Homeಮುಖಪುಟಬಣ್ಣದ ರಿಸ್ಟ್ ಬ್ಯಾಂಡುಗಳ ಮೂಲಕ ತಮಿಳುನಾಡು ಶಾಲೆಗಳಲ್ಲಿ ಮಾರಕವಾದ ಜಾತಿ ತಾರತಮ್ಯ!

ಬಣ್ಣದ ರಿಸ್ಟ್ ಬ್ಯಾಂಡುಗಳ ಮೂಲಕ ತಮಿಳುನಾಡು ಶಾಲೆಗಳಲ್ಲಿ ಮಾರಕವಾದ ಜಾತಿ ತಾರತಮ್ಯ!

- Advertisement -
- Advertisement -

ಹುಟ್ಟುತ್ತಾ ವಿಶ್ವಮಾನವರಾದ ನಾವು ಬೆಳೆಯುತ್ತಾ ಅಲ್ಪಮಾನವರಾಗುತ್ತೇವೆ. ಜಾತಿ, ಧರ್ಮ, ಬಣ್ಣ, ಲಿಂಗ ಭೇದಗಳನ್ನು ಮಕ್ಕಳಿಗೆ ಮನೆಯಿಂದಲೇ ಕಲಿಸುತ್ತಿರುವುದು ದೊಡ್ಡ ದುರಂತವಾಗಿದೆ. ಆಡಿ ಕುಣಿಯುವ, ಬೆರೆತು ಕಲಿಯುವ ವಯಸ್ಸಿನಲ್ಲಿ ಮಕ್ಕಳಿಗೆ ಶಾಲೆಗಳಾದರೂ ಸಮಾನತೆ, ಪ್ರೀತಿ, ಶಾಂತಿ, ಸೌಹಾರ್ದತೆ, ಸಹಿಷ್ಣುತೆಯನ್ನು ಕಲಿಸುವುದು ಆರೋಗ್ಯಕರ ಸಮಾಜದ ಹಿತದೃಷ್ಟಿಯಿಂದ ಅತೀ ಅಗತ್ಯ. ಶಾಲೆಯಲ್ಲಿ ಸಿಗುವ ಸಾಮಾಜೀಕರಣ ಆ ನಿಟ್ಟಿನಲ್ಲಿರಬೇಕು. ಆದರೆ ಆ ಶಾಲೆಗಳೇ ನಿಮ್ಮ ಜಾತಿಯವರೊಂದಿಗೆ ಮಾತ್ರ ಸ್ನೇಹ ಮಾಡಿ, ಆಟವಾಡಿ, ಊಟ ಮಾಡಿ ಎಂದು ಬೋಧಿಸಿದರೆ, ತಾರತಮ್ಯವೆಸಗಿದರೆ ಮಕ್ಕಳು ವಿಶಾಲ ಹೃದಯಿಗಳಾಗಲು ಸಾಧ್ಯವಿಲ್ಲ. ಬದಲಿಗೆ ಚಿಕ್ಕಂದಿನಿಂದಲೇ ದ್ವೇಷ, ಹಿಂಸೆಗೆ ಬಲಿ ಬೀಳುವ ಅಪಾಯವಿದೆ.

ತಮಿಳುನಾಡು ರಾಜ್ಯವು ಹಲವು ವಿಚಾರಗಳಲ್ಲಿ ಪ್ರಗತಿಪರವೆನಿಸಿಕೊಂಡರೂ ಜಾತಿ ವಿಷಯದಲ್ಲಿ ಮಾತ್ರ ತೀರಾ ಹಿಂದುಳಿದಿದೆ. ದ್ರಾವಿಡ ಚಳವಳಿಯ ಪ್ರಭಾವದ ಕಾರಣ ಹಲವು ಹೇರಿಕೆಗಳನ್ನು (ಹಿಂದಿ, ಹಿಂದುತ್ವ, ಕೇಂದ್ರೀಕರಣ) ಸಹಿಸಿಕೊಳ್ಳದ ಇಲ್ಲಿನ ಜನ ಜಾತಿಯನ್ನು ಮಾತ್ರ ಮತ್ತಷ್ಟು ಹೇರಿಕೊಳ್ಳುತ್ತಿರುವುದು ವಿಪರ್ಯಾಸ. ಹಾಗಾಗಿಯೇ ಇಲ್ಲಿ ಪ್ರತಿಗಾಮಿ ಚಿಂತನೆಗಳಾದ ಅಸ್ಪೃಶ್ಯತೆ, ಜಾತಿದೌರ್ಜನ್ಯಗಳು, ಕೊಲೆ-ಅತ್ಯಾಚಾರಗಳು, ಮರ್ಯಾದಹೀನ ಹತ್ಯೆಗಳು ಹೆಚ್ಚುತ್ತಾ ತಮಿಳುನಾಡಿನ ಖ್ಯಾತಿಗೆ ಧಕ್ಕೆ ತಂದಿವೆ.

“ತಮಿಳುನಾಡಿನ ಬಹುತೇಕ ಕುಟುಂಬಗಳಲ್ಲಿ ಮಕ್ಕಳು ಹುಟ್ಟಿದ ನಂತರ ಅವರು ನಡೆದಾಡಲು, ಮಾತನಾಡಲು ಕಲಿಯುವ ಮುನ್ನವೇ ಅವರಿಗೆ ಜಾತಿಯ ಹೆಮ್ಮೆ ಮತ್ತು ಗುರುತನ್ನು, ತಮ್ಮ ಜಾತಿನಾಯಕರನ್ನು ಹೊಗಳುವ ಹಾಡುಗಳ ಮೂಲಕ ಕಲಿಸಲಾಗುತ್ತದೆ” ಎಂದು ಅಲ್ಲಿನ ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳುತ್ತಾರೆ. ಆ ಕಾರಣದಿಂದ ಶಾಲೆಗಳಲ್ಲಿಯೇ ಮಕ್ಕಳು ಜಾತಿ ಕಾರಣಕ್ಕೆ ಹೊಡೆದಾಡುವ, ಕೊಲೆಯಾಗಿರುವ ಹಲವಾರು ಪ್ರಕರಣಗಳು ವರದಿಯಾಗಿವೆ. ತಿರುನೆಲ್ವೇಲಿ ಜಿಲ್ಲೆಯಲ್ಲಿ ಪ್ರತಿದಿನ ಶಾಲೆಗಳು ಮುಗಿಯುವ ವೇಳೆ ಸಂಜೆ 4.30ರ ಸುಮಾರಿಗೆ, ಅಲ್ಲಿನ ರಸ್ತೆಗಳಲ್ಲಿ ಪೊಲೀಸ್ ಜೀಪ್‌ಗಳು ಗಸ್ತು ತಿರುಗುತ್ತವೆ. ವಿದ್ಯಾರ್ಥಿಗಳ ಗುಂಪು ತಮ್ಮ ಜಾತಿಯ ನಾಯಕರನ್ನು ವೈಭವೀಕರಿಸುವ ಹಾಡುಗಳನ್ನು ಬಸ್‌ಗಳಲ್ಲಿ ಹಾಕುತ್ತಾರೆ ಅಥವಾ ಹಾಡುತ್ತಾರೆ. ಹಾಗಾಗಿ ಅಲ್ಲಿ ಹಿಂಸಾಚಾರ ನಡೆಯುವುದನ್ನು ತಪ್ಪಿಸಲು ಕೆಲವು ’ಸೂಕ್ಷ್ಮ’ ಮಾರ್ಗಗಳಲ್ಲಿ ಸಾರಿಗೆ ಇಲಾಖೆಯು ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಬಸ್‌ಗಳ ಒಳಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದೆ!

ಕಪ್ಪು ಚೆಂದ ಬಿಳಿಯದು ಅಂದ
ಕೇಸರಿ ಶುಭವೋ ಹಸಿರು ಸಿರಿಯೋ
ಎಲ್ಲವು ಬೆರೆಯೇ ಕಾಮನಬಿಲ್ಲು
ಬಣ್ಣಗಳ ನಡುವೆ ಭೇದವೇ?

ಎಂಬ ಹಾಡನ್ನು ಬರೆಯುವ ಮೂಲಕ ಕನ್ನಡದ ಕವಿ-ಹಾಡುಗಾರ ಜನಾರ್ದನ ಕೆಸರಗದ್ದೆಯವರು ಮನುಷ್ಯ ಜಾತಿ ತಾನೊಂದೇ ವಲಂ, ಮನುಜ ಮತ ವಿಶ್ವ ಪಥ ಎಂಬ ಸಂದೇಶ ಸಾರಲು ಪ್ರಯತ್ನಿಸಿದ್ದಾರೆ. ಆದರೆ ತಮಿಳುನಾಡಿನ ಕೆಲ ಜಿಲ್ಲೆಗಳಲ್ಲಿ ಈ ಬಣ್ಣಗಳೇ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿವೆ. ಏಕೆಂದರೆ ಜಾತಿಸೂಚಕ ರಿಸ್ಟ್ ಬ್ಯಾಂಡ್‌ಗಳು (ಕೈಗೆ ಹಾಕುವ ಬಣ್ಣದ ಪಟ್ಟಿಗಳು) ಅರಳುವ ಮಕ್ಕಳ ಮನಸ್ಸನ್ನು ಮುದುಡುತ್ತಿವೆ. ತಮಿಳುನಾಡಿನಲ್ಲಿ ಹಿಂದಿನಿಂದಲೂ ಆಚರಣೆಯಲ್ಲಿರುವ ಈ ರಿಸ್ಟ್ ಬ್ಯಾಂಡ್ ಧರಿಸುವ ಪದ್ಧತಿಯಿಂದ ಶಾಲೆಗಳಲ್ಲಿ ನಡೆಯುವ ಹೊಡೆದಾಟದಿಂದ ಹಲವು ಮಕ್ಕಳ ಜೀವ ಹೋಗಿದೆ. ಅಲ್ಲದೆ ಜಾತಿ ಆಧಾರದಲ್ಲಿ ಶಿಕ್ಷಣದಲ್ಲಿ ತಾರತಮ್ಯ ಮಿತಿಮೀರಿದೆ. ತಿರುನೆಲ್ವೇಲಿ ಶಾಲೆಯಲ್ಲಿ ಮೊನ್ನೆಯಷ್ಟೆ ವಿದ್ಯಾರ್ಥಿಯೊಬ್ಬನ ಕೊಲೆಯಾಗಿದ್ದು, ಈ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

ಏನಿದು ಜಾತಿ ಸೂಚಕ ರಿಸ್ಟ್ ಬ್ಯಾಂಡ್?

ಜಾತಿ ಹೆಮ್ಮೆಯ ಕಾರಣಕ್ಕೆ ಹಿಂದಿನಿಂದಲೂ ಮಕ್ಕಳು ನಿರ್ದಿಷ್ಟ ಜಾತಿ ಸೂಚಕ ಬಣ್ಣದ ಬ್ಯಾಂಡ್‌ಗಳನ್ನು ಕೈಗಳಿಗೆ ಧರಿಸುತ್ತಾರೆ. ಅದು ಶಾಲೆಗಳಲ್ಲಿ ತಮ್ಮದೇ ಜಾತಿಯ ಇತರರನ್ನು ಗುರುತಿಸಲು, ಅವರೊಂದಿಗೆ ಸ್ನೇಹ ಬೆಳೆಸಲು, ಆಟ ಆಡಲು, ಊಟ ಮಾಡಲು ಗುರುತಾಗುತ್ತದೆ. ಇನ್ನು ಶಿಕ್ಷಕರಿಗೆ ಪ್ರಶ್ನೆ ಕೇಳಲು ಅಥವಾ ಯಾವುದೇ ಕೆಲಸಕ್ಕೆ ಅನುಮತಿ ಪಡೆಯಲು ಮಕ್ಕಳು ಕೈ ಎತ್ತಿದರೆ ಶಿಕ್ಷಕರಿಗೆ ಆ ವಿದ್ಯಾರ್ಥಿ ಯಾವ ಜಾತಿಗೆ ಸೇರಿದವನು ಎಂದು ಸುಲಭವಾಗಿ ತಿಳಿದುಬಿಡುತ್ತದೆ. ಇದು ಕೂಡಿ ಬಾಳುವ ಸೌಹಾರ್ದ ಸಂಸ್ಕೃತಿಗೆ ವಿರುದ್ಧದ ಅನಿಷ್ಟ
ಆಚರಣೆಯಾಗಿದೆ. ಈ ರಿಸ್ಟ್ ಬ್ಯಾಂಡ್ ವಿಚಾರದಲ್ಲಿ ಇದುವರೆಗೂ ಹತ್ತಾರು ಗಲಾಟೆಗಳು ನಡೆದಿದ್ದು ಹಲವು ವಿದ್ಯಾರ್ಥಿಗಳು ಅಸುನೀಗಿದ್ದರೂ ಇಂದಿಗೂ ಅನೇಕ ಶಾಲೆಗಳಲ್ಲಿ ರಿಸ್ಟ್ ಬ್ಯಾಂಡ್ ಧರಿಸುವುದು ಮಾತ್ರ ನಿಂತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬಹುತೇಕ ಗಂಡುಮಕ್ಕಳು, ಕೈಗಳಿಗೆ ಈ ಬ್ಯಾಂಡ್ ಧರಿಸಿದರೆ, ಇನ್ನು ಕೆಲವರು ಹಣೆಗಳಲ್ಲಿ ಇಡುವ ತಿಲಕದ ಬಣ್ಣದಲ್ಲಿ ತಮ್ಮ ಜಾತಿ ಗುರುತಿಸಿಕೊಳ್ಳುತ್ತಾರೆ. ಬರುಬರುತ್ತಾ ಹೆಣ್ಣುಮಕ್ಕಳು ಸಹ ಜಾತಿಸೂಚಕ ಬಣ್ಣದ ರಿಬ್ಬನ್‌ಗಳು, ಕಿವಿಯೋಲೆಯ ಸ್ಟೋನ್‌ಗಳು ಮತ್ತು ಉಗುರು ಬಣ್ಣಗಳನ್ನು ಹಚ್ಚಿಕೊಳ್ಳುವ ಮೂಲಕ ಜಾತಿ ಕೂಪಕ್ಕೆ ಬಿದ್ದಿದ್ದಾರೆ.

ಕಾರಣವೇನು?

ಒಬಿಸಿ ವರ್ಗಕ್ಕೆ ಸೇರಿದ ನಾದರ್ ಸಮುದಾಯದವರು ಹಸಿರು ಮತ್ತು ನೀಲಿ ಬಣ್ಣದ ಬ್ಯಾಂಡ್‌ಗಳನ್ನು, ಥೇವರ್ ಮತ್ತು ಮಾರವರ್ ಸಮುದಾಯದವರು ಹಳದಿ ಮತ್ತು ಕಿತ್ತಳೆ ಬಣ್ಣದ, ಯಾದವ ಮತ್ತು ಕೊಣಾರ್ ಸಮುದಾಯದವರು ಹಳದಿ ಮತ್ತು ನೀಲಿ ಬಣ್ಣದ ಬ್ಯಾಂಡ್‌ಗಳನ್ನು ಧರಿಸುತ್ತಾರೆ. ಪರಿಶಿಷ್ಟ ಜಾತಿಯ ಅರುಂಧತಿಯಾರ್ ಸಮುದಾಯದವರು ಕೆಂಪು ಮತ್ತು ನೀಲಿ ಬಣ್ಣದ, ದೇವೇಂದ್ರಕುಲ ವೆಲ್ಲಲಾರ್ ಸಮುದಾಯದವರು ಕೆಂಪು ಮತ್ತು ಹಸಿರು ಬಣ್ಣದ ರಿಸ್ಟ್ ಬ್ಯಾಂಡ್‌ಗಳನ್ನು ಧರಿಸುತ್ತಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಮಧುರೈನ ಗ್ರಾಮವೊಂದರ ಪಂಚಾಯಿತಿ ಶಾಲೆಯಲ್ಲಿ 40 ವರ್ಷಗಳಿಂದ ದಲಿತ ಮಕ್ಕಳಿಗೆ ಪ್ರವೇಶವಿರಲಿಲ್ಲ. ಇನ್ನು ರಾಜ್ಯದ ಹಲವಾರು ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಿನ್ನಲು ದಲಿತ ಮಕ್ಕಳು ತಮ್ಮ ತಟ್ಟೆ ತಾವೇ ತರಬೇಕು, ಅವರಿಗಾಗಿ ನಿಗದಿಪಡಿಸಿದ ನಲ್ಲಿಗಳಲ್ಲಿ ಮಾತ್ರ ಊಟದ ನಂತರ ಅವರ ತಟ್ಟೆ ತೊಳೆಯಬೇಕು ಎಂಬ ಅಸ್ಪೃಶ್ಯತೆಯ ನಿಯಮ ಹೇರಲಾಗಿದೆ. ಇಂದಿಗೂ ಜಾತಿ ದೌರ್ಜನ್ಯ, ಕೊಲೆ, ಮರ್ಯಾದಹೀನ ಹತ್ಯೆಗಳು ಹೆಚ್ಚಾಗಿವೆ. ಇವುಗಳನ್ನು ಅಲ್ಲಿನ ದಲಿತ ದಮನಿತರು ಪ್ರಶ್ನಿಸುತ್ತಲೇ ಬಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದಲಿತ ಪ್ರತಿರೋಧ ಮತ್ತು ಸಾಮಾಜಿಕ ಸಮಾನತೆಗಾಗಿನ ಹೋರಾಟ ಬಿರುಸು ಪಡೆದುಕೊಂಡಿದೆ. ಜಾತಿ ಪ್ರತಿರೋಧದ ಸಿನಿಮಾಗಳು ತಮಿಳು ಭಾಷೆಯಲ್ಲಿ ನಿರ್ಮಾಣವಾಗಿ ಗಮನ ಸೆಳೆದಿವೆ. ಈ ದಿಟ್ಟ ಪ್ರತಿರೋಧವನ್ನು ಸಹಿಸದ ಪ್ರಬಲ ಜಾತಿಯವರು ತಮ್ಮ ಮಕ್ಕಳಿಗೆ ಜಾತಿ ಹೆಮ್ಮೆಯ ಕುರಿತು ಹೆಚ್ಚಾಗಿ ಹೇಳುವುದರ ಜೊತೆಗೆ ರಿಸ್ಟ್ ಬ್ಯಾಂಡ್ ತರಹದ ಜಾತಿಸೂಚಕಗಳನ್ನು ಧರಿಸುವಂತೆ ಪ್ರಚೋದಿಸುತ್ತಿದ್ದಾರೆ. ಹಿಂದಿನಿಂದಲೂ ಧರಿಸುತ್ತಿದ್ದರೂ ಈಗ ಮತ್ತಷ್ಟು ಹೆಚ್ಚಾಗಲು ಇದೇ ಕಾರಣವಾಗಿದೆ. ಹಾಗಾಗಿ ದಲಿತರು ಸಹ ಈ ಬ್ಯಾಂಡ್‌ಗಳನ್ನು ಧರಿಸುತ್ತಿದ್ದಾರೆ.

ಈ ಅನಿಷ್ಟ ಪದ್ಧತಿಗೆ ಶಿಕ್ಷಕರ ಪ್ರೋತ್ಸಾಹ

2018ರ ಬ್ಯಾಚ್‌ನ ಐಎಎಸ್ ತರಬೇತಿ ತಂಡದ 180 ಸದಸ್ಯರು ಈ ರಿಸ್ಟ್ ಬ್ಯಾಂಡ್ ವಿಚಾರವಾಗಿ ಒಂದು ಅಧ್ಯಯನ ನಡೆಸಿದ್ದಾರೆ. ಸುಮಾರು 50 ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರನ್ನು ಮಾತನಾಡಿಸಿದಾಗ ಈ ಅನಿಷ್ಟ ಪದ್ಧತಿಗೆ ಶಿಕ್ಷಕರೆ ಹೆಚ್ಚು ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಆನಂತರ ಈ ತಂಡವು ಶಾಲೆಗಳಲ್ಲಿ ರಿಸ್ಟ್ ಬ್ಯಾಂಡ್ ಧರಿಸುವುದನ್ನು ನಿಷೇಧಿಸಬೇಕೆಂದು ಶಿಕ್ಷಣ ಇಲಾಖೆಗೆ ಪತ್ರಿಕಾ ವರದಿಗಳ ಜೊತೆ ಪಿಟಿಷನ್ ಸಲ್ಲಿಸಿತ್ತು. ಇದರ ಆಧಾರದಲ್ಲಿ ತಮಿಳುನಾಡು ಶಾಲಾ ಶಿಕ್ಷಣ ನಿರ್ದೇಶನಾಲಯವು 2019ರಲ್ಲಿ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಜಾತಿತಾರತಮ್ಯ ಆಚರಿಸುವ ಶಾಲೆಗಳನ್ನು ಗುರುತಿಸಿ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡುವಂತೆ ನಿರ್ದೇಶಿಸಿ ಸುತ್ತೋಲೆ ಹೊರಡಿಸಿತ್ತು. ಇಂತಹ ಅಭ್ಯಾಸವನ್ನು ತಕ್ಷಣವೇ ತಡೆಗಟ್ಟಬೇಕು ಮತ್ತು ತಾರತಮ್ಯಕ್ಕೆ ಕಾರಣರಾದವರ ಮೇಲೆ ಕಾನೂನುಕ್ರಮ ಕೈಗೊಳ್ಳುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿತ್ತು. ಆದರೆ ಆಗಿನ ಎಐಎಡಿಎಂಕೆ ಸರ್ಕಾರದ ಶಿಕ್ಷಣ ಸಚಿವರಾಗಿದ್ದ ಕೆ.ಎ ಸಂಗೊತ್ತಿಯನ್ ಆ ಸುತ್ತೋಲೆಯನ್ನು ರದ್ದುಗೊಳಿಸಿದ್ದಲ್ಲದೆ ಆ ರೀತಿಯ ಆಚರಣೆ ನಡೆಯುತ್ತಿಲ್ಲ ಎಂದು ಹೇಳಿಕೆ ನೀಡಿದ್ದರು.

ಸಮಾಜದಲ್ಲಿಯೂ ಬದಲಾವಣೆ ಬೇಕಿದೆ

ತಮಿಳುನಾಡಿನಲ್ಲಿ ಸಮಾನ ಶಿಕ್ಷಣಕ್ಕಾಗಿ ಹೋರಾಡುತ್ತಿರುವ ಪ್ರಿನ್ಸ್ ಗಜೇಂದ್ರ ಬಾಬುರವರು ಈ ವಿಷಯದ ಕುರಿತು ನ್ಯಾಯಪಥದೊಂದಿಗೆ ಮಾತನಾಡಿ, “ಇಂತಹ ಸಮಸ್ಯೆಗಳು 20 ವರ್ಷಗಳಿಂದ ಆಚರಣೆಯಲ್ಲಿದ್ದರೂ ಸಮಾಜ ಇದನ್ನು ಸಾಮಾಜಿಕ ಸಮಸ್ಯೆ ಎಂದು ಪರಿಗಣಿಸುತ್ತಿಲ್ಲ. ಆದರೆ ಈ ಅನಿಷ್ಟ ಪದ್ಧತಿಗೆ ಮಕ್ಕಳು ಬಲಿಯಾಗುತ್ತಿದ್ದಾರೆ. ಎಲ್ಲೇ ಈ ರೀತಿಯ ಘಟನೆಗಳು ನಡೆದರೂ ಇದಕ್ಕೂ ಜಾತಿಗೂ ಯಾವುದೇ ಸಂಬಂಧವಿಲ್ಲ ಎಂದು ಅಧಿಕಾರಿಗಳು ನಿರಾಕರಿಸುತ್ತಾರೆ. ಏಕೆಂದರೆ ಇದು ದೊಡ್ಡ ಸುದ್ದಿಯಾಗಲು ಅವರು ಬಯಸುವುದಿಲ್ಲ.
ಆದ್ದರಿಂದ ಅದು ಸಮಾಜದ ಗಮನಕ್ಕೆ ಬರುತ್ತಿಲ್ಲ. ಶಾಲೆಗಳು ಸಾಮಾಜಿಕ ತಾರತಮ್ಯವನ್ನು ಹೋಗಲಾಡಿಸಲು ಉದ್ದೇಶಿಸಿರುವ ಸ್ಥಳಗಳಾಗಿವೆ. ಆದರೆ ಸಮಾಜದಲ್ಲಿ ಜಾತಿತಾರತಮ್ಯ ನೆಲೆಯೂರಿರುವಾಗ ಅದು ಶಾಲೆಗಳತ್ತಲೂ ಸುಳಿಯುತ್ತದೆ. ಪೊಲೀಸರ ಕ್ರಮ ಮತ್ತು ವಿದ್ಯಾರ್ಥಿಗಳ ವಿರುದ್ಧ ಶಿಕ್ಷಾರ್ಹ ಕ್ರಮದಿಂದ ಈ ಸಮಸ್ಯೆ ಬಗೆಹರಿಯುವುದಿಲ್ಲ. ಸಮಾಜದಲ್ಲಿ ಜಾಗೃತಿ ಮತ್ತು ಬದಲಾವಣೆ ಬರಬೇಕು. ಅದರಂತೆ ಶಾಲಾ ಶಿಕ್ಷಣದಲ್ಲಿ ಜಾತೀಯತೆ, ತಾರತಮ್ಯ ತಪ್ಪು ಎಂದು ತಿಳಿವಳಿಕೆ ನೀಡುವ ಪಠ್ಯಗಳನ್ನು ಅಳವಡಿಸಬೇಕು. ಆ ರೀತಿಯಾಗಿ ಹಂತ ಹಂತವಾಗಿ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು” ಎಂದರು.

ಪ್ರಿನ್ಸ್ ಗಜೇಂದ್ರ ಬಾಬು

ಶಿಕ್ಷಣ ಪಡೆಯುವುದರ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಹೋಗಲಾಡಿಸಬೇಕು ಎಂಬುದು ಪ್ರಜ್ಞಾವಂತರ ಆಶಯ. ಆದರೆ ಶಿಕ್ಷಣವೇ ತಾರತಮ್ಯವನ್ನು ಬೋಧಿಸುವಂತಾಗಬಾರದು. ಹಾಗಾಗಿ ಜಾತೀಯತೆ ಆಚರಿಸುವುದು ನಾಚಿಕೆಯ ವಿಷಯ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕಿದೆ. ಅದೇರೀತಿಯಾಗಿ ಮೀಸಲಾತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗಿರುವ ತಪ್ಪು ಅಭಿಪ್ರಾಯವನ್ನು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳ ಮೂಲಕ ದೂರ ಮಾಡಬೇಕು. ಇಂತಹ ಬದಲಾವಣೆಗಳಿಗೆ ದೀರ್ಘ ಸಮಯ ಹಿಡಿಯುತ್ತದೆ ಎಂಬುದನ್ನು ಅರಿತು ಪಟ್ಟುಬಿಡದೆ ಸಾಧಿಸಬೇಕಿದೆ. ಹಲವು ವಿಷಯಗಳಲ್ಲಿ ಪ್ರಗತಿಪರ ಧೋರಣೆ ಹೊಂದಿರುವ ತಮಿಳುನಾಡಿನಲ್ಲಿ ಸದ್ಯ ಡಿಎಂಕೆ ಸರ್ಕಾರ ಅಧಿಕಾರದಲ್ಲಿದ್ದು, ಅದರ ಮುಂದೆ ಈ ದೊಡ್ಡ ಜವಾಬ್ದಾರಿಯಿದೆ. ಅದನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ಅದು ಉಳಿದ ರಾಜ್ಯಗಳಿಗೂ ಮಾದರಿಯಾಗಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಇದನ್ನೂ ಓದಿ: ಜೈ ಭೀಮ್‌ ವಿವಾದ: ಸೂರ್ಯ, ಜ್ಞಾನವೇಲ್‌, ಜ್ಯೋತಿಕಾ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೋರ್ಟ್ ಆದೇಶ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...