‘ದೇವನೂರ ಮಹಾದೇವ ಅವರ ಮಾತನ್ನು ಸ್ವಲ್ಪ ಬದಲಿಸಿ, ಎದೆಗೆ ಬಿದ್ದ ಸಂವಿಧಾನ- ಭೂಮಿಗೆ ಬಿದ್ದ ಬೀಜ ಒಂದಲ್ಲ ಒಂದು ದಿನ ಫಲ ಕೊಡುತ್ತದೆ ಎಂದು ನಾವಿಂದು ಹೇಳಬೇಕಿದೆ’ ಎಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ಹೇಳಿದರು.
ದಾವಣಗೆರೆಯ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ನಡೆಯುತ್ತಿರುವ ‘ಸಂವಿಧಾನ ಸಂರಕ್ಷಕರ ಸಮಾವೇಶ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, “ಆಳುವವರಿಗೆ ಎಂದಿಗೂ ಸಂವಿಧಾನ ಅಪಥ್ಯ ಆಗಿತ್ತು. ಆಧರೆ, ಅದರ ರಕ್ಷಣೆ ಮಾಡಬೇಕಿದ್ದ ನಾವುಗಳೂ ಅದನ್ನು ಸರಿಯಾಗಿ ಅರ್ಥ ಮಾಡಿಕೊಂಡಿರಲಿಲ್ಲ. ನಾವು ಮೊದಲೇ ಸಂವಿಧಾನದ ರಕ್ಷಣೆಯ ಹೊಣೆ ಹೊತ್ತಿದ್ದರೆ, ಇಂದು ಇಂತಹ ಗತಿ ಬರುತ್ತಿರಲಿಲ್ಲಲ” ಎಂದರು.
“ಬಾಬಾಸಾಹೇಬರು ರತ್ತುಗೆ ಹೇಳುತ್ತಿದ್ದರು, ‘ನೋಡು ರತ್ತು, ನಾನು ಸಂವಿಧಾನವನ್ನು ಬರೆದಿದ್ದೇನೆ, ನನ್ನ ಎಲ್ಲ ಆಶಯಗಳನ್ನೂ ಅದರಲ್ಲಿ ತರಲು ಆಗಲಿಲ್ಲ. ಆದರೆ, ಈ ದೇಶದ ಎಲ್ಲ ದಮನಿತರು, ಶೋಷಿತರು, ರಕ್ತ ಬಸಿಯುವ ಜನರಿಗೆ ಬೇಕಿರುವ ಎಷ್ಟೋ ವಿಷಯಗಳನ್ನು ಅದರಲ್ಲಿ ತಂದಿದ್ದೇನೆ, ಆ ಜನರು ಇದರ ರಕ್ಷಣೆಗೆ ಮುಂದಾದರೆ ಅದರ ಪ್ರಯೋಜನ ಪಡೆಯಬಲ್ಲರು’ ಎಂದು ಹೇಳಿದ್ದರು” ಎಂದರು.
“ಸಂವಿಧಾನ 1949 ನವೆಂಬರ್ 26ರಂದು ಜಾರಿಯಾಯಿತು, ಸಂವಿಧಾನದಿಂದ ಮಾತ್ರ ಎಲ್ಲ ಸಮಸ್ಯೆ ಬಗೆಹರಿಯುವುದಿಲ್ಲ. ಸಂವಿಧಾನದ ಆಶಯ ಈಡೇರಬೇಕಾದರೆ, ಜನರಿಗೆ ಆರ್ಥಿಕ, ಸಾಮಾಜಿಕ, ರಾಜಕೀಯ ಸಮಾನತೆ ದೊರೆಯಬೇಕು. ಇದಕ್ಕೆ ಆಳುವ ಪ್ರಭುತ್ವಗಳು ಕೆಲಸ ಮಾಡಬೇಕು ಎಂದು ಬಾಬಾಸಾಹೇಬರು ಹೇಳಿದರು” ಎಂದು ವಿವರಿಸಿದರು.
“ಈ ದೇಶದ ಜನ ಒಟ್ಟಾಗಿರಬೇಕು, ಒಂದೇ ದೇವಸ್ಥಾನ, ಒಂದೇ ಸ್ಮಶಾನ, ಒಂದೇ ದೇವರು ಇರಬೇಕು ಎಂದು ಇತ್ತೀಚೆಗೆ ಮೋಹನ್ ಭಾಗವತ್ ಹೇಳಿದ್ದು ಪತ್ರಿಕೆಯಲ್ಲಿ ನೋಡಿದೆ. ಅವರಿಗೆ ನಾನು ಹೇಳುತ್ತೇನೆ, ಒಂದೇ ದೇವಸ್ಥಾನ ಮಾತ್ರವಲ್ಲ, ಒಂದೇ ಚರ್ಚ್, ಒಂದೇ ಮಸೀದಿ ಇದೆ ಎಂಬುದನ್ನೂ ಮರೆಯಬೇಡಿ” ಎಂದರು.
“ಸಂವಿಧಾನ ಜಾರಿಯಾದಾಗ ‘ಇದರಲ್ಲಿ ಭಾರತೀಯತೆ ಇಲ್ಲ’ ಎಂದಿದ್ದ ಆರೆಸ್ಸೆಸ್, ಇವತ್ತು ತನ್ನ ಅಭಿಪ್ರಾಯ ಬದಲಿಸಿದ್ದರೆ, ಸಂವಿಧಾನ ಜಾರಿಯಾದ ಮರುದಿನ ಆರ್ಗನೈಸರ್ ಪತ್ರಿಕೆಯಲ್ಲಿ ಬಂದಿದ್ದ ಮಾತಿಗೆ ನಾನು ಕ್ಷಮೆ ಕೇಳುತ್ತೇನೆ ಎಂದು ಹೇಳಬೇಕಿತ್ತು” ಎಂದು ವಾಗ್ದಾಳಿ ನಡೆಸಿದರು.
“ವಾಜಪೇಯಿ ಪ್ರಧಾನಮಂತ್ರಿ ಆಗಿದ್ದಾಗ ಸಂವಿಧಾನ ಪುನರ್‌ರಚನೆ ಮಾಡಲು ಹೊರಟಾಗ ರಾಷ್ಟ್ರಪತಿಗಳಾಗಿದ್ದ ಕೆ ಆರ್ ನಾರಾಯಣನ್ ಹೇಳಿದರು, ಸಂವಿಧಾನ ಪುನರ್‌ರಚನೆಯಲ್ಲ, ಸಂವಿಧಾನ ಜಾರಿಮಾಡುವ ಕೆಲಸ ಆಗಬೇಕು, ಬಡಗಿ ಸರಿಯಿದ್ದರೆ ಎಂತಹ ಮರ ಇದ್ದರೂ ಸುಂದರ ಮೂರ್ತಿ ಮಾಡುತ್ತಾನೆ, ಈಗ ಬಡಗಿ ಸರಿಯಾಗಬೇಕಿದೆ ಎಂದು ಸೂಕ್ಷ್ಮವಾಗಿ ಹೇಳಿದ್ದರು” ಎಂದ ಬಿಜೆಪಿ ವಿರುದ್ಧ ಕಿಡಿಕಾರಿದರು.
ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವವರೇ ನೈಜ ದೇಶಪ್ರೇಮಿಗಳು: ಪ್ರೊ. ಬರಗೂರು ರಾಮಚಂದ್ರಪ್ಪ