Homeಮುಖಪುಟಮಿಥುನ್ ಶೇಟ್ ಅಲಿಯಾಸ್ ಚಕ್ರವರ್ತಿ ಸೂಲಿಬೆಲೆ ಲಿಂಗಾಯಿತರಾಗಲು ಹೊರಟಿದ್ದು, ಹಿಂಜರಿದಿದ್ದು.....

ಮಿಥುನ್ ಶೇಟ್ ಅಲಿಯಾಸ್ ಚಕ್ರವರ್ತಿ ಸೂಲಿಬೆಲೆ ಲಿಂಗಾಯಿತರಾಗಲು ಹೊರಟಿದ್ದು, ಹಿಂಜರಿದಿದ್ದು…..

- Advertisement -
- Advertisement -

ಬಸವಧರ್ಮ ಪೀಠಕ್ಕೆ ಹಿಂದೆ ಮುಖ್ಯಸ್ಥರಾಗಿದ್ದ ಮಾತೆ ಮಹಾದೇವಿಯವರ ಉತ್ತರಾಧಿಕಾರಿಯಾಗಿರುವ ಗಂಗಾ ಮಾತಾಜಿ ಅವರು ಚಕ್ರವರ್ತಿ ಸೂಲಿಬೆಲೆಯವರಿಗೆ ದೀಕ್ಷೆ ನೀಡಲು ಮುಂದಾಗಿರುವ ನಡೆ ಕೂಡ ಅಲ್ಲಿ ಪ್ರತಿರೋಧಕ್ಕೆ ಕಾರಣವಾಗಿದೆ. ಲಿಂಗಾಯತರಲ್ಲಿ ಕೆಲವು ಮಂದಿ ಸಂಘ ಪರಿವಾರದ ಪಿತೂರಿಗಳಿಗೆ ಬಲಿಯಾಗಿ ಬದಲಾಗಿದ್ದರೆ ಮತ್ತೆ ಕೆಲವರು ಹೆಚ್ಚು ಯೋಚನೆ ಮಾಡಲಾರದೆ, ವಚನ ತತ್ವ ಸಾರಿದ ಉದಾತ್ತತೆಯನ್ನು ಅರ್ಥ ಮಾಡಿಕೊಳ್ಳಲು ಆಗದೆ, ಸಂಕುಚಿತ ರಾಷ್ಟ್ರೀಯತೆಯ ಅಪಾಯವನ್ನು ಅರಿಯಲಾಗದೆ ಇಂತಹ ಕುತಂತ್ರಗಳಿಗೆ ಬೇಸ್ತು ಬೀಳುತ್ತಿದ್ದಾರೆ.

ಇವರ ಒಂದು ಅಗ್ಗದ ಭಾಷಣ ಬಹಳ ಜನಪ್ರಿಯವಾಗಿತ್ತು. ವಿದೇಶದಲ್ಲಿರುವ ಭಾರತೀಯರ ಕಪ್ಪುಹಣವನ್ನು ಹಿಂದಕ್ಕೆ ತಂದರೆ ಎಲ್ಲಾ ಹೆದ್ದಾರಿಗಳಿಗೂ ಚಿನ್ನದಲ್ಲೇ ಮಾಡಬಹುದು; ಇನ್ನು ಭಾರತದಲ್ಲಿಯೇ ಇರುವ ಕಪ್ಪುಹಣವನ್ನು ಸಂಗ್ರಹಿಸಿದರೆ ಸಣ್ಣ ಪುಟ್ಟ ರಸ್ತೆಗಳಿಗೂ ಟಾರ್ ಬದಲು ಚಿನ್ನವನ್ನೇ ಕರಗಿಸಿ ಹಾಕಬಹುದು ಎಂದು ಹೇಳುವ ಹರಿಕಥಾ ಶೈಲಿಯ (ಹರಿಕಥೆ ಎಂಬ ಅತ್ಯುತ್ತಮ ಕಲಾಮಾಧ್ಯಮದ ನಕಲು) ಮಾತುಗಳನ್ನು ಕೇಳಿದವರೆಷ್ಟು ಜನ, ಅದನ್ನು ಹಂಚಿಕೊಂಡವರು ಮತ್ತಷ್ಟು ಜನ. ಅಂತಹ ಕಪ್ಪುಹಣ ತಂದು ಚಿನ್ನದ ರಸ್ತೆ ಹಾಕಿಸುತ್ತಾನೆ ಎಂದು ಜನಕ್ಕೆ ನಂಬಿಸಿದ್ದ ರಾಜಕೀಯ ನಾಯಕ ಆರು ವರ್ಷ ಆಡಳಿತ ನಡೆಸಿ ಆಗಿದೆ. ಚಿನ್ನ ಇರಲಿ ಕಾಗೆ ಬಂಗಾರವೂ ಜನಕ್ಕೆ ಸಿಕ್ಕಿಲ್ಲ. ಇನ್ನು ರೂಪಕದ ಮಾತದು ಎನ್ನುವವರಿಗೆ ಇವತ್ತಿನ ಆರ್ಥಿಕ ಸ್ಥಿತಿ ನೋಡಿದರೆ ರೂಪಕದ ಮಾತು ಮತ್ತು ಅಗ್ಗದ ಪ್ರಚಾರ ವಿರೂಪಕ್ಕೆ ಎಡೆಮಾಡಿಕೊಟ್ಟಿರುವುದು ಚೆನ್ನಾಗಿ ಅರ್ಥವಾದೀತು.

ನಮೋ ಬ್ರಿಗೇಡ್

ಫೇಕ್‍ನ್ಯೂಸ್ ಸಾಮಾಜಿಕ ಮಾಧ್ಯಮಗಳ ಹುಟ್ಟಿನ ಜೊತೆಗೆ ಸೃಷ್ಟಿಯಾದದ್ದು ಎಂಬ ಮಿಥ್ ಹಲವರಲ್ಲಿ ಇಂದಿಗೂ ನೆಲೆಯೂರಿದೆ. ಅದಕ್ಕೂ ಮುಂಚಿತವಾಗಿಯೇ ನಕಲಿ ಸುದ್ದಿಗಳನ್ನು ಹರಡುತ್ತಿದ್ದ ಮಾಧ್ಯಮಗಳು, ಜನರು ಮತ್ತು ಸಂಸ್ಥೆಗಳು ಇದ್ದವು. ಕೋಮು ದ್ವೇಷವನ್ನು ಹರಡಲು ಮಾಡುತ್ತಿದ್ದ ಭಾಷಣಗಳು ಮತ್ತು ಆ ಭಾಷಣಗಳು ಮುದ್ರಣವಾಗಿ ಸಿಗುತ್ತಿದ್ದ ಪುಸ್ತಕಗಳು, ಇವುಗಳಿಗೆ ಸ್ಪಂದಿಸುತ್ತಿದ್ದ ದಿನಸುದ್ದಿಯ ಪತ್ರಿಕೆಗಳು ಇವೆಲ್ಲವೂ ಸಾಮಾಜಿಕ ಮಾಧ್ಯಮಗಳಷ್ಟೇ ಪರಿಣಾಮಕಾರಿಯಾಗಿ ಸುಳ್ಳುಸುದ್ದಿಗಳನ್ನು ಸಾಮಾಜಿಕ ಮಾಧ್ಯಮಗಳ ಪೂರ್ವದಲ್ಲೇ ಹಬ್ಬಿವೆ. ಅಂತಹ ಸಾಮಾಜಿಕ ಮಾಧ್ಯಮಗಳ ಪೂರ್ವದಲ್ಲಿಯೇ ತಯಾರಾದ ನಕಲಿ ಸುದ್ದಿಗಳ ಕರ್ನಾಟಕದ ಉತ್ಪನ್ನ ಚಕ್ರವರ್ತಿ ಸೂಲಿಬೆಲೆ.

ಚಕ್ರವರ್ತಿ ಸೂಲಿಬೆಲೆ 2006ರಲ್ಲಿ ಬರೆದ ‘ನೆಹರೂ ಪರದೆ ಸರಿಯಿತು’ ಎಂಬ ಪುಸ್ತಕ ಎರಡು ಮೂರು ವರ್ಷಗಳಲ್ಲೇ ಏಳು ಮುದ್ರಣ ಕಂಡಿತ್ತು. ಅಂದರೆ ಹತ್ತಾರು ಸಾವಿರ ಜನ ಅದನ್ನು ಓದಿದ್ದರು. ಕನ್ನಡ ಪ್ರಕಾಶನ ಲೋಕದಲ್ಲಿ ಪ್ರಕಟಗೊಂಡು ಐದು ವರ್ಷ ಕಳೆದರೂ ಪುಸ್ತಕವೊಂದರ ಒಂದು ಸಾವಿರ ಪ್ರತಿ ಖರ್ಚು ಮಾಡುವಲ್ಲಿ ಸುಸ್ತಾಗುವ ಸಮಯದಲ್ಲಿ ಸೂಲಿಬೆಲೆ ವೇಗವಾಗಿ ಜನರನ್ನು ತಲುಪುತ್ತಿದ್ದರು. ಹೀಗೆ ನೆಹರೂ ಬಗ್ಗೆ ಸುಳ್ಳಿನ ಸರಮಾಲೆಯನ್ನೇ ಪೋಣಿಸಿದ್ದ ಸೂಲಿಬೆಲೆ ಅವರು ಬಿಜೆಪಿ ಪಕ್ಷದ, ಸಂಘ ಪರಿವಾರದ ಮತ್ತು ಅವರ ಬೆಂಬಲಿಗರ ಡಾರ್ಲಿಂಗ್ ಆಗಿದ್ದರು. ಸುಳ್ಳು ಮಾಹಿತಿಯನ್ನು ಸತ್ಯದ ತಲೆಯ ಮೇಲೆ ಹೊಡೆದಂತೆ ಒಪ್ಪಿಸುತ್ತಿದ್ದ ಚಕ್ರವರ್ತಿ ಸೂಲಿಬೆಲೆ ಅವರನ್ನು ತಮ್ಮ ರಾಜಕೀಯ ಸಿದ್ಧಾಂತದ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದ ಬಿಜೆಪಿ ಪಕ್ಷಕ್ಕೆ ಮತ್ತು ಸಂಘ ಪರಿವಾರಕ್ಕೆ ಸ್ವತಃ ಸೂಲಿಬೆಲೆ ಅವರೇ ರಾಜಕೀಯವಾಗಿ ಮೇಲೇರುವುದು ಅಷ್ಟು ಬೇಕಾದಂತಿಲ್ಲ.

ಲಿಂಗಾಯತ ಧರ್ಮಕ್ಕೆ ಸೇರಿಕೊಳ್ಳುವ ತಂತ್ರದ ಹಿಂದೆ?

ನ್ಯಾಯಪಥಕ್ಕೆ ಲಭ್ಯವಿರುವ ಮಾಹಿತಿಯ ಪ್ರಕಾರ ಯಾವುದೇ ಪ್ರತಿರೋಧ ಬರದೆ ಹೋಗಿದ್ದರೆ ಚಕ್ರವರ್ತಿ ಸೂಲಿಬೆಲೆ ಅವರು 30 ಮೇ 2020 ಶನಿವಾರ ಲಿಂಗಾಯತರಾಗಿ ದೀಕ್ಷೆ ತೆಗೆದುಕೊಳ್ಳಬೇಕಿತ್ತು. ತನ್ನ ಶಿಷ್ಯ ಪಂಚಾಕ್ಷರಿ ಹಿರೇಮಠ ಎನ್ನುವವರ ಮೂಲಕ ಬಸವಧರ್ಮ ಪೀಠದ ಸದ್ಗುರುಗಳಾದ ಗಂಗಾಮಾತಾಜಿ ಅವರ ಜೊತೆಗೆ ಮಾತುಕತೆಗೆ ನಡೆಸಿ ಒಪ್ಪಿಗೆಯನ್ನೂ ಪಡೆದಿದ್ದರು. ಆದರ ವೈದಿಕಶಾಹಿಗಳ ಪರವಾಗಿ ತನ್ನೆಲ್ಲಾ ಶಕ್ತಿಯನ್ನು ಬಳಸಿ, ವೈದಿಕ ಧರ್ಮ ಪ್ರಣೀತ ರಾಷ್ಟ್ರೀಯತೆಯನ್ನು ಬಂಡವಾಳವಾಗಿರಿಸಿಕೊಂಡಿರುವ ಪಕ್ಷದ ವಕ್ತಾರನಂತೆ ಕೆಲಸ ಮಾಡುತ್ತಿರುವ ವ್ಯಕ್ತಿ, ತನ್ನ ಪೂರ್ವಾಪರವನ್ನು ಬಿಡಲೊಪ್ಪದೆ ತನ್ನ ರಾಜಕೀಯ ಬೆಳವಣಿಗೆಯ ಕಾರಣಕ್ಕಾಗಿ ಮಾತ್ರ ಮಾಡಿರುವ ಈ ತಂತ್ರಕ್ಕೆ ಸೊಪ್ಪು ಹಾಕಬಾರದು ಎಂದು ಬಸವಧರ್ಮ ಪೀಠದ ಸ್ವಾಮಿಗಳಾದ ಚನ್ನಬಸವಣ್ಣ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ ಮತ್ತು ಆ ಪೀಠದ ಪದಾಧಿಕಾರಿಗಳಾದ ಎಸ್.ದಿವಾಕರ್, ಶ್ರೀಶೈಲ ಮಸೂದಿ ಇವರುಗಳನ್ನು ಒಳಗೊಂಡ ಒಂದು ತಂಡ ತೀವ್ರ ವಿರೋಧ ತೋರಿರುವ ಹಿನ್ನಲೆಯಲ್ಲಿ ದೀಕ್ಷೆಯ ಕಾರ್ಯಕ್ರಮ ಈ ಸಮಯದಲ್ಲಿ ರದ್ದಾಗಿದೆ.

ಯಾವುದೇ ಒಬ್ಬ ವ್ಯಕ್ತಿ ಬಸವ ಮತ್ತು ಇತರ ಶರಣರ ವಚನಗಳನ್ನು ಅದು ಪ್ರತಿಪಾದಿಸುವ ಸಮಾನತೆಯ ತತ್ವವನ್ನು ಒಪ್ಪಿ ಲಿಂಗಾಯಿತನಾಗುವುದಾದರೆ ಮತ್ಯಾರೋ ವಿರೋಧಿಸುವ ಪ್ರಶ್ನೆ ಬರುವುದೇ ಇಲ್ಲ. ಅದರಲ್ಲಿಯೂ ಕೊಂಕಣಿ ಮೂಲದ (ಪೂರ್ವಾಶ್ರಮದ ಹೆಸರು ಮಿಥುನ್ ಶೇಟ್) ಮೇಲ್ಜಾತಿ ವೈಶ್ಯವಾಣಿ ಜಾತಿಯ ಯುವಕನೊಬ್ಬ ವೈದಿಕತೆಯನ್ನು ವಿರೋಧಿಸಿದ ಬಸವ-ಲಿಂಗಾಯತ ಧರ್ಮವನ್ನು ಒಪ್ಪಿ ಸೇರುತ್ತಾನೆ ಎಂದರೆ ಅದನ್ನು ಸ್ವಾಗತಿಸಲೇಬೇಕು. ಆದರೆ ಮಿಥುನ್ ಶೇಟ್ ಅಲಿಯಾಸ್ ಚಕ್ರವರ್ತಿ ಸೂಲಿಬೆಲೆಯವರು ಲಿಂಗಾಯತರಾಗಲು ಹೂಡಿರುವ ಆಟ ಅಷ್ಟು ಸರಳವಾದದ್ದಲ್ಲ.

ತೇಜಸ್ವಿ ಸೂರ್ಯ

ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಕೊನೆಯ ವರ್ಷಗಳಲ್ಲಿ ಕರ್ನಾಟಕದಲ್ಲಿ ಒಂದು ಚಳುವಳಿ ಪ್ರಾರಂಭವಾಯಿತು. ಲಿಂಗಾಯತ ಧರ್ಮ ಅವೈದಿಕವಾದದ್ದು. ವೈದಿಕ ಮೂಲದ ಧರ್ಮಕ್ಕಿಂತ ಇದು ಭಿನ್ನವಾದದ್ದು ಎಂಬ ನೆಲೆಗಟ್ಟಿನಲ್ಲಿ ಗಟ್ಟಿಯಾದ ಧ್ವನಿಯೊಂದಿಗೆ ಪ್ರಾರಂಭವಾದ ಚಳವಳಿ, ಉತ್ತರ ಕರ್ನಾಟಕದ ಲಿಂಗಾಯತ ಸಮುದಾಯಗಳಲ್ಲಿ ದೊಡ್ಡ ಪರಿವರ್ತನೆಗೆ-ಚಲನೆಗೆ ಕಾರಣವಾಗುವ ಸನ್ನಿವೇಶವನ್ನು ಸೃಷ್ಟಿಸಿತ್ತು. ಬಸವಧರ್ಮ ಮತ್ತು ಶರಣ ಚಳುವಳಿಗಳ ಬಗ್ಗೆ ಅಪಾರ ಸಂಶೋಧನೆ ಮಾಡಿದ್ದ ಕಲ್ಬುರ್ಗಿ ಅವರ ಕೊಲೆಯಾಗಿತ್ತು. ಪ್ರಗತಿಪರ ಪತ್ರಕರ್ತೆ ಗೌರಿ ಲಂಕೇಶ್ ಅವರ ಕೊಲೆ ಆಗಿತ್ತು. ಈ ಕೊಲೆ ಮಾಡಿದ್ದವರು ತೀವ್ರಗಾಮಿ ವೈದಿಕ ಧರ್ಮದ ಅಮಲೇರಿಸಿಕೊಂಡ ಹುಡುಗರು. ಅವರ ತಲೆ ಕೆಡಿಸಿದ್ದವರು ಇದೆ ಹಿಂದುತ್ವವೆಂಬ ಹೆಸರಿನಲ್ಲಿ ವೈದಿಕ ಧರ್ಮಾಧಾರಿತ ರಾಷ್ಟ್ರೀಯತೆಯ ಪ್ರತಿಪಾದಕರು.

ಇಂತಹ ಸನ್ನಿವೇಶದಲ್ಲಿ ಲಿಂಗಾಯತ ಮತ್ತು ವೀರಶೈವ ಸಮುದಾಯಗಳು ಒಡೆದ ಮನೆಗಳಾಗಿದ್ದವು. ಹಲವು ಪ್ರಗತಿಪರ ಯುವಕರು ಲಿಂಗಾಯತ ಮಠಗಳು ವೈದಿಕ ಪರಂಪರೆಯ ಅಡಿಯಾಳಾಗುವುದನ್ನು ಗಟ್ಟಿ ಧ್ವನಿಯಲ್ಲಿ ವಿರೋಧಿಸಲು ಪ್ರಾರಂಭ ಮಾಡಿದ್ದರು. ಶರಣ ಚಳುವಳಿ ವರ್ಣಾಶ್ರಮ ಮತ್ತು ವೈದಿಕ ಸಂಪ್ರದಾಯ ಹಾಗು ಆಚರಣೆಗಳನ್ನು ವಿರೋಧಿಸಿ ನೆಲೆ ನಿಂತ ವೈಚಾರಿಕ ಮತ್ತು ಜನಪರ ವ್ಯವಸ್ಥೆ ಎಂಬುದನ್ನು ಮತ್ತೆ ನೆನಪಿಸಲು ಈ ಯುವಕರು ಎದ್ದು ನಿಂತಿದ್ದರು. ಉತ್ತರ ಕರ್ನಾಟಕದಲ್ಲಿ ನೆಲೆ ಸ್ಥಾಪಿಸಿರುವ ವೈದಿಕ ಪಕ್ಷಕ್ಕೆ ಇದು ದಿಗಿಲು ಮೂಡಿಸಿದ್ದಂತೂ ನಿಜ. ಈ ಚಳವಳಿಯು ತಾತ್ವಿಕ ಶಕ್ತಿಯ ಮೇಲೆ ಪುನರುಜ್ಜೀವನ ಪಡೆದುಕೊಳ್ಳುವ ಬದಲು ಆ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಕೆಲವು ರಾಜಕಾರಣಿಗಳ ತಕ್ಷಣದ ಅನುಕೂಲಕ್ಕಾಗಿ ಬಳಕೆಯಾಯಿತು ಎಂಬ ಆರೋಪ ಅದರ ಮೇಲಿದೆ.

ಹಾಗಾಗಿಯೇ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಯಿತು ಎಂದು ಹೇಳಲಾಯಿತಾದರೂ ಮುಂದೊಂದು ದಿನ ಅಸಮಾನತೆಯನ್ನು ಸರಿಪಡಿಸಲು ಯಾವುದೇ ಇಚ್ಚೆ ಹೊಂದಿರದ ಮೇಲ್ಮಟ್ಟದಲ್ಲಿ ‘ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು’ ಎಂಬ ಹುಸಿ ಘೋಷಣೆಯನ್ನು ಮಾಡುವ ವೈದಿಕ ರಾಷ್ಟ್ರೀಯವಾದಿ ಮುಖಂಡರುಗಳಿಗೆ, ಸಂಸ್ಥೆಗಳಿಗೆ ಮತ್ತು ಪಕ್ಷಗಳಿಗೆ ಹಿನ್ನಡೆಯಾಗುವ ಅಪಾಯ ಎದುರಿಗಿತ್ತು. ಆಗಲೆ ಬಹುಷಃ ಇದಕ್ಕೆ ಪರಿಹಾರವಾಗಿ ಸುಳ್ಳಿನ ಸರಮಾಲೆಯನ್ನು ಕಟ್ಟಿ ಜನಕ್ಕೆ ಬೇಸ್ತು ಬೀಳಿಸುವ ಶಕ್ತಿ ಉಳ್ಳ ಚಕ್ರವರ್ತಿ ಸೂಲಿಬೆಲೆ ನೆನಪಾಗಿ ಈ ಕಾರ್ಯತಂತ್ರಕ್ಕೆ ಮುಂದಾಗಿರಬಹುದು.

ಪ್ರತಾಪ್ ಸಿಂಹ

ಇದರ ಬಗ್ಗೆ ಮತ್ತೊಂದು ಸಿದ್ಧಾಂತವೂ ಚಾಲ್ತಿಯಲ್ಲಿದೆ. ನಾಥೂರಾಮ ಗೋಡ್ಸೆಯನ್ನು ಆರಾಧಿಸುವ ಪ್ರಗ್ಯಾ ಸಿಂಗ್ ಠಾಕೂರ್‍ರಂತಹ ಫ್ರಿಂಜ್ ಎಲೆಮೆಂಟ್‍ಗಳಿಗೆ ಸ್ವಲ್ಪವೂ ನಾಚಿಕೆಯಿಲ್ಲದೆ ಲೋಕಸಭೆಯ ಟಿಕೆಟ್ ಕೊಟ್ಟು ಗೆಲ್ಲಿಸುವ ಬಿಜೆಪಿ ಪಕ್ಷ ಇಲ್ಲಿ ತನ್ನ ನಕಲಿ ಕಂತೆಗಳ ಮೂಲಕವೇ ನಮೋ ಬ್ರಿಗೇಡ್ ಸ್ಥಾಪಿಸಿ ಪ್ರಚಾರ ಮಾಡುತ್ತಿದ್ದ ಸೂಲಿಬೆಲೆ ಅವರಿಗೆ ಏನಾದರೂ ರಾಜಕೀಯ ಮಾರ್ಗೋಪಾಯ ಮಾಡಿಕೊಡುತ್ತಾರೆ ಎಂಬ ನಂಬಿಕೆ ಅವರ ಅಪಾರ ಬೆಂಬಲಿಗರಿಗೆ ಇದ್ದಂತೆ ಕಾಣುತ್ತದೆ. ನೆನ್ನೆ ಮೊನ್ನೆ ಕಣ್ತೆರೆದ ತೇಜಸ್ವಿ ಸೂರ್ಯ ಅಂತಹವರು ಕಳೆದ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯರಾಗಿ ಹೊರಹೊಮ್ಮಿದ ಮೇಲೆ, ತನ್ನ ಶಿಷ್ಯನಂತೆ ಇದ್ದ ಪ್ರತಾಪ್ ಸಿಂಹ ಲೋಕಸಭೆಗೆ ಎರಡನೇ ಅವಧಿಗೆ ಆಯ್ಕೆಯಾದ ಮೇಲೆ – ಕೆರೆಗಳ ಹೂಳೆತ್ತಿ ಮೋದಿಗೆ ಪ್ರಚಾರ ಕೊಡುತ್ತಿದ್ದ ಚಕ್ರವರ್ತಿ ಸೂಲಿಬೆಲೆ ಅವರಿಗೆ, ವೈಶ್ಯವಾಣಿ ಸಮುದಾಯ ವರ್ಣಾಶ್ರಮದ ಪಟ್ಟಿಯಲ್ಲಿ ಮೇಲ್ಜಾತಿಯಾಗಿದ್ದರೂ, ಕೊಂಕಣಿ ಭಾಷಿಕನಾಗಿದ್ದು ಮತ್ತು ಸಂಖ್ಯೆಯಲ್ಲಿ ಸಣ್ಣದಾಗಿರುವ ಪರಿಚಯ ಹೆಚ್ಚು ಇಲ್ಲದ ತನ್ನ ಈ ಸಮುದಾಯ ರಾಜಕೀಯವಾಗಿ ಪ್ರತಿಫಲ ನೀಡುತ್ತಿಲ್ಲ ಅನ್ನಿಸಿರಬಹುದು. ಸಂಖ್ಯೆಯಲ್ಲಿ ಬಲಿಷ್ಟ ಜಾತಿಗೆ ಸೇರದ ಹೊರತು ರಾಜಕೀಯ ಭವಿಷ್ಯ ತನಗಿಲ್ಲ ಎಂದೆಣಿಸಿ ಈ ನಡೆಗೆ ಸೂಲಿಬೆಲೆ ಮುಂದಾಗಿದ್ದಾರೆ ಅಥವಾ ಸ್ವಕಾರ್ಯ ಮತ್ತು ಸ್ವಾಮಿಕಾರ್ಯ ಎರಡಕ್ಕೂ ಇದೇ ದಾರಿ ಎನ್ನಿಸಿರಬಹುದು. ಯಡಿಯೂರಪ್ಪನವರನ್ನು ಅಸ್ಥಿರಗೊಳಿಸಲು ಬಿಜೆಪಿ ಪಕ್ಷದ ಒಂದು ಬಣ ಯಶಸ್ವಿಯಾದರೆ, ಮುಖ್ಯಮಂತ್ರಿ ಗಾದೆಯ ಮಹಾ ಕನಸನ್ನೂ ಕಾಣುತ್ತಿರಬಹುದು.

ಬಸವಧರ್ಮ ಪೀಠಕ್ಕೆ ಹಿಂದೆ ಮುಖ್ಯಸ್ಥರಾಗಿದ್ದ ಮಾತೆ ಮಹಾದೇವಿಯವರ ಹೆಸರು ಕೂಡ ಹಲವು ವಿವಾದಗಳಲ್ಲಿ ಕಾಣಿಸಿಕೊಂಡಿತ್ತು. ಬಸವಣ್ಣನವರ ಅಂಕಿತಗಳನ್ನೇ ಬದಲಾಯಿಸಿ ವಚನಗಳನ್ನು ಪ್ರಕಟಿಸಿದ್ದ ನಡೆ ಲಿಂಗಾಯತರ ಒಂದು ಪಡೆಯನ್ನು ಕೆರಳಿಸಿತ್ತು. ಆದರೆ, ಬಸವತತ್ವವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಲಿಂಗಾನಂದರು ಮತ್ತು ಮಾತೆ ಮಹಾದೇವಿಯವರ ಕೊಡುಗೆ ದೊಡ್ಡದು. ಈಗ ಅವರ ಉತ್ತರಾಧಿಕಾರಿಯಾಗಿರುವ ಗಂಗಾ ಮಾತಾಜಿ ಅವರು ಚಕ್ರವರ್ತಿ ಸೂಲಿಬೆಲೆಯವರಿಗೆ ದೀಕ್ಷೆ ನೀಡಲು ಮುಂದಾಗಿರುವ ನಡೆ ಕೂಡ ಅಲ್ಲಿ ಪ್ರತಿರೋಧಕ್ಕೆ ಕಾರಣವಾಗಿದೆ. ಲಿಂಗಾಯತರಲ್ಲಿ ಕೆಲವು ಮಂದಿ ಸಂಘ ಪರಿವಾರದ ಪಿತೂರಿಗಳಿಗೆ ಬಲಿಯಾಗಿ ಬದಲಾಗಿದ್ದರೆ ಮತ್ತೆ ಕೆಲವರು ಹೆಚ್ಚು ಯೋಚನೆ ಮಾಡಲಾರದೆ, ವಚನ ತತ್ವ ಸಾರಿದ ಉದಾತ್ತತೆಯನ್ನು ಅರ್ಥ ಮಾಡಿಕೊಳ್ಳಲು ಆಗದೆ, ಸಂಕುಚಿತ ರಾಷ್ಟ್ರೀಯತೆಯ ಅಪಾಯವನ್ನು ಅರಿಯಲಾಗದೆ ಇಂತಹ ಕುತಂತ್ರಗಳಿಗೆ ಬೇಸ್ತು ಬೀಳುತ್ತಿದ್ದಾರೆ. ನಿಜವಾದ ಲಿಂಗಾಯತತ್ವವನ್ನು ಅರಿತವರು ಇವರನ್ನು ಸರಿದಾರಿಗೆ ತರಲು ಹರಸಾಹಸ ಪಡುತ್ತಿದ್ದಾರೆ.

***

ಮಿಥುನ್ ಶೇಟ್ ಅಲಿಯಾಸ್ ಚಕ್ರವರ್ತಿ ಸೂಲಿಬೆಲೆಯವರು ಇಲ್ಲಿಯವರೆಗೂ ಹೇಳಿರುವ ಸುಳ್ಳುಗಳಿಗೆ, ಜನರನ್ನು ದಾರಿ ತಪ್ಪಿಸಿರುವ ನಡೆಗೆ ಪರಿಹಾರವಾಗಿ ಲಿಂಗಾಯತ ದೀಕ್ಷೆ ತೆಗೆದುಕೊಳ್ಳಬೇಕು ಅನ್ನಿಸಿದರೆ ಅದಕ್ಕೆ ಸರ್ವಸ್ವತಂತ್ರರು. ವೈದಿಕ ಪಿತೂರಿಯನ್ನು ನೆನಪಿಸಿ ಸುಡುವ ವಚನಗಳನ್ನು ನಾಲಿಗೆಯಲ್ಲಿ ನುಡಿದರೆ, ಅವುಗಳು ಪ್ರತಿಪಾದಿಸಿದ ತತ್ವವನ್ನು ಒಪ್ಪಿ ಇಲ್ಲಿಯವರೆಗೂ ಅವರು ಮಾಡಿರುವ ತಪ್ಪುಗಳನ್ನು ತ್ಯಜಿಸಿ ಮುಂದಿನ ಹೆಜ್ಜೆ ಇಡಬೇಕು. ಇಲ್ಲಿಯವರೆಗೂ ಅವರು ಬರೆದಿರುವ ಪುಸ್ತಕಗಳಲ್ಲಿ ಇರುವ, ಮಾಡಿರುವ ಭಾಷಣಗಳಲ್ಲಿ ಇರುವ ತಪ್ಪು ಮಾಹಿತಿಗಳ ಬಗ್ಗೆ, ಸುಳ್ಳು ಸಂಗತಿಗಳ ಬಗ್ಗೆ ಜನರಿಗೆ ತಿಳಿಸಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಸಂಕುಚಿತ ಹಿಂದೂ ರಾಷ್ಟ್ರೀಯವಾದದ ಅಪಾಯಗಳನ್ನು ಜನಕ್ಕೆ ತಿಳಿಹೇಳಿ ಬಸವಮಾರ್ಗವನ್ನು ತುಳಿಯಬೇಕು. ಅದನ್ನು ಬಿಟ್ಟು ಕೇವಲ ರಾಜಕೀಯ ಅವಕಾಶವಾದಕ್ಕೆ ಲಿಂಗಾಯಿತನಾಗಲು ಹೋಗುವುದು ಬಸವಣ್ಣ ಮತ್ತು ಎಲ್ಲ ಶಿವಶರಣರಿಗೆ ಮಾಡುವ ಅಪಚಾರ. ಶರಣರ ಉದಾತ್ತ ಮತ್ತು ಸಮಾನತೆಯ ತತ್ವವನ್ನು ತಿಳಿದು ಒಪ್ಪಿಕೊಂಡಿರುವ ಎಲ್ಲ ಲಿಂಗಾಯತ ಮತ್ತು ಲಿಂಗಾಯತೇತರ ಪ್ರಾಜ್ಞರು ಇದಕ್ಕೆ ಪ್ರತಿರೋಧ ತೋರಲೇಬೇಕು.

– ಸಿದ್ದಪ್ಪ ಮೂಲಗೆ
ಲಿಂಗಾಯತ ಚಳುವಳಿಯ ಮುಖಂಡರು


ಇದನ್ನು ಓದಿ: ಸೋನು ಸೂದ್‌ ಬಳಿ ಸಹಾಯ ಕೇಳಿದ ಮಾಜಿ ಸಚಿವ, ಹಾಲಿ BJP ಶಾಸಕ : ಕಾಂಗ್ರೆಸ್‌ ಟೀಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆಗಳು ಆಶ್ಚರ್ಯಕರ ಫಲಿತಾಂಶ ನೀಡುತ್ತವೆ: ಭಗವಂತ್ ಮಾನ್

0
'ಚುನಾವಣಾ ಪೂರ್ವ ಸಮೀಕ್ಷೆಗಳು ಆಮ್ ಆದ್ಮಿ ಪಕ್ಷದ ಜನಪ್ರಿಯತೆಯನ್ನು ಸೆರೆಹಿಡಿಯದಿದ್ದರೂ, ಅದರ ನೈಜ ಸಾಧನೆಯು ನೇರವಾಗಿ ಸರ್ಕಾರವನ್ನು ರಚಿಸಲು ಸಹಾಯ ಮಾಡುತ್ತದೆ. ಲೋಕಸಭೆ ಚುನಾವಣೆಗಳು ಆಶ್ಚರ್ಯಕರ ಫಲಿತಾಂಶಗಳನ್ನು ನೀಡುತ್ತವೆ' ' ಎಂದು ಪಂಜಾಬ್...