Homeಕರ್ನಾಟಕಆಧುನಿಕ ಮಹಿಳೆಯರು ಜನ್ಮ ನೀಡಲು ಬಯಸುತ್ತಿಲ್ಲ, ಇದು ಒಳ್ಳೆಯದಲ್ಲ: ಸಚಿವ ಸುಧಾಕರ್‌ ವಿವಾದಾತ್ಮಕ ಹೇಳಿಕೆ

ಆಧುನಿಕ ಮಹಿಳೆಯರು ಜನ್ಮ ನೀಡಲು ಬಯಸುತ್ತಿಲ್ಲ, ಇದು ಒಳ್ಳೆಯದಲ್ಲ: ಸಚಿವ ಸುಧಾಕರ್‌ ವಿವಾದಾತ್ಮಕ ಹೇಳಿಕೆ

- Advertisement -
- Advertisement -

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವೈಜ್ಞಾನಿಕ ಸಂಸ್ಥೆ(ನಿಮ್ಹಾನ್ಸ್)ಯಲ್ಲಿ ಭಾನುವಾರ ನಡೆದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯಲ್ಲಿ ಮಾತನಾಡಿದ್ದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌, ‘‘ಆಧುನಿಕ ಭಾರತೀಯ ಮಹಿಳೆಯರು ಒಂಟಿಯಾಗಿ ಇರಲು ಬಯಸುತ್ತಾರೆ. ಮದುವೆಯಾದ ನಂತರ ಕೂಡಾ ಅವರು ಜನ್ಮ ನೀಡಲು ಇಷ್ಟಪಡುತ್ತಿಲ್ಲ. ಬಾಡಿಗೆ ತಾಯ್ತನದಿಂದ ಮಕ್ಕಳನ್ನು ಬಯಸುತ್ತಾರೆ, ಇದು ಸರಿಯಲ್ಲ’’ ಎಂದು ಹೇಳಿ ವಿವಾದ ಸೃಷ್ಟಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, “ಇಂದು ಇದನ್ನು ಹೇಳಲು ನನಗೆ ಬೇಸರವಾಗುತ್ತಿದೆ. ಭಾರತದ ಬಹಳಷ್ಟು ಆಧುನಿಕ ಮಹಿಳೆಯರು ಒಂಟಿಯಾಗಿರಲು ಬಯಸುತ್ತಾರೆ. ಅವರು ಮದುವೆಯಾಗಿದ್ದರೂ ಜನ್ಮ ನೀಡಲು ಬಯಸುತ್ತಿಲ್ಲ. ಬಾಡಿಗೆ ತಾಯ್ತನದಿಂದ ಮಕ್ಕಳನ್ನು ಬಯಸುತ್ತಿದ್ದಾರೆ. ನಮ್ಮ ಆಲೋಚನೆಯಲ್ಲಿ ಗಮನಾರ್ಹ ಬದಲಾವಣೆಯಾಗಿದ್ದು, ಇದು ಒಳ್ಳೆಯದಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸುಪ್ರೀಂ ತೀರ್ಪು ಎಫೆಕ್ಟ್‌‌: ಅವಿವಾಹಿತ ಮಹಿಳೆಯರಿಗೆ ರಾಷ್ಟ್ರೀಯ ರಕ್ಷಣಾ, ನೌಕಾ ಅಕಾಡೆಮಿ ಪರೀಕ್ಷೆಗೆ ಯುಪಿಎಸ್‌ಸಿ ಅನುಮತಿ

ಭಾರತೀಯ ಸಮಾಜದ ಮೇಲೆ “ಪಾಶ್ಚಿಮಾತ್ಯ ಪ್ರಭಾವ” ಹೆಚ್ಚಾಗಿದೆ ಎಂದು ವಿಷಾದಿಸಿದ ಸಚಿವ ಸುಧಾಕರ್‌, ಜನರು ತಮ್ಮ ಹೆತ್ತವರು ತಮ್ಮೊಂದಿಗೆ ಇರಲು ಇಷ್ಟಪಡುತ್ತಿಲ್ಲ ಎಂದು ಹೇಳಿದ್ದಾರೆ.

“ದುರದೃಷ್ಟವಶಾತ್, ಇಂದು ನಾವು ಪಾಶ್ಚಿಮಾತ್ಯ ಮಾರ್ಗದಲ್ಲಿ ನಡೆಯುತ್ತಿದ್ದೇವೆ. ಅಜ್ಜ-ಅಜ್ಜಿಯರು ನಮ್ಮೊಂದಿಗೆ ಇರುವುದನ್ನು ಬಿಡಿ, ಹೆತ್ತವರೇ ನಮ್ಮೊಂದಿಗೆ ಇರುವುದನ್ನು ನಾವು ಬಯಸುತ್ತಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಕ್ಷದ ಕಚೇರಿಯಲ್ಲೆ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ಕಾರ್ಯಕರ್ತ; FIR ದಾಖಲು

ಭಾರತದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ ಸುಧಾಕರ್‌, “ಪ್ರತಿ ಏಳು ಭಾರತೀಯರಲ್ಲಿ ಒಬ್ಬರು ಒಂದು ರೀತಿಯ ಮಾನಸಿಕ ಸಮಸ್ಯೆ ಹೊಂದಿದ್ದಾರೆ. ಅದು ಸೌಮ್ಯ, ಮಧ್ಯಮ ಮತ್ತು ತೀವ್ರವಾಗಿರಬಹುದು. ಒತ್ತಡ ನಿರ್ವಹಣೆ ಒಂದು ಕಲೆಯಾಗಿದ್ದು, ಈ ಕಲೆಯನ್ನು ಭಾರತೀಯರಾದ ನಾವು ಕಲಿಯಬೇಕಾಗಿಲ್ಲ. ನಾವು ಒತ್ತಡವನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ಜಗತ್ತಿಗೆ ಬೋಧಿಸಬೇಕಾಗಿದೆ. ಯಾಕೆಂದರೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳು ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಜಗತ್ತಿಗೆ ಕಲಿಸಿದ ಅದ್ಭುತ ಸಾಧನಗಳಾಗಿವೆ” ಎಂದು ಅವರು ಹೇಳಿದ್ದಾರೆ.

ಸುಧಾಕರ್‌ ಅವರು ಮಹಿಳೆಯರ ವಿರುದ್ದ ನೀಡಿದ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಾಮಾಜಿಕ ಕಾರ್ಯಕರ್ತೆ ಸಂಜ್ಯೋತಿ ಅವರು, “ಮಾನ್ಯ ಆರೋಗ್ಯ ಸಚಿವರೇ ನಿಮಗೆ ಉತ್ತಮವಾದ ಗಂಭೀರ ಚಿಕಿತ್ಸೆಯ ಅಗತ್ಯವಿದೆ. ಅದೃಷ್ಟವಶಾತ್ ನಮ್ಮಲ್ಲಿ ವಿಶ್ವದ ಅತ್ಯುತ್ತಮ ಮಾನಸಿಕ ಆರೋಗ್ಯ ವ್ಯವಸ್ಥೆಯಾಗಿರುವ ಬೆಂಗಳೂರಿನ ನಿಮ್ಹಾನ್ಸ್ ಇದೆ” ಎಂದು ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಮಂಗಳೂರು: ಮತ್ತೊಂದು ಅನೈತಿಕ ಪೊಲೀಸ್‌ಗಿರಿ; ಇಬ್ಬರು ಬಜರಂಗದಳ ಕಾರ್ಯಕರ್ತರ ಬಂಧನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read