ಮಿಜೋರಾಂ ಭಾರತದ ಮೊದಲ ಸಂಪೂರ್ಣ ಸಾಕ್ಷರ ರಾಜ್ಯ ಎಂದು ಮುಖ್ಯಮಂತ್ರಿ ಲಾಲ್ದುಹೋಮ ಮಂಗಳವಾರ ಘೋಷಿಸಿದ್ದಾರೆ. ರಾಜ್ಯದ ರಾಜಧಾನಿ ಐಜ್ವಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಶಿಕ್ಷಣ ರಾಜ್ಯ ಸಚಿವ ಜಯಂತ್ ಚೌಧರಿ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಈ ಘೋಷಣೆ ಮಾಡಿದದಾರೆ. ಅದಾಗ್ಯೂ, ಭಾರತದ ಮೊದಲ ಸಂಪೂರ್ಣ ಸಾಕ್ಷರ ರಾಜ್ಯ ಕೇರಳ ಆಗಿದ್ದು, 1989ರಲ್ಲೆ ರಾಜ್ಯವು 100% ಸಾಕ್ಷರತೆಯನ್ನು ಸಾಧಿಸಿದೆ ಎಂದು ಘೋಷಿಸಲಾಯಿತು.
2011 ರ ಜನಗಣತಿಯ ಪ್ರಕಾರ ಮಿಜೋರಾಂನ ಸಾಕ್ಷರತಾ ಪ್ರಮಾಣ 91.3% ರಷ್ಟಿದೆ. ಇದು ರಾಜ್ಯವನ್ನು ದೇಶದ ಮೂರನೇ ಅತ್ಯಂತ ಸಾಕ್ಷರರನ್ನಾಗಿ ಮಾಡಿದೆ. ಇದರ ನಂತರ, ಉಳಿದ ವ್ಯಕ್ತಿಗಳಿಗೆ ಶಿಕ್ಷಣ ನೀಡಲು ಕೇಂದ್ರ ಪ್ರಾಯೋಜಿತ ಯೋಜನೆಯಾದ ನ್ಯೂ ಇಂಡಿಯಾ ಲಿಟರಸಿ ಪ್ರೋಗ್ರಾಂ ಅನ್ನು ಜಾರಿಗೆ ತರಲಾಯಿತು ಎಂದು ಕೇಂದ್ರ ಶಿಕ್ಷಣ ಸಚಿವಾಲಯ ತಿಳಿಸಿದೆ.
ಮಿಜೋರಾಂನಲ್ಲಿ ಸಾಕ್ಷರತಾ ಪ್ರಮಾಣವು 95% ರ ಗಡಿಯನ್ನು ದಾಟಿದ್ದು, ಇದನ್ನು ಕೇಂದ್ರ ಶಿಕ್ಷಣ ಸಚಿವಾಲಯವು ಪೂರ್ಣ ಸಾಕ್ಷರತೆಗೆ ಸಮಾನವೆಂದು ಪರಿಗಣಿಸುತ್ತದೆ.
ಸಂಪೂರ್ಣ ಸಾಕ್ಷರ ರಾಜ್ಯವಾಗುವುದು ಮಿಜೋರಾಂನ “ಪ್ರಯಾಣದಲ್ಲಿ ಒಂದು ಐತಿಹಾಸಿಕ ಕ್ಷಣ” ಎಂದು ಲಾಲ್ದುಹೋಮ ಹೇಳಿದ್ದಾರೆ. “ಇದು ಪರಿವರ್ತನೆಯ ಮೈಲಿಗಲ್ಲು, ಇದು ನಮ್ಮ ಜನರ ಸಾಮೂಹಿಕ ಇಚ್ಛಾಶಕ್ತಿ, ಶಿಸ್ತು ಮತ್ತು ದೃಷ್ಟಿಕೋನವನ್ನು ಹೇಳುತ್ತದೆ” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
“ನಿರಂತರ ಶಿಕ್ಷಣ, ಡಿಜಿಟಲ್ ಬಳಕೆ ಮತ್ತು ವೃತ್ತಿಪರ ಕೌಶಲ್ಯ ತರಬೇತಿಯ ಮೂಲಕ” ರಾಜ್ಯದಲ್ಲಿ ಉನ್ನತ ಮಟ್ಟದ ಸಾಕ್ಷರತೆಯನ್ನು ಉಳಿಸಿಕೊಳ್ಳಬೇಕು. ಎಲ್ಲಾ ಮಿಜೋಗಳಿಗೆ ಡಿಜಿಟಲ್ ಸಾಕ್ಷರತೆ, ಆರ್ಥಿಕ ಸಾಕ್ಷರತೆ ಮತ್ತು ಉದ್ಯಮಶೀಲತಾ ಕೌಶಲ್ಯದ ಹೆಚ್ಚಿನ ಗುರಿಯನ್ನು ಈಗ ನಾವು ಹೊಂದಬೇಕಿದೆ” ಎಂದು ಲಾಲ್ದುಹೋಮ ಹೇಳಿದ್ದಾರೆ.
ಕೇರಳವನ್ನು ಭಾರತದ ಮೊದಲ ಸಂಪೂರ್ಣ ಸಾಕ್ಷರ ರಾಜ್ಯ ಎಂದು 1989 ರಿಂದಲೇ ಗುರುತಿಸಲಾಗಿದೆ ಎಂಬುದು ಐತಿಹಾಸಿಕವಾಗಿ ದಾಖಲಾಗಿದೆ. ಕೇರಳವು 100% ಸಾಕ್ಷರತೆಯನ್ನು ಸಾಧಿಸಿದ ಮೊದಲ ರಾಜ್ಯವಾಗಿದ್ದು, ಇದನ್ನು ಭಾರತ ಸರ್ಕಾರ ಮತ್ತು ಇತರ ಸಂಸ್ಥೆಗಳು ಒಪ್ಪಿಕೊಂಡಿವೆ. ಅದಾಗ್ಯೂ, ಮಿಜೋರಾಂನ ಮುಖ್ಯಮಂತ್ರಿಯ ಘೋಷಣೆಯು 98.2% ಸಾಕ್ಷರತೆಯ ದರವನ್ನು ಆಧರಿಸಿ ಹೇಳಲಾಗಿದೆ.


