ಅಸ್ಸಾಂನ ರಾಜಧಾನಿ ಮತ್ತು ಸುಂದರ ಪಟ್ಟಣವಾದ ಗೌಹಾಟಿಯ ಅರಬಿಂದೋ ಕನ್ವರ್ 20 ವರ್ಷದ ಯುವಕ. ಇದೇ ಫೆಬ್ರವರಿ ತಿಂಗಳಿನಲ್ಲಷ್ಟೇ ಬೆಂಗಳೂರಿಗೆ ಬಂದ. ಕಟ್ಟಡ ಕಾರ್ಮಿಕನಾಗಿ ಸಿಫ್ಲೋ ಎಂಬ ಬೃಹತ್ ನಿರ್ಮಾಣ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದ. ಇದೇ ಕಂಪೆನಿಯಲ್ಲಿ ಈತನ ತಂದೆ ಪ್ರಥಮ್ ಕನ್ವರ್ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ.
ಈ ಕಂಪೆನಿಯ ಪ್ರಮುಖ ಕೆಲಸದ ಕ್ಷೇತ್ರ ದೊಡ್ಡ ಕಟ್ಟಡಗಳ ಛಾವಣಿಯನ್ನು ಜೋಡಿಸುವುದು. ಬಹುಮಹಡಿ ಕಟ್ಟಡಗಳ ಅತಿಯಾದ ಎತ್ತರದ ಮೇಲೆ ನಿಂತು, ಅವುಗಳ ಮೇಲ್ಛಾವಣಿಯನ್ನು (ಸೀಲಿಂಗ್) ಜೋಡಿಸುವ ಅತ್ಯಂತ ಅಪಾಯಕಾರಿ ಮತ್ತು ಅಷ್ಟೇ ಕೌಶಲ್ಯಪೂರ್ಣ ಕೆಲಸಕ್ಕೆ ಇವರಿಗೆ ಸಿಗುವುದು ದಿನಕ್ಕೆ 250-350 ರೂ ಮಾತ್ರ.
ಈತನ ಹಾಗೆಯೇ ಉತ್ತರ ಭಾರತ ಮತ್ತು ಈಶಾನ್ಯ ರಾಜ್ಯಗಳಿಂದ ದುಡಿಯಲು ಬಂದ ನೂರಾರು ಕಾರ್ಮಿಕರು ಈ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಂಪೆನಿಯೇ ಮಾಡಿಕೊಟ್ಟ ಚಿಕ್ಕ ರೂಮುಗಳಲ್ಲಿ 8-10 ಮಂದಿ ಕಾರ್ಮಿಕರು ಇದ್ದುಕೊಂಡು, ಇಲ್ಲಿನ ಬದುಕುವ ಖರ್ಚು ಕಳೆದು ಒಂದಷ್ಟನ್ನಾದರೂ ಉಳಿಸಿ ಊರಿಗೆ ಕಳಿಸುವ ಪ್ರಯತ್ನದಲ್ಲಿರುತ್ತಾರೆ.
ಅರಬಿಂದೋ ಇಂದ ನಮ್ಮ ಹೆಲ್ಪ್‌ಲೈನ್‌ಗೆ ಕರೆ ಬಂದಾಗ, ಅನೇಕ ಉತ್ತರ ಭಾರತದ ಕಾರ್ಮಿಕರಂತೆಯೇ ಈತನದ್ದೂ ಕೂಡಾ ‘ನಾವು ಯಾವಾಗ ಊರಿಗೆ ಹೋಗಲು ಸಾಧ್ಯ? ಸೇವಾ ಸಿಂಧು ಆಪ್ ನಲ್ಲಿ ಹೆಸರು ನೋಂದಣಿ ಮಾಡಿಸಲು ಪೊಲೀಸ್ ಠಾಣೆಯಲ್ಲಿ ಕೊಟ್ಟಿದ್ದೇವೆ, ನಮಗಿನ್ನೂ ನಮ್ಮ ಸರದಿ ನಂಬರ್ ಸಿಕ್ಕಿಲ್ಲ, ಯಾವಾಗ ಸಿಗುತ್ತದೆ? ಹೇಗಾದರೂ ನಮ್ಮನ್ನು ಊರಿಗೆ ಕಳಿಸಿ’ ಎಂಬ ಅಳಲು.
ಪೊಲೀಸ್ ಠಾಣೆಯಲ್ಲಿ ಕೊಟ್ಟಿದ್ದರೆ ಆಗುತ್ತದೆ, ಸ್ವಲ್ಪ ಕಾದು ನೋಡಿ ಎಂಬ ನಮ್ಮ ಧೈರ್ಯ ತುಂಬುವ ಮಾತುಗಳಿಂದ ಸ್ವಲ್ಪ ದಿನ ಸಮಾಧಾನಪಡಿಸುವ ಪ್ರಯತ್ನ ಮಾಡಿಯಾಯಿತು. ಆದರೆ, ಮತ್ತೆ ಮತ್ತೆ ಅರಬಿಂದೋನ ಕರೆ. ಕೊನೆಗೊಮ್ಮೆ, “ಎಲ್ಲ ಕಡೆ ಖಾಯಿಲೆ ಹರಡುತ್ತಿದೆ. ನಾನು ನಮ್ಮ ತಾಯಿಯೊಂದಿಗೆ ಇರಬೇಕೆನಿಸುತ್ತಿದೆ, ನನ್ನನ್ನು ದಯವಿಟ್ಟು ಕಳಿಸಿಕೊಡಿ” ಎನ್ನುತ್ತಾ ಅಕ್ಷರಶಃ ಆತ ಅಳಲಾರಂಭಿಸಿದಾಗ, ಕರುಳು ಚುರ್ ಎಂದಿತು.
ಪುಟ್ಟ ಮಗುವಿನಂತೆ ತಾಯಿಗಾಗಿ ಹಂಬಲಿಸುತ್ತಿರುವ ಈ ಹುಡುಗನನ್ನು ಊರಿಗೆ ಕಳಿಸಲೇಬೇಕೆಂದು ತೀರ್ಮಾನಿಸಿ, ಆತನ ‘ಸೇವಾ ಸಿಂಧು’ ನೋಂದಣಿಯನ್ನು ಹೆಲ್ಪ್‌ಲೈನ್‌ನ ವಾಲಂಟಿಯರ್ ಆದ ಸಾಫ್ಟ್ವೇರ್ ತಂತ್ರಜ್ಞ ಭರತ್ ಹೆಬ್ಬಾಳ್ ಪರಿಶೀಲಿಸಿದರು. ನೋಡಿದರೆ ಆತನ ನೋಂದಣಿ ಆಗಿರಲಿಲ್ಲ. ಅದನ್ನೂ ನಾವೇ ಮಾಡೋಣವೆಂದು ಅಂದುಕೊಂಡು ವಿವರಗಳನ್ನು ತುಂಬಿಸುತ್ತಾ ಬಂದೆವು. ಆಗ ನಮಗೆ ಸರ್ಕಾರದ ನೀತಿಗಳಲ್ಲಿರುವ ಉದ್ದೇಶಪೂರ್ವಕ ಅಡೆತಡೆಗಳ ಮತ್ತೊಂದು ಜೀವಂತ ಉದಾಹರಣೆ ಸಿಕ್ಕಿತು.
ಆಧಾರ್ ಸಂಖ್ಯೆ ಇಲ್ಲದೆ ಸೇವಾ ಸಿಂಧುವಿನಲ್ಲಿ ನೋಂದಣಿ ಸಾಧ್ಯವಿರಲಿಲ್ಲ; ಈಶಾನ್ಯ ರಾಜ್ಯಗಳ ಪ್ರಜೆಯಾದ ಅರಬಿಂಧೋ ಬಳಿ ಆಧಾರ್ ಕಾರ್ಡ್ ಇರಲಿಲ್ಲ! ಅವನೊಬ್ಬನೇ ಅಲ್ಲ, ಅಂತಹ ಹಲವು ಮಂದಿ ಇದ್ದಾರೆಂದು ತಿಳಿಯಿತು.
ಮೊದಮೊದಲಿಗೆ ವಲಸೆ ಕಾರ್ಮಿಕರ ಮರಳುವಿಕೆಗೆ ಸಂಬಂಧಿಸಿ ಬಂದ ಪ್ರಕಟಣೆಗಳನ್ನು ಹುಡುಕಿ ತೆಗೆದು ನೋಡಿದರೆ, ಅದರಲ್ಲಿ ಯಾವುದಾದರೊಂದು ಐಡಿ ಪ್ರೂಫ್ ಇದ್ದರೆ ಸಾಕು ಎಂದು ಹೇಳಲಾಗಿದೆ. ಆದರೆ, ಸೇವಾಸಿಂಧು ರಚನೆಯಲ್ಲಿ ಮಾತ್ರ ಆಧಾರ್ ಸಂಖ್ಯೆ ಇಲ್ಲದೆ ಮುಂದುವರೆಯಲು ಸಾಧ್ಯವಿಲ್ಲದಂತಹ ವ್ಯವಸ್ಥೆ ಮಾಡಲಾಗಿದೆ. ಸರಾಗವಾಗಿ ನಡೆಯಬಹುದಾದ ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸಿ, ಒಂದಷ್ಟು ಮಂದಿ ಕಾರ್ಮಿಕರು ಈ ಕೂಡಲೇ ಮರಳಲು ಸಾಧ್ಯವಾಗದಂತಹ ಸ್ಥಿತಿ ಉಂಟುಮಾಡುವುದು ಬಿಟ್ಟು ಇದಕ್ಕೆ ಬೇರೇನಾದರೂ ತರ್ಕವಿರಲು ಸಾಧ್ಯವೇ?
ಅದರ ಬಗ್ಗೆ ಎಲ್ಲ ದಿಕ್ಕಿನಿಂದ ಪರಿಶೀಲನೆ ನಡೆಸಿ ಆಯಿತು. ಈ ಸಮಸ್ಯೆಯ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿ ಪರಿಸ್ಥಿತಿ ವಿವರಿಸಿದೆವು; ಸರ್ಕಾರದ ಹಿರಿಯ ಅಧಿಕಾರಿಗಳನ್ನು ಮಾತಾಡಿಸಿದೆವು; ಅಷ್ಟೆಲ್ಲ ಮಾಡಿದ ನಂತರ ನಮಗೆ ಗೊತ್ತಾದದ್ದೇನೆಂದರೆ, ಅವರ‍್ಯಾರಿಗೂ ಈ ಬಗ್ಗೆ ಏನೂ ಮಾಹಿತಿ ಇರಲಿಲ್ಲ. ಅಷ್ಟಕ್ಕೂ ಹೆಚ್ಚಾಗಿ ಇದೊಂದಷ್ಟು ಮಂದಿ ಕಾರ್ಮಿಕರು ವಾಪಾಸ್ ಹೋಗದಿದ್ದರೆ ಯಾರ ಮನೆ ಕೊಚ್ಚಿಹೋಗುತ್ತದೆ ಎಂಬಂತಹ ಧೋರಣೆ ಕಂಡಿತು.
ಪೊಲೀಸ್ ಠಾಣೆಯ ಮುಂದೆ ಕಾರ್ಮಿಕರ ಉದ್ದನೆಯ ಸರತಿ ಸಾಲಿನಲ್ಲಿ ನಿಂತು, ತಾನೇ ಏನಾದರೂ ಮಾಡಲು ಸಾಧ್ಯವೇ ಎಂದು ಪ್ರಯತ್ನಿಸಲು ಹೋದ ಅರಬಿಂಧೋ ಒಂದು ದಿನ ಅವರಿಂದ ಲಾಠಿಯೇಟು ತಿಂದು ನಿರಾಶನಾಗಿ ಮರಳಿ ಬಂದ. ಕಣ್ಣಲ್ಲಿ ನೀರು ತುಂಬಿಕೊಂಡು “ನನ್ನ ಬಳಿ ವೋಟರ್ ಐಡಿ ಇದೆ, ರೇಷನ್ ಕಾರ್ಡ್ ಇದೆ, ಪಾನ್ ಕಾರ್ಡ್ ಇದೆ, ಡ್ರೈವಿಂಗ್ ಲೈಸನ್ಸ್ ಇದೆ…………. ಇವ್ಯಾವುವೂ ನನ್ನ ಗುರುತಿನ ಅಧಿಕೃತ ದಾಖಲೆಗಳಲ್ಲವೇ? ಇವೆಲ್ಲವುಗಳ ಪ್ರಕಾರ ನಾನು ಈ ದೇಶದ ಪ್ರಜೆಯಲ್ಲವೇ? ನಮ್ಮ ರಾಜ್ಯದಲ್ಲಿ ನಮಗೆ ಆಧಾರ್ ಯಾವುದಕ್ಕೂ ಬೇಕಿಲ್ಲ. ಅದನ್ನು ಕಡ್ಡಾಯ ಮಾಡಿಲ್ಲ. ಆದ್ದರಿಂದ ನಾನು ಮಾಡಿಸಿಕೊಂಡಿರಲಿಲ್ಲ; ಇಲ್ಲಿಗೆ ಬಂದು ದುಡಿಯುವಾಗ ಬೇಕಿಲ್ಲದ ಆಧಾರ್, ಈಗ ಮಾತ್ರ ಬೇಕಾಗಿದೆಯೇ? ನಾನು ಮಾತ್ರ ಯಾಕೆ ವಾಪಾಸ್ ಹೋಗಲು ಸಾಧ್ಯವಿಲ್ಲ”? ಎಂದ ಅರಬಿಂಧೋನ ಪ್ರಶ್ನೆಗಳಿಗೆ ನಮ್ಮಲ್ಲಿ ಉತ್ತರವಿರಲಿಲ್ಲ!
ಅವನ ಕಣ್ಣೀರು ಮುಖದ ಗುರುತನ್ನು ಮರೆಮಾಡುತ್ತಿದ್ದ ಮಾಸ್ಕ್‌ನೊಳಗೆ ಇಂಗಿಹೋಯಿತು. ದೇಶದ ಪ್ರಜೆಯಾಗಿ ತನ್ನ ಗುರುತಿನ ಬಗ್ಗೆ ಅವನ ಪ್ರಶ್ನೆಗಳು ದೇಶದ ಬಡವರನ್ನು ಇಲ್ಲದ ಸಮಸ್ಯೆಗಳ ಸುಳಿಗಳಿಗೆ ಸಿಲುಕಿಸುತ್ತಿರುವ ಪ್ರಭುತ್ವಗಳು ಹೆಣೆದಿರುವ ಚಕ್ರವ್ಯೂಹದಲ್ಲಿ ಇಂಗಿಹೋದವು!
ಹೇಗಾದರೂ ಮಾಡಿ ಅರಬಿಂದೋ ಮತ್ತು ಅಂತಹ ದುಡಿಮೆಗಾರರನ್ನು ಅವರೂರಿಗೆ ತಲುಪಿಸಲು ನಮ್ಮ ಪ್ರಯತ್ನ ಮುಂದುವರೆದಿದೆ……… ಅರಬಿಂದೋನ ಕಾಯುವಿಕೆಯಂತೆಯೇ ನಿರಂತರವಾಗಿ………
ಈ ಪ್ರಯತ್ನದಲ್ಲಿ ಯಶಸ್ಸುಗಳಿತ್ತೇವೆಂದು ನಂಬಲು ನಮಗೆ ಯಾವುದೇ ‘ಆಧಾರ’ಗಳಿಲ್ಲ; ಆದರೂ ಪ್ರಯತ್ನ ನಿಲ್ಲುವುದಿಲ್ಲ!!
ಇದನ್ನೂ ಓದಿ: ವಲಸೆಯ ವ್ಯಥೆ: ಈ ಮಹಾವಲಸೆಯ ಮಹಾಘಾತದ ಕೆಲವು ತುಣುಕುಗಳು ನಿಮ್ಮ ಮುಂದೆ..


