ಕಾಫಿ ಬೋರ್ಡ್ ಬೆಂಗಳೂರು

ಕಳೆದು ಹೋದ ದಿನಗಳು….. ಭಾಗ -2, ಅಧ್ಯಾಯ -5

1942ರಲ್ಲಿ ಕಾಫಿ ಬೋರ್ಡ್ ಸ್ಥಾಪನೆಯಾದ ನಂತರ ಕಾಫಿ ಉದ್ಯಮದ ಎಲ್ಲ ಹಿಡಿತವೂ ಕಾಫಿ ಬೋರ್ಡ್‌ನ ಕೈಯಲ್ಲಿ ಸೇರಿತ್ತು. ಗಣನೀಯ ಪ್ರಮಾಣದಲ್ಲಿ ಸರ್ಕಾರಕ್ಕೆ ವಿದೇಶಿ ವಿನಿಮಯ ತಂದುಕೊಡುವ ಪ್ರತಿಷ್ಟಿತ ಬೆಳೆಯ ಗೌರವ ಕಾಫಿಗೆ ಸಿಕ್ಕಿತು. ಕಾಫಿ ಸಂಗ್ರಹಣೆ ಮತ್ತು ಮಾರಾಟ ಎಲ್ಲವೂ ಕಾಫಿ ಬೋರ್ಡ್‌ನ ಏಕಸ್ವಾಮ್ಯದಲ್ಲಿತ್ತು. ಬೆಳೆಗಾರನಿಗೆ ನಿಯಮಿತವಾಗಿ ಹಣ ಪಾವತಿಯಾಗುತ್ತಿತ್ತು. ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಒಂದು ರೀತಿಯ ಸಮಾಧಾನಕರ ಹಾಗೂ ಸ್ಥಿರೀಕರಿಸಿದ ಬೆಲೆ ಬೆಳೆಗಾರನಿಗೆ ದೊರೆಯುತ್ತಿದ್ದುದರಿಂದ ಬೆಳೆಗಾರರೂ ಕಾಫಿಬೋರ್ಡನ್ನು ನೆಚ್ಚಿಕೊಂಡಿದ್ದರು, ಅಷ್ಟೇ ಅಲ್ಲ ಹೆಮ್ಮೆಯಿಂದಲೂ ಸಮರ್ಥಿಸಿಕೊಳ್ಳುತ್ತಿದ್ದರು. ಕಾಫಿಬೆಳೆಗಾರರು ಒಂದು ರೀತಿಯ ಆರ್ಥಿಕ ಶಿಸ್ತಿಗೆ ತಮ್ಮಷ್ಟಕ್ಕೆ ತಾವೇ ಒಳಗಾಗಿದ್ದರು. ಆದರೆ ಇದಕ್ಕೆ ಇನ್ನೊಂದು ಮುಖವೂ ಇತ್ತು. ಆಗ ಕಾರ್ಮಿಕರಿಗೆ ಸಿಗುತ್ತಿದ್ದ ಕೂಲಿ ಜೀವ ಉಳಿಸಿಕೊಳ್ಳಲು ಮಾತ್ರ ಸಾಧ್ಯವಾಗುವಷ್ಟು ಕಡಿಮೆ ಇತ್ತಲ್ಲದೆ, ತೋಟ ನಿರ್ವಹಣೆಯ ಇತರ ಖರ್ಚುಗಳು ಕಡಿಮೆ ಇದ್ದವು.

ನಿಧಾನವಾಗಿ ಅಲ್ಲಿಯೂ ರಾಜಕಾರಣ, ಅಧಿಕಾರಶಾಹಿ ಮನೋಭಾವನೆ ಪ್ರಾರಂಭವಾಯಿತು. ಬೆಳೆಗಾರರಲ್ಲೂ ಅತೃಪ್ತಿ ಕಾಡತೊಡಗಿತು.

ಕಾಫಿ ಬೋರ್ಡ್ ಇಂದು

ಎಂಭತ್ತರ ದಶಕದ ಕೊನೆಯ ಭಾಗದಲ್ಲೇ ಕಾಫಿ ಬೆಳೆಗಾರರಿಗೆ, ಸರ್ಕಾರಗಳಾಗಲೀ, ಕಾಫಿಬೋರ್ಡ್ ಆಗಲೀ ತಮ್ಮ ಹಿತವನ್ನು ಕಾಯುತ್ತಿಲ್ಲವೆಂಬ ಅತೃಪ್ತಿ ಕಾಡತೊಡಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಉತ್ತಮ ಬೆಲೆಯಿದ್ದಾಗಲೂ ಕಾಫಿ ಬೋರ್ಡ್ ಬೆಳೆಗಾರರಿಗೆ ಉತ್ತಮ ಬೆಲೆ ನೀಡುತ್ತಿಲ್ಲ ಎಂಬ ಅಸಮಧಾನ ಕಾಡತೊಡಗಿತ್ತು. ಕಾಫಿ ಬೋರ್ಡಿಗೆ ಕಾಫಿ ಉದ್ಯಮವನ್ನೇ ಅರಿಯದ ರಾಜಕಾರಣಿಗಳು ಆಧ್ಯಕ್ಷರಾಗಿ ಬರತೊಡಗಿದರು. ಕಾಫಿಬೋರ್ಡಿನ ಹಣ ಇವರ ಐಷಾರಾಮಕ್ಕೆ ಬಳಕೆಯಾಗುತ್ತಿದೆ ಎಂಬ ಸಿಟ್ಟು ವ್ಯಾಪಕವಾಗತೊಡಗಿತು. ಇದಕ್ಕೆ ಸರಿಯಾಗಿ ಕಾಫಿ ಬೋರ್ಡಿನ ಸಂಶೋಧನಾ ಕೇಂದ್ರಗಳಲ್ಲಿಯೂ ರಾಜಕಾರಣ ಪ್ರವೇಶವಾಗಿ ಸಂಶೋಧನೆ ಹಿಂದೆ ಬೀಳುತ್ತಿದೆಯೆಂಬ ಆತಂಕವೂ ಬೆಳೆಗಾರರಲ್ಲಿ ಶುರುವಾಯಿತು.

ಇದಕ್ಕೆಲ್ಲ ಸಮರ್ಥನೆಯೆಂಬಂತೆ ರಾಜೀವಗಾಂಧಿಯವರ ಕಾಲದಲ್ಲಿ ಕಾಫಿ ಬೆಳೆಯ ಬಗ್ಗೆ ಏನೂ ತಿಳಿಯದ ಕೋಲಾರದ ಸಂಸದ ಎಂ.ಎಸ್. ಕೃಷ್ಣನ್ ಕಾಫಿಬೋರ್ಡಿನ ಅಧ್ಯಕ್ಷರಾದರು. ಅವರು  ಬೆಳೆಗಾರರ ಪ್ರತಿನಿಧಿಗಳ ಪ್ರಶ್ನೆಗೆ ನೀಡಿದ “ನಾನು ರಾಜೀವಗಾಂಧಿಯವರಿಗೆ ಉತ್ತರಿಸಲು ಬದ್ಧನೇ ಹೊರತು ನಿಮಗಲ್ಲ” ಎಂಬರ್ಥದ ಉತ್ತರ ಬೆಳೆಗಾರರನ್ನು ರೊಚ್ಚಿಗೇಳಿಸಿತು. ಕಾಫಿ ಬೋರ್ಡ್ ನಮ್ಮ ಸಂಸ್ಥೆಯಾಗಿ ಉಳಿದಿಲ್ಲ. ಕೋಟ್ಯಂತರ ರೂಪಾಯಿ ವಿದೇಶಿ ವಿನಿಮಯ ಗಳಿಸಿಕೊಡುವ ಬೆಳೆಯ ಲಾಭವನ್ನು ಇವರೇಕೆ ಬಳಸಿಕೊಂಡು ಐಷಾರಾಮೀ ಜೀವನ ನಡೆಸಬೇಕು. ನಮಗೆ ಕಾಫಿ ಬೋರ್ಡಿನ ಅಗತ್ಯವಿಲ್ಲ. ನಮ್ಮ ಕಾಫಿಯನ್ನು ನಾವೇ ಮಾರುತ್ತೇವೆ. ಕಾಫಿ ಬೋರ್ಡನ್ನು ಮುಚ್ಚಿ ಎಂಬ ಕೂಗು ಪ್ರಾರಂಭವಾಯಿತು.

ರಬ್ಬರ್ (ಮೋನೋ ಕಲ್ಚರ್)

ಕಾಫಿ ಮತ್ತು ಏಲಕ್ಕಿ ಬೆಳೆಗಳು ಪ್ಲಾಂಟೇಷನ್ ಬೆಳೆಗಳಲ್ಲಿಯೇ ಹೆಚ್ಚು ಪರಿಸರ ಸ್ನೇಹಿ ಬೆಳೆಗಳು. ಯಾಕೆಂದರೆ ಮುಖ್ಯವಾಗಿ ಇದು ಏಕಬೆಳೆ (Mono culture)ಯಲ್ಲ, ಇದು ಅಂತರ ಬೆಳೆ. ಇದನ್ನು ಬೇರೆ ಕಾಡು ಮರಗಳ ನೆರಳಿನಲ್ಲಿ ಬೆಳೆಯುತ್ತಾರೆ. ಆದ್ದರಿಂದ ಹಲವು ಜಾತಿಯ ಪ್ರಾಣಿ, ಪಕ್ಷಿ, ಕೀಟಗಳಿಗೂ ಇದು ಆಶ್ರಯತಾಣವೇ. ಇತರ ಪ್ಲಾಂಟೇಷನ್ ಬೆಳೆಗಳಿಗೆ ಹೋಲಿಸಿದರೆ ಇದರಲ್ಲಿ ಬಳಸುವ ಕೃಷಿ ವಿಷಗಳ ಪ್ರಮಾಣವೂ ಕಡಿಮೆ. ರೊಬಸ್ಟ ಕಾಫಿಯಲ್ಲಿ ರಸಗೊಬ್ಬರ ಒಂದನ್ನು ಬಳಸುವುದು ಬಿಟ್ಟರೆ ಅದು ಸಂಪೂರ್ಣ ವಿಷಮುಕ್ತ ಸಾವಯವ ಬೆಳೆ. ಮಲೆನಾಡಿನ ಕಾಫಿ ಪ್ರದೇಶದಲ್ಲಿ ಬ್ರಿಟಿಷರಿಂದ ಪ್ರಾರಂಭವಾದ ಕಾಫಿ ತೋಟಗಳು ಅತಿಹೆಚ್ಚು ಮಳೆಬೀಳುವ ಕಾನನಗಳನ್ನು ಬಿಟ್ಟು ಮಲೆನಾಡಿನ ಮಟ್ಟಿಗೆ ಸಾಮಾನ್ಯ ಮತ್ತು ಸ್ವಲ್ಪ ಕಡಿಮೆ ಎಂದು ಪರಿಗಣಿಸಲಾಗುವ 120 ರಿಂದ 60 ಇಂಚುಗಳಷ್ಟು ಮಳೆಬೀಳುವ ಪ್ರದೇಶದ ಕಾಡುಗಳಲ್ಲಿ ಮಾತ್ರ ಇದ್ದವು. ಉಳಿದ ದಟ್ಟ ಅರಣ್ಯಗಳು ಆಗಲೇ ರಕ್ಷಿತಾರಣ್ಯಗಳಾಗಿದ್ದವು. ಬ್ರಿಟಿಷರ ನಂತರ ಆದ ಕಾಫಿ ವಿಸ್ತರಣೆಗಳೆಲ್ಲವೂ ಕಂದಾಯ ಭೂಮಿಗಳು ಮತ್ತು ಇದರಲ್ಲೇ ಬರುವ ಅರೆ ಅರಣ್ಯ ಮತ್ತು ಗೋಮಾಳಗಳು.

ಸರ್ಕಾರಿ ಜಮೀನಿನ ಒತ್ತುವರಿ ನಡೆದಿರುವುದೂ ಹೆಚ್ಚಾಗಿ ಇಂತಹ ಭೂಮಿಯಲ್ಲೇ. ಇದರಲ್ಲಿ ದೀಣೆಯೆಂದು ಕರೆಯಲಾಗುವ ಹುಲ್ಲುಗಾವಲು ಪ್ರದೇಶಗಳೇ ಹೆಚ್ಚು.

ಸರ್ಕಾರಿ ಭೂಮಿಯ ಒತ್ತುವರಿ ಸರಿಯೆಂದು ನನ್ನ ವಾದವಲ್ಲ. ತನ್ನ ಅಧಿಕಾರ ವ್ಯಾಪ್ತಿಯ ನೆಲವನ್ನು ಕಾಪಾಡಿಕೊಳ್ಳುವುದು ಸರ್ಕಾರಗಳ ಕರ್ತವ್ಯ ಕೂಡಾ ಆಗಿದೆ. ಕಾಫಿ ಬೆಳೆಗಾರರರು ಒತ್ತುವರಿ ಮಾಡಿದಾಗಲೂ ಕಾಫಿಯ ಜೊತೆ ಹಲವಾರು ಜಾತಿಯ ಮರಗಿಡಗಳನ್ನು ಬೆಳೆದಿದ್ದಾರೆ. ಆದರೆ ಸರ್ಕಾರವೇ ನೆಡುತೋಪು ಎಂದು ಕರೆದು ಹುಲ್ಲುಗಾವಲಿನಲ್ಲಿ ಅಕೇಸಿಯಾ ನೆಟ್ಟು ಬೆಳೆಸಿದೆ.

ಈ ಪ್ರದೇಶದ ದಟ್ಟ ರಕ್ಷಿತಾರಣ್ಯಗಳನ್ನು ನಾಶ ಮಾಡಿದ್ದು ಕಾಫಿ ಬೆಳೆಗಾರರಲ್ಲ, ಬದಲಿಗೆ ಸರ್ಕಾರಗಳು ನಿರಂತರವಾಗಿ ಮಾಡಿದ ಅಣೆಕಟ್ಟು, ವಿದ್ಯುತ್ ಯೋಜನೆ, ರಸ್ತೆ, ರೈಲ್ವೇ, ನದಿ ತಿರುವು, ಆಯಿಲ್ ಪೈಪ್ ಲೈನುಗಳು ಮುಂತಾದ ಅಭಿವೃದ್ಧಿ ಯೋಜನೆಗಳು.

ಟೀ (ಮೋನೋಕಲ್ಚರ್)

ಮಲೆನಾಡಿನ ಕಾಫಿವಲಯ ಇನ್ನೂ ಹಸಿರಾಗಿ ಉಳಿದಿದ್ದರೆ ಅದಕ್ಕೆ ಮುಖ್ಯ ಕಾರಣ ಇಲ್ಲಿನ ಕಾಫಿ ಮತ್ತು ಏಲಕ್ಕಿ ಬೆಳೆಗಳು. ಇಲ್ಲವಾದಲ್ಲಿ ಇದು ಬೋಳಾಗಿ ಬಯಲುಸೀಮೆಯಂತಾಗುತ್ತಿತ್ತು. ಅಥವಾ ಬೇರೆ ಯಾವುದಾದರೂ ಅಡಿಕೆ, ಟೀ, ರಬ್ಬರ್ ನಂತಹ ಮೋನೋಕಲ್ಚರ್ ಬೆಳೆಗಳಿಂದ ತುಂಬಿರುತ್ತಿತ್ತು. ಕಾಫಿ ಏಲಕ್ಕಿ ಬೆಳೆಗಳಿಂದಾಗಿಯೇ ಲಕ್ಷಾಂತರ ಎಕರೆಯಲ್ಲಿ ಮರಗಿಡಗಳು ಇನ್ನೂ ಇವೆ.

ಆದರೆ ಕಾಫಿ ವಲಯದ ಹೊರಗಿನವರಿಗೆ ಇಲ್ಲಿನ ವಿದ್ಯಮಾನಗಳ ಬಗ್ಗೆ ಮಾಹಿತಿ ಕಡಿಮೆ ಇರುವುದೂ ಒಂದು ಕಾರಣ. ಹಲವಾರು ಜನರಿಗೆ ಸರ್ಕಾರಿ ಅರಣ್ಯ ಭೂಮಿಗೂ ಮತ್ತು ಸರ್ಕಾರಿ ಕಂದಾಯ ಭೂಮಿಗೂ ಇರುವ ವ್ಯತ್ಯಾಸವೂ ತಿಳಿದಿಲ್ಲ. ಇದರೊಂದಿಗೆ ಕಾಫಿಬೆಳೆಗಾರರ ಬ್ರಿಟಿಷ್ ನೆನಪಿನ ಪಳೆಯುಳಿಕೆಯಾದ ಡೌಲು ಮುಂತಾದವುಗಳನ್ನು ನೋಡಿ ಬರುವ ಸಾರ್ವಜನಿಕ ಅಭಿಪ್ರಾಯಗಳು, ಇವೆಲ್ಲವೂ ಸೇರಿ ಇವರೆಲ್ಲ ಸುಖ ಪುರುಷರು, ಲಕ್ಷಾಂತರ ಎಕರೆ ಅರಣ್ಯ ಒತ್ತುವರಿ ಮಾಡಿ ನಾಶ ಮಾಡುತ್ತಿರುವ ಪರಿಸರ ವಿರೋಧಿಗಳು ಎಂಬ ಪೂರ್ವಗ್ರಹ ಮೂಡಲು ಕಾರಣವಾಗಿದೆ. ಪತ್ರಿಕೆಗಳಲ್ಲಿ, ಸಾಮಾಜಿಕ ತಾಣಗಳಲ್ಲಿ, ಹಲವಾರು ವೇದಿಕೆಗಳಲ್ಲಿ ಬರುವ ಅಭಿಪ್ರಾಯಗಳೂ ಇದನ್ನೇ ಪುನರುಚ್ಚರಿಸುತ್ತವೆ.

ಕಾಫಿ ತೋಟವಾಗಿ ಪರಿವರ್ತನೆಯಾಗುತ್ತಿರುವ ದೀಣೆ

ಆದರೆ ಕಾಫಿ ಬೆಳೆಗಾರರಲ್ಲಿ ತಾವು ಕಷ್ಟ ಪಟ್ಟು ದುಡಿದು ದೇಶಕ್ಕೆ ಕೋಟ್ಯಂತರ ರೂಪಾಯಿ ವಿದೇಶಿ ವಿನಿಮಯ ಗಳಿಸಲು ಕಾರಣವಾಗುತ್ತಿರುವ ಪ್ರದೇಶದ ಮೂಲ ಸೌಕರ್ಯಗಳಿಗೆ ಸರ್ಕಾರ ಗಮನಕೊಡುತ್ತಿಲ್ಲ. ನಮ್ಮ ಹಣವನ್ನು ಬೇರೆಕಡೆ ಬಳಸಿಕೊಳ್ಳುತ್ತಿದ್ದಾರೆ, ನಮ್ಮ ಬೆಳೆಯನ್ನು ನಾವೇ ಮಾರಿ ಚೆನ್ನಾಗಿರಬಹುದು ಎಂಬ ಯೋಚನೆ ಬಂದಿದ್ದರಿಂದ ಕಾಫಿಗೆ ಮುಕ್ತ ಮಾರುಕಟ್ಟೆ ಕಲ್ಪಿಸಿ ಎಂಬ ಚಳುವಳಿ ಜೋರಾಯಿತು. ಇದು ರಾಜೀವ್ ಗಾಂಧಿಯವರ ಸರ್ಕಾರ ಹೋಗಿ ವಿ.ಪಿ.ಸಿಂಗ್ ಅವರ ಸರ್ಕಾರದ ಕಾಲದಲ್ಲಿಯೂ ಮುಂದುವರೆಯಿತು. ಆಗಲೂ ಕಾಫಿ ಬೋರ್ಡೇ ಇರಲಿ ಎನ್ನುವವರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದರು.

1991ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ದೊಡ್ಡ ಪಕ್ಷವಾಗಿ ಗೆದ್ದು ಮಿತ್ರ ಪಕ್ಷಗಳೊಡನೆ ಸೇರಿ ಸರ್ಕಾರ ರಚಿಸಿತ್ತು. ಮನಮೋಹನ್ ಸಿಂಗ್ ಅವರು ಹಣಕಾಸು ಸಚಿವರಾಗಿದ್ದರು. ಆಗಷ್ಟೇ ಭಾರತ ಜಾಗತೀಕರಣಕ್ಕೆ ಮತ್ತು ಖಾಸಗೀಕರಣಕ್ಕೆ ತೆರೆದುಕೊಳ್ಳುತ್ತಿತ್ತು. ಎಲ್ಲ ಕಡೆ ಸರ್ಕಾರದ ನಿಯಂತ್ರಣ ಕಡಿಮೆ ಮಾಡಬೇಕೆಂಬ ಚಿಂತನೆ ಹರಡುತ್ತಿತ್ತು. ಅಂತಾರಾಷ್ಟ್ರೀಯ ಕಾಫಿ ಮಾರುಕಟ್ಟೆಯ ಲಾಬಿಯೂ ಕಾಫಿಯ ಮುಕ್ತ ಮಾರುಕಟ್ಟೆಗಾಗಿ ಒಳಗಿನಿಂದಲೇ ಒತ್ತಡ ಹಾಕಿತ್ತು. 1992 ರಲ್ಲಿ ಸರ್ಕಾರ ಮೊದಲ ಹಂತದಲ್ಲಿ, ಬೆಳೆಗಾರರು ತಮ್ಮ ಬೆಳೆಯ ಶೇ.30ರಷ್ಟನ್ನು ಭಾರತದ ಆಂತರಿಕ ಮಾರುಕಟ್ಟೆಯಲ್ಲಿ ಮುಕ್ತವಾಗಿ ಮಾರಬಹುದೆಂದು ನಿಗದಿ ಮಾಡಿತು.

ಕಾಫಿ ತೋಟಗಳ ನಡುವೆ ಸರ್ಕಾರಿ ಅಭಿವೃದ್ಧಿ ಯೋಜನೆಗಳು

ಇಲ್ಲಿ ನಾವು ಒಂದು ವಿಚಾರವನ್ನು ಮುಖ್ಯವಾಗಿ ಗಮನಿಸಬೇಕು. ಅಂದು ಹೆಚ್ಚಿನ ಬೆಳೆಗಾರರು ಸರ್ಕಾರ ತಮ್ಮ ಒತ್ತಾಯಕ್ಕೆ ಮಣಿದು ಹೀಗೆ ಮಾಡಿದೆಯೆಂದು ಖುಷಿ ಪಟ್ಟರು. ಆದರೆ ಅದು ನಿಜವಲ್ಲ.

ಸರ್ಕಾರ ಕಾಫಿ ವ್ಯಾಪಾರವನ್ನು ನಿಯಂತ್ರಣ ಮುಕ್ತವಾಗಿಸಲು ಇವೆಲ್ಲವೂ ಕಾರಣವಾಗಿದ್ದವು. ಈ ಕಾರಣಗಳು ಹೊರಗೆ ಗೋಚರವಾಗುತ್ತಿರಲಿಲ್ಲ. ಆದರೆ ಹಲವಾರು ದೊಡ್ಡ ಬೆಳೆಗಾರರಿಗೆ ಈ ಎಲ್ಲ ವಿಚಾರಗಳ ಮಾಹಿತಿ ಇತ್ತು.

  • ಪ್ರಸಾದ್ ರಕ್ಷಿದಿ

(ಪ್ರಸಾದ್ ರಕ್ಷಿದಿಯವರು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳ್ಳೇಕೆರೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ರಂಗಭೂಮಿ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ. ‘ಜೈ ಕರ್ನಾಟಕ ಸಂಘ’ ಎಂಬ ವೇದಿಕೆ ಸ್ಥಾಪಿಸಿದ ಅವರು ಸುತ್ತಲಿನ ಕಾರ್ಮಿಕರನ್ನೆಲ್ಲ ಒಟ್ಟುಹಾಕಿ ಅವರಿಗೆ ರಾತ್ರಿಶಾಲೆಗಳ ಮೂಲಕ ಅಕ್ಷರಾಭ್ಯಾಸ ಕಲಿಸಿದವರು. ಕೂಲಿ ಕಾರ್ಮಿಕರಿಗೆ ರಂಗಭೂಮಿಯ ಒಲವು ಮೂಡಿಸಿ, ನಾಟಕ ತಂಡವೊಂದನ್ನು ಕಟ್ಟಿ ಹತ್ತಾರು ನಾಟಕಗಳನ್ನು ಪ್ರದರ್ಶಿಸಿದ್ದಲ್ಲದೆ ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ಗಳಿಸಿದ ಹೆಗ್ಗಳಿಕೆ ಅವರದು. ಶಾಲಾಭಿವೃದ್ದಿ, ಸಾವಯವ ಕೃಷಿ, ರಚನಾತ್ಮಕ ರಾಜಕೀಯ ಅವರ ಆಸಕ್ತಿಯ ಕ್ಷೇತ್ರಗಳು. ಅವರ `ಬೆಳ್ಳೇಕೆರೆ ಹಳ್ಳಿ ಥೇಟರ್’ ಈ ಎಲ್ಲಾ ಚಟುವಟಿಕೆಗಳನ್ನು ವಿವರಿಸುವ ಮಹತ್ವದ ಕೃತಿಯಾಗಿದೆ.)


ಇದನ್ನೂ ಓದಿ: ಕಳೆದು ಹೋದ ದಿನಗಳು ಭಾಗ 2, ಅಧ್ಯಾಯ -1: ನಿಮಗೂ, ನನಗೂ ಸಂಬಳ ಕೊಡುವುದು ಈ ಕಾಫಿ ಗಿಡ ಎನ್ನುತ್ತಿದ್ದ ರವೀಂದ್ರನಾಥರು

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಪ್ರಸಾದ್ ರಕ್ಷಿದಿ
+ posts

LEAVE A REPLY

Please enter your comment!
Please enter your name here