Homeಕರ್ನಾಟಕಕಾರ್ಮಿಕರ ಕನಿಷ್ಟ ವೇತನಕ್ಕೆ ಮಾದರಿಯಾಗುತ್ತಾ ಕರ್ನಾಟಕ?

ಕಾರ್ಮಿಕರ ಕನಿಷ್ಟ ವೇತನಕ್ಕೆ ಮಾದರಿಯಾಗುತ್ತಾ ಕರ್ನಾಟಕ?

- Advertisement -
- Advertisement -

ಕರ್ನಾಟಕ ರಾಜ್ಯ ಸರ್ಕಾರ 2025ರ ಏಪ್ರಿಲ್ 11ರಂದು ವಿವಿಧ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಕನಿಷ್ಟ ವೇತನವನ್ನು ನಿಗದಿಪಡಿಸಿ ಕರಡು ಅಧಿಸೂಚನೆ ಹೊರಡಿಸಿದೆ.

ಈ ಅಧಿಸೂಚನೆಯು ಕೌಶಲ್ಯ ಮಟ್ಟ ಮತ್ತು ಉದ್ಯಮದ ಪ್ರಕಾರ ಕಾರ್ಮಿಕರಿಗೆ ನೀಡಬೇಕಾದ ಕನಿಷ್ಟ ದೈನಂದಿನ ಮತ್ತು ಮಾಸಿಕ ವೇತನದ ವಿವರಗಳನ್ನು ಒಳಗೊಂಡಿದೆ.

ಕರಡು ಅಧಿಸೂಚನೆಯ ಪ್ರಕಾರ, ಶೌಚಾಲಯಗಳು, ಸ್ನಾನಗೃಹಗಳು, ಒಳಚರಂಡಿಗಳನ್ನು ಶುಚಿ ಮಾಡುವ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ವಲಯ-1ರಲ್ಲಿ ದಿನಕ್ಕೆ 989 ರೂಪಾಯಿ, ತಿಂಗಳಿಗೆ 25,714 ರೂ., ವಲಯ-2ರಲ್ಲಿ ದಿನಕ್ಕೆ 899 ರೂ. ತಿಂಗಳಿಗೆ 23,376.43 ರೂ., ವಲಯ-3ರಲ್ಲಿ ದಿನಕ್ಕೆ 817.36 ರೂ. ಮತ್ತು ತಿಂಗಳಿಗೆ 21,251.30 ರೂ. ನಿಗದಿಪಡಿಸಲಾಗಿದೆ.

ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ (ಉಷ್ಣ ವಿದ್ಯುತ್ ಸ್ಥಾವರ) ಕೆಲಸ ಮಾಡುವ ಅತಿ ಕುಶಲ ಕಾರ್ಮಿಕರಿಗೆ ದಿನಕ್ಕೆ 1,316.36 ರೂ., ತಿಂಗಳಿಗೆ 34,225.42 ರೂ., ಕುಶಲ ಕಾರ್ಮಿಕರಿಗೆ ದಿನಕ್ಕೆ 1,196 ರೂ., ತಿಂಗಳಿಗೆ 31,114.02 ರೂ., ಅರೆ ಕುಶಲ ಕಾರ್ಮಿಕರಿಗೆ 1,087 ರೂ., ತಿಂಗಳಿಗೆ 28,285.47 ರೂ., ಅಕುಶಲ ಕಾರ್ಮಿಕರಿಗೆ 989 ರೂ., ತಿಂಗಳಿಗೆ 25,714.07 ರೂ. ನಿಗದಿಮಾಡಲಾಗಿದೆ.

ಜಲ ಮತ್ತು ಸೌರ ವಿದ್ಯುತ್ ಸ್ಥಾವರಗಳಲ್ಲಿ ಕೆಲಸ ಮಾಡುವ ಅತಿ ಕುಶಲ ಕಾರ್ಮಿಕರಿಗೆ ದಿನಕ್ಕೆ 1,196.69 ರೂ., ತಿಂಗಳಿಗೆ 31,114.02 ರೂ., ಕುಶಲ ಕಾರ್ಮಿಕರಿಗೆ ದಿನಕ್ಕೆ 1,087 ರೂ., ತಿಂಗಳಿಗೆ 28,285 ರೂ., ಅರೆ ಕುಶಲ ಕಾರ್ಮಿಕರಿಗೆ ದಿನಕ್ಕೆ 989 ರೂ., ತಿಂಗಳಿಗೆ 25,714 ರೂ., ಅಕುಶಲ ಕಾರ್ಮಿಕರಿಗೆ ದಿನಕ್ಕೆ 899 ರೂ., ತಿಂಗಳಿಗೆ 23,376 ರೂ.ನಿಗದಿಪಡಿಸಲಾಗಿದೆ.

ಫೌಂಡ್ರಿ ಉದ್ಯಮದಲ್ಲಿ, ಕೌಶಲ್ಯ ಮಟ್ಟ ಮತ್ತು ವಲಯದ ಪ್ರಕಾರ ವೇತನದ ಪ್ರಮಾಣ ವಿಭಜಿಸಲಾಗಿದೆ. ಉದಾಹರಣೆಗೆ, ವಲಯ 1ರಲ್ಲಿ ಅತಿಕುಶಲ ಕಾರ್ಮಿಕರಿಗೆ ದಿನಕ್ಕೆ 1,316.36 ರೂ., ಮತ್ತು ತಿಂಗಳಿಗೆ 34,225.42 ರೂ. ವೇತನ ನಿಗದಿಯಾಗಿದೆ. ಇದೇರೀತಿ, ವಲಯ 2 ಮತ್ತು 3ರಲ್ಲಿ ವೇತನದ ಪ್ರಮಾಣ ಕ್ರಮವಾಗಿ ಕಡಿಮೆಯಾಗಿದೆ.

ಇತರ ಉದ್ಯಮಗಳಲ್ಲಿ ಕೂಡ ಕೌಶಲ್ಯ ಮಟ್ಟದ ಪ್ರಕಾರ ವೇತನದ ಪ್ರಮಾಣ ನಿಗದಿಪಡಿಸಲಾಗಿದೆ. ಅತಿಕುಶಲ ಕಾರ್ಮಿಕರಿಗೆ ದಿನಕ್ಕೆ ರೂ. 989 ರಿಂದ 1,196.69 ರವರೆಗೆ ಮತ್ತು ಅಕುಶಲ ಕಾರ್ಮಿಕರಿಗೆ ದಿನಕ್ಕೆ ರೂ. 743 ರಿಂದ 899.09ರವರೆಗೆ ವೇತನ ನಿಗದಿಯಾಗಿದೆ.

ವಲಯ1 ರಲ್ಲಿರುವ ಎಲ್ಲಾ ಉದ್ದಿಮೆಗಳ ಹೆಚ್ಚು ಕೌಶಲ್ಯಪೂರ್ಣ ಕೆಲಸಗಾರರಿಗೆ ಪ್ರಸ್ತಾವಿತ ಮಾಸಿಕ ಕನಿಷ್ಠ ವೇತನ 31,114.02 ರೂಪಾಯಿ ಆಗಿದೆ.

ಕಾರ್ಮಿಕ ಇಲಾಖೆಯ ಕರಡು ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾದ ವೇತನವು ಅಸ್ತಿತ್ವದಲ್ಲಿರುವ ವೇತನಕ್ಕಿಂತ ಶೇ. 70ರಷ್ಟು ಹೆಚ್ಚಳವಾಗಿದ್ದು, ಇದರಲ್ಲಿ ವೇರಿಯಬಲ್ ಡಿಯರ್ನೆಸ್ ವೇಜಸ್ ಕೂಡ ಸೇರಿದೆ. ಬೆಲೆ ಏರಿಕೆ ಲಕ್ಷಾಂತರ ಕುಟುಂಬಗಳ ಮೇಲೆ ಪರಿಣಾಮ ಬೀರಿರುವ ಸಮಯದಲ್ಲಿ ವೇತನ ಪರಿಷ್ಕರಣೆಯ ಕರಡು ಅಧಿಸೂಚನೆ ಹೊರಡಿಸಿರುವುದು ಮಹತ್ವ ಪಡೆದುಕೊಂಡಿದೆ.

ಕರಡು ಅಧಿಸೂಚನೆಯು ಇತ್ತೀಚಿನ ವರ್ಷಗಳಲ್ಲಿ ಸೇರಿಸಲಾದ 18 ವರ್ಗದ ಕಾರ್ಮಿಕರನ್ನು ಒಳಗೊಂಡಂತೆ 100 ಅನುಸೂಚಿತ ಉದ್ದಿಮೆಗಳಲ್ಲಿ ತೊಡಗಿರುವ ಅಂದಾಜು ಎರಡು ಕೋಟಿ ಕಾರ್ಮಿಕರನ್ನು ಒಳಗೊಳ್ಳುತ್ತದೆ. ಇದು ಮೆ.ರೆಪ್ಟಕೋಸ್ ಬ್ರೆಟ್ ಅಂಡ್ ಕಂಪನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ನಿರ್ದೇಶನಗಳನ್ನು ಆಧರಿಸಿದೆ.

ಕನಿಷ್ಠ ವೇತನ ಕಾಯ್ದೆಯಡಿ ಐದು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಕಡ್ಡಾಯವಾಗಿದೆ. ಕೊನೆಯ ವೇತನ ಪರಿಷ್ಕರಣೆಯನ್ನು 2022ರಲ್ಲಿ ಬಿಜೆಪಿ ಸರ್ಕಾರ ಮಾಡಿತ್ತು. ಆಗ 34 ಅನುಸೂಚಿತ ಉದ್ದಿಮೆಗಳಲ್ಲಿ ಕಾರ್ಮಿಕರ ವೇತನವನ್ನು ಶೇ. 5 ರಿಂದ ಶೇ 10 ರಷ್ಟು ಹೆಚ್ಚಳ ಮಾಡಲಾಗಿತ್ತು. ಇದೀಗ 2022ರ ಅಧಿಸೂಚನೆಯನ್ನು ಹಿಂತೆಗೆದುಕೊಂಡು ಹೊಸ ಕರಡು ಅಧಿಸೂಚನೆ ಹೊರಡಿಸಲಾಗಿದೆ.

ಈಗ ಪ್ರಕಟಿಸಿರುವ ಕರಡು ಅಧಿಸೂಚನೆಗೆ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಕೋರಲಾಗಿದೆ. ಇದಕ್ಕೆ ಎರಡು ತಿಂಗಳ ಸಮಯಾವಕಾಶ ನೀಡಲಾಗಿದೆ. ನಂತರ ಅಂತಿಮ ಅಧಿಸೂಚನೆ ಹೊರಡಿಸುವ ಮೊದಲು ಉದ್ಯೋಗದಾತರು, ಕಾರ್ಮಿಕ ಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ ತ್ರಿಪಕ್ಷೀಯ ವೇದಿಕೆಯಾದ ಕನಿಷ್ಠ ವೇತನ ಸಲಹಾ ಮಂಡಳಿಯ ಮುಂದೆ ಇಡಲಾಗುತ್ತದೆ. ವೇತನ ಹೆಚ್ಚಳದ ಅಂತಿಮ ಅಧಿಸೂಚನೆ ಹೊರ ಬೀಳುವ ಮುನ್ನ, ಈ ಇಡೀ ಪ್ರಕ್ರಿಯೆ ಕನಿಷ್ಠ ಮೂರು ತಿಂಗಳು ಸಮಯ ತೆಗೆದುಕೊಳ್ಳುವ ನಿರೀಕ್ಷೆಯಿದೆ.

ಮತ್ತೆ ಮೂರು ವಲಯಗಳಿಗೆ ವಾಪಸ್

ಕರಡು ಅಧಿಸೂಚನೆಯಲ್ಲಿ ವೇತನ ಲೆಕ್ಕಾಚಾರಕ್ಕಾಗಿ ಅಸ್ತಿತ್ವದಲ್ಲಿರುವ ನಾಲ್ಕು ವಲಯಗಳನ್ನು ಮೂರು ವಲಯಗಳನ್ನಾಗಿ ವರ್ಗೀಕರಿಸಲಾಗಿದೆ. ಈ ಹಿಂದೆ ಕೊನೆಯ ವೇತನ ಪರಿಷ್ಕರಣೆ ವೇಳೆ ಸೇರಿಸಲಾದ ನಾಲ್ಕನೇ ವಲಯವು ಗೊಂದಲಕ್ಕೆ ಕಾರಣವಾಗಿತ್ತು. ಕೆಲವು ಸಂದರ್ಭಗಳಲ್ಲಿ ವೇತನವನ್ನು ಕಡಿಮೆ ಮಾಡಿತ್ತು. ಹಾಗಾಗಿ, ಈ ಬಾರಿ ಮೂರು ವಲಯಗಳನ್ನು ಗುರುತಿಸಲಾಗಿದೆ. ಅವುಗಳು ಹೀಗಿವೆ..

ವಲಯ-1: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಬೆಂಗಳೂರು ನಗರ ಜಿಲ್ಲೆಯ ಪ್ರದೇಶಗಳು.

ವಲಯ-2: ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲಾ ಪ್ರದೇಶಗಳನ್ನು ಹೊರತುಪಡಿಸಿ, ರಾಜ್ಯದ ಇತರೆ ಮಹಾನಗರ ಪಾಲಿಕೆಗಳು ಹಾಗೂ ಎಲ್ಲಾ ಜಿಲ್ಲಾ ಕೇಂದ್ರಗಳು

ವಲಯ-3: ವಲಯ-1 ಮತ್ತು 2ರಲ್ಲಿ ನಮೂದಿಸಿದ ಪ್ರದೇಶಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಪ್ರದೇಶಗಳು.

2022ರ ವೇತನ ಪರಿಷ್ಕರಣೆ ವೇಳೆ ಗುರುತಿಸಿದ ವಲಯಗಳ ವಿವರ ಕೆಳಗಿದೆ.

ವಲಯ-1: ಬೆಂಗಳೂರು ನಗರ ಪ್ರದೇಶ, ಬೆಂಗಳೂರು ಗ್ರಾಮಾಂತರ, ಮಂಗಳೂರು, ಮೈಸೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮುಂತಾದ ಪ್ರಮುಖ ನಗರಗಳು ಮತ್ತು ಜಿಲ್ಲಾ ಕೇಂದ್ರಗಳು.

ವಲಯ-2: ರಾಜ್ಯದ ಇತರ ನಗರ ಪ್ರದೇಶಗಳು ಮತ್ತು ಪಟ್ಟಣಗಳು. ಉದಾಹರಣೆಗೆ : ಶಿವಮೊಗ್ಗ, ದಾವಣಗೆರೆ, ತುಮಕೂರು, ಕೋಲಾರ ಮುಂತಾದವು.

ವಲಯ-3: ರಾಜ್ಯದ ಗ್ರಾಮೀಣ ಪ್ರದೇಶಗಳು. ಆದರೆ ತಾಲೂಕು ಕೇಂದ್ರಗಳು ಮತ್ತು ಕೆಲವು ಸಣ್ಣ ಪಟ್ಟಣಗಳನ್ನು ಸೇರಿಸಲಾಗಿದೆ.

ವಲಯ-4: ರಾಜ್ಯದ ದೂರದ ಗ್ರಾಮೀಣ ಪ್ರದೇಶಗಳು ಮತ್ತು ತೀರಾ ಹಿಂದುಳಿದ ಪ್ರದೇಶಗಳು. ಈ ವಲಯದಲ್ಲಿ ಜೀವನ ವೆಚ್ಚವು ಅತ್ಯಂತ ಕಡಿಮೆ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಇಲ್ಲಿ ಕನಿಷ್ಠ ವೇತನವು ಎಲ್ಲಾ ವಲಯಗಳಿಗಿಂತ ಕನಿಷ್ಟವಾಗಿರುತ್ತದೆ.

ಮೇಲೆ ವಿವರಿಸಿರುವ ಉದ್ಯೋಗ ವಲಯಗಳನ್ನು ಆ ಪ್ರದೇಶ ಜೀವನ ವೆಚ್ಚ ಮತ್ತು ಆರ್ಥಿಕ ಚಟುವಟಿಕೆಗಳ ಆಧಾರದ ಮೇಲೆ ವಿಂಗಡಿಸಲಾಗಿದೆ. ಮೊದಲ ಬಾರಿಗೆ, ಎಲ್ಲಾ ಅನುಸೂಚಿತ ಉದ್ದಿಮೆಗಳ ಕನಿಷ್ಠ ವೇತನ ಪರಿಷ್ಕರಣೆಯನ್ನು ಒಂದೇ ಅಧಿಸೂಚನೆಯಲ್ಲಿ ಮಾಡಲಾಗಿದೆ. ಇದನ್ನೇ ಕಾರ್ಮಿಕ ಸಂಘಗಳು ಕೂಡ ಕೋರಿದ್ದವು.

ಧಾರ್ಮಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಅನ್ವಯ

ದೇವಾಲಯಗಳು, ಮಠಗಳು, ಮಸೀದಿಗಳು, ಚರ್ಚ್‌ಗಳು, ಗುರುದ್ವಾರಗಳು, ಬಸದಿಗಳು, ಬುದ್ಧ ವಿಹಾರಗಳು, ಆರ್ಯ ಸಮಾಜ, ಥಿಯೋಸಾಫಿಕಲ್ ಸೊಸೈಟಿ ಮತ್ತು ಇಸ್ಕಾನ್ ಸೇರಿದಂತೆ ಧಾರ್ಮಿಕ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಮೊದಲ ಬಾರಿಗೆ ಕನಿಷ್ಟ ವೇತನ ನೀತಿಯನ್ನು ವಿಸ್ತರಿಸಲಾಗಿದೆ.

ಹೊಸದಾಗಿ ಸೇರ್ಪಡೆಯಾದ 18 ಹೊಸ ಅನುಸೂಚಿತ ಉದ್ಯೋಗಗಳಲ್ಲಿ ಇವೂ ಸೇರಿವೆ. ಉಳಿದಂತೆ ಖಾಸಗಿ ಶಾಲಾ, ಕಾಲೇಜುಗಳು ಮತ್ತು ತರಬೇತಿ ಸಂಸ್ಥೆಗಳಲ್ಲಿನ ಬೋಧಕೇತರ ಸಿಬ್ಬಂದಿ ಸೇರಿದ್ದಾರೆ. ಇ-ಕಾಮರ್ಸ್ ಕಂಪನಿಗಳು ಮತ್ತು ಕೊರಿಯರ್ ಕಂಪನಿಗಳ ಸಿಬ್ಬಂದಿಯನ್ನು ಸಹ ಸೇರಿಸಲಾಗಿದೆ.

ಎಐಟಿಯುಸಿ ಕಾನೂನು ಸಮರ

ಕರ್ನಾಟಕ ರಾಜ್ಯಾದ್ಯಂತ ಕನಿಷ್ಟ ವೇತನ ಕಾಯ್ದೆ 1984ರ ಕಲಂ 5(1) (ಎ) ಹಾಗೂ 5(1) ಬಿ ಅಡಿಯಲ್ಲಿ ಇದುವರೆಗೆ 81 ಅನುಸೂಚಿತ ಉದ್ದಿಮೆಗಳಿಗೆ ಪ್ರತ್ಯೇಕವಾದ ವೇತನ ದರಗಳನ್ನು ನಿಗದಿಪಡಿಸಿ ಅಥವಾ ಪರಿಷ್ಕರಿಸಿ ಅಧಿಸೂಚನೆ ಹೊರಡಿಸಲಾಗುತ್ತಿತ್ತು.

2022-2023ನೇ ಸಾಲಿನಲ್ಲಿ ವಿವಿಧ ಅನುಸೂಚಿತ ಉದ್ದಿಮೆಗಳಿಗೆ ಸಂಬಂಧಿಸಿದ ಒಟ್ಟು 34 ಅನುಸೂಚಿತ ಉದ್ದಿಮೆಗಳಿಗೆ ಈಗಾಗಲೇ ಚಾಲ್ತಿಯಲ್ಲಿದ್ದ ಕನಿಷ್ಟ ವೇತನಕ್ಕೆ ಹೆಚ್ಚುವರಿಯಾಗಿ ಶೇ.5ರಿಂದ 10ರಷ್ಟು ಏರಿಕೆ ಮಾಡಿ ದರ ಪರಿಷ್ಕರಿಸಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.

ಈ ಅಧಿಸೂಚನೆಯನ್ನು ಪ್ರಶ್ನಿಸಿ ಎಐಟಿಯುಸಿ ಕಾರ್ಮಿಕ ಸಂಘ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠಕ್ಕೆ ರಿಟ್ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸರ್ಕಾರದ ಅಧಿಸೂಚನೆಯನ್ನು ರದ್ದುಪಡಿಸಿ, ಮೆ.ರೆಪ್ಟಕೋಸ್ ಬ್ರೆಟ್ ಅಂಡ್ ಕಂಪನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಮಾರ್ಗಸೂಚಿಗಳ ಅನುಸಾರ ಕನಿಷ್ಠ ವೇತನ ಲೆಕ್ಕಾಚಾರ ಮಾಡಿ ಹೊಸದಾಗಿ ಅಧಿಸೂಚನೆ ಹೊರಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿವಿಧ ಆಡಳಿತ ವರ್ಗದವರು ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ವಿಭಾಗೀಯ ಪೀಠ ಪ್ರಕರಣವನ್ನು ಏಕಸದಸ್ಯ ಪೀಠಕ್ಕೆ ಹಿಂದಿರುಗಿಸಿ, ಆಡಳಿತ ವರ್ಗದವರಿಗೆ ಅವಕಾಶ ನೀಡಿ 10 ವಾರಗಳ ಕಾಲ ಮಿತಿಯೊಳಗೆ ನಿಯಮಾನುಸಾರ ತೀರ್ಪು ಹೊರಡಿಸುವಂತೆ ನಿರ್ದೇಶನ ನೀಡಿತ್ತು.

ಈ ನಡುವೆ 2022 -23ನೇ ಸಾಲಿನಲ್ಲಿ 34 ಅನುಸೂಚಿತ ಉದ್ದಿಮೆಗಳಿಗೆ ಕನಿಷ್ಟ ವೇತನ ದರಗಳನ್ನು ಪರಿಷ್ಕರಿಸಿ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ಹಿಂಪಡೆದ ಸರ್ಕಾರ, ರೆಪ್ಟಕೋಸ್ ಬ್ರೆಟ್ ಅಂಡ್ ಕಂಪನಿ ಪ್ರಕರಣದ ಮಾನದಂಡಗಳನ್ವಯ ಹೊಸ ಅಧಿಸೂಚನೆ ಹೊರಡಿಸಲು ಕಾನೂನು ಇಲಾಖೆಯ ಅಭಿಪ್ರಾಯ ಕೋರಿತ್ತು.

ಕಾನೂನು ಇಲಾಖೆ ಯಾವುದೇ ಅಡೆತಡೆ ಇಲ್ಲ ಎಂದು ತಿಳಿಸಿದ ಹಿನ್ನೆಲೆ, ರೆಪ್ಟಕೋಸ್ ಬ್ರೆಟ್ ಅಂಡ್ ಕಂಪನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದ ಮಾರ್ಗಸೂಚಿಗಳ ಪ್ರಕಾರ ಹೊಸ ಅಧಿಸೂಚನೆ ಹೊರಡಿಸಲಾಗಿದೆ.

ವಿವಿಧ ಅನುಸೂಚಿತ ಉದ್ದಿಮೆಗಳಲ್ಲಿ ವಲಯವಾರು ಹಾಗೂ ಕುಶಲವಾರು ವೇತನ ದರದಲ್ಲಿ ವ್ಯತ್ಯಾಸಗಳು ಕಂಡುಬಂದ ಹಿನ್ನೆಲೆ ಹಾಗೂ ಎಲ್ಲಾ ವರ್ಗದ ಕಾರ್ಮಿಕರಿಗೂ ಸಮಾನವಾದ ಕನಿಷ್ಠ ವೇತನ ದೊರೆಯಬೇಕೆಂಬ ಸದುದ್ದೇಶದಿಂದ ಈ ಹಿಂದೆ ಅನುಸೂಚಿತ ಉದ್ದಿಮೆವಾರು ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸುತ್ತಿದ್ದ ಕ್ರಮದ ಬದಲಾಗಿ ಏಕರೂಪ ಅಧಿಸೂಚನೆ ಹೊರಡಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಹೊಸ ಅಧಿಸೂಚನೆ ಸ್ವಾಗತಿಸಿದ ಎಐಟಿಯುಸಿ

ಸರ್ಕಾರದ ಹೊಸ ಅಧಿಸೂಚನೆಯನ್ನು ಎಐಟಿಯುಸಿ ಕರ್ನಾಟಕ ರಾಜ್ಯ ಘಟಕ ಸ್ವಾಗತಿಸಿದೆ. ಈ ಕುರಿತು ನ್ಯಾಯಪಥ ಜೊತೆ ಮಾತನಾಡಿರುವ ಘಟಕದ ಕಾರ್ಯದರ್ಶಿ ಎಂ. ಸತ್ಯಾನಂದ ಅವರು, “ಸರ್ಕಾರದ ಕರಡು ಅಧಿಸೂಚನೆಯನ್ನು ನಾವು ಸ್ವಾಗತಿಸುತ್ತೇವೆ. ಇದು ವೈಜ್ಞಾನಿಕವಾಗಿದ್ದು, ನಾವು ಹೋರಾಟ ಮಾಡುತ್ತಿದ್ದ ಪ್ರಮುಖ ಬೇಡಿಕೆಯೊಂದನ್ನು ಈಡೇರಿಸಿದಂತಾಗಿದೆ. ಇದು ಜಾರಿಯಾದರೆ ಕರ್ನಾಟಕ ಇಡೀ ದೇಶದಲ್ಲೇ ಕಾರ್ಮಿಕರಿಗೆ ಅತಿಹೆಚ್ಚು ಕನಿಷ್ಟ ವೇತನ ನಿಗದಿಪಡಿಸಿದ ರಾಜ್ಯವಾಗಲಿದೆ” ಎಂದಿದ್ದಾರೆ.

ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ

ಈ ಕುರಿತು ನ್ಯಾಯಪಥ ಜೊತೆ ಮಾತನಾಡಿರುವ ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ, ”ಎಲ್ಲಾ ಉದ್ದಿಮೆಗಳಿಗೆ ಒಂದೇ ಕರಡು ಅಧಿಸೂಚನೆ ಹೊರಡಿಸಿರುವುದು ಸ್ವಾಗತಾರ್ಹ. ಆದರೆ, ಅದರಲ್ಲಿ ಕೆಲವೊಂದು ಗೊಂದಲಗಳಿವೆ. ಅವುಗಳನ್ನು ಸರಿಪಡಿಸಬೇಕಿದೆ. ಏಪ್ರಿಲ್ 11ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ಡಿಎ ಸೇರಿಸಿರಲಿಲ್ಲ. ನಾವು ಪತ್ರ ಬರೆದ ಬಳಿಕ ಅದನ್ನು ಸೇರಿಸಿ ಏಪ್ರಿಲ್ 19ರಂದು ಹೊಸ ಅಧಿಸೂಚನೆ ಹೊರಡಿಸಿದ್ದಾರೆ. ಇನ್ನು ಸಾಮಾನ್ಯ ಕನಿಷ್ಟ ವೇತನವನ್ನು 31 ಸಾವಿರಕ್ಕೆ ನಿಗದಿ ಮಾಡಲಾಗಿದೆ. ಅದನ್ನು 36 ಸಾವಿರಕ್ಕೆ ಏರಿಕೆ ಮಾಡಬೇಕು. ಇನ್ನು ಬೀಡಿ ಕಾರ್ಮಿಕರು, ತೋಟಗಳಲ್ಲಿ ದುಡಿಯುವವರು ಮತ್ತು ಗಾರ್ಮೆಂಟ್ಸ್ ಕಾರ್ಮಿಕರ ವೇತನ ನಿಗದಿ ಮಾಡಿಲ್ಲ. ಅದು ಸರ್ಕಾರದ ವಿವೇಚನೆಗೆ ಬಿಟ್ಟಿದ್ದು ಎಂದಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ. ನಮ್ಮ ಆಕ್ಷೇಪಣೆಗಳನ್ನು ಈಗಾಗಲೇ ಸಲ್ಲಿಸಿದ್ದೇವೆ. 60 ದಿನಗಳ ಸಮಯಾವಕಾಶ ಕೊಟ್ಟಿದ್ದಾರೆ” ಎಂದು ತಿಳಿಸಿದ್ದಾರೆ.

“ಲೆಕ್ಕಾಚಾರದ ಪ್ರಕಾರ ಸಾಮಾನ್ಯ ಕನಿಷ್ಟ ವೇತನ 42 ಸಾವಿರ ರೂಪಾಯಿ ಆಗಬೇಕು. ಆದರೆ, ಸರ್ಕಾರದ ಕರಡು ಅಧಿಸೂಚನೆಯಲ್ಲಿ 31 ಸಾವಿರ ಇದೆ. ಹಾಗಾಗಿ, ಕನಿಷ್ಟ ವೇತನ ನಿಗದಿ ಸರಿಯಾಗಿಲ್ಲ. ಕರಡು ಅಧಿಸೂಚನೆಯ ಅನುಸೂಚಿ 3ರಲ್ಲಿ ಹೊಸದಾಗಿ ಸೇರ್ಪಡೆಗೊಳಿಸಿದ್ದು ಎಂದು ಉಲ್ಲೇಖಿಸಿರುವ ಉದ್ದಿಮೆಗಳಿಗೆ ಕನಿಷ್ಟ ವೇತನ ನಿಗದಿ ಸರ್ಕಾರದ ವಿವೇಚನೆಗೆ ಬಿಟ್ಟಿದ್ದು ಎಂದಿದೆ. ಈ ಕ್ರಮ ಸರಿಯಲ್ಲ. ಸರ್ಕಾರ ಆ ಉದ್ದಿಮೆಗಳ ಕನಿಷ್ಟ ವೇತನವನ್ನು ಘೋಷಿಸಬೇಕು. ಕನಿಷ್ಟ ವೇತನ ನಿಗದಿ ಮಾಡುವಾಗ ಬೀಡಿ, ತೋಟಗಾರಿಕೆ ಮತ್ತು ಗಾರ್ಮೆಂಟ್ಸ್ ಕಾರ್ಮಿಕರನ್ನು ಕೈ ಬಿಡಲಾಗಿದೆ. ಹೆಚ್ಚಿನ ಕಾರ್ಮಿಕರು, ವಿಶೇಷವಾಗಿ ಮಹಿಳೆಯರು ಈ ಉದ್ದಿಮೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ, ಆ ಕಾರ್ಮಿಕರ ಕನಿಷ್ಟ ವೇತನವನ್ನೂ ನಿಗದಿ ಮಾಡಬೇಕು” ಎಂದು ಎಐಸಿಸಿಟಿಯು ಸಂಘಟನೆಯ ಅಡ್ವೊಕೇಟ್ ಮೈತ್ರೇಯಿ ಕೃಷ್ಣನ್ ಅವರು ಹೇಳಿದ್ದಾರೆ.

ಏನಿದು ಕಾರ್ಮಿಕರು vs ಮೆ.ರೆಪ್ಟಕೋಸ್ ಬ್ರೆಟ್ ಅಂಡ್ ಕಂಪನಿ ಪ್ರಕರಣ (Workmen vs Reptakos Brett & Co. Ltd) ರಾಜ್ಯ ಸರ್ಕಾರ ವಿವಿಧ ಉದ್ದಿಮೆಗಳ ಕಾರ್ಮಿಕರಿಗೆ ಕನಿಷ್ಠ ವೇತನ ನಿಗದಿ ಮಾಡಿ ಹೊರಡಿಸಿರುವ ಕರಡು ಅಧಿಸೂಚನೆ 1991-92ರಲ್ಲಿ ಕಾರ್ಮಿಕರು vs ಮೆ.ರೆಪ್ಟಕೋಸ್ ಬ್ರೆಟ್ ಅಂಡ್ ಕಂಪನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳು ಮತ್ತು ಸೂಚಿಸಿದ ಮಾನದಂಡಗಳನ್ನು ಅನುಸರಿಸಿದೆ. ಕಾರ್ಮಿಕರು vs ಮೆ.ರೆಪ್ಟಕೋಸ್ ಬ್ರೆಟ್ ಅಂಡ್ ಕಂಪನಿ ಪ್ರಕರಣ ಕಾರ್ಮಿಕ ಕಾನೂನು ಮತ್ತು ಕನಿಷ್ಟ ವೇತನಕ್ಕೆ ಸಂಬಂಧಿಸಿದ ಮಹತ್ವದ ಒಂದು ಪ್ರಕರಣವಾಗಿದೆ. ಇದರಲ್ಲಿ ಸುಪ್ರೀಂ ಕೋರ್ಟ್ ಕಾರ್ಮಿಕರ ಪರ ತೀರ್ಪು ನೀಡಿತ್ತು. ಅಲ್ಲದೆ, ಕಾರ್ಮಿಕರ ಕನಿಷ್ಠ ವೇತನಕ್ಕೆ ಸಂಬಂಧಿಸಿದಂತೆ ಇಡೀ ದೇಶಕ್ಕೆ ಒಂದು ಮಾರ್ಗಸೂಚಿಯನ್ನು ರೂಪಿಸಿತ್ತು.

ಮೈತ್ರೇಯಿ ಕೃಷ್ಣನ್

ರೆಪ್ಟಕೋಸ್ ಬ್ರೆಟ್ ಅಂಡ್ ಕಂಪನಿ ಲಿಮಿಟೆಡ್ ಒಂದು ಔಷಧೀಯ ಮತ್ತು ಆಹಾರ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿರುವ ಕಂಪನಿಯಾಗಿದ್ದು, ಇದು ಚೆನ್ನೈನಲ್ಲಿ 1959ರಲ್ಲಿ ಸ್ಥಾಪಿತವಾದ ಕಾರ್ಖಾನೆಯನ್ನು ಹೊಂದಿದೆ. ಈ ಕಾರ್ಖಾನೆಯ ಕಾರ್ಮಿಕರು ತಮ್ಮ ತುಟ್ಟಿಭತ್ಯೆ (Dearness Allowance – DA) ಯೋಜನೆಯನ್ನು ಕಂಪನಿಯು ಪರಿಷ್ಕರಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಕಂಪನಿಯು 30 ವರ್ಷಗಳಿಂದ ಜಾರಿಯಲ್ಲಿದ್ದ ಡಬಲ್-ಲಿಂಕ್ಡ್ ತುಟ್ಟಿಭತ್ಯೆ ಯೋಜನೆಯನ್ನು (ಜೀವನ ವೆಚ್ಚ ಸೂಚ್ಯಂಕ ಮತ್ತು ಮೂಲ ವೇತನಕ್ಕೆ ಸಂಬಂಧಿಸಿದ್ದು) ರದ್ದುಗೊಳಿಸಿ, ಕಾರ್ಮಿಕರಿಗೆ ನಷ್ಟವಾಗುವಂತಹ ಹೊಸ ಯೋಜನೆಯನ್ನು ಜಾರಿಗೆ ತಂದಿತ್ತು. ಈ ವಿಷಯ ಕೈಗಾರಿಕಾ ಟ್ರಿಬ್ಯೂನಲ್‌ಗೆ ತಲುಪಿತ್ತು. ಕಾರ್ಮಿಕರು ಈ ಬದಲಾವಣೆಯನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಸುಪ್ರೀಂಕೋರ್ಟ್‌ನ ತೀರ್ಪಿನ ಮುಖ್ಯಾಂಶಗಳು

ಕನಿಷ್ಟ ವೇತನದ ಪರಿಕಲ್ಪನೆ

1957ರ ಭಾರತೀಯ ಕಾರ್ಮಿಕ ಸಮ್ಮೇಳನದ ತ್ರಿಪಕ್ಷೀಯ ಸಮಿತಿಯಿಂದ ಸ್ವೀಕರಿಸಲಾದ ಕನಿಷ್ಠ ವೇತನದ ಮಾನದಂಡಗಳನ್ನು ಸುಪ್ರೀಕೋರ್ಟ್ ಅನುಮೋದಿಸಿದೆ. ಈ ಮಾನದಂಡಗಳು ಒಂದು ಕಾರ್ಮಿಕ ಕುಟುಂಬದ ಮೂಲಭೂತ ಅಗತ್ಯಗಳನ್ನು (ಆಹಾರ, ಬಟ್ಟೆ, ವಸತಿ, ಇಂಧನ ಇತ್ಯಾದಿ) ಒಳಗೊಂಡಿವೆ. ಕೋರ್ಟ್ ಕನಿಷ್ಠ ವೇತನವು ಕಾರ್ಮಿಕರ ಮಕ್ಕಳ ಶಿಕ್ಷಣ, ವೈದ್ಯಕೀಯ ಅಗತ್ಯಗಳು, ಮನರಂಜ ಮತ್ತು ಒಂದು ಕುಟುಂಬದ ಸಾಮಾಜಿಕ ಸ್ಥಾನಮಾನವನ್ನು ಒದಗಿಸುವ ಸಾಮರ್ಥ್ಯವನ್ನು ಒಳಗೊಂಡಿರಬೇಕು ಎಂಬ ಮತ್ತೊಂದು ಮಾನದಂಡವನ್ನು ಸೇರಿಸಿದೆ. ಸುಪ್ರೀಂ ಕೋರ್ಟ್‌ನ ಈ ನಡೆ ಕಾರ್ಮಿಕರ ಕನಿಷ್ಟ ವೇತನದ ವ್ಯಾಖ್ಯಾನವನ್ನು ಇನ್ನಷ್ಟು ವಿಸ್ತರಿಸಿದೆ.

ತುಟ್ಟಿಭತ್ಯೆ ಯೋಜನೆಯ ಪರಿಷ್ಕರಣೆ

ರೆಪ್ಟಕೋಸ್ ಬ್ರೆಟ್ ಅಂಡ್ ಕಂಪನಿ ಲಿಮಿಟೆಡ್ ತನ್ನ ತುಟ್ಟಿಭತ್ಯೆ ಯೋಜನೆಯನ್ನು ಕಾರ್ಮಿಕರಿಗೆ ನಷ್ಟವಾಗುವಂತೆ- ವಿಶೇಷವಾಗಿ ವೇತನವು ಕನಿಷ್ಟ ಮಟ್ಟದಲ್ಲಿದ್ದಾಗ-ಪರಿಷ್ಕರಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ತೀರ್ಪು ನೀಡಿತ್ತು. ಕಂಪನಿಯು ತನ್ನ ಆರ್ಥಿಕ ಕಷ್ಟವನ್ನು ಸಾಬೀತುಪಡಿಸದೆ ಇಂತಹ ಬದಲಾವಣೆಯನ್ನು ಮಾಡಲು ಸಾಧ್ಯವಿಲ್ಲ ಎಂದು ಕೋರ್ಟ್ ಒತ್ತಿ ಹೇಳಿತ್ತು. ಕಂಪನಿಯು ತನ್ನ ತುಟ್ಟಿಭತ್ಯೆಯು ಇತರ ಉದ್ಯಮಗಳಿಗಿಂತ ಹೆಚ್ಚಿರುವುದನ್ನು ತೋರಿಸಿದೆಯಾದರೂ, ಅದು ಕನಿಷ್ಟ ವೇತನಕ್ಕಿಂತ ಹೆಚ್ಚಿರುವುದನ್ನು ಸಾಬೀತುಪಡಿಸಿಲ್ಲ ಎಂದಿತ್ತು.

ಕನಿಷ್ಟ ವೇತನವು ಕೇವಲ ಜೀವನಾಧಾರಕ್ಕಾಗಿರದೆ, ಕಾರ್ಮಿಕರ ಘನತೆಯನ್ನು ಕಾಪಾಡಲು ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸಲು ಆಗಿರಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿತ್ತು. ಈ ಮೂಲಕ ಕನಿಷ್ಠ ವೇತನ ಒಂದು “ಜೀವನ ವೇತನ” (living wage)ಎಂದು ಪರಿಗಣಿಸಲ್ಪಟ್ಟಿತು. ತೀರ್ಪು ಕಾರ್ಮಿಕರ ಜೀವನದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಹೊಂದಿತ್ತು.

ತೀರ್ಪಿನ ಪರಿಣಾಮ

ಈ ತೀರ್ಪು ಕನಿಷ್ಟ ವೇತನದ ಪರಿಕಲ್ಪನೆಯನ್ನು ವಿಸ್ತರಿಸಿತು; ಇದರಲ್ಲಿ ಶಿಕ್ಷಣ, ವೈದ್ಯಕೀಯ ರಕ್ಷಣೆ ಮತ್ತು ಸಾಮಾಜಿಕ ಅಗತ್ಯಗಳು ಒಳಗೊಂಡಿದೆ. ಇದು ಕಾರ್ಮಿಕರ ಹಕ್ಕುಗಳ ರಕ್ಷಣೆಯಲ್ಲಿ ಒಂದು ಐತಿಹಾಸಿಕ ತೀರ್ಪಾಗಿದ್ದು, ಕನಿಷ್ಟ ವೇತನವನ್ನು ಒಂದು ಕಾನೂನಾತ್ಮಕ ಆದೇಶವಾಗಿ ಮಾತ್ರವಲ್ಲದೆ, ಸಾಮಾಜಿಕ ನ್ಯಾಯದ ಸಾಧನವಾಗಿಯೂ ಗುರುತಿಸಿತು. ಈ ಪ್ರಕರಣವು ಇತರ ಕಾರ್ಮಿಕ ಕಾನೂನು ವಿವಾದಗಳಿಗೆ ಮಾದರಿಯಾಗಿದ್ದು, ಕನಿಷ್ಟ ವೇತನದ ಮಾನದಂಡಗಳನ್ನು ಜಾರಿಗೊಳಿಸಲು ಒತ್ತು ನೀಡಿತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -