Homeಕರ್ನಾಟಕಜನವಾಹಿನಿ ಪತ್ರಿಕೆ: ಲಗಾಮಿಲ್ಲದೇ ಓಡಲುಬಿಟ್ಟ ವಿಚಾರದ ಕುದುರೆ!

ಜನವಾಹಿನಿ ಪತ್ರಿಕೆ: ಲಗಾಮಿಲ್ಲದೇ ಓಡಲುಬಿಟ್ಟ ವಿಚಾರದ ಕುದುರೆ!

- Advertisement -
- Advertisement -

ಜನವಾಹಿನಿಯ ನೆನಪುಗಳು: ಭಾಗ-3

ಕೃಪೆ: ‘ಆರ್ಸೋ’ ಕೊಂಕಣಿ ಪತ್ರಿಕೆ

ಪ್ರಾಯೋಗಿಕ ‘ಕ್ವೆಶ್ಚನ್ ಮಾರ್ಕ್’ ಪತ್ರಿಕೆಯ ಬಂಡಲುಗಳನ್ನು ಮಂಗಳೂರಿನ ಬಿಷಪ್ಸ್ ಹೌಸಿನ ನಮ್ಮ ತಾತ್ಕಾಲಿಕ ಕಚೇರಿಗೆ ಮಧ್ಯರಾತ್ರಿಯ ನಂತರ ತಂದಿಳಿಸಿ ಸಿಕ್ಕಸಿಕ್ಕಲ್ಲಿ ಪೇಪರ್ ಹಾಸಿ ಮಲಗಿದ್ದ ನಾವು ಬೆಳಿಗ್ಗೆ ಒಬ್ಬೊಬ್ಬರಾಗಿಯೇ ಅಲ್ಲಿನ ಸಿಬ್ಬಂದಿಗಳು ಬರಲಾರಂಭಿಸಿದಾಗ ಗಡಿಬಿಡಿಯಲ್ಲಿ ಎದ್ದಾಗ ಭಾರೀ ಸಾಧನೆ ಮಾಡಿದ ಸಂಭ್ರಮ! ಲಗುಬಗೆಯಿಂದ ಎದ್ದು ಶೌಚಕಾರ್ಯದ ಶಾಸ್ತ್ರ ಮುಗಿಸಿ, ಸ್ನಾನಗೀನ ಏನೂ ಮಾಡದೆ, ಪೇಪರ್ ಬಂಡಲ್ ಬಿಚ್ಚಿ ಪ್ರೆಸ್ಸಿನಲ್ಲಿಯೇ ನೋಡಿದ್ದ ಪತ್ರಿಕೆಯನ್ನು ಮತ್ತೆ ನೋಡಲಾರಂಭಿಸಿದೆವು.

ನಮ್ಮ ಆಡಳಿತ ನಿರ್ದೇಶಕ ಸ್ಯಾಮ್ಯುಯೆಲ್ ಸಿಕ್ವೇರಾ ಅವರು ಬಂದ ಕೂಡಲೇ ಏನು ಎತ್ತ ಎಂದು ವಿಚಾರಿಸಿದಾಗ ಅವರ ಕೈಗೆ ಪ್ರತಿಯೊಂದನ್ನು ಕೊಟ್ಟು, ನಿರೀಕ್ಷೆಯಲ್ಲಿ ನಿಂತೆವು. ಅವರು ಒಮ್ಮೆ ಇಡೀ ಕಣ್ಣಾಡಿಸಿ, ನಾಟ್ ಬ್ಯಾಡ್ ಅಂದಾಗ ಸಮಾಧಾನ. ಸ್ವಲ್ಪ ಹೊತ್ತಿನಲ್ಲಿ ನಮ್ಮ ಚರ್ಚೆ ಅರಂಭವಾಗಿತ್ತು. ಪತ್ರಿಕೆ ಮುದ್ದಾಗಿ ಬಂದಿತ್ತು. ಎಷ್ಟೆಂದರೂ ಹೆತ್ತವರಿಗೆ ಹೆಗ್ಗಣ ಮುದ್ದಲ್ಲವೆ? ಕೆಲವು ದಿನಗಳಿಂದ ನಮ್ಮ ಎಡೆಬಿಡದ ಚಟುವಟಿಕೆಗಳನ್ನು ಕಂಡು  ನಮ್ಮನ್ನು ವಿಚಿತ್ರ ಪ್ರಾಣಿಗಳಂತೆ ಇಣುಕಿನೋಡುತ್ತಿದ್ದ ಅಲ್ಲಿನ ಸಿಬ್ಬಂದಿಗಳು, ಕೆಲವು ಪಾದ್ರಿಗಳಿಗೂ ಕುತೂಹಲ. ಕೆಲವರಿಗೆ ನಮ್ಮ ಮೇಲೆ ಭರವಸೆ ಇದ್ದಿರಲಿಲ್ಲ ಎಂಬುದು ನಮಗೆ ಹಿಂದೆಯೇ ಅಂದಾಜಾಗಿತ್ತು. ಕೆಲವು ಯುವ ಪಾದ್ರಿಗಳು ಮಾತ್ರ ಆಗಾಗ ಬಂದು, ವಿಚಾರಿಸಿ ಹೋಗುತ್ತಿದ್ದರು. ಎಲ್ಲರ ಕೈಗಳಿಗೆ ಪ್ರತಿಗಳನ್ನು ಕೊಟ್ಟು ಅವರ ಕಣ್ಣಲ್ಲಿ ಮೆಚ್ಚುಗೆ ಕಂಡಾಗ ನಮಗೆ ತೃಪ್ತಿ!

ಮಧ್ಯಾಹ್ನ ಅಲ್ಲೇ ಹತ್ತಿರದಲ್ಲೇ ಇದ್ದ ಒಂದು ಬಾರಿನಲ್ಲಿ ನಾವು ಕೆಲವರು ಬಿಯರ್ ಪೆ ಘನಘೋರ್ ಚರ್ಚಾ ನಡೆಸಿದೆವು. ಚರ್ಚೆ ಮೆಚ್ಚುಗೆಯಿಂದ ಅರಂಭವಾಗಿ, ಸ್ವಯಂಟೀಕೆಗೆ ಮುಂದುವರಿದು ಹಲವು ಪ್ರಶ್ನೆಗಳನ್ನು ಮತ್ತು ಸವಾಲುಗಳನ್ನು ಹುಟ್ಟುಹಾಕಿತ್ತು. ಸುಸ್ತಾಗಿದ್ದ ನಾವು ಮನೆಸೇರಿದೆವು.

ಮುಂದಿನ ದಿನಗಳಲ್ಲಿ ನಮ್ಮ ಚರ್ಚೆ ಮುಂದುವರಿದಿತ್ತು. ಈ ‘ಕ್ವೆಶ್ಚನ್ ಮಾರ್ಕ್’ ಪತ್ರಿಕೆ ಕೆಲವರ ಕೈಸೇರಿತ್ತು. ಬಿಷಪರು ಕ್ರೈಸ್ತರ ದಿನಪತ್ರಿಕೆ ತರುತ್ತಾರೆಂದೂ, ಬಂಡವಾಳ ಹಾಕುತ್ತಾರೆಂದೂ, ಮತಪ್ರಚಾರ ಮಾಡುತ್ತಾರೆಂದು, ವಿದೇಶದಿಂದ ಹಣ ಬರುತ್ತದೆ ಎಂದೂ ಅಪಪ್ರಚಾರ ಆಗಲೇ ಆರಂಭವಾಗಿತ್ತು. ಇದನ್ನು ಮಾಡಿದ್ದು ಕೆಲವು ತಗಡು ಪತ್ರಿಕೆಗಳು ಮಾತ್ರವಲ್ಲ; ಗಂಭೀರವೆಂದು ಕರೆಸಿಕೊಳ್ಳುತ್ತಿದ್ದ ಪತ್ರಿಕೆಗಳೂ ಹಿಂದೆ ಬೀಳಲಿಲ್ಲ! ಇವುಗಳ ನಡುವೆ ಪತ್ರಿಕೆಯನ್ನು ಜನರಿಗೆ ತಲಪಿಸುವುದು ಹೇಗೆ? ಇವನ್ನೆಲ್ಲಾ ಎದುರಿಸುವುದು ಹೇಗೆಂಬ ಬಗ್ಗೆ ನಾವು ತಲೆಕೆಡಿಸಿಕೊಳ್ಳುತ್ತಿದ್ದೆವು. ಈ ಹೊತ್ತಿಗೆ ಎನ್.ಎ.ಎಂ. ಇಸ್ಮಾಯಿಲ್, ನಾನು, ವಿಲ್‌ಫ್ರೆಡ್ ಡಿಸೋಜ, ಈಗ ‘ವಾರ್ತಾಭಾರತಿ’ಯಲ್ಲಿರುವ ಬಿ.ಬಿ.ಶೆಟ್ಟಿಗಾರ್, ‘ಉದಯವಾಣಿ’ ಸೇರಿರುವ ಕೇಶವ ಕುಂದರ್, ಈಗ ವಿಜಯ ಕರ್ನಾಟಕ ಪತ್ರಿಕೆಯಲ್ಲಿರುವ ರವೀಂದ್ರ ಶೆಟ್ಟಿ ಮತ್ತು ಲೋಕೇಶ್ ಕಾಯರ್ಗ, ಕ್ರಿಯಾಶೀಲ ವಿಚಾರಗಳ ಪ್ರಮೋದ್ ಇದ್ದೆವು. ಇದೇ ಮುಂದೆ ಕೋರ್ ಗ್ರೂಪ್ ಎಂದು ಪರಿಗಣಿಸಲ್ಪಟ್ಟಿತು.

ಪತ್ರಿಕೆಯಾದರೂ ಹೇಗಿತ್ತು? ಕರ್ನಾಟಕ ರಾಜ್ಯದ ಮೊದಲ ಬಣ್ಣದ ದಿನಪತ್ರಿಕೆ. ನೋಡಲು ಸುಂದರವಾಗಿತ್ತು ಎಂಬುದರ ಬಗ್ಗೆ ಸಂಶಯವೇ ಇರಲಿಲ್ಲ. ಮುಂಚಿತವಾಗಿಯೇ ಕೆಲವು ವಿಶೇಷ ವರದಿಗಳನ್ನು ಮಾಡಿಟ್ಟಿದ್ದೆವು; ಫೋಟೊಗಳನ್ನು ತೆಗೆಸಿಟ್ಟಿದ್ದವು. ಎಲ್ಲಿಯೂ ವರದಿಗಾರರು ಇಲ್ಲದೇ ಇದ್ದುದರಿಂದ ಬೇರೆಬೇರೆ ಪತ್ರಿಕೆಗಳಲ್ಲಿ ಬಂದಿದ್ದ ಬೇರೆಬೇರೆ ಊರುಗಳ ಸುದ್ದಿಗಳನ್ನೇ ಎತ್ತಿದ್ದೆವು. ನಮಗೆ ಸುದ್ದಿ ಏಜೆನ್ಸಿಗಳ ಚಂದಾ ಕೂಡಾ ಇರಲಿಲ್ಲ. ಅಧಿಕೃತ ಕಚೇರಿ ಆರಂಭವಾಗಿರಲಿಲ್ಲವಲ್ಲ? ಬೆರಳೆಣಿಕೆ ಜನರು ಮಾಡುವುದೇನು? ಅದರೆ, ನಾವು ಅದೇ ಸುದ್ದಿಗಳನ್ನು ನಮ್ಮದೇ ರೀತಿಯಲ್ಲಿ ಸರಳವಾಗಿ ಪ್ರಸ್ತುತಪಡಿಸಿದ್ದೆವು. ವಿನ್ಯಾಸದಲ್ಲೂ ಹೊಸತನ ತಂದಿದ್ದೆವು. ಐದು ಹಂತಗಳ ಪುಟಗಳು. ಆಗೆಲ್ಲಾ ಇದ್ದಿದಂತೆ ಗಾಳಿಪಟದ ಬಾಲದಂತೆ ನೇತಾಡುವ ಕಾಲಂಗಳಿಲ್ಲ. ಪ್ರತೀ ಪುಟಕ್ಕೂ ಮುಖಪುಟದ್ದಂತದ್ದೇ ಟ್ರೀಟ್‌ಮೆಂಟ್. ಆ ಕಾಲದಲ್ಲಿ ಮೂರು ಕಾಲಂ ಫೋಟೊ ಬರುವುದೇ ಅಪರೂಪ. ನಮ್ಮ ಬಣ್ಣದ ಮುದ್ರಣದ ಲಾಭ ಪಡೆಯಲು ನಾವು ಫೋಟೊಗಳನ್ನು ದೊಡ್ಡದಾಗಿ ಬಳಸಿದ್ದೆವು. ಸುದ್ದಿ ವಿಶ್ಲೇಷಣೆಗೆ ಬಣ್ಣದ ಗ್ರಾಫಿಕ್ಸ್ ಕೂಡಾ ಬಳಸಿದ್ದೆವು. ಒಟ್ಟಿನಲ್ಲಿ ಪರಿಣಾಮ ಪ್ರಭಾವಶಾಲಿಯಾಗಿತ್ತು! ಅದರೆ, ಇಷ್ಟು ಮಾತ್ರ ಸಾಕೆ?

ಪತ್ರಿಕೆಯೊಂದು ವಾಹಕ ಮಾತ್ರ. ಅದರ ಹೂರಣ ಏನಿರಬೇಕು? ನಾವು ಜನರಿಗೆ ತಲುಪಿಸಬೇಕಾಗಿರುವುದಾದರೂ ಏನನ್ನು? ಪತ್ರಿಕೆಯಲ್ಲಿ ಏನೇನೆಲ್ಲಾ ಇರಬೇಕು? ಗ್ರಾಮೀಣ ಸುದ್ದಿಗಳಿಗೆ ಮಹತ್ವ ಕೊಡಬೇಕು, ಧಾರ್ಮಿಕ ಸುದ್ದಿಗಿಂತ ಸಾಮಾಜಿಕ, ಸಾಂಸ್ಕತಿಕ ಸುದ್ದಿಗಳಿಗೆ ಮಹತ್ವ ಕೊಡಬೇಕು…ಇತ್ಯಾದಿ ಇತ್ಯಾದಿ.

ಸುದ್ದಿ ಹೇಗಿರಬೇಕು? ಸರಳವಾಗಿರಬೇಕು! ಎಲ್ಲರಿಗೂ ಅರ್ಥವಾಗುವಂತಿರಬೇಕು, ವಿಶ್ಲೇಷಣೆ ಇರಬೇಕು! ಸರಿ! ಭಾಷೆ ಹೇಗಿರಬೇಕು? ಸರಳವಾಗಿರಬೇಕು! ಸರಳ ಎಂದರೆ ಹೇಗೆ? ಸಾಮಾನ್ಯ ಜನರಿಗೂ ಅರ್ಥವಾಗಬೇಕು, ಕ್ಲಿಷ್ಟ ಶಬ್ದ ಬಳಸಬಾರದು! ಪತ್ರಿಕೆ ಜನಪರವಾಗಿರಬೇಕು! ಹೌದಪ್ಪ! ಜನಪರ ಎಂದರೆ ಏನು? ಶೋಷಿತ ಸಮುದಾಯದ ಪರ, ಅಲ್ಪಸಂಖ್ಯಾತರ ಪರ, ಹಿಂದುಳಿದವರ ಪರ, ದಲಿತರ ಪರ! ಮಹಿಳೆಯರ ಪರ! ಯಾರಿಗೆ ಈ ತನಕ ಮಾಧ್ಯಮಗಳಲ್ಲಿ ಸ್ಥಾನ ಸಿಕ್ಕಿಲ್ಲವೋ ಅವರ ಪರ! ಸರಿ! ಈ ರೀತಿ ನಮ್ಮ ಚರ್ಚೆ ಸಾಗಿತ್ತು.

ಆಡಳಿತಾತ್ಮಕ ಕೆಲಸಗಳಿಂದ ಬಿಡುವಾದಾಗಲೆಲ್ಲಾ ಸ್ಯಾಮ್ಯುಯೆಲ್ ಸಿಕ್ವೇರಾ ಈ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ಅವರ ಒಳನೋಟಗಳಿಗೆ ನಾವು ಬೆರಗಾಗುತ್ತಿದ್ದೆವು. ಅವರ ಸೆಕ್ಯುಲರ್, ಕೆಲವೊಮ್ಮೆ ಕ್ರಾಂತಿಕಾರಿ ವಿಚಾರಗಳು ನನ್ನಲ್ಲಿ ಬೆರಗು ಹುಟ್ಟಿಸಿದ್ದು ನಿಜ. ಇದೇ ಪ್ರಕ್ರಿಯೆಯಲ್ಲಿ ಅವರು ಪಾದ್ರಿ ಎಂಬ ಹಿಂಜರಿಕೆ ಹೋಗಿ, ಸಮಾನ ವಯಸ್ಕರಾದ ನಮ್ಮಲ್ಲಿ ಒಂದು ರೀತಿಯ ಬಂಧುತ್ವ ಮೂಡಿತ್ತು. ಇದೆಲ್ಲಾ ಸರಿ! ನಾವು, ಈ ಕೋರ್ ಗ್ರೂಪಿನವರು ಬೇರೆ ಬೇರೆ ಹಿನ್ನೆಲೆಗಳಿಂದ ಬಂದಿದ್ದುದರಿಂದ ಈ ಎಲ್ಲಾ ಚರ್ಚೆಗಳಿಂದ ನಮ್ಮೊಳಗಿನ ಗೊಂದಲ ನಿವಾರಣೆ ಆಯಿತೆಂದಲ್ಲ! ಅದರೆ,  ಬೇರೆಬೇರೆ ಮಟ್ಟಗಳಲ್ಲಿ ‘ನಾವು ಮಾಡಬೇಕಾಗಿರುವುದೇನು?’ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೆವು. ನಮಗೆಲ್ಲಾ ಈ ಬದಲಿ ಮಾಧ್ಯಮದ ಕುರಿತು ಇನ್ನಿಲ್ಲದ ಸ್ಪಷ್ಟತೆ ಮೂಡಲು, ನಂತರ ನಮ್ಮ ಕುಟುಂಬ ಸೇರಿಕೊಂಡ ಎಳೆಯರಿಗೆ ಅದು ರವಾನೆಯಾಗಲು ನಡೆದ ಅಭೂತಪೂರ್ವ ಪ್ರಕ್ರಿಯೆಯ ಬಗ್ಗೆ ಮುಂದೆ ಬರೆಯುವೆ.

ಇದೇ ಹೊತ್ತಿಗೆ, ಇನ್ನೊಂದು ಕಡೆಯಲ್ಲಿ ಬೇರೆ ಸಿದ್ಧತೆಗಳು ನಡೆಯುತ್ತಿದ್ದವು. ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಕಟ್ಟಡ ನಿರ್ಮಾಣ ಮುಗಿಯುತ್ತಾ ಬಂದಿದೆ. ಮೊದಲ ಬಾರಿಗೆ ಏರ್‌ಕಂಡಿಷನ್ಡ್ ಕಚೇರಿಯಂತೆ, ಪೀಠೋಪಕರಣಗಳು ಬಂದಿವೆಯಂತೆ, ಕಲರ್ ಪ್ರಿಂಟಿಂಗ್ ಮೆಷಿನ್ ಬಂತಂತೆ, ಕಂಪ್ಯೂಟರ್, ಸರ್ವರ್ ಬಂದಿದೆಯಂತೆ ಇತ್ಯಾದಿ ಸುದ್ದಿಗಳು ನಮ್ಮನ್ನು ಮುದಗೊಳಿಸುತ್ತಿದ್ದವು. ನಾವು ಮಾತ್ರ ಹಳೆಯ ಪತ್ರಕರ್ತರಂತೆ ಸಂಪಾದಕೀಯ, ವಿತರಣೆ ಮತ್ತು ಜಾಹೀರಾತು ವಿಷಯದಲ್ಲಿ ಮಾತ್ರ ತಲೆಕೆಡಿಸಿಕೊಳ್ಳುತ್ತಿದ್ದೆವು. ನಡುನಡುವೆ ಕುತೂಹಲದಿಂದ ಅಲ್ಲಿಗೆ ಭೇಟಿ ನೀಡಿ ಬೆರಗಾಗುತ್ತಿದ್ದೆವು. ಇಕ್ಕಟ್ಟಿನ ಮುರುಕಲು ಕಚೇರಿಗಳಲ್ಲಿಯೇ ಕೆಲಸಮಾಡಿ ಅಭ್ಯಾಸವಾಗಿದ್ದ ನಮಗೆ, ಅದೊಂದು ಕಾರ್ಪೋರೇಟ್ ಕಚೇರಿಯಂತೆ ಕಂಡಿತ್ತು.

ಮತ್ತೊಂದು ಕಡೆಯಲ್ಲಿ ಬಂಡವಾಳ ಸಂಗ್ರಹದ ಕೆಲಸ ಭರದಿಂದ ಸಾಗುತ್ತಿತ್ತು. ಇದೊಂದು ಸಾರ್ವಜನಿಕ ಬಂಡವಾಳದ ಪತ್ರಿಕೆ, ಸಂಸ್ಥೆಯ ಹೆಸರು ‘ಜನಮಾಧ್ಯಮ ಪ್ರಕಾಶನ ಲಿಮಿಟೆಡ್’ ಎಂದು ನಮಗೆ ಹಿಂದೆಯೇ ಗೊತ್ತಿತ್ತು. ಕ್ರೈಸ್ತ ವರಾಡೊ (ಒಂದು ಚರ್ಚಿಗೆ ಒಳಪಟ್ಟ ಕ್ಷೇತ್ರ) ಮಟ್ಟದಲ್ಲಿ, ಪ್ರಗತಿಪರ, ಜಾತ್ಯತೀತ ಒಲವುಳ್ಳವರ ಮಟ್ಟದಲ್ಲಿ ಬಂಡವಾಳ ಸಂಗ್ರಹ ನಡೆಯುತ್ತಿತ್ತು. ಕೆಲವು ಸಣ್ಣ ದೊಡ್ಡ ಉದ್ಯಮಿಗಳೂ ಹಣ ತೊಡಗಿಸಿದ್ದರು. ಇದು ಯಶಸ್ವಿಯಾಗಬಹುದು, ಲಾಭ ಮಾಡಬಹುದು ಎಂಬ ಭರವಸೆ ಹಲವರಿಗಿತ್ತು. ಅವರಲ್ಲಿ ಕೆಲವರಿಗೆ ಅತ್ಯಂತ ಕೊಳಕಾದ ಸ್ವಾರ್ಥ ಮತ್ತು ದುರುದ್ದೇಶಗಳೂ ಇದ್ದವು ಎಂದು ಮುಂದೊಂದು ದಿನ ನಮಗೆ ಗೊತ್ತಾಗಲಿತ್ತು.

ಹಿಂದೆ ಇದೇ ರೀತಿಯಲ್ಲಿ ಅರಂಭವಾಗಿ, ತ್ವರಿತವಾಗಿ ಬೆಳೆದು, ಬಂಡವಾಳಗಾರರ ಒಳಜಗಳದಿಂದ ರೋಗಹಿಡಿದು ನಿಧಾನ, ಮತ್ತು ನೋವಿನ ಸಾವಿಗೆ ಗುರಿಯಾದ ‘ಮುಂಗಾರು’ ಪತ್ರಿಕೆಯಲ್ಲಿ ಕೆಲಸಮಾಡಿದ್ದ ನನಗೆ ಇಂತಹ ಭಯ ಇತ್ತು. ‘ಜನಮಾಧ್ಯಮ ಪ್ರಕಾಶನ’ ಸಂಸ್ಥೆಯಲ್ಲಿ ಚಿಕ್ಕಚಿಕ್ಕ ಬಂಡವಾಳಗಾರರ ಒಟ್ಟು ಬಂಡವಾಳಕ್ಕಿಂತ ಬಹಳಷ್ಟು ದೊಡ್ಡ ಮೊತ್ತದ ಬಂಡವಾಳವನ್ನು ಕೆಲವೇ ಮಂದಿ ದೊಡ್ಡ ಬಂಡವಾಳಗಾರರು ಹೂಡಿದ್ದಾರೆ ಎಂಬುದೇ ಕಳವಳ ಹುಟ್ಟಿಸುತ್ತಿತ್ತು. ‘ಜನವಾಹಿನಿ’ ಪತ್ರಿಕೆ ತನ್ನ ವಿನಾಶದ ಬೀಜವನ್ನು ಸೆರಗಲ್ಲೇ ಕಟ್ಟಿಕೊಂಡಿತ್ತು! ಅದರ ಸುಳಿವು ಹೆಚ್ಚಿನವರಿಗೆ ಇರಲಿಲ್ಲ!

****

ರಾಜಕಾರಣಿಗಳ ತಮಾಷೆ

ನಾವು ಪತ್ರಿಕೆಯ ಪ್ರಚಾರ ಮತ್ತು ಸಹಕಾರ ಕೋರುವ ಸಲುವಾಗಿ ಯಾತ್ರೆ ಹೋದಾಗ ಹಲವಾರು ಲೇಖಕರು, ಪಕ್ಷ ಭೇದವಿಲ್ಲದೇ ರಾಜಕಾರಣಿಗಳನ್ನು ಭೇಟಿಯಾದೆವು. ಅಗಿನ ಎರಡು ಭೇಟಿಗಳು ಸ್ವಲ್ಪ ತಮಾಷೆಯವು.

ಮೂಡಬಿದಿರೆಯಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿಯವರನ್ನು ಅವರ ಮನೆಯಲ್ಲಿ ಭೇಟಿ ಮಾಡಿದಾಗ, ಆದರದಿಂದಲೇ ಸ್ವಾಗತಿಸಿದರು. ನಾವೊಂದು ಪತ್ರಿಕೆ ಮಾಡುತ್ತಿದ್ದೇವೆ ಎಂದು ಹೇಳಿ ಪತ್ರಿಕೆಯನ್ನು ತೋರಿಸುವುದರ ಒಳಗೆಯೇ ಅವರು ನಮಗೆ ಸಂಪೂರ್ಣ ಬೆಂಬಲ ಘೋಷಿಸಿ, ನನ್ನದೊಂದು ಐನೂರು ರೂಪಾಯಿ ಬರೆಯಿರಿ ಎಂದರು! ಆ ಕಾಲಕ್ಕೆ ಅದು ಅಷ್ಟೇನೂ ಸಣ್ಣ ಮೊತ್ತ ಅಲ್ಲದಿದ್ದರೂ, ನಮಗೆ ಒಳಗೊಳಗೇ ನಗು. ನಮಗೆ ಹಣ ಬೇಡ; ಇದು ಬಹು ಕೋಟಿಗಳ ಯೋಜನೆಯೆಂದು ಹೇಳಿ ಎಲ್ಲವನ್ನೂ ವಿವರಿಸಿದೆವು. ಪಾಪ, ಅವರು ನಾವ್ಯಾರೋ ಪತ್ರಿಕೆ ಅರಂಭಿಸುತ್ತೇವೆ ಎಂದು ಹೆದರಿಸಿ ಹಣ ವಸೂಲಿ ಮಾಡುವವರೆಂದು ಭಾವಿಸಿದ್ದರು!

ಪುತ್ತೂರಿನಲ್ಲಿ ಡಿ.ವಿ. ಸದಾನಂದ ಗೌಡ ಅವರನ್ನು ಅವರ ವಕೀಲಿ ಕಚೇರಿಯಲ್ಲಿ ಭೇಟಿ ಮಾಡಿದೆವು. ಪತ್ರಿಕೆ ಎಂದಾಕ್ಷಣ ಟ್ರೇಡ್‌ಮಾರ್ಕ್ ಹಲ್ಲುಗಳು ಬೆಳಗಿದವು. ನಾವು ಪತ್ರಿಕೆ ಕೊಟ್ಟು, ಎಲ್ಲವನ್ನೂ ವಿವರಿಸುವಾಗ ಅವರ ನಗು ಮಾಸುತ್ತಾಬಂತು. ನಿಮ್ಮ ಸಹಕಾರ ಕೇಳಲು ಬಂದಿದ್ದೇವೆ ಎಂದಾಗ ಸ್ವಲ್ಪ ಮುಗುಮ್ಮಾಗಿಯೇ ನಿಮ್ಮ ಸಹಕಾರ ನಮಗಿದ್ದರೆ, ನಮ್ಮ ಸಹಕಾರ ನಿಮಗೆ ಎಂದರು. ನಮ್ಮ ಪತ್ರಿಕಾ ಧೋರಣೆಗೆ ತದ್ವಿರುದ್ಧವಾದ ಅರೆಸ್ಸೆಸ್ ಧೋರಣೆಯ ಅವರು ನಮಗೆ ಯಾವ ಸಹಕಾರ ಕೊಡಬಹುದು ಎಂದು ಯೋಚಿಸಿ ಒಳಗೊಳಗೇ ನಗುತ್ತಿದ್ದ ನಾವು, ಹೊರಗೆ ಬಂದ ತಕ್ಷಣ ಬಿದ್ದುಬಿದ್ದು ನಕ್ಕೆವು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...