Homeಮುಖಪುಟಮಹಾರಾಷ್ಟ್ರ-ಹರ್ಯಾಣ ಫಲಿತಾಂಶ ಅವಮಾನಕರ ಗೆಲುವು ಸಮಾಧಾನಕರ ಸೋಲು

ಮಹಾರಾಷ್ಟ್ರ-ಹರ್ಯಾಣ ಫಲಿತಾಂಶ ಅವಮಾನಕರ ಗೆಲುವು ಸಮಾಧಾನಕರ ಸೋಲು

- Advertisement -
- Advertisement -

| ಎ. ನಾರಾಯಣ |

ಗೆಲುವಿನಲ್ಲೂ ಸೋಲುವುದು ಎಂದರೆ ಹೀಗೆ. ಸೋಲಿನಲ್ಲೂ ಸಂಭ್ರಮಿಸಲು ಸಾಧ್ಯವಾಗುವುದು ಎಂದರೆ ಅದು ಹೀಗೆ. ಹೋದವಾರ ಮಹಾರಾಷ್ಟ್ರ ಮತ್ತು ಹರ್ಯಾಣ ರಾಜ್ಯ ವಿಧಾನಸಭಾ ಚುನಾವಣೆಗಳ ಫಲಿತಾಂಶ ಕಂಡ ಯಾರಿಗಾದರೂ ಹೀಗನಿಸದೆ ಇರದು. ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನಾ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದು ಮತ್ತೊಮ್ಮೆ ಅಧಿಕಾರಕ್ಕೇರುವುದರಲ್ಲಿದೆ. ಹರ್ಯಾಣದಲ್ಲಿ ಬಿಜೆಪಿ ಬಹುಮತ ಪಡೆಯದಿದ್ದರೂ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಾರಣ ಚುನಾವಣೋತ್ತರ ಮೈತ್ರಿಕೂಟ ರಚಿಸಿಕೊಂಡು ಅಲ್ಲೂ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೂ ಬಿಜೆಪಿಗೆ ಇದು ಅವಮಾನಕರ ಗೆಲುವು. ಆ ಪಕ್ಷದ ಅಹಂಕಾರಕ್ಕೆ ಚುನಾವಣಾ ಫಲಿತಾಂಶ ಬಹುದೊಡ್ಡ ಮರ್ಮಾಘಾತ ನೀಡಿದೆ. ಹೀಗಂತ ಹೇಳಿದ್ದು ಬೇರೆ ಯಾರೂ ಅಲ್ಲ. ಸ್ವತಃ ಬಿಜೆಪಿಯ ಮಿತ್ರಪಕ್ಷವಾದ ಶಿವಸೇನೆ ಈ ರೀತಿ ತನ್ನ ಮುಖವಾಣಿ “ಸಾಮ್ನಾ” ದಲ್ಲಿ ಬರೆದಿದೆ.

ಯಾಕೆ ಬಿಜೆಪಿಗೆ ಇದು ಅವಮಾನಕರ ಗೆಲುವು ಅಂತ ತಿಳಿದುಕೊಳ್ಳಬೇಕಾದರೆ ಚುನಾವಣಾಪೂರ್ವದಲ್ಲಿ ಈ ಎರಡು ರಾಜ್ಯಗಳ ಸೋಲು-ಗೆಲುವಿನ ಲೆಕ್ಕಾಚಾರ ನಡೆಯುತಿದ್ದ ರೀತಿಯನ್ನೊಮ್ಮೆ ನೆನಪಿಸಿಕೊಳ್ಳಬೇಕು. ಹೇಳಿ ಕೇಳಿ ಇದು ಕೇಂದ್ರದ ಬಿಜೆಪಿ ಸರಕಾರ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ನಡೆದ ಮೊದಲ ಚುನಾವಣೆ. ಹೀಗಾಗಿ ತನ್ನ ರಾಷ್ಟ್ರಪ್ರೇಮವನ್ನು ಜನರ ಮುಂದಿಡಲು ಬಿಜೆಪಿಯ ಬಳಿ ಹೊಸದೊಂದು ಅಸ್ತ್ರವಿತ್ತು. ಮೇ ತಿಂಗಳಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಇನ್ನೊಂದು ರೀತಿಯ ರಾಷ್ಟ್ರೀಯತೆಯ ಅಸ್ತ್ರ ಹಿಡಿದುಕೊಂಡು ಸಾಧಿಸಿದ ಅಭೂತಪೂರ್ವ ವಿಜಯದ ಗುಂಗು ಆ ಪಕ್ಷದ ತಲೆಯೆಲ್ಲಾ ತುಂಬಿತ್ತು. ಅದು ತಾನು ಮಹಾರಾಷ್ಟ್ರದಲ್ಲಿ ಸುಮಾರು 200 ಸ್ಥಾನಗಳನ್ನು (ಒಟ್ಟು 288) ಮತ್ತು ಹರ್ಯಾಣದಲ್ಲಿ ಸುಮಾರು 70 ಸ್ಥಾನಗಳನ್ನು (ಒಟ್ಟು 90) ಗೆಲ್ಲುವುದು ಶತಸಿದ್ಧ ಎಂದು ಹೋದಲ್ಲಿಬಂದಲ್ಲಿ ಸಾರುತಿತ್ತು. ವಿರೋಧ ಪಕ್ಷಗಳು ಲೆಕ್ಕಕ್ಕಿಲ್ಲ ಅಂತ ಅಣಕಿಸುತಿತ್ತು. ಅದರ ತಾಳಕ್ಕೆ ತಕ್ಕಂತೆ ಕುಣಿಯುವ ಮಾಧ್ಯಮಗಳಂತೂ ಈ ಚುನಾವಣೆಯ ಅಗತ್ಯವೇ ಇಲ್ಲವೆಂತಲೂ, ಬಿಜೆಪಿಗೆ ಎರಡೂ ರಾಜ್ಯಗಳಲ್ಲೂ ಸವಾಲೇ ಇಲ್ಲ ಅಂತಲೂ ನಿರಂತರ ವರದಿ ಮಾಡಿದವು. ಕೊನೆಗೆ ಮತಗಟ್ಟೆ ಸಮೀಕ್ಷೆಗಳು (ಒಂದೆರಡು ಸಮೀಕ್ಷೆಗಳನ್ನು ಬಿಟ್ಟರೆ) ಬಿಜೆಪಿಯ ಸ್ಥಾನಗಳ ಲೆಕ್ಕಾಚಾರವನ್ನು ಯಥಾವತ್ತಾಗಿ ನಕಲು ಮಾಡಿ ಜನರ ಮುಂದಿರಿಸಿದವು. ಫಲಿತಾಂಶ ಬಂದಾಗ ಎಲ್ಲರಿಗೂ ದಿಗಿಲು. ಮಹಾರಾಷ್ಟ್ರದಲ್ಲಿ ಪ್ರಯಾಸದ ಜಯ. ಹರ್ಯಾಣದಲ್ಲಿ ಸರಳ ಬಹುಮತವೂ ಇಲ್ಲ! ಈಗ ಮಹಾರಾಷ್ಟ್ರದಲ್ಲಿ ಶಿವಸೇನೆ ಬಿಜೆಪಿಯನ್ನು ತನ್ನ ತಾಳಕ್ಕೆ ತಕ್ಕ ಹಾಗೆ ಕುಣಿಸಲು ಮುಂದಾಗಿದೆ. ಹರ್ಯಾಣದಲ್ಲಿ ಜನನಾಯಕ ಜನತಾ ಪಕ್ಷ ಎಂಬ ಹೊಸ ಪಕ್ಷದ ಜತೆ ಹೆಣಗಾಡಿಕೊಂಡು ಸರಕಾರ ರಚಿಸಿಕೊಂಡಿದೆ.

ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾಂಗ್ರೆಸ್ ಪಕ್ಷ (ಎನ್.ಸಿ.ಪಿ) ಸೋಲಿನಲ್ಲೂ ಸಾವರಿಸಿಕೊಂಡು ಮುಗುಳ್ನಗುತ್ತಿರುವುದು ಇದೇ ಕಾರಣಕ್ಕೆ. ಈ ಎರಡೂ ಪಕ್ಷಗಳೂ ಬಿಜೆಪಿಯಿಂದ ಅಧಿಕಾರ ಕಸಿದುಕೊಳ್ಳುವಷ್ಟರಮಟ್ಟಿಗೆ ಸಾಧನೆ ತೋರದೇ ಹೋಗಿದ್ದರೂ ತಾವಿನ್ನು ಅಸ್ತಿತ್ವದಲ್ಲಿದ್ದೇವೆ ಮಾತ್ರವಲ್ಲ, ಬಿಜೆಪಿಯ ನಿದ್ದೆ ಕೆಡಿಸುವಷ್ಟರಮಟ್ಟಿಗೆ ಇನ್ನೂ ಜನಬೆಂಬಲವನ್ನೂ ಉಳಿಸಿಕೊಂಡಿದ್ದೇವೆ ಎಂಬ ಸಂದೇಶವನ್ನು ಎರಡೂ ಪಕ್ಷಗಳು ಸ್ಪಷ್ಟವಾಗಿ ರವಾನಿಸಿವೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಇನ್ನಿಲ್ಲದ ಸವಾಲುಗಳ ನಡುವೆ ಚುನಾವಣೆ ಎದುರಿಸಿತ್ತು. ಇನ್ನೇನು ಚುನಾವಣೆಗೆ ವರ್ಷ ಇದೆ ಎನ್ನುವಾಗಲೇ ಬಿಜೆಪಿ ಕಾಂಗ್ರೆಸ್ ಪಾಳಯದ ನಾಯಕರನ್ನು ಒಬ್ಬೊಬ್ಬರಾಗಿ ಖರೀದಿಸಲು ತೊಡಗಿತ್ತು. ಚುನಾವಣಾ ಘೋಷಣೆಯಾಗುವ ವೇಳೆಗೆ ಸ್ವತಃ ವಿರೋಧ ಪಕ್ಷದ ನಾಯಕ ಸೇರಿದಂತೆ ಎಲ್ಲರನ್ನೂ ಬಿಜೆಪಿ ಎಗ್ಗಿಲ್ಲದೆ ಖರೀದಿಸಿ ತನ್ನ ಬಳಿ ಇರಿಸಿಕೊಂಡಿತ್ತು. ಅವರಲ್ಲಿ ಕೆಲವರನ್ನು ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸಿತು ಕೂಡ. ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹವೇ ಉಡುಗಿಹೋಗಿತ್ತು. ಸಾಲದು ಎಂಬುದಕ್ಕೆ ಮಾಧ್ಯಮಗಳು ಈ ಬಾರಿ ಮಹಾರಾಷ್ಟ್ರದಲ್ಲಿ ಸ್ಪರ್ಧೆಯೇ ಇಲ್ಲ, ಇದೊಂದು ಏಕಮುಖ ಚುನಾವಣೆ ಎಂಬಂತೆ ಮೇಲಿಂದ ಮೇಲೆ ಬರೆದ ಕಾರಣ ಸಾಮಾನ್ಯ ಕಾರ್ಯಕರ್ತರ ಜಂಘಾಬಲವೂ ಕುಸಿದಿತ್ತು. ಎನ್.ಸಿ.ಪಿ. ಕೂಡಾ ಇಂತಹದ್ದೇ ಸಮಸ್ಯೆಗಳನ್ನ ಎದುರಿಸಿತ್ತು. ಇದೇನಿದ್ದರೂ ಮುಳುಗುತ್ತಿರುವ ಹಡಗು ಅಂತ ಆ ಪಕ್ಷದಿಂದಲೂ ಆಯಕಟ್ಟಿನ ನಾಯಕರನೇಕರು ಬಿಜೆಪಿಗೆ ತಮ್ಮನ್ನು ಮಾರಿಕೊಂಡಿದ್ದರು. ಹರ್ಯಾಣದಲ್ಲೂ ಹೆಚ್ಚು ಕಡಿಮೆ ಇಂತಹದ್ದೇ ಕತೆ. ಸಾಲದ್ದಕ್ಕೆ ಅಲ್ಲಿ ಕಾಂಗ್ರೆಸ್ ಕಡೆಯ ಕ್ಷಣದವರೆಗೂ ತೀವ್ರವಾದ ಆಂತರಿಕ ಕಚ್ಚಾಟವನ್ನೂ ಎದುರಿಸುತಿತ್ತು. ಇವೆಲ್ಲವನ್ನೂ ಮೀರಿ ನಿಂತು ಕಾಂಗ್ರೆಸ್ ಮತ್ತು ಎನ್.ಸಿ.ಪಿ. ಮಹಾರಾಷ್ಟ್ರದಲ್ಲಿ ಹೋದ ಚುನಾವಣೆಯಲ್ಲಿ ಗೆದ್ದದ್ದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನಗಳನ್ನು ಗಳಿಸಿದವು. ಹರ್ಯಾಣದಲ್ಲಿ ಕಾಂಗ್ರೆಸ್ ತನ್ನ ಸಂಖ್ಯಾಬಲವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿತು. ಅಸ್ತಿತ್ವದಲ್ಲೇ ಇಲ್ಲ ಅಂತ ಎಲ್ಲರೂ ಕಡೆಗಣಿಸಿದ ಎರಡು ವಿರೋಧ ಪಕ್ಷಗಳು ಈ ರೀತಿ ಪುಟಿದೆದ್ದು ನಿಂತದ್ದು ಈ ಕಾಲದ ದೊಡ್ಡ ರಾಜಕೀಯ ಬೆಳವಣಿಗೆ. ಮೋದಿ-ಶಾ ದ್ವಯರ ಏಕಚಕ್ರಾಧಿಪತ್ಯದ ಲೆಕ್ಕಾಚಾರಕ್ಕೆ ಇಷ್ಟರಮಟ್ಟಿಗಾದರೂ ಆದ ಹಿನ್ನಡೆ ದೇಶದಲ್ಲಿ ಹೊಸ ರಾಜಕೀಯ ಸಾಧ್ಯತೆಗಳ ಚರ್ಚೆಗೆ ವೇದಿಕೆ ಒದಗಿಸಿದೆ.

ಕಾಂಗ್ರೆಸ್ ಇಲ್ಲಿ ಗಮನಿಸಬೇಕಾದದ್ದು ಇಷ್ಟನ್ನೇ ಅಲ್ಲ. ಲೋಕಸಭಾ ಚುನಾವಣೆಯ ಸೋಲಿನ ಆಘಾತದಿಂದ ಇನ್ನೂ ಚೇತರಿಸಿಕೊಳ್ಳಲಾಗದೆ ಚಡಪಡಿಸುತ್ತಿರುವ ಕಾಂಗ್ರೆಸ್ ಗೆ ಈ ಎರಡು ರಾಜ್ಯಗಳ ಚುನಾವಣಾ ಫಲಿತಾಂಶ ನೀಡಿದ ಇನ್ನೊಂದು ಸಂದೇಶ ಏನು ಎಂದರೆ ಅದು ಇನ್ನೂ ಕೇವಲ ನೆಹರೂ ಕುಟುಂಬದ ಕುಡಿಗಳನ್ನು ಮಾತ್ರ ನೆಚ್ಚಿಕೊಂಡು ರಾಜಕೀಯ ಮಾಡಲು ಸಾಧ್ಯವಿಲ್ಲ ಎನ್ನುವುದು. ನೆಹರೂ ಕುಟುಂಬದ ವ್ಯಕ್ತಿಯೊಬ್ಬ ಪಕ್ಷ ಮುನ್ನಡೆಸಲು ಅಗತ್ಯ ಇರಬಹುದು. ಆದರೆ ಹೊಸ ತಲೆಮಾರಿನ ಮತದಾರರನ್ನು ಸೆಳೆಯುವ ಶಕ್ತಿ ವಂಶದ ಕುಡಿಗಳಲ್ಲಿ ಉಳಿದಿಲ್ಲ. ಆ ಪಕ್ಷ ಪ್ರಬಲ ಪ್ರಾದೇಶಿಕ ನಾಯಕರನ್ನು ಬೆಳೆಸದೆ ಹೋದರೆ ಅದು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಹರ್ಯಾಣದಲ್ಲಿ ಕಾಂಗ್ರೆಸ್ಸಿಗೆ ಗೆಲುವು ತಂದುಕೊಟ್ಟಿದ್ದು ಬೂಪಿಂದರ್ ಸಿಂಗ್ ಹೂಡಾ ಎನ್ನುವ ಪ್ರಾದೇಶಿಕ ನಾಯಕ. ಮಹಾರಾಷ್ಟ್ರದಲ್ಲಿ ಅದು ಗೆದ್ದಷ್ಟು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದ್ದು ಸ್ಥಳೀಯ ನಾಯಕತ್ವದ ಕಾರಣಕ್ಕೆ. ಕಾಂಗ್ರೆಸ್ ಸ್ಥಳೀಯ ನಾಯಕರೆಲ್ಲಾ ಅವರವರ ಕ್ಷೇತ್ರಗಳಿಗೆ ಸೀಮಿತವಾಗಿ ಉಳಿದಿದ್ದರೆ, ಕಾಂಗ್ರೆಸ್-ಎನ್.ಸಿ.ಪಿ. ಮೈತ್ರಿಕೂಟವನ್ನು ಜನರತ್ತ ಒಯ್ದದ್ದು ಶರದ್ ಪವಾರ್ ಎಂಬ ಏಕಾಕಿ ನಾಯಕ. ಇಳಿವಯಸ್ಸಲ್ಲೂ ಈ ಚುನಾವಣೆಯನ್ನೊಂದು ಸವಾಲಾಗಿ ತೆಗೆದುಕೊಂಡು ಕಾಲಿಗೆ ಚಕ್ರಕಟ್ಟಿಕೊಂಡಂತೆ ಇಡೀ ರಾಜ್ಯ ತಿರುಗಿ ಪವಾರ್ ಮೈತ್ರಿಕೂಟಕ್ಕೆ ಮತ್ತೆ ಜನ ಒಲಿಯುವಂತೆ ಮಾಡಿದರು. ಈ ಯಶಸ್ಸನ್ನು ಮುಂದಿನ ಹಂತಕ್ಕೆ ಒಯ್ಯಬೇಕಾದರೆ, ಕಾಂಗ್ರೆಸ್ಸಿಗೆ ಹೊಸ ಮುಖಗಳ ಅಗತ್ಯವಿದೆ. ಈ ಅಗತ್ಯವನ್ನು ಆ ಪಕ್ಷ ಗುರುತಿಸದೆ ಹೋದರೆ ಮತ್ತೆ ಅದಕ್ಕೆ ಸೋಲಿನಲ್ಲೇ ಸಮಾಧಾನ ಪಟ್ಟುಕೊಳ್ಳುವ ಸ್ಥಿತಿ ಶಾಶ್ವತವಾದೀತು.

ಇನ್ನೊಂದು ವಿಷಯ. ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ವಿಜಯವನ್ನು ದಾಖಲಿಸಿದ ನಂತರ ಬಿಜೆಪಿಯವರು ಈ ದೇಶದ ರಾಜಕೀಯದಲ್ಲಿ ಇನ್ನು ಜಾತಿ-ಆಧಾರಿತ ಮತಗಳಿಕೆಗೆ ಅವಕಾಶವಿಲ್ಲವೆಂದೂ, ಇನ್ನು ಏನಿದ್ದರೂ ‘ಅಭಿವೃದ್ಧಿ’ ಮತ್ತು ರಾಷ್ಟ್ರೀಯತೆಯ ಹೆಸರಿನಲ್ಲೇ ಚುನಾವಣೆ ನಡೆಯುವುದು ಎಂಬ ವಾದವೊಂದನ್ನು ಮುಂಚೂಣಿಗೆ ತಂದರು. ಹಾಗೆಯೇ ವಿವಿಧ ರಾಜ್ಯಗಳಲ್ಲಿ ನಿರ್ಣಾಯಕವಾಗಿರುವ ಪ್ರಬಲ ಜಾತಿಗಳ ಪ್ರಭಾವದಿಂದ ಆಯಾ ರಾಜ್ಯಗಳ ರಾಜಕೀಯವನ್ನು ಹೊರತಂದು ಅಲ್ಲೆಲ್ಲಾ ಧರ್ಮಾಧಾರಿತವಾದ ಹೊಸ ರಾಜಕೀಯವೊಂದನ್ನು ಕಟ್ಟುವ ಇರಾದೆಯೂ ಬಿಜೆಪಿಯದ್ದಾಗಿತ್ತು. ಜಾತಿ ರಾಜಕೀಯ ಕೊನೆಯಾಗಬೇಕು ಎನ್ನುವುದು ಸರಿಯಾದ ವಾದವೇ ಆಗಿದ್ದರೂ, ಅದಕ್ಕೆ ಬಿಜೆಪಿಯ ಧರ್ಮ-ಆಧಾರಿತ ರಾಜಕೀಯ ಉತ್ತರವಾಗಬಾರದು. ಹಾಗೆ ನೋಡಿದರೆ ಪ್ರಬಲ ಜಾತಿಗಳನ್ನು ಮಣಿಸಲು ಬಿಜೆಪಿ ಕೂಡಾ ಸಣ್ಣಸಣ್ಣ ಜಾತಿಗಳನ್ನು ಒಗ್ಗೂಡಿಸುವ ಜಾತಿ ರಾಜಕೀಯವನ್ನೇ ನೆಚ್ಚಿಕೊಂಡದ್ದು ಎನ್ನುವುದು ಕೂಡಾ ಸತ್ಯ. ಅದೇನೇ ಇರಲಿ, ಮಹಾರಾಷ್ಟ್ರ ಮತ್ತು ಹರ್ಯಾಣದ ಚುನಾವಣಾ ಫಲಿತಾಂಶಗಳನ್ನು ನೋಡಿದರೆ ಜಾತಿಯ ಪ್ರಭಾವ ಕುಗ್ಗುವುದು ಬಿಡಿ, ನಗರ ಮಧ್ಯಮ ವರ್ಗಗಳ ಆಚೆಗೆ ಜಾತಿ-ಆಧಾರಿತ ರಾಜಕೀಯ ಸಣ್ಣಗೆ ಅಲುಗಾಡಿದ ಹಾಗೆಯೂ ಕಾಣಿಸುತ್ತಿಲ್ಲ. ಮಹಾರಾಷ್ಟ್ರದಲ್ಲಿ ಮರಾಠರು ಶರದ್ ಪವಾರರ ಕೈಹಿಡಿದದ್ದು, ಅದೇರೀತಿ ಮರಾಠರಿಗೆ ಮೀಸಲಾತಿ ನೀಡಿದ ಕಾರಣಕ್ಕೆ ದಲಿತ ಮತ್ತು ಹಿಂದುಳಿದ ಮತಗಳು ಬಿಜೆಪಿಯಿಂದ ದೂರ ಸರಿದದ್ದು ಕಂಡುಬರುತ್ತದೆ. ಹರ್ಯಾಣದಲ್ಲಿ ಕಾಂಗ್ರೆಸ್ ಜಾಟರ ಸಮುದಾಯದ ಭೂಪಿಂದರ್ ಸಿಂಗ್ ಮತ್ತು ದಲಿತ ಸಮುದಾಯದ ಕುಮಾರಿ ಶೆಲ್ಜಾ ಅವರನ್ನು ಮುಂಚೂಣಿಗೆ ತಂದ ಕಾರಣಕ್ಕೆ ಆ ಪಕ್ಷಕ್ಕೆ ಜಾಟ- ದಲಿತರ ಮತಗಳು ಒಲಿದಂತೆಯೂ ಕಂಡುಬರುತ್ತದೆ. ಒಟ್ಟಿನಲ್ಲಿ, ಭಾರತದ ಚುನಾವಣೆಗಳ ಒಳಸುಳಿಗಳನ್ನು ಸುಲಭ ಲೆಕ್ಕಾಚಾರದಲ್ಲಿ ಅರ್ಥಮಾಡಿಕೊಳ್ಳುವ ಹಾಗಿಲ್ಲ ಎನ್ನುವುದಕ್ಕೆ ಇನ್ನೊಂದು ಸಾಕ್ಷಿಯಾಗಿ ಎರಡು ರಾಜ್ಯಗಳ ಚುನಾವಣಾ ಫಲಿತಾಂಶಗಳು ನಮ್ಮ ಮುಂದಿವೆ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...