಮಾತುಗಳನ್ನು ಶಹೀನ್‍ಬಾಗ್‍ನ ಧರಣಿಯ ಬಗ್ಗೆ ಆಡಿದ್ದರು. ಅದೇ ಸಂದರ್ಭದಲ್ಲಿ ತಮ್ಮತ್ತ ಗುಂಡು ಹಾರಿಸಿದರೂ ಪ್ರಚೋದನೆಗೊಳಗಾಗದೇ ರಾಷ್ಟ್ರಧ್ವಜ ಹಾಗೂ ಸಂವಿಧಾನ ಹಿಡಿದು ಶಾಂತಿಯುತ ಹೋರಾಟವನ್ನು ದೇಶದೆಲ್ಲೆಡೆ ಮಾಡುತ್ತಿದ್ದ ಸಮುದಾಯದ ಪ್ರಬುದ್ಧತೆ ಎದ್ದು ಕಾಣುತ್ತಿತ್ತು.
ಆದರೆ ಇಂದಿನ ಸಂದರ್ಭ ಇನ್ನೂ ಅಪಾಯಕಾರಿಯಾಗಿ ಪರಿವರ್ತನೆಯಾಗಿದೆ. ಬೆಂಗಳೂರಿನಲ್ಲಿ ಮುಸ್ಲಿಂ ಸಮುದಾಯದವರೇ ಹೆಚ್ಚಾಗಿದ್ದ ಸಮಾವೇಶವೊಂದರಲ್ಲಿ ಅಮೂಲ್ಯ ಎಂಬ ಎಳೆಯ ಹುಡುಗಿಯ ಮಾತುಗಳು ಪರಿಸ್ಥಿತಿಯನ್ನು ಸಂಕೀರ್ಣಗೊಳಿಸಿದೆ. ‘ಆಕೆ ಏನನ್ನೋ ಹೇಳಲು ಹೊರಟಿದ್ದಳು, ವಿಶ್ವಮಾನವ ಸಂದೇಶ ಸಾರಲು ಹೊರಟಿದ್ದಳು, ಅದನ್ನು ಅರ್ಥ ಮಾಡಿಕೊಳ್ಳಲು ನಾಲ್ಕು ದಿನದ ಹಿಂದಿನ ಆಕೆಯ ಫೇಸ್‍ಬುಕ್ ಪೋಸ್ಟ್ ನೋಡಬೇಕು, ಆಕೆಯ ಮೇಲೆ ದೇಶದ್ರೋಹದ ಕೇಸನ್ನು ದಾಖಲಿಸಿರುವುದೇ ತಪ್ಪು’ ಇವೆಲ್ಲವೂ ನಿಜ. ಆದರೆ ಇಷ್ಟೇ ನಿಜವಲ್ಲ.
ಮೂರು ವಾರಗಳ ಹಿಂದೆ ಬರೆದಂತೆ ದೇಶದ ಅತಿ ದೊಡ್ಡ ಅಲ್ಪಸಂಖ್ಯಾತ ಸಮುದಾಯವು ತೋರಿದ ಪ್ರಬುದ್ಧತೆಯು ಆಳುವವರನ್ನು ಕಂಗಾಲಾಗಿಸಿತ್ತು. ಅದು ತಾನು ಬಳಸಿಕೊಳ್ಳಬಹುದಾದ ಅಸ್ತ್ರವೊಂದನ್ನು ಹುಡುಕುತ್ತಿತ್ತು. ಆ ಅಸ್ತ್ರವನ್ನು ಆ ಸಮುದಾಯ ಕೊಡಲಿಲ್ಲ. ಬದಲಿಗೆ ತಾನಂದುಕೊಂಡಿದ್ದನ್ನು ಹೇಗೆ ಜನರಿಗೆ ತಲುಪಿಸಬೇಕು ಎಂಬುದರ ಕನಿಷ್ಠ ಪ್ರಜ್ಞೆ ಇಲ್ಲದ ಒಂದು ಎಳಸು ಹುಡುಗಿ ತಪ್ಪಾದ ಜಾಗದಲ್ಲಿ ತಪ್ಪಾದ ಮಾತುಗಳನ್ನು ಆಡಿದಳು. ಆ ಮೂಲಕ ಇದನ್ನೇ ಬಯಸುತ್ತಿದ್ದವರಿಗೆ ಅಸ್ತ್ರವನ್ನು ಒದಗಿಸಿದಳು.
ಯಾರು ಇದನ್ನು ಬಯಸುತ್ತಿದ್ದರೋ ಅವರು ಪಾಕಿಸ್ತಾನವನ್ನು ನಿರಂತರವಾಗಿ ಬಳಸಿಕೊಳ್ಳುತ್ತಾ ಬಂದಿರುವವರು. ಪಾಕಿಸ್ತಾನದಲ್ಲಿ ಆಳುವ ಎಲ್ಲರಿಗೂ ಕಾಶ್ಮೀರ ಹಾಗೂ ಭಾರತ ನಿರಂತರವಾಗಿ ರೊಚ್ಚಿಗೆಬ್ಬಿಸುವ ಅಸ್ತ್ರಗಳಾಗಿ ಬಳಕೆಯಾಗುತ್ತಾ ಬಂದಿದೆ. ಇಲ್ಲಿಯೂ ಅಂತಹ ಒಂದು ವರ್ಗವಿದೆ. ಇಲ್ಲಿ ಅಂತಹದ್ದೇನೂ ನಡೆಯದಿದ್ದಲ್ಲಿ ತಾವೇ ಪಾಕಿಸ್ತಾನದ ಧ್ವಜ ಹಾರಿಸುವವರು ಅವರು. ವಿಜಾಪುರ ಜಿಲ್ಲೆಯ ಸಿಂಧಗಿಯಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿ ಸಿಕ್ಕಿಕೊಂಡ ಪರಶುರಾಮ ವಾಘ್ಮೋರೆ ನಂತರ ಗೌರಿ ಲಂಕೇಶರ ಹತ್ಯೆಯ ಪ್ರಮುಖ ಆರೋಪಿಯಾದ ಎಂಬುದನ್ನು ನಾವು ಮರೆಯಲಾಗದು. ಆತ ಶ್ರೀರಾಮಸೇನೆಯವನು ಎಂಬ ಆರೋಪ ಬಂದಾಗ, ಆತ ಆರೆಸ್ಸೆಸ್ಸಿನವನು ಎಂದು ಖಚಿತ ಪಡಿಸಿದ್ದು ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್!
ಇದರ ಹೊಣೆಯನ್ನು ಯಾರು ಹೊರಬೇಕು? ಅಮೂಲ್ಯಳೂ ಹೊರಬೇಕು. ಅದೇ ರೀತಿಯಲ್ಲಿ ಅಪ್ರಬುದ್ಧವಾಗಿ ಆಲೋಚಿಸುವ, ದೇಶದ ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ನಾವು ಅನುಭವದ ಮಾತನ್ನೂ ಕೇಳಬೇಕು ಎಂಬ ಎಚ್ಚರವಿಲ್ಲದ ಇನ್ನೂ ಹಲವರು ಇದ್ದಾರೆ ಅವರೆಲ್ಲರೂ ಹೊರಬೇಕು. ಆಕೆಗಿರುವ ಎನರ್ಜಿ ಮತ್ತು ಅನ್ಯಾಯವನ್ನು ಯಾವ ರೀತಿಯಿಂದಲಾದರೂ ಪ್ರತಿಭಟಿಸಬೇಕು ಎಂಬ ಉಮೇದನ್ನಷ್ಟೇ ನೋಡಿ, ಬಹಿರಂಗ ಸಭೆಗಳಲ್ಲಿ ಮಾತನಾಡಲು ಪ್ರೇರೇಪಿಸಿದವರೂ ಹೊರಬೇಕು. ಯುವಜನರನ್ನು ಪ್ರೋತ್ಸಾಹಿಸಬೇಕು ಎಂಬುದು ಸರಿಯಾದರೂ, ಗರಿಷ್ಠ ಮಿತಿಗಳನ್ನು ಮೀರುವವರನ್ನು ತಲೆ ಮೇಲೆ ಹೊತ್ತುಕೊಳ್ಳಬಾರದು ಎಂಬುದೂ ಇದರಿಂದ ಕಲಿಯಬೇಕಾದ ಪಾಠವಾಗಿದೆ.
ಅದೇನೇ ಇರಲಿ, ಇದನ್ನು ಬಳಸಿಕೊಂಡು ಇಡೀ ಚಳವಳಿಯನ್ನೇ ದಮನ ಮಾಡಲು ಹೊರಟಿರುವ ಸರ್ಕಾರದ ಹುನ್ನಾರದ ವಿರುದ್ಧ ಎಲ್ಲರೂ ಎದ್ದು ನಿಲ್ಲಬೇಕಿದೆ. ಚಳವಳಿ ಇದುವರೆಗೆ ನಡೆಸಿರುವ ಸಾವಿರಾರು ಕಾರ್ಯಕ್ರಮಗಳಲ್ಲಿ ತೋರಿದ ಪ್ರಬುದ್ಧತೆಯು ಸರ್ಕಾರಕ್ಕೆ ಕಷ್ಟ ತಂದಿತ್ತು ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಚಳವಳಿಯ ಸಂದರ್ಭದಲ್ಲಿ ನಡೆದ ಒಂದು ಬಿಡಿ ಅಪ್ರಬುದ್ಧತೆಯನ್ನು ಇಟ್ಟುಕೊಂಡು ದಮನಕಾಂಡ ಹರಿಬಿಡಲು ಸರ್ಕಾರ ಸಜ್ಜಾಗಿದೆ. ಇದನ್ನು ಈ ಚಳವಳಿ ಹೇಗೆ ಎದುರಿಸುತ್ತದೆ ಎಂಬುದು ಅದರ ಪ್ರಬುದ್ಧತೆಯನ್ನು ಒರೆಗೆ ಹಚ್ಚಲಿದೆ.


