Homeಕರ್ನಾಟಕಆದೇಶ ಅರಿಯದೆ ಮಕ್ಕಳ ಮೇಲೆ ಮಾಧ್ಯಮಗಳ ಸವಾರಿ: ಅಧಿಕಾರಿಗಳ ಬೇಸರ

ಆದೇಶ ಅರಿಯದೆ ಮಕ್ಕಳ ಮೇಲೆ ಮಾಧ್ಯಮಗಳ ಸವಾರಿ: ಅಧಿಕಾರಿಗಳ ಬೇಸರ

- Advertisement -
- Advertisement -

ಹಿಜಾಬ್‌ ಕೇಸರಿ ವಿವಾದದ ಬೆನ್ನಲ್ಲೇ ಮೂರು ದಿನಗಳ ರಜೆಯ ಬಳಿಕ ರಾಜ್ಯದ ಪ್ರೌಢಶಾಲೆಗಳು ಸೋಮವಾರ ಮತ್ತೆ ಆರಂಭವಾದವು. ಶಾಲೆಗಳ ಮುಂದೆ ಹೋಗಿ ಕ್ಯಾಮೆರಾ ಹಿಡಿದು ನಿಂತ ಮಾಧ್ಯಮ ಪ್ರತಿನಿಧಿಗಳು, ಮುಖ್ಯವಾಹಿನಿ ದೃಶ್ಯ ಮಾಧ್ಯಮಗಳ ಸಂಪಾದಕರು ಮಕ್ಕಳ ಮೇಲೆ ದ್ವೇಷವನ್ನೇ ಹರಿಬಿಡಲು ಯತ್ನಿಸಿದ್ದಾರೆ.

ಹಿಜಾಬ್‌ ಧರಿಸಿ ಬಂದ ವಿದ್ಯಾರ್ಥಿಗಳನ್ನು ಗೇಟ್‌ಗಳ ಬಳಿಯೇ ಶಾಲಾ ಆಡಳಿತ ಮಂಡಳಿ ತಡೆಯಿತು. ಹಿಜಾಬ್‌ ಬಿಚ್ಚಿಸಲಾಯಿತು. ಶಿಕ್ಷಕಿಯೊಬ್ಬರು ಬುರ್ಕಾವನ್ನು ಸಾರ್ವಜನಿಕವಾಗಿ ತೆಗೆದ ವಿಡಿಯೊ ವೈರಲ್ ಆಗಿದೆ.

ಕಾಲೇಜು ಮಟ್ಟದಲ್ಲಿದ್ದ ಹಿಜಾಬ್‌ – ಕೇಸರಿ ಶಾಲು ವಿವಾದ, ಪ್ರೌಢಶಾಲೆಗಳಿಗೂ ಹಬ್ಬಿಸಲು ಮಾಧ್ಯಮಗಳು ಯತ್ನಿಸಿದಂತೆ ಕಾಣುತ್ತಿವೆ. ಪೂರ್ವ ಸಿದ್ಧತಾ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿಯರನ್ನು ತಡೆಯುವಲ್ಲಿ ಮಾಧ್ಯಮಗಳ ಪಾತ್ರವೂ ಆಗಾಧವಾಗಿದೆ. ಕ್ಯಾಮೆರಾ ಹಿಡಿದು ನಿಂತು ಸೌಹಾರ್ದತೆಯನ್ನು ಕದಡಲು ಯತ್ನಿಸಿರುವುದು ಕಂಡು ಬಂದಿದೆ.

ಮಾಧ್ಯಮಗಳಲ್ಲಿ ಬಂದ ಕೆಲವು ವರದಿಗಳು

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಹಿಜಾಬ್‌‌ ತೆಗೆಯಲು ನಿರಾಕರಿಸಿ ಇಬ್ಬರು ವಿದ್ಯಾರ್ಥಿನಿಯರು ಮನೆಗೆ ವಾಪಸಾದರು.

ಚಿಕ್ಕಮಗಳೂರು ತಾಲ್ಲೂಕಿನ ಇಂದಾವರ ಶಾಲೆಯಲ್ಲಿ ಹಿಜಾಬ್‌ ನಿಷೇಧ. ವಿದ್ಯಾರ್ಥಿನಿಯರು ವೇಲ್‌ಅನ್ನೇ ತಲೆಯ ಮೇಲೆ ಧರಿಸಿದ್ದರು. ಹಿಜಾಬ್‌ ಅಲ್ಲ ಇದು ವೇಲ್‌ ಎಂದು ಹೇಳುತ್ತಿರುವ ವಿದ್ಯಾರ್ಥಿನಿಯರಿಗೆ ಮಾಧ್ಯಮವೊಂದರ ವರದಿಗಾರ, “ಕೋರ್ಟ್ ಆದೇಶ ಇದೆಯಮ್ಮ. ಧರಿಸಿ ಬರಬಾರದೆಂದು. ನಿಮಗೆ ತಿಳಿದಿಲ್ಲವಾ?” ಎಂದು ಕೇಳುತ್ತಾರೆ. “ನಮಗೆ ಎಜುಕೇಷನ್‌ ಹಾಗೂ ಹಿಜಾಬ್‌ ಎರಡೂ ಬೇಕು” ಎಂದು ಎಂಟನೇ ತರಗತಿಯ ವಿದ್ಯಾರ್ಥಿನಿಯೊಬ್ಬರು ಹೇಳುತ್ತಾರೆ.

ಶಿಕಾರಿಪುರದ ಮೌಲಾನಾ ಹಜಾದ್ ಶಾಲೆಯಲ್ಲಿ ಹೈಡ್ರಾಮಾ ಎಂದು ಕನ್ನಡದ ಮುಖ್ಯವಾಹಿನಿ ದೃಶ್ಯಮಾಧ್ಯಮದ ಸಂಪಾದಕರೊಬ್ಬರು ಪ್ರೈಮ್‌ಟೈಮ್‌ನಲ್ಲಿ ಹೇಳುತ್ತಾರೆ. ಜೊತೆಗೆ ವಿದ್ಯಾರ್ಥಿಗಳಿಗೆ ಧರ್ಮ ಬೋಧನೆ ಮಾಡುತ್ತಾರೆ.

ಯಾದಗಿರಿ ನಗರದ ಸರ್ಕಾರಿ ಉರ್ದು ಹೈಸ್ಕೂಲ್‌ ವಿದ್ಯಾರ್ಥಿಗಳು ಹಿಜಾಬ್‌ ಧರಿಸಿದ್ದರೆಂದು ಅಡ್ಡಿಪಡಿಸಲಾಯಿತು. ಪ್ರಾಂಶುಪಾಲರು ಹಿಜಾಬ್‌ ಧರಿಸಿದ್ದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದ್ದನ್ನು ಮಾಧ್ಯಮಗಳು ವರದಿ ಮಾಡಿದ್ದವು. ಇದರಿಂದ ಗಲಿಬಿಲಿಯಾದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ, ಡಿಡಿಪಿಐ ಶಾಂತಗೌಡ ಪಾಟೀಲ್‌, ಅಪರ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ ಅವರು ಶಾಲೆಗೆ ಆಗಮಿಸಿ ಹಿಜಾಬ್‌ ಹಾಕಿಸಿರುವುದಾಗಿ ಪತ್ರಿಕೆಯೊಂದು ವರದಿ ಮಾಡಿದೆ.

ಆದೇಶ ಅರಿಯದ ಅಧಿಕಾರಿಗಳು, ಮಾಧ್ಯಮಗಳು?

ಪುಟಾಣಿ ಮಕ್ಕಳ ಮೇಲೆ ಕ್ಯಾಮೆರಾ ದಾಳಿ ಒಂದೆಡೆಯಾದರೆ ಮತ್ತೊಂದೆಡೆ ಹೈಕೋರ್ಟ್ ಆದೇಶವನ್ನೇ ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎಂಬ ಆರೋಪಗಳು ಬಂದಿವೆ.  “ಕೆಲವು ಶಿಕ್ಷಣ ಸಂಸ್ಥೆಗಳು ಮತ್ತು ಶೈಕ್ಷಣಿಕ ಜಿಲ್ಲಾಡಳಿತದಿಂದ ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದ ಉಲ್ಲಂಘನೆಯಾಗುತ್ತಿದೆ” ಎಂದು ಶಿಕ್ಷಣತಜ್ಞ ವಿ.ಪಿ.ನಿರಂಜನಾರಾಧ್ಯ ಅವರು ಶಿಕ್ಷಣ ಆಯುಕ್ತರಿಗೆ ಪತ್ರ ಬರೆದಿದ್ದಾರೆ. “ಉಲ್ಲಂಘನೆಯನ್ನು ತಕ್ಷಣವೇ ನಿಲ್ಲಿಸಲು ಜಿಲ್ಲಾ ಮತ್ತು ಬ್ಲಾಕ್‌ ಅಂತದ ಅಧಿಕಾರಿಗಳಿಗೆ ಕೂಡಲೇ ಸ್ಪಷ್ಟೀಕರಣವನ್ನು ನೀಡಬೇಕು” ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

“ಆದೇಶವು ಕೇವಲ ದಾವೆ ಹೂಡಿದ ವಿದ್ಯಾರ್ಥಿನಿಯರು ಓದುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ” ಎಂದು ಆದೇಶದ 11ನೆಯ ಕ್ರಮ ಸಂಖ್ಯೆಯಲ್ಲಿ ತಿಳಿಸಲಾಗಿದೆ. ಆದರೆ ವಿದ್ಯಾರ್ಥಿಗಳು ತಲೆಗೆ ಸ್ಕಾರ್ಫ್ ಧರಿಸದಂತೆ ನಿರ್ಬಂಧ ಹೊಂದಿರದ ಶಿಕ್ಷಣ ಸಂಸ್ಥೆಗಳ ಮೇಲೂ ನಿಷೇಧವನ್ನು ವಿಧಿಸುತ್ತಿವೆ. ಇದು ನ್ಯಾಯಾಲಯದ ಮಧ್ಯಂತರ ಆದೇಶದ ಉಲ್ಲಂಘನೆಯಲ್ಲದೆ ಮತ್ತೇನೂ ಅಲ್ಲ” ಎಂದು ತಿಳಿಸಿದ್ದಾರೆ.

ಸುದ್ದಿಯಾಗಿರುವ ಹಲವು ಶಾಲೆಗಳ ಸಂಬಂಧ ಸ್ಥಳೀಯ ಅಧಿಕಾರಿಗಳಿಂದ ಪ್ರತಿಕ್ರಿಯೆ ಪಡೆಯಲು ‘ನಾನುಗೌರಿ.ಕಾಂ’ ಪ್ರಯತ್ನಿಸಿದೆ. ನಮ್ಮೊಂದಿಗೆ ಮಾತನಾಡಿದ ಅಧಿಕಾರಿಗಳಿಗೆ ಕೋರ್ಟ್ ಆದೇಶದ ಕುರಿತು ಸ್ಪಷ್ಟತೆಗಳಿಲ್ಲ ಎಂಬುದು ಕಂಡುಬಂದಿದೆ. ಜೊತೆಗೆ ಕೆಲವು ಅಧಿಕಾರಿಗಳು ಮಾಧ್ಯಮಗಳ ಅತಿರೇಕ, ಮಾಧ್ಯಮಗಳು ಸೃಷ್ಟಿಸುತ್ತಿರುವ ಭಯದ ವಾತಾವರಣದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಜಿಲ್ಲಾಧಿಕಾರಿ ಅಶ್ವಥಿ ಪ್ರತಿಕ್ರಿಯೆ

ಮಂಡ್ಯ ರೋಟರಿ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಬುರ್ಕಾ ತೆಗೆದ ಕುರಿತು ವರದಿಯಾದ ಸಂಬಂಧ ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವಥಿಯವರನ್ನು ‘ನಾನುಗೌರಿ.ಕಾಂ’ ಸಂಪರ್ಕಿಸಿತು. ಘಟನೆಯ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, “ರೋಟರಿ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಬುರ್ಕಾ ತೆಗೆದಿದ್ದು ತಿಳಿಯಿತು. ನಾವು ಈ ಕುರಿತು ಯಾವುದೇ ಆದೇಶ ನೀಡಿಲ್ಲ. ಮೀಡಿಯಾದವರನ್ನು ನೋಡಿ ಹೆದರಿದ ಶಿಕ್ಷಕಿ ಭಯ ಬಿದ್ದು ತೆಗೆದಿದ್ದಾರೆ. ಆ ರೀತಿ ತೆಗೆಯುವ ಅಗತ್ಯವಿಲ್ಲ ಎಂದು ನಾವು ತಿಳಿಸಿದ್ದೇವೆ. ಇಂತಹ ಘಟನೆಗಳು ನಡೆದದ್ದು ವರದಿಯಾದರೆ ನಮ್ಮ ಗಮನಕ್ಕೆ ತನ್ನಿ, ಕ್ರಮ ಜರುಗಿಸುತ್ತೇನೆ” ಎಂದಿದ್ದಾರೆ.

ಶಿವಮೊಗ್ಗ ಡಿಡಿಪಿಐ ಎಂ.ಎನ್‌.ರಮೇಶ್‌ ಅವರೊಂದಿಗೆ ಮಾತನಾಡುತ್ತಾ, ಕೋರ್ಟ್ ಆದೇಶವನ್ನು ತಪ್ಪಾಗಿ ಅರ್ಥಮಾಡಿಕೊಳ್ಳಲಾಗುತ್ತಿದೆ ಎಂಬ ಆರೋಪಗಳನ್ನು ಅವರ ಗಮನಕ್ಕೆ ತರಲಾಯಿತು. ಮಾತು ಮುಂದುವರಿಸಿದ ಡಿಡಿಪಿಐ, “ನಾನು ಅಷ್ಟೊಂದು ಬುದ್ಧಿವಂತನಲ್ಲ. ರಾಜ್ಯಾದ್ಯಂತ ಇದೇ ಪ್ರಕರಣ ನಡೆಯುತ್ತಿದೆ. ನಾವು ಕೆಲವು ಕಡೆ ವಿದ್ಯಾರ್ಥಿಗಳನ್ನು ತಡೆದಿದ್ದೇವೆ. ಕೋರ್ಟ್ ಆದೇಶವನ್ನು ಸರಿಯಾಗಿ ತಿಳಿದುಕೊಂಡು ನಿಮಗೆ ಪ್ರತಿಕ್ರಿಯೆ ನೀಡುತ್ತೇನೆ” ಎಂದರು.

ಸೂಫಿ ಸಂತರ ನಾಡು ಹೈದ್ರಾಬಾದ್ ಕರ್ನಾಟಕ. ಬಹುಶಃ ಅತಿ ಹೆಚ್ಚು ಕೋಮು ಸೌಹಾರ್ದತೆಯನ್ನು ಇಲ್ಲಿ ಕಾಣಬಹುದು. ಇಂತಹ ಹೈದ್ರಾಬಾದ್ ಕರ್ನಾಟಕಕ್ಕೆ ಸೇರಿದ ಯಾದಗಿರಿ ಜಿಲ್ಲೆಯ ಶಾಲೆಯೊಂದರಲ್ಲಿ ನಡೆದ ಘಟನೆಯ ಕುರಿತು ಅಲ್ಲಿನ ಡಿಡಿಪಿಐ ಪ್ರತಿಕ್ರಿಯೆಯನ್ನು ನಾವು ಪಡೆದವು. ಡಿಡಿಪಿಐ ಶಾಂತಗೌಡ ಪಾಟೀಲ್‌ ಬಹಳ ವಿಷಾದದಿಂದ ಮಾಧ್ಯಮಗಳ ಕುರಿತು ಮಾತನಾಡಿದರು.

“ಶಾಲೆಗಳು ಸೋಮವಾರ ರೀಓಪನ್ ಆದವು. ಸಾಮಾನ್ಯವಾಗಿ ಎಂದಿನಂತೆ ಮಕ್ಕಳು ಹಿಜಾಬ್ ಧರಿಸಿ ಬಂದಿದ್ದರು. ಸರ್ಕಾರದ ಆದೇಶವನ್ನು ನಾವು ಪಾಲಿಸುತ್ತಿದ್ದೇವೆ. ಯಾವುದೇ ವಿವಾದ ಇಲ್ಲಿನ ಶಾಲೆಯಲ್ಲಿ ಇರಲಿಲ್ಲ. ಆದರೆ ಕೆಲವು ಮಾಧ್ಯಮಗಳು ಮುಂಚಿತವಾಗಿ ಹೋಗಿ ಇದನ್ನು ವಿವಾದ ಮಾಡಿವೆ. ಇಲ್ಲಿನ ಸಾರ್ವಜನಿಕರಿಗೆ ಈ ಕುರಿತು ಆಸಕ್ತಿಯೂ ಇಲ್ಲ. ವಿರೋಧನೂ ಇಲ್ಲ. ಪರವಾದ ವಾದವೂ ಇಲ್ಲ. ಆದರೆ ಮಾಧ್ಯಮಗಳು ಮಾತ್ರ ಇದನ್ನು ಸೃಷ್ಟಿಸುತ್ತಿವೆ” ಎಂದು ಬೇಸರ ವ್ಯಕ್ತಪಡಿಸಿದರು.

“ಕೋರ್ಟ್ ಆದೇಶದಂತೆ ಸರ್ಕಾರದ ಆದೇಶವಿತ್ತು. ಹೀಗಾಗಿ ಜಿಲ್ಲಾಡಳಿತ ನಮಗೆ ಸೂಚನೆ ನೀಡಿತ್ತು. ತರಗತಿಯಲ್ಲಿ ಕೂತಾಗ ಮಾತ್ರ ಹಿಜಾಬ್‌ ಧರಿಸದಿರಲು ಹೇಳಿದ್ದೆವು. ಆದರೆ ಶಾಲೆ ಆರಂಭಕ್ಕೂ ಮುನ್ನ ಮಾಧ್ಯಮಗಳು ಅಲ್ಲಿಗೆ ಹೋಗಿ- ನೋಡಿ, ಹಿಜಾಬ್ ಧರಿಸಿದ್ದಾರೆ, ಹಾಗೇ ಹೀಗೆ ಎಂದು ಸುದ್ದಿ ಮಾಡಲು ಶುರುಮಾಡಿದವು. ಈ ಮಾಧ್ಯಮಗಳು ಹೀಗೆ ನ್ಯೂಸ್ ಮಾಡುತ್ತಿರುವುದರಿಂದಲೇ ಸಮಸ್ಯೆಗಳು ಆಗುತ್ತಿರುವುದು” ಎಂದು ಅಭಿಪ್ರಾಯಪಟ್ಟರು ಶಾಂತಗೌಡ.


ಇದನ್ನೂ ಓದಿರಿ: ಹಿಜಾಬ್‌ಗಾಗಿ ಹೋರಾಡುತ್ತಿರುವ ಹೆಣ್ಣುಮಕ್ಕಳ ವೈಯಕ್ತಿಕ ವಿವರ ಹಂಚಿಕೊಂಡು ವಿಕೃತಿ ಮೆರೆದ ಬಿಜೆಪಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣ: ಕೇಜ್ರಿವಾಲ್ ಸಹಾಯಕ ಬಂಧನ

0
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಹಾಯಕ ಮತ್ತು ಮಾಜಿ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಅವರನ್ನು ಶನಿವಾರ ದೆಹಲಿ...