ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜನರ ಪ್ರತಿಕ್ರಿಯೆ ಚೆನ್ನಾಗಿತ್ತು, ನಾವು ಗೆಲುವು ಸಾಧಿಸುತ್ತೇವೆ ಎಂಬ ವಿಶ್ವಾಸವಿದೆ. ನಮ್ಮ ಮತದಾರ ಬಂಧುಗಳು ಉತ್ತಮವಾಗಿ ಮತದಾನ ಮಾಡಿದ್ದಾರೆ. ಒಳ್ಳೆಯ ಅಂತರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲುತ್ತೆ, ಸಮರ್ಥ್ ಶಾಸಕರಾಗುತ್ತಾರೆ ಎಂಬ ವಿಶ್ವಾಸ ಇದೆ ಎಂದು ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಹೇಳಿದರು.
ಶನಿವಾರ ದಾವಣಗೆರೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಸಚಿವರು, ನಾಯಕರು, ಕಾರ್ಯಕರ್ತರು ಚುನಾವಣೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ, ಅವರಿಗೆ ಧನ್ಯವಾದ ಎಂದರು. ಸಿಎಂ ಸಿದ್ದರಾಮಯ್ಯರಿಂದ ಹಿಡಿದು ಕಟ್ಟಕಡೆಯ ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು.
ಇದೇ ವೇಳೆ, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಂಎಲ್ಸಿ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ಒಂದು ಚಹಾ ಕುಡಿದರೂ ಋಣ ಇಟ್ಟುಕೊಳ್ಳಬೇಕು. ಅಬ್ದುಲ್ ಜಬ್ಬಾರ್ನನ್ನು ಎಂಎಲ್ಸಿ ಮಾಡಿದ್ದು ನಾವು, ಕಾಂಗ್ರೆಸ್ ಪಕ್ಷದ ಅನ್ನ ತಿಂದ ಮೇಲೆ ಕೆಲಸ ಮಾಡಬೇಕಿತ್ತು ಎಂದು ಹೇಳಿದರು.
ನಾಯಕರ ನಡುವೆ ಸಣ್ಣಪುಟ್ಟ ವ್ಯತ್ಯಾಸ ಆಗಿದೆ. ಗೆದ್ದರೆ ಹೆಚ್ಚು ಅಂತರದಲ್ಲಿ ಗೆಲ್ಲುತ್ತೇವೆ, ಇಲ್ಲ ಕಡಿಮೆ ಅಂತರದಲ್ಲಿ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ ಎಂದರು.


