ಹಿಂಸಾಚಾರ ಪೀಡಿತ ಮಣಿಪುರದ ಜಿರಿಬಾಮ್ ಜಿಲ್ಲೆಯಲ್ಲಿ ಸಶಸ್ತ್ರದಾರಿಗಳ ಗುಂಪೊಂದು ಪೊಲೀಸ್ ಔಟ್‌ಪೋಸ್ಟ್‌ಗೆ ಮತ್ತು ಹಲವು ಮನೆಗಳಿಗೆ ಬೆಂಕಿ ಹಚ್ಚಿದೆ.
ಬರಾಕ್ ನದಿಯ ದಡದಲ್ಲಿರುವ ಚೋಟೊಬೆಕ್ರಾ ಪ್ರದೇಶದಲ್ಲಿರುವ ಜಿರಿ ಪೊಲೀಸ್ ಔಟ್‌ಪೋಸ್ಟನ್ನು ಸಶಸ್ತ್ರದಾರಿಗಳು ಮಧ್ಯರಾತ್ರಿ 12.30ರ ಸುಮಾರಿಗೆ ಸುಟ್ಟು ಹಾಕಿದ್ದಾರೆ. ಬೆಟ್ಟದ ಮೂಲದ ಬಂದೂಕುಧಾರಿಗಳು ರಾಜ್ಯದ ರಾಜಧಾನಿ ಇಂಫಾಲ್‌ನಿಂದ ಸುಮಾರು 220 ಕಿಮೀ ದೂರದಲ್ಲಿರುವ ಜಿಲ್ಲೆಯ ಮೊಧುಪುರ್ ಪ್ರದೇಶದ ಲಾಮ್ಟಾಯ್ ಖುನೌನಲ್ಲಿ ಕಗ್ಗತ್ತಲಿನಲ್ಲಿ ದಾಳಿಗಳನ್ನು ನಡೆಸಿದ್ದಾರೆ. ಈ ವೇಳೆ ಹಲವಾರು ಮನೆಗಳು ಸುಟ್ಟುಹೋಗಿವೆ. ಹೆಚ್ಚಾಗಿ ಜಿರಿಬಾಮ್ ಜಿಲ್ಲೆಯ ಹೊರವಲಯಗಳಲ್ಲಿ ಮನೆಗಳು ಸುಟ್ಟು ಹೋಗಿದೆ. ಈ ಬಗ್ಗೆ ನಿಖರವಾದ ಸಂಖ್ಯೆಯನ್ನು ಖಚಿತಪಡಿಸಲು ಸಾಧ್ಯವಿಲ್ಲ ಎಂದು ಜಿರಿಬಾನ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಂಡುಕೋರರ ವಿರುದ್ಧದ ಭದ್ರತಾ ಕಾರ್ಯಾಚರಣೆಯಲ್ಲಿ ನೆರವಾಗಲು ಮಣಿಪುರ ಪೊಲೀಸರ ಕಮಾಂಡೋ ತುಕಡಿಯನ್ನು ಶನಿವಾರ ಬೆಳಗ್ಗೆ ಇಂಫಾಲ್‌ನಿಂದ ಜಿರಿಬಾಮ್‌ಗೆ ವಿಮಾನದಲ್ಲಿ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ ಇನ್ನರ್ ಮಣಿಪುರ ಲೋಕಸಭಾ ಕ್ಷೇತ್ರದಿಂದ ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಸಂಸದ ಅಂಗೋಮ್ಚಾ ಬಿಮೋಲ್ ಅಕೋಯ್ಜಮ್, ಜಿರಿಬಾಮ್ ಜಿಲ್ಲೆಯ ಜನರ ಜೀವ ಮತ್ತು ಆಸ್ತಿಯನ್ನು ರಕ್ಷಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಕೋಯ್ಜಮ್, ನಾನು ಜಿರಿಬಾಮ್‌ನ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಅವರು ಹೆಚ್ಚಿನ ಪಡೆಗಳನ್ನು ಸ್ಥಳಕ್ಕೆ ಕಳುಹಿಸಿರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.
ಕುಕಿ ಸಮುದಾಯದ ಬಂಡುಕೋರರು 59 ವರ್ಷದ ವ್ಯಕ್ತಿಯೊಬ್ಬರನ್ನು ಹತ್ಯೆಗೈದ ನಂತರ, ಮಣಿಪುರದಲ್ಲಿ ಮತ್ತೆ ಜನಾಂಗೀಯ ಸಂಘರ್ಷ ಸ್ಫೋಟಗೊಂಡಿದೆ. ಇದರ ಬೆನ್ನಲ್ಲಿ ಸುಮಾರು 239 ಜನರನ್ನು ಅದರಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳನ್ನು ಜಿರಿಬಾಮ್ ಜಿಲ್ಲೆಯ ಗ್ರಾಮಗಳಿಂದ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
59 ವರ್ಷದ ವ್ಯಕ್ತಿಯನ್ನು ಕುಕಿ ಸಮುದಾಯಕ್ಕೆ ಸೇರಿದ ಗುಂಪು ಜೂನ್ 6ರಂದು ಹತ್ಯೆ ಮಾಡಿದ ಬಳಿಕ ಜಿಲ್ಲಾಡಳಿತವು ಜಿಲ್ಲೆಯಲ್ಲಿ ಅನಿರ್ದಿಷ್ಟಾವಧಿ ಕರ್ಫ್ಯೂ ವಿಧಿಸಿತ್ತು. ಮೈತೈ ಸಮುದಾಯಕ್ಕೆ ಪರಿಶಿಷ್ಟ ಪಂಗಡ (ಎಸ್‌ಟಿ) ಸ್ಥಾನಮಾನ ನೀಡುವುದನ್ನು ವಿರೋಧಿಸಿ ಮಣಿಪುರದ ಗುಡ್ಡಗಾಡು ಜಿಲ್ಲೆಗಳಲ್ಲಿ ಮೇ 3, 2023ರಂದು ‘ಬುಡಕಟ್ಟು ಐಕಮತ್ಯ ಮೆರವಣಿಗೆ’ ಆಯೋಜಿಸಲಾಗಿತ್ತು. ಇದು ಬಳಿಕ ಜನಾಂಗೀಯ ಹಿಂಸಾಚಾರಕ್ಕೆ ತಿರುಗಿತ್ತು. ಮೇ.3ರಿಂದ ಮಣಿಪುರದಲ್ಲಿ ಕುಕಿಗಳು ಮತ್ತು ಮೈತೈ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಿಂದ 200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ರಾಜ್ಯದಲ್ಲಿ ಕನಿಷ್ಠ 60,000 ಜನರು ನಿರಾಶ್ರಿತರಾಗಿದ್ದಾರೆ.
ಇದನ್ನು ಓದಿ: ರಾಹುಲ್ ಗಾಂಧಿಗೆ ಲೋಕಸಭೆಯ ವಿಪಕ್ಷ ನಾಯಕನ ಪಟ್ಟ?


