ಸಾಮಾಜಿಕ ಜಾಲತಾಣದಲ್ಲಿ ಬಲಿಷ್ಟ ಹಿಡಿತವನ್ನು ಹೊಂದಿರುವ ಬಿಜೆಪಿ ಪಕ್ಷವು ಪದೇ ಪದೇ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿದ್ದು, ಇದರ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಹರಡಿರುವ ಹಲವು ಸುಳ್ಳು ಸುದ್ದಿಗಳನ್ನು ಪಟ್ಟಿ ಮಾಡಿ “ಸ್ಕ್ರೋಲ್ ಡಾಟ್ ಇನ್” ವಿಶೇಷ ವರದಿ ಮಾಡಿದೆ.

ಜನವರಿ 15 ರಂದು, ಭಾರತೀಯ ಜನತಾ ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟಿಸಲು ದೆಹಲಿಯ ಶಾಹೀನ್ ಬಾಗ್ ಮಹಿಳೆಯರಿಗೆ ಹಣ ನೀಡಲಾಗುತ್ತಿದೆ ಎಂದು ಹೇಳಿ ವೀಡಿಯೊವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು.

ಆಲ್ಟ್ ನ್ಯೂಸ್ ಮತ್ತು ನ್ಯೂಸ್ ಲ್ಯಾಂಡ್ರಿ ತನಿಖೆಯಿಂದ ಮಾಳವಿಯಾ ಅವರ ಆರೋಪವು ಆಧಾರ ರಹಿತವಾಗಿದೆ ಎಂದು ಸಾಬೀತಾಗಿತ್ತು. BJP ಕಾರ್ಯಕರ್ತನ ಅಂಗಡಿಯಲ್ಲಿ ಮಾಡಿದ ವಿಡಿಯೋವನ್ನು ಶಾಹೀನ್‌ ಬಾಗ್‌ ಸ್ಟಿಂಗ್‌ ಎಂದು ಅಮಿತ್‌ ಮಾಳವಿಯ ಹೇಳಿದ್ದರು. ಸಂಪೂರ್ಣ ವರದಿಗೆ ಕೆಳಗಿನ ಲಿಂಕ್‌ ತೆರೆದು ಓದಿ


ಶಾಹೀನ್‌ ಬಾಗ್‌ ಸ್ಟಿಂಗ್‌ ಕುರಿತು ಸುಳ್ಳು ಹೇಳಿದ BJP ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ


ಆದರೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ತನ್ನ ಸುಳ್ಳು ಹರಡುವ ಕೆಲಸವನ್ನು ನಿಲ್ಲಿಸದೆ ಮುಂದುವರೆಸಿದ್ದಾರೆ.

ಅದರ ನಂತರ ಎರಡು ದಿನಗಳು ಕಳೆದು, ಶಹೀನ್ ಬಾಗ್‌ನಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ಊಟ ಮಾಡುತ್ತಿರುವ ಫೋಟೋವನ್ನು ಹಾಕಿ, ಪ್ರತಿಭಟನಾಕಾರರಿಗೆ 500 ರೂ.ಗಳನ್ನು ನೀಡಲಾಗುತ್ತಿದೆ ಮತ್ತು ಉಚಿತ ಆಹಾರವನ್ನು ನೀಡಲಾಗುತ್ತಿದೆ ಎಂಬ ವದಂತಿಯನ್ನು ಟ್ವೀಟ್ಟರಿನಲ್ಲಿ ಹರಡಿದ್ದರು.

ಮಾಳವಿಯ ಅವರು ಸುಳ್ಳು ಸುದ್ದಿಗಳು ಕೇವಲ ಶಾಹಿನ್ ಭಾಗ್ ಕುರಿತು ಮಾತ್ರವಾಗಿಲ್ಲ. ಆಲ್ಟ್ ನ್ಯೂಸ್ ಅವರ ಸಾಮಾಜಿಕ ಜಾಲತಾಣದ ಫೀಡ್ ಗಳನ್ನು ಮೇಲ್ವಿಚಾರಣೆ ನಡೆಸಿದೆ. ಅವರು ತನ್ನ ಸಾಮಾಜಿಕ ಜಾಲ ತಾಣದಲ್ಲಿ ವ್ಯಕ್ತಿಗಳು, ಸಮುದಾಯಗಳು, ವಿರೋಧ ಪಕ್ಷಗಳು, ಅದರ ನಾಯಕರು ಹಾಗೂ ಸಾಮಾಜಿಕ ಚಳುವಳಿಗಳ ಬಗ್ಗೆ ಅಪಪ್ರಚಾರ ಮಾಡುತ್ತಾ ಪದೇ ಪದೇ ತಪ್ಪು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಆಲ್ಟ್ ನ್ಯೂಸ್ ಕಂಡುಹಿಡಿದಿದೆ. ಅವರು ಬಿಜೆಪಿಯ ಐಟಿ ಸೆಲ್ಲಿನ ಅಧಿಕೃತ ಮುಖ್ಯಸ್ಥರಾಗಿರುವುದರಿಂದ ಮಾಳವಿಯ ಹೇಳಿರುವ ಸುಳ್ಳುಗಳು ಅತೀ ಹೆಚ್ಚು ಹಾಗೂ ಅತೀ ಕೆಟ್ಟ ಪರಿಣಾಮ ಬೀರುತ್ತದೆ.

ಪೌರತ್ವ ಕಾಯ್ದೆ ವಿರುದ್ದ ನಡೆದ ಪ್ರತಿಭಟನೆಯ ವಿರುದ್ದದ ಸುದ್ದಿಗಳು:

  1. ಲಕ್ನೋದಲ್ಲಿ ನಡೆದ ಪೌರತ್ವ ಕಾಯ್ದೆಯ ವಿರೋಧಿ ಪ್ರತಿಭಟನೆಯಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಹೇಳಲಾಗಿದೆ ಎಂದು ಡಿಸೆಂಬರ್ 28 ರಂದು ವೀಡಿಯೊವನ್ನು ಮಾಳವೀಯ ಟ್ವೀಟ್ ಮಾಡಿ ಆರೋಪಿಸಿದ್ದರು.

ಆದರೆ ಆಲ್ಟ್ ನ್ಯೂಸ್ ಇದು ಸುಳ್ಳು ಸುದ್ದಿ ಎಂದು ಕಂಡುಹಿಡಿದಿದೆ. ಪ್ರತಿಭಟನಾಕಾರರು “ಕಾಶಿಫ್ ಸಾಬ್ ಜಿಂದಾಬಾದ್” ಎಂದು ಕೂಗಿದ್ದರು. ಪ್ರತಿಭಟನಾಕಾರರು ಹೇಳಿದ “ಕಾಶಿಫ್ ಸಾಬ್”,  ಅಖಿಲ ಭಾರತ ಮಜ್ಲಿಸ್-ಎ-ಇತ್ತಿಹಾದುಲ್-ಮುಸ್ಲೀಮೀನ್ ಪಕ್ಷದ ಲಖನೌ ಮುಖ್ಯಸ್ಥ ಕಾಶಿಫ್ ಅಹ್ಮದ್ ಆಗಿದ್ದಾರೆ. ಕಾಶಿಫ್ ಅಹ್ಮದ್ ಡಿಸೆಂಬರ್ 13 ರಂದು ರಾಜ್ಯ ರಾಜಧಾನಿಯಲ್ಲಿ ಪ್ರತಿಭಟನೆ ನಡೆಸಿದ್ದರು ಎಂದು ಪಕ್ಷದ ಉತ್ತರ ಪ್ರದೇಶ ಘಟಕದ ಅಧ್ಯಕ್ಷ ಹಾಜಿ ಶೌಕತ್ ಅಲಿ ಹೇಳಿದ್ದಾರೆ. ಅದರ ವಿಡಿಯೋ ಕೆಳಗಿದೆ ನೋಡಿ.

 

2. ಅಲಿಘಡ್ ಮುಸ್ಲಿಂ ಯುನಿವರ್ಸಿಟಿಯ ವಿದ್ಯಾರ್ಥಿಗಳು ಪೌರತ್ವ ಕಾಯ್ದೆಯ ವಿರುದ್ದ ‘ಹಿಂದೂವೋ ಕಿ ಕಬ್ರ್ ಖುದೇಗಿ’ ಎಂದು ಹೇಳಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದ್ದ ವಿಡಿಯೊ ಕ್ಲಿಪ್ ಹರಡಲಾಗಿತ್ತು. ಅದನ್ನು ಡಿಸೆಂಬರ್ 16 ರಂದು ಮಾಳವಿಯ ಹಂಚಿಕೊಂಡಿದ್ದರು.

ಆದರೆ ವಿದ್ಯಾರ್ಥಿಗಳು “AMU ನ ಎದೆಯ ಮೇಲೆ ಹಿಂದುತ್ವದ, ಸಾವರ್ಕರ್‌ರ, ಬಿಜೆಪಿಯ, ಬ್ರಾಹ್ಮಣವಾದದ ಹಾಗೂ ಜಾತಿವಾದದ ಸಮಾಧಿಯನ್ನು ಅಗೆಯಲಾಗುವುದು” ಎಂದು ಕೂಗುತ್ತಿದ್ದರು.

3. ಸಿಎಎ ಕುರಿತು ದಿ ವೈರ್‌ನ ಪತ್ರಕರ್ತೆ ಅರ್ಫಾ ಖಾನುಮ್ ಅವರ ಭಾಷಣಗಳನ್ನು ವಿರೂಪಗೊಳಿಸಿ ಜನವರಿ 26 ರಂದು ಭಾಷಣದ ವೀಡಿಯೊವನ್ನು ಹಂಚಿ ಕೊಂಡಿದ್ದರು.

ಈ ವಿಡಿಯೊವನ್ನು ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಖಾನೂಮ್ ಮಾಡಿದ ಭಾಷಣವನ್ನು ತಪ್ಪಾಗಿ ನಿರೂಪಿಸಲಾಗಿದೆ. ಪತ್ರಕರ್ತೆ ಇಸ್ಲಾಮಿಕ್ ಸಮಾಜದ ಸ್ಥಾಪನೆಯನ್ನು ಉತ್ತೇಜಿಸುತ್ತಿದ್ದಾರೆ ಮತ್ತು ಅಂತಹ ಸಮಾಜವನ್ನು ರಚಿಸುವವರೆಗೆ ಮುಸ್ಲಿಮೇತರರಿಗೆ ಬೆಂಬಲ ನೀಡುವಂತೆ ಪ್ರತಿಭಟನಾಕಾರರನ್ನು ಒತ್ತಾಯಿಸುತ್ತಿದ್ದಾರೆ ಎಂದು ಮಾಳವಿಯ ಹೇಳಿದ್ದರು. ಆದರೆ ಖಾನುಮ್ “ಧಾರ್ಮಿಕ ಘೋಷಣೆಗಳನ್ನು ಬಳಸಬೇಡಿ ಮತ್ತು ಚಳವಳಿಯ ಜಾತ್ಯತೀತ ಗುಣವನ್ನು ಕಾಪಾಡಿಕೊಳ್ಳಬೇಕೆಂದು” ಪ್ರತಿಭಟನಾಕಾರರನ್ನು ಒತ್ತಾಯಿಸಿದ್ದರು.

ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಬಗ್ಗೆಗಿನ ಸುಳ್ಳು ಸುದ್ದಿಗಳು:

1. ನವೆಂಬರ್ 2017 ರಲ್ಲಿ, ಹೆಚ್ಚಿನ ಬಿಜೆಪಿ ಮುಖಂಡರು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಚಿತ್ರಗಳ ಕೊಲಾಜ್ ಅನ್ನು ಹಂಚಿಕೊಂಡಿದ್ದರು. ಆದರೆ ಆ ಹೆಚ್ಚಿನ ಛಾಯಾಚಿತ್ರಗಳು ನೆಹರೂ ಅವರ ಸಹೋದರಿ ಅಥವಾ ಸೋದರ ಸೊಸೆ ಅಥವಾ ಜಾಕ್ವೆಲಿನ್ ಕೆನಡಿಯಂತಹ ವಿಶ್ವದ ಗಣ್ಯ ವ್ಯಕ್ತಿಗಳದ್ದಾಗಿತ್ತು. ಈ ಟ್ವೀಟನ್ನು ಮಾಳವಿಯ ನಂತರ ಅಳಿಸಿದ್ದರಾದರೂ ಅಷ್ಟೊತ್ತಿಗಾಗಲೇ ಅದು ಸಾಮಾಜಿಕ ಜಾಲತಾಣದಾದ್ಯಂತ ಹರಡಿಯಾಗಿತ್ತು.

2. ನವೆಂಬರ್ 27, 2018 ರಂದು ಮನಮೋಹನ್ ಸಿಂಗ್ ಅವರ ವೀಡಿಯೊವನ್ನು ಮಾಳವೀಯ ಟ್ವೀಟ್ ಮಾಡಿದ್ದರು. ಅದರಲ್ಲಿ ಮನಮೋಹನ್ ಸಿಂಗ್ “ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡದ ಸರ್ಕಾರಗಳು ತುಂಬಾ ಉತ್ತಮವಾಗಿವೆ” ಎಂದು ಹೇಳುವ ದೃಶ್ಯವಿದೆ. ಇದರಲ್ಲಿ ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರಗಳ ಬಗ್ಗೆ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದ್ದರು.

ಆದರೆ ಮನಮೋಹನ್ ಸಿಂಗ್ “ಮಧ್ಯಪ್ರದೇಶ ಸರ್ಕಾರ ಹಾಗೂ ಛತ್ತೀಸ್‌ಗಡ ಸರ್ಕಾರದೊಂದಿಗಿನ ನನ್ನ ಸಂಬಂಧಗಳು ತುಂಬಾ ಚೆನ್ನಾಗಿತ್ತು. ನಾವು ಎಂದಿಗೂ ಬಿಜೆಪಿ ಆಳುವ ರಾಜ್ಯಗಳ ವಿರುದ್ಧ ತಾರತಮ್ಯ ಮಾಡಲಿಲ್ಲ.” ಎಂದು ಹೇಳಿದ್ದರು.

3. ನವೆಂಬರ್ 2017 ರಲ್ಲಿ ರಾಹುಲ್ ಗಾಂಧಿ ಸೋಮನಾಥ ದೇವಾಲಯಕ್ಕೆ ಬೇಟಿ ಮಾಡಿದಾಗ ನೋಂದಣಿಗೆ ಹಿಂದೂಯೇತರರು ಎಂದು ಸಹಿ ಹಾಕಿದರು ಎಂದು ಮಾಳವಿಯ ಹೇಳಿದ್ದರು.

ಆದರೆ ರಿಜಿಸ್ಟರ್‌ನಲ್ಲಿರುವ ಬರಹವೂ ಸಾರ್ವಜನಿಕವಾಗಿ ಲಭ್ಯವಿರುವ ರಾಹುಲ್ ಗಾಂಧಿಯವರ ಕೈಬರಹದ ಟಿಪ್ಪಣಿಗಳೊಂದಿಗೆ ಹೊಂದಿಕೆಯಾಗಲಿಲ್ಲ ಎಂದು ಕೈಬರಹ ವಿಶ್ಲೇಷಣೆಗಳು ತೋರಿಸುತ್ತದೆ.(ಆಲ್ಟ್ ನ್ಯೂಸ್ ವಿಶ್ಲೇಷಣೆ ಇಲ್ಲಿ ಕ್ಲಿಕ್ ಮಾಡಿ)

4. ಮಾಳವಿಯ, ರಾಹುಲ್ ಗಾಂಧಿಯವರ ವೀಡಿಯೊವೊಂದನ್ನು ಟ್ವೀಟ್ ಮಾಡಿ “ಜನರು ಇದನ್ನು ನನಗೆ ಕಳುಹಿಸಿ ಇದು ನಿಜವೇ ಎಂದು ಕೇಳುತ್ತಿದ್ದಾರೆ, ಖಂಡಿತಾ ಇದು ನಿಜ” ಎಂದು ಹೇಳಿದ್ದಾರೆ. ಈ ವಿಡಿಯೋದಲ್ಲಿ ರಾಹುಲ್ ಗಾಂಧಿ “ಒಂದು ಕಡೆಯಲ್ಲಿ ಆಲುಗಡ್ಡೆ ಸುರಿದರೆ ಇನ್ನೊಂದು ಕಡೆಯಿಂದ ಚಿನ್ನ ಬರುತ್ತದೆ” ಎಂದು ಹೇಳುತ್ತಾರೆ.

ಇದು ನವೆಂಬರ್ 12, 2017 ರಂದು ಗುಜರಾತ್‌ನ ಪಟಾನ್‌ನಲ್ಲಿ ರಾಹುಲ್ ಗಾಂಧಿಯು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಾ ಮಾಡಿದ ಭಾಷಣವಾಗಿದೆ. “ಕೆಲವು ತಿಂಗಳುಗಳ ಹಿಂದೆ ಇಲ್ಲಿಗೆ ಬಂದ ಪ್ರವಾಹ(ಮೋದಿ)ವೊಂದು 500 ಕೋಟಿ ರೂಪಾಯಿಗಳನ್ನು ನೀಡುತ್ತೇನೆ ಎಂದು ಹೇಳಿದ್ದರು ಆದರೆ ಒಂದು ರೂಪಾಯಿ ಕೂಡ ಪಾವತಿಸಲಿಲ್ಲ” ಎಂದು ರಾಹುಲ್ ಗಾಂಧಿ ಹೇಳುತ್ತಾ, “ಆಲೂಗಡ್ಡೆ ಬೆಳೆದ ರೈತರಿಗೆ ನಾನು ಒಂದು ಯಂತ್ರವನ್ನು ಸ್ಥಾಪಿಸುತ್ತೇನೆ, ಅದರಲ್ಲಿ ಆಲೂಗಡ್ಡೆ ಹಾಕಿದರೆ ಚಿನ್ನ ಹೊರಬರುತ್ತದೆ…ಇದು ನನ್ನ ಮಾತಲ್ಲ ನರೇಂದ್ರ ಮೋದಿಯವರ ಮಾತುಗಳು” ಎಂದು ಹೇಳಿ ಮೋದಿಯನ್ನು ಟೀಕಿಸಿದ್ದರು. ಆ ವಿಡಿಯೋದಲ್ಲಿ ಅರ್ಧ ಕತ್ತರಿಸಿ ಮಾಳವಿಯ ಬಿತ್ತರಿಸಿದ್ದರು.

5. ಅತ್ಯಾಚಾರದ ಅಪರಾಧಿ “ಗುರ್ಮೀತ್ ರಾಮ್ ರಹೀಂ” ಅವರ “ಡೇರಾ ಸಚ್ಚಾ”ಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದರು ಎಂದು ಆಗಸ್ಟ್ 2017 ರಲ್ಲಿ, ಮಾಳವಿಯ ಟ್ವೀಟ್ ಮಾಡಿದ್ದರು. ಆದರೆ ನಂತರ ಟ್ವೀಟ್ ಅನ್ನು ಅಳಿಸಿ ಹಾಕಿದ್ದಾರೆ.

ಆದರೆ ಮಾಳವಿಯಾ ಪೋಸ್ಟ್ ಮಾಡಿದ್ದ ಲೇಖನದ ಸ್ಕ್ರೀನ್‌ಶಾಟ್ ಮೂಲತಃ ಜನವರಿ 29, 2017 ರ ಇಂಡಿಯನ್ ಎಕ್ಸ್‌ಪ್ರೆಸ್ ಲೇಖನವಾಗಿದೆ. “ಪಂಜಾಬ್ ವಿಧಾನಸಭಾ ಚುನಾವಣೆಗೆ ಕೇವಲ ಒಂದು ವಾರ ಬಾಕಿ ಇರುವಾಗ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಜಲಂಧರ್‌ನ ದಲಿತ ರವಿದಾಸಿಯಾ ಸಮುದಾಯದಲ್ಲಿ ಅತ್ಯಂತ ಪ್ರಭಾವಶಾಲಿ ಡೇರಾ ಸಾಚ್ ಖಾಂಡ್ ಬಲ್ಲನ್‌ಗೆ ಭೇಟಿ ನೀಡಿದರು” ಎಂದು ಲೇಖನ ಹೇಳಿದೆ.

ನಿಜದಲ್ಲಿ ರಾಹುಲ್ ಗಾಂಧಿಯವರು ಡೇರಾ ಸಾಚ್ಚಾಗೆ ಭೇಟಿ ನೀಡಿರಲಿಲ್ಲ, ಬದಲಾಗಿ ಡೇರಾ ಸಚ್ ಖಾಂಡ್ ಬಲ್ಲನ್ ಆಗಿತ್ತು. ಇದರ ಮುಖ್ಯಸ್ಥ ಸಂತ ನಿರಂಜನ್ ದಾಸ್ ಆಗಿದ್ದರು.

ಇದರ ಸಂಪೂರ್ಣ ಸತ್ಯ ಪರಿಶೀಲನೆಗಾಗಿ ಆಲ್ಟ್ ನ್ಯೂಸನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ಓದಬಹುದು.

ಚುನಾವಣಾ ಪ್ರಚಾರದ ಸಮಯದಲ್ಲಿ ಹರಡಿದ ಸುಳ್ಳು ಸುದ್ದಿಗಳು:

1. ಜನವರಿ 31 ರಂದು 2019 ರ ದೆಹಲಿ ರಾಜ್ಯ ಚುನಾವಣೆಗೆ ಮುನ್ನ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿಡಿಯೋವನ್ನು ಮಾಳವಿಯ ಟ್ವೀಟ್ ಮಾಡಿ “ಕೇಜ್ರಿವಾಲ್ ರೋಡ್ ಶೋವೊಂದರಲ್ಲಿ ವ್ಯಕ್ತಿಯನ್ನು ಹತ್ಯೆ ಮಾಡಲಾಗಿದೆ” ಎಂದು ಅವರು ಹೇಳಿದ್ದರು. ಆದರೆ ಈ ಘಟನೆ ನಡೆದದ್ದು ಮೇ ತಿಂಗಳ ಸಾರ್ವತ್ರಿಕ ಚುನಾವಣೆಯಲ್ಲಾಗಿತ್ತು.

ಆದರೆ ಮಾಳವಿಯಾ ಪೂರ್ಣ ಚಿತ್ರಣವನ್ನು ನೀಡಿರಲಿಲ್ಲ. ಈ ವಿಡಿಯೊದಲ್ಲಿ ಕೇಜ್ರಿವಾಲ್ ಗೆ ಒಬ್ಬ ವ್ಯಕ್ತಿ ಹಲ್ಲೆ ನಡೆಸಿದಾಗ ಮುಖ್ಯಮಂತ್ರಿಯ ಬೆಂಬಲಿಗರು ಅವರನ್ನು ಕ್ರೂರವಾಗಿ ಥಳಿಸಿದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಡಿದಂತೆ ಆ ವ್ಯಕ್ತಿಯನ್ನು ಯಾರೂ ಕೊಲೆ ಮಾಡಿರಲಿಲ್ಲ. ಇದರ ಸಂಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ. 

2. 2019 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಕೋಲ್ಕತ್ತಾದ ವಿದ್ಯಾಸಾಗರ್ ಕಾಲೇಜಿನ ಕ್ಯಾಂಪಸ್‌ನಲ್ಲಿ ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ಮೂರ್ತಿಯನ್ನು ಧ್ವಂಸಗೊಳಿಸಿದ್ದಾಗಿ ತೃಣಮೂಲ ಕಾಂಗ್ರೆಸನ್ನು ಆರೋಪಿಸಿ ಮಾಳವಿಯ ಟ್ವೀಟ್ ಮಾಡಿದ್ದರು.

ಅಧ್ಯಾಪಕರು ಹಾಗೂ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಆಲ್ಟ್ ನ್ಯೂಸ್ ತನಿಖಾ ವರದಿಯನ್ನು ಪ್ರಕಟಿಸಿತ್ತು. ಮಾಳವಿಯ ಹಂಚಿಕೊಂಡ ಪೋಸ್ಟ್‌ನಲ್ಲಿ ಮಾಡಿದ ಆರೋಪಗಳು ದಾರಿತಪ್ಪಿಸುವಂತಹದ್ದಾಗಿದೆ ಎಂದು ಸಾಬಿತಾಗಿದೆ. ಆಲ್ಟ್ ನ್ಯೂಸ್ ತನಿಖಾ ವರದಿಗೆ ಇಲ್ಲಿ ಕ್ಲಿಕ್ ಮಾಡಿ

3. 2018 ರಲ್ಲಿ ನಡೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾದ ನಂತರ, ಮಾಳವಿಯ “ತೆಲಂಗಾಣದಲ್ಲಿ ಬಿಜೆಪಿಗೆ 7% ಮತಗಳಿದ್ದರೂ ಪಕ್ಷವು ಕೇವಲ ಒಂದು ಸ್ಥಾನ ಗೆದ್ದಿದೆ, ಆದರೆ ಇ-ಇತ್ತಿಹಾದಉಲ್-ಮುಸ್ಲೀಮೀನ್ ಕೇವಲ 2.7% ರಷ್ಟು ಮತಗಳನ್ನು ಗಳಿಸಿ ಏಳು ಸ್ಥಾನಗಳನ್ನು ಪಡೆದಿದೆ” ಎಂದು ಹೇಳಿದ್ದರು.

ಇಲ್ಲಿ ಮಾಳವಿಯ ಉಲ್ಲೇಖಿಸಿದ ಸಂಖ್ಯೆಗಳು ಸರಿಯಾಗಿದ್ದರೂ, ಅವರ ಪ್ರತಿಪಾದನೆ ತಪ್ಪಾಗಿತ್ತು. ಯಾಕೆಂದರೆ, ಎಐಐಎಂಐಎಂ ಪಡೆದ 2.7% ರಷ್ಟು ಮತ ಕೇವಲ ಎಂಟು ಸ್ಥಾನಗಳಲ್ಲಿ ಸ್ಪರ್ಧಿಸಿ ಗಳಿಸಿದ್ದಾಗಿತ್ತು, ಅದರಲ್ಲಿ ಅದು ಏಳು ಸ್ಥಾನಗಳನ್ನು ಗೆದ್ದಿದೆ. ಆದರೆ ಬಿಜೆಪಿ ವಿಧಾನಸಭೆಯ 119 ಸ್ಥಾನಗಳಲ್ಲಿ 118 ಸ್ಥಾನಗಳಿಗೆ ಸ್ಪರ್ಧಿಸಿತ್ತು ಹಾಗೂ ಒಂದು ಸ್ಥಾನದಲ್ಲಷ್ಟೇ ಗೆದ್ದಿತ್ತು. ಸಂಪೂರ್ಣ ವಿವರಗಳು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಮೋದಿಯನ್ನು ಬೆಂಬಲಿಸಲು ಮಾಡಿದ ಸುಳ್ಳು ಸುದ್ದಿಗಳು:

1. 2019 ರ ಜನವರಿ 24 ರಂದು ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿರುವ ಕುಂಭಮೇಳದಲ್ಲಿ ನರೇಂದ್ರ ಮೋದಿ ಸ್ನಾನ ಮಾಡಿದ್ದರು. ಆಗ ಮಾಳವಿಯ “ಕುಂಭ ಮೇಳಕ್ಕೆ ಭೇಟಿ ನೀಡಿದ ಮೊದಲ ರಾಷ್ಟ್ರ ಮುಖ್ಯಸ್ಥ” ಎಂದು ಟ್ವೀಟ್ ಮಾಡಿದ್ದರು.

 

ಆದರೆ ಮಾಳವಿಯಾ ಪ್ರತಿಪಾದನೆಯಲ್ಲಿ ಎರಡು ತಪ್ಪುಗಳಿವೆ. ಮೊದಲನೆಯದಾಗಿ ಭಾರತದ ಮುಖ್ಯಸ್ಥರು ಪ್ರಧಾನಿ ಅಲ್ಲ, ರಾಷ್ಟ್ರಪತಿಯಾಗಿದ್ದಾರೆ. ಕುಂಭ ಮೇಳಕ್ಕೆ ಭೇಟಿ ನೀಡಿದ ಮೊದಲ ರಾಷ್ಟ್ರಪತಿ ಭಾರತದ ಮೊದಲ ರಾಷ್ಟ್ರಪತಿಯಾಗಿದ್ದ ರಾಜೇಂದ್ರ ಪ್ರಸಾದ್ ಆಗಿದ್ದಾರೆ.

ಅದೂ ಅಲ್ಲದೆ ಕುಂಭ ಮೇಳಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ಕೂಡ ಮೋದಿ ಅಲ್ಲ. ದೇಶದ ಮೊದಲ ಪ್ರಧಾನಿ, ಜವಾಹರಲಾಲ್ ನೆಹರು 1954 ರ ಕುಂಭ ಮೇಳಕ್ಕೆ ಭೇಟಿ ನೀಡಿದ್ದರು. ಇದರ ಬಗ್ಗೆ ಆಲ್ಟ್ ನ್ಯೂಸ್‌ ಮಾಡಿದ ಸಂಪೂರ್ಣ ಸತ್ಯ ಪರಿಶೀಲನೆಗಾಗಿ ಇಲ್ಲಿ ಕ್ಲಿಕ್ ಮಾಡಿ.

2. 2017 ರ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ ರಿಚರ್ಡ್ ಥೇಲರ್ ಅವರು ಮೋದಿಯವರ ನೋಟು ನಿಷೇಧದ ನಿರ್ಧಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಅಮಿತ್ ಮಾಳವಿಯ ಟ್ವೀಟ್ ಮಾಡಿ ಹೇಳಿದ್ದರು.

ಆದರೆ 500 ಮತ್ತು 1,000 ರೂ ನೋಟುಗಳ ಜಾಗದಲ್ಲಿ 2,000 ರೂ ನೋಟು ಪರಿಚಯಿಸಲಾಗಿದೆ ಎಂದು ಥೇಲರ್ ಅವರಿಗೆ ತಿಳಿಸಿದಾಗ, ಅವರು “ನಿಜವಾಗಿಯೂ? ಡ್ಯಾಮ್. ” ಎಂದು ಆಶ್ಚರ್ಯ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಆದರೆ ಮಾಲ್ವಿಯಾ ಅವರ ಟ್ವೀಟ್‌ನಲ್ಲಿ ಈ ತುಣುಕು ಇರಲಿಲ್ಲ.

ನೋಡು ನಿಷೇಧದ ಕುರಿತಾದ ಥೇಲರ್ ಅವರ ಹೇಳಿಕೆಯು ಹೀಗಿದೆ: “ಭ್ರಷ್ಟಾಚಾರ ಇಲ್ಲವಾಗಿಸಲು ಕ್ಯಾಶ್ ಲೆಸ್ ಪರಿಕಲ್ಪನೆ ಉತ್ತಮವಾಗಿತ್ತು ಆದರೆ ಕಾರ್ಯಗತವು ಬಹಳ ದೋಷಪೂರಿತವಾಗಿದೆ ಮತ್ತು 2000 ರೂ. ನೋಟಿನ ಪರಿಚಯವು ಇಡೀ ಕ್ರಮವನ್ನು ಗೊಂದಲಗೊಳಿಸುತ್ತದೆ.” ಅವರ ಹೇಳಿಕೆಯ ವರದಿಗೆ ಇಲ್ಲಿ ಕ್ಲಿಕ್ ಮಾಡಿ.

ಇತರ ವ್ಯಕ್ತಿಗಳ ಬಗ್ಗೆ ಸುಳ್ಳು ಸುದ್ದಿ:

1. ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಅವರು ಜಾತಿ ರಾಜಕೀಯ ಮಾಡುತ್ತಿದ್ದಾರೆ ಎಂದು ಏಪ್ರಿಲ್‌ನಲ್ಲಿ ನಡೆದ ಟಿವಿ ಚರ್ಚೆಯಲ್ಲಿ ಮಾಳವಿಯ ಆರೋಪಿಸಿದ್ದರು. ಇದಕ್ಕೆ ಉತ್ತರಿಸಿದ ಯಾದವ್, ಮಾಳವಿಯ ತನ್ನ ಪ್ರತಿಪಾದನೆಗೆ ಯಾವುದಾದರು ಪುರಾವೆ ನೀಡಿದರೆ ನಾನು ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುವುದಾಗಿ ಸವಾಲು ಹಾಕಿದ್ದರು.

ಅದಕ್ಕಾಗಿ ಮಾಳವಿಯ ಯೋಗೇಂದ್ರ ಯಾದವ್ ಅವರ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದರು, ಅದರಲ್ಲಿ ಯಾದವ್ ಮುಸ್ಲಿಂ ಪ್ರಾಬಲ್ಯದ ಮೇವಾತ್ ನಲ್ಲಿ “ತನ್ನ ಮುಸ್ಲಿಂ ಗುರುತಿನ ಬಗ್ಗೆ ಮಾತನಾಡುತ್ತಿದ್ದಾರೆ.”

ಇದರಲ್ಲಿ ಮಾಳವಿಯ “ನಾನು ಸಾಮಾನ್ಯವಾಗಿ ಟಿವಿ ಚರ್ಚೆಗಳನ್ನು ಸಾಮಾಜಿಕ ಜಾಲತಾಣಕ್ಕೆ ಕೊಂಡೊಯ್ಯುವುದಿಲ್ಲ ಆದರೆ ಯೋಗೇಂದ್ರ ಯಾದವ್ ಅವರ ದ್ವಿಮುಖ ಧೋರಣೆಯನ್ನು ಬಹಿರಂಗಪಡಿಸುತ್ತಿದ್ದೇನೆ” ಎಂದು ಟ್ವೀಟ್ ಮಾಡಿ, ಸಣ್ಣ ವೀಡಿಯೊ ಕ್ಲಿಪ್ಪೊಂದನ್ನು ಲಗತ್ತಿಸಿ, “ನೀವು ಯಾವಾಗ ಸಾರ್ವಜನಿಕ ಜೀವನದಿಂದ ಹಿಂದೆ ಸರಿಯುತ್ತೀರಿ?” ಎಂಬ ಪ್ರಶ್ನೆ ಕೇಳಿದ್ದರು.

ಮಾಳವಿಯ ಯಾದವ್ ಮತಕ್ಕಾಗಿ ತನ್ನ ಮುಸ್ಲಿಂ ಗುರುತನ್ನು ಬಳಸಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಈ ವಿಡಿಯೋ ಯಾವುದೆ ಚುನಾವಣೆಯ ಭಾಷಣವಾಗಿರಲಿಲ್ಲ.

ಇದರಲ್ಲಿ ತನ್ನ ತಾತ ಕೋಮುಗಲಭೆಯಲ್ಲಿ ಕೊಲ್ಲಲ್ಪಟ್ಟರು, ಅದಕ್ಕಾಗಿ ಇನ್ನೊಂದು ಕೋಮಿನ ಮೇಲೆ ಧ್ವೇಷ ಇಲ್ಲವಾಗಿಸಲು ತನ್ನ ತಂದೆ ತನಗೆ ಮುಸ್ಲಿಂ ಹೆಸರು ಇಟ್ಟಿರುವುದಾಗಿ ಯೋಗೇಂದ್ರ ಯಾದವ್‌ ಹೇಳಿದ್ದಾರೆ.

ಇದನ್ನೂ ಓದಿ: ಕಣ್ಣೆದುರಿಗೆ ತಂದೆಯನ್ನು ಕೊಂದವರ ಹೆಸರನ್ನೇ ಮಕ್ಕಳಿಗಿರಿಸಿದ ದೇವೇಂದ್ರ ಯಾದವ್

ಒಮ್ಮೆ ಈ ದೇಶದ ಗೃಹಮಂತ್ರಿಗಳಾದ ಅಮಿತ್‌ ಶಾರವರು ನಾವು ಮನಸ್ಸು ಮಾಡಿದರೆ ಕೆಲವೇ ನಿಮಿಷಗಳಲ್ಲಿ ಸುಳ್ಳನ್ನು ಸತ್ಯವಾಗಿಯೂ, ಸತ್ಯವನ್ನು ಸುಳ್ಳಾಗಿಯೂ ಮಾಡುವ ಸಾಮರ್ಥ್ಯ ಹೊಂದಿದ್ದೇವೆ. ಅಂತಹ ಬಲಿಷ್ಠ ಐಟಿ ಸೆಲ್‌ ಮತ್ತು ನೆಟ್‌ವರ್ಕ್‌ ನಮಗಿದೆ ಎಂದು ಹೇಳಿದ್ದರು. ಆ ಐಟಿ ಸೆಲ್‌ನ ಮುಖ್ಯಸ್ಥನೆ ಈ ಸುಳ್ಳುಗಳ ಸರದಾರ ಅಮಿತ್‌ ಮಾಳವೀಯ ಆಗಿದ್ದಾರೆ.

ಅಮಿತ್‌ ಮಾಳವೀಯ ಇಷ್ಟೆಲ್ಲಾ ಸುಳ್ಳು ಹೇಳಿದರೂ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಯಾರೊಬ್ಬರೂ ಇವರನ್ನು ಪ್ರಶ್ನಿಸಿಲ್ಲ, ಬದಲಿಗೆ ಪ್ರೋತ್ಸಾಹಿಸಿದ್ದಾರೆ. ಇಂದು ದೇಶದಲ್ಲಿ ಸುಳ್ಳು ಸುದ್ದಿಗಳು ತಾಂಡವವಾಡುತ್ತಿರುವುದಕ್ಕೆ ಕಾರಣ ಯಾರು ಎಂದು ಈಗ ತಿಳಿಯಿತೇ?

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

1 COMMENT

  1. ಸುಳ್ಳು ಸುದ್ದಿ ಬಗ್ಗೆ ಅವರು ಯಾವುದೇ ಪಕ್ಷದವರಾಗಿರಲಿ ಕಠಿಣ ನಿರ್ಧಾರವನ್ನು ಸಂಬಂಧಪಟ್ಟ ಸರ್ಕಾರಗಳು ತೆಗೆದುಕೊಳ್ಳಬೇಕು

LEAVE A REPLY

Please enter your comment!
Please enter your name here