ಮೇಘಾಲಯದ ತುರಾ ಪಟ್ಟಣದಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬರ್ನಾಡ್ ಎನ್ ಮರಕ್ ಅವರ ಒಡೆತನದ ರೆಸಾರ್ಟ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ವೇಳೆ ದಾಳಿ ನಡೆಸಿದ ಪೊಲೀಸರು ಆರು ಮಂದಿ ಅಪ್ರಾಪ್ತರನ್ನು ರಕ್ಷಿಸಿದ್ದು 73 ಜನರನ್ನು ಬಂಧಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
“ರೆಸಾರ್ಟ್‌ನಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ” ಎಂದು ಪೊಲೀಸ್ ವರಿಷ್ಠಾಧಿಕಾರಿ ವಿವೇಕಾನಂದ್ ಸಿಂಗ್ ತಿಳಿಸಿದ್ದಾರೆ.
“ನಾವು ಆರು ಮಂದಿ ಅಪ್ರಾಪ್ತ ವಯಸ್ಕರನ್ನು ರಕ್ಷಿಸಿದ್ದೇವೆ. ಅದರಲ್ಲಿ ನಾಲ್ವರು ಬಾಲಕರು ಮತ್ತು ಇಬ್ಬರು ಬಾಲಕಿಯರಿದ್ದಾರೆ. ಬರ್ನಾಡ್ ಎನ್ ಮರಾಕ್ ಮತ್ತು ಆತನ ಸಹಚರರು ರಿಂಪು ಬಗಾನ್‌ನಲ್ಲಿ ನಡೆಸುತ್ತಿದ್ದ ವೇಶ್ಯಾವಾಟಿಕೆ ಕ್ಯಾಬೀನ್‌ಗಳಲ್ಲಿ ಈ ಅಪ್ರಾಪ್ತರು ಸಿಲುಕಿದ್ದರು. ಈ ಕ್ಯಾಬಿನ್‌ಗಳು ಅಶುಚಿತ್ವದಿಂದ ಕೂಡಿದ್ದವು” ಎಂದು ಎಸ್‌ಪಿ ಮಾಹಿತಿ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಇಪ್ಪತ್ತೇಳು ವಾಹನಗಳು, ಎಂಟು ದ್ವಿಚಕ್ರ ವಾಹನಗಳು, ಸುಮಾರು 400 ಮದ್ಯದ ಬಾಟಲಿಗಳು, 500 ಕ್ಕೂ ಹೆಚ್ಚು ಬಳಕೆಯಾಗದ ಕಾಂಡೋಮ್‌ಗಳು ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ಕ್ರಮಕ್ಕಾಗಿ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ” ಎಂದು ಅವರು ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳು ಮತ್ತು ಅನೈತಿಕ ಕಳ್ಳಸಾಗಣೆ (ತಡೆಗಟ್ಟುವಿಕೆ) ಕಾಯ್ದೆ ಅಡಿಯಲ್ಲಿ ಮಾರಕ್ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಮೇಘಾಲಯ ಪೊಲೀಸರು ತಿಳಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಕೂಡಲೇ ಶರಣಾಗುವಂತೆ ಹಾಗೂ ತನಿಖೆಗೆ ಸಹಕರಿಸುವಂತೆ ಮಾರಾಕ್‌ಗೆ ಸೂಚಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
“ಆದಾಗ್ಯೂ, ಅವರು ಇಲ್ಲಿಯವರೆಗೆ ಸಹಕರಿಸಲಿಲ್ಲ. ಬಂಧನದಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದಾರೆ” ಎಂದು ಎಸ್‌ಪಿ ಆರೋಪಿಸಿದ್ದಾರೆ.
“ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಮುರಾಕ್ ಬೇಗನೆ ಶರಣಾಗುವಂತೆ ಒತ್ತಾಯಿಸುತ್ತೇನೆ. ನಾವು ಆತನನ್ನು ಹುಡುಕುತ್ತಿದ್ದೇವೆ. ಶೀಘ್ರದಲ್ಲೇ ಬಂಧಿಸುತ್ತೇವೆ” ಎಂದು ಭರವಸೆ ನೀಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಮುರಾಖ್ “ನಾನು ಪರಾರಿಯಾಗಿಲ್ಲ. ಪೊಲೀಸರೊಂದಿಗೆ ಸಹಕರಿಸುತ್ತಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.
ತನ್ನ ವಿರುದ್ಧದ ಆರೋಪಗಳನ್ನು ನಿರಾಕರಿಸಿರುವ ಅವರು, “ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರ ಸೂಚನೆಯ ಮೇರೆಗೆ ವಾರಂಟ್ ಇಲ್ಲದೆ ದಾಳಿ ನಡೆಸಲಾಗಿದೆ” ಎಂದು ದೂರಿದ್ದಾರೆ.
“ಬಂಧಿತರಲ್ಲಿ ಯಾರೂ ಯಾವುದೇ ಅಸಭ್ಯ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ. ಅಧ್ಯಯನ ಮಾಡಲು ನಾನು ಸಹಾಯಹಸ್ತ ನೀಡುತ್ತಿದ್ದ ಅಪ್ರಾಪ್ತ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ಕಿರುಕುಳ ನೀಡಿದ್ದಾರೆ. ವಿದ್ಯಾರ್ಥಿಗಳು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದಾಗಿ ಆರೋಪಿಸಿದ್ದಾರೆ” ಎಂದು ಮರಕ್ ಎನ್‌ಡಿಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮರಕ್ ಅವರು ಗಾರೊ ಹಿಲ್ ಜಿಲ್ಲಾ ಕೌನ್ಸಿಲ್‌ನ ಚುನಾಯಿತ ಸದಸ್ಯರಾಗಿದ್ದಾರೆ. ಇತ್ತೀಚೆಗೆ ಆಡಳಿತಾರೂಢ ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್ ಸರ್ಕಾರವನ್ನು ಟೀಕಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ಮಾರಕ್ ಅವರ ಪಕ್ಷವಾದ ಬಿಜೆಪಿ, ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿಯ ಮೈತ್ರಿಕೂಟದ ಪಾಲುದಾರಿಕೆಯನ್ನೂ ಹೊಂದಿದೆ.
ಈ ಹಿಂದೆ ಬಂದಿದ್ದವು ಹಲವು ದೂರು
ಈ ಹಿಂದೆ ತುರಾ ಪಟ್ಟಣದ ನಿವಾಸಿಗಳಿಂದ ರೆಸಾರ್ಟ್ ಕುರಿತು ಹಲವು ಮೌಖಿಕ ದೂರುಗಳು ಬಂದಿದ್ದವು ಎಂದು ಮೇಘಾಲಯ ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿರಿ: ಗೋವಾ: ನಿಧನ ಹೊಂದಿರುವ ವ್ಯಕ್ತಿಯ ಹೆಸರಿನಲ್ಲಿ ಲೈಸನ್ಸ್ ಪಡೆದು ಅಕ್ರಮ ಬಾರ್ ನಡೆಸುತ್ತಿರುವ ಸಚಿವೆ ಸ್ಮೃತಿ ಇರಾನಿ ಪುತ್ರಿ
ಫೆಬ್ರವರಿಯಲ್ಲಿ ಕಾಣೆಯಾಗಿದ್ದ ಬಾಲಕಿ ನಂತರದಲ್ಲಿ ಇದೇ ಪಟ್ಟಣದಲ್ಲಿ ಪತ್ತೆಯಾಗಿದ್ದಾಳೆ. ಬಾಲಕಿಯನ್ನು ರಿಂಪು ಬಗಾನ್ ರೆಸಾರ್ಟ್‌ಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪ ಬಂದಿದೆ.
ಹಿಂದೂಸ್ತಾನ್ ಟೈಮ್ಸ್ ಪ್ರಕಾರ, “ಬಾಲಕಿಯ ಮೇಲೆ ಒಂದು ವಾರದಲ್ಲಿ ಅನೇಕ ಬಾರಿ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಭಾರತೀಯ ದಂಡ ಸಂಹಿತೆ 366A (ಅಪ್ರಾಪ್ತ ಬಾಲಕಿಯರನ್ನು ಕೂಡಿಹಾಕಿಕೊಳ್ಳುವುದು), 376 (ಅತ್ಯಾಚಾರಕ್ಕೆ ಶಿಕ್ಷೆ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.”


