ನಮ್ಮ ಸಮಾಜದ ಮತ್ತು ಅರ್ಥವ್ಯವಸ್ಥೆಯ ಇಷ್ಟೊಂದು ದೌರ್ಬಲ್ಯಗಳನ್ನು ಇಷ್ಟು ಭೀಕರವಾಗಿ ಬಹಿರಂಗಗೊಳಿಸಿದ ಇತ್ತೀಚಿನ ದಿನಗಳ ಮತ್ತೊಂದು ಬಿಕ್ಕಟ್ಟು ಯಾವುದೂ ನೆನಪಿಗೆ ಬರುತ್ತಿಲ್ಲ. ಇದು ಹೀಗೇ ಆಗುತ್ತದೆ ಎಂದು ಮೊದಲೇ ಊಹಿಸಬಹುದಾಗಿತ್ತು ಎಂಬುದು ನಿಜಕ್ಕೂ ದುಃಖದ ಸಂಗತಿ. ಕೋವಿಡ್-19 ಲಾಕ್‍ಡೌನ್ ನಿರೀಕ್ಷಿಸಿದಂತೆಯೇ ಅಸಮಾನ ಆರ್ಥಿಕ ಸವಾಲುಗಳನ್ನು, ಕಷ್ಟವನ್ನು ಮತ್ತು ಸಮಸ್ಯೆಗಳನ್ನು ಒಡ್ಡಿದೆ `ತಳ ಜಾತಿಗಳು, ಕಾರ್ಮಿಕ ವರ್ಗ, ಅಸಂಘಟಿತ ವಲಯ, ಮಹಿಳೆಯರು ಮತ್ತು ವಲಸಿಗರು’ ಈ ವರ್ಗಗಳು ತಮ್ಮ ಉಳಿತಾಯಗಳನ್ನು, ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಮತ್ತು ಕೊನೆಗೆ ತಮ್ಮ ಜೀವವನ್ನೇ ಪಣಕ್ಕೆ ಇಟ್ಟು ಸೆಣಸುತ್ತಿದ್ದಾರೆ. ಆರ್ಥಿಕ ಚಟುವಟಿಕೆ ನಿಂತುಹೋದರೆ ಬಹುಸಂಖ್ಯಾತ ಕಾರ್ಮಿಕರು, ಸ್ವಉದ್ಯೋಗ ನಡೆಸುವವರು, ಖಾಯಂ ಅಲ್ಲದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವವರು ಮತ್ತು ಅಂದಂದಿನ ದುಡಿಮೆಯನ್ನು ಅಂದಂದೇ ಗಳಿಸಿ ಬದುಕುವವರಿಗೆ ಉದ್ಯೋಗ ಮತ್ತು ಗಳಿಕೆ ನಾಶವಾಗುತ್ತದೆ. ಅಸಮತೋಲಿತ ಆರ್ಥಿಕ ಅಭಿವೃದ್ಧಿಯು ಶ್ರೀಮಂತ ಮತ್ತು ಬಡ ರಾಜ್ಯಗಳ ನಡುವೆ ದೊಡ್ಡ ಕಂದಕ ಸೃಷ್ಟಿ ಮಾಡಿದೆ. ಆ ಕಂದಕವು ಪ್ರತಿ ವರ್ಷ ಲಕ್ಷಾಂತರ ಕಾರ್ಮಿಕರು ಸಾವಿರಾರು ಕಿಲೋಮೀಟರ್ ದೂರಕ್ಕೆ ವಲಸೆ ಬರುವಂತೆ ಮಾಡಿದೆ. ಇದು ಸಮಸ್ಯೆಯನ್ನು ಇನ್ನಷ್ಟು ತೀವ್ರಗೊಳಿಸಿದೆ.
ಈ ಅಸಮಾನ ಅಭಿವೃದ್ಧಿಯು ಉದ್ಯೋಗದ ಅವಕಾಶಗಳನ್ನು ಬೃಹತ್ ಮತ್ತು ದೊಡ್ಡ ನಗರಗಳಲ್ಲಿ ಸಣ್ಣ ಪಟ್ಟಣಗಳು ಮತ್ತು ಗ್ರಾಮಗಳಿಗಿಂತ ವೇಗವಾಗಿ ಸೃಷ್ಟಿಸಿದೆ. ಇದು ನಗರಗಳಲ್ಲಿ ಬಡವರ ದಟ್ಟಣೆಗೆ ಕಾರಣವಾಗಿದೆ. ಭಾರತದ ಅರ್ಥವ್ಯವಸ್ಥೆಯಲ್ಲಿ ಈ ಲಕ್ಷಣಗಳು ಮುಂಚಿನಿಂದಲೂ ಇದ್ದವು. ಇದರ ಜೊತೆಗೆ ಜನಸಾಮಾನ್ಯರೆಲ್ಲರ ಒಳಿತಿಗಾಗಿ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸರ್ಕಾರಗಳು ದೀರ್ಘಾವಧಿ ಹೂಡಿಕೆ ಮಾಡಲು ಸಿದ್ಧವಿರಲಿಲ್ಲ. ಹೀಗಿರುವಾಗ ಇದ್ದಕ್ಕಿದ್ದಂತೆ ಮಾಡಿದ ತೀವ್ರ ಲಾಕ್‍ಡೌನ್ ಅಪಾರ ನೋವನ್ನು ಸೃಷ್ಟಿಸಿತು.
ಈ ಬಿಕ್ಕಟ್ಟಿಗೆ ಆರ್ಥಿಕ ಗುಣಗಳಲ್ಲದೆ ಮತ್ತೆರಡು ಸಮಸ್ಯಾತ್ಮಕ ಆಯಾಮಗಳಿರುವುದನ್ನು ಗಮನಿಸಬೇಕಿದೆ. ಮೊದಲಿಗೆ, ಕೋಮು ಸೌಹಾರ್ದಕ್ಕೆ ಹುಳಿ ಹಿಂಡಿರುವುದು, ಬಹಳ ಅಗತ್ಯದ ಸಮಯದಲ್ಲಿ ಒಗ್ಗಟ್ಟು ಮತ್ತು ಪರಸ್ಪರ ಸೌಹಾರ್ದತೆಗಳನ್ನು ನಾಶ ಮಾಡಲಾಗಿದೆ. ನಾವೆಲ್ಲರೂ ಒಟ್ಟಿಗೆ ಕೈಹಿಡಿದು ನಡೆಯಬೇಕಾದ ಸಮಯದಲ್ಲಿ ಎದುರೆದುರು ನಿಲ್ಲುತ್ತಿದ್ದೇವೆ. ಎರಡನೆಯದು, ನಾವು ಈ ದೇಶದಲ್ಲಿ ಕ್ರಮೇಣ ಸಮ್ಮತಿ ಪಡೆದುಕೊಂಡಿರುವ ಕೇಂದ್ರೀಕೃತ ರಾಜಕೀಯ ಅಧಿಕಾರ. ಕೆಲವೇ ಕೆಲವು ಪುರುಷರು (ಬೇಕಂತಲೇ ಬಳಸಿರುವ ಲಿಂಗಸೂಚಕ) ಒಂದು ಕೋಣೆಯಲ್ಲಿ ಕುಳಿತುಕೊಂಡು ಲಕ್ಷಾಂತರ ಜನರ ಆರ್ಥಿಕ ಹಣೆಬರಹವನ್ನು ನಿಶ್ಚಯಿಸುವಂತೆ ಆಗಿದೆ. ಹಿಂದಿನ ದಿನಗಳಲ್ಲಿ ರಾಜರು ಮತ್ತು ಸಾಮ್ರಾಟರು ಮಾತ್ರ ಇಂತಹ ಸರ್ವಾಧಿಕಾರದ ಕನಸು ಕಾಣಬಹುದಿತ್ತು.
ಕೇಂದ್ರ ಸರ್ಕಾರವು ಇಲ್ಲಿಯವರೆಗೂ ಕೋವಿಡ್-19 ಸಲುವಾಗಿ ಎರಡು ಪರಿಹಾರ ಕ್ರಮಗಳನ್ನು ಘೋಷಿಸಿದೆ; ಮೊದಲನೆಯದ್ದು ಮಾರ್ಚ್ ಮೊದಲ ಭಾಗದಲ್ಲಿ ಘೋಷಣೆಯಾದ 1.7 ಲಕ್ಷ ಕೋಟಿ ಪರಿಹಾರ ಪ್ಯಾಕೇಜು ಮತ್ತು ಎರಡನೆಯದ್ದು ಮೇ ತಿಂಗಳ ಮೊದಲ ಭಾಗದಲ್ಲಿ ಘೋಷಣೆಯಾದ ಹೆಚ್ಚು ಸಮಗ್ರವಾದ 20 ಲಕ್ಷ ಕೋಟಿ ಆರ್ಥಿಕ ಉತ್ತೇಜನ ಪ್ಯಾಕೇಜು. ಮೊದಲನೆಯ ಪ್ಯಾಕೇಜ್‍ಗೆ ರಾಜ್ಯ ಮಟ್ಟದಲ್ಲಿ ತೆಗೆದುಕೊಂಡ ಕ್ರಮಗಳನ್ನು ಸೇರಿಸಿಕೊಂಡರೂ (ಒಟ್ಟಾರೆಯಾಗಿ ಸುಮಾರು ಎರಡು ಲಕ್ಷ ಕೋಟಿ) ಅದು ಬಿಕ್ಕಟ್ಟನ್ನು ನಿಭಾಯಿಸಲು ಏನೇನೂ ಸಾಲದಾಗಿತ್ತು. ಆಹಾರ ಪರಿಹಾರದ ಜೊತೆಗೆ ಕೇಂದ್ರ ಮತ್ತು ರಾಜ್ಯ ಮಟ್ಟಗಳಲ್ಲಿ ಘೋಷಣೆಯಾಗಿದ್ದ ನಗದು ಪರಿಹಾರ ಕ್ರಮಗಳಿಂದ ಹೆಚ್ಚೆಂದರೆ ಕುಟುಂಬವೊಂದಕ್ಕೆ 2ರಿಂದ 3 ಸಾವಿರ ರೂಗಳು ಸಿಗುವಂತವಾಗಿದ್ದವು. ಆ ಪರಿಹಾರ ಕೂಡ ಎಷ್ಟೂ ಘಾಸಿಗೊಳಗಾದ ಕುಟುಂಬಗಳಿಗೆ ಮುಟ್ಟಲೇ ಇಲ್ಲ. ಇದರ ಮೇಲೆ ಹಲವು ಸಮೀಕ್ಷೆಗಳ ಪ್ರಕಾರ ಬಹುತೇಕ ಕುಟುಂಬಗಳು ಕನಿಷ್ಟ ಎರಡು ತಿಂಗಳುಗಳ ಗಳಿಕೆಯನ್ನು ಕಳೆದುಕೊಂಡಿವೆ. ನಗರ ಭಾರತದಲ್ಲಿ ಸ್ವಉದ್ಯೋಗ ನಡೆಸುವವರು, ಸಣ್ಣ ಮತ್ತು ಮಧ್ಯಮ ವ್ಯವಹಾರಗಳು, ಖಾಯಂ ಇಲ್ಲದ ಅಸಂಘಟಿತ ಕಾರ್ಮಿಕರು ಮತ್ತು ಮನೆಯಲ್ಲೇ ಕೆಲಸಗಳನ್ನು ನಿರ್ವಹಿಸುವ ಕಾರ್ಮಿಕರೆಲ್ಲರೂ ತಮ್ಮ ಗಳಿಕೆಯನ್ನು ಕಳೆದುಕೊಂಡಿದ್ದಾರೆ. ಗ್ರಾಮ ಭಾರತದಲ್ಲಿ ರೈತರು ಬೆಳೆ ತೆಗೆಯುವುದಕ್ಕೆ, ತಮ್ಮ ಉತ್ಪನ್ನಗಳನ್ನು ಮಂಡಿಗಳಿಗೆ ಸಾಗಿಸುವುದಕ್ಕೆ ಕಷ್ಟ ಅನುಭವಿಸಿದ್ದಾರೆ. ಜನರ ಉಳಿತಾಯ ಕರಗದಂತೆ, ಅವರು ಹೆಚ್ಚಿನ ಸಾಲದ ಮೊರೆ ಹೋಗದಂತೆ ಮತ್ತು ಕೊನೆಗೆ ಹಸಿವಿನಿಂದ ಸಾಯದಂತೆ ತಡೆಯಲು ಈಗ ಘೋಷಿಸಿರುವ ನಗದು ಪರಿಹಾರ ಯಾವುದಕ್ಕೂ ಸಾಲದಾಗಿದೆ.
ಹೊಸ 20 ಲಕ್ಷ ಕೋಟಿಯ ಉತ್ತೇಜನ ಪ್ಯಾಕೇಜ್ ಹಲವು ಆಯಾಮಗಳನ್ನುಳ್ಳದ್ದಾಗಿದ್ದು, ನರೇಗ ಚಟುವಟಿಕೆಗಳಿಗೆ ವ್ಯಯಿಸುವುದರಿಂದ ಹಿಡಿದು, ಸಾರ್ವಜನಿಕ ವಲಯದ ಸಂಸ್ಥೆಗಳ ಖಾಸಗೀಕರಣ ಮತ್ತು ಬಾಹ್ಯಾಕಾಶ ಪ್ರಯಾಣಗಳನ್ನು ಒಳಗೊಂಡಿದೆ. ಪ್ರಾದೇಶಿಕ ದಾಸ್ತಾನು ಮತ್ತು ಮೌಲ್ಯವರ್ಧನೆಗಾಗಿ ಹೂಡಿಕೆ ಮಾಡಲು ರೈತ ಉತ್ಪಾದನಾ ಸಂಸ್ಥೆಗಳಿಗೆ ನೀಡಲು 1 ಲಕ್ಷ ಕೋಟಿ ನಿಧಿ ಅಲ್ಲದೆ ಎಂಎಸ್‍ಎಂಇಗಳಿಗೆ (ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು) ಕಡಿಮೆ ಬಡ್ಡಿ ದರದ ಸಾಲದ ಯೋಜನೆಗಳಂತಹ ಆಸಕ್ತಿದಾಯಕ ಅಂಶಗಳನ್ನು ಈ ಪ್ಯಾಕೇಜ್ ಒಳಗೊಂಡಿದೆ. ಆದರೆ ಇದು ಮುಖ್ಯವಾಗಿ ವಿತ್ತೀಯ (Monetary) ಉತ್ತೇಜನೆಯಾಗಿದ್ದು (ಆರ್ಥಿಕ ಪಲ್ಲಟಗಳನ್ನು ತಗ್ಗಿಸುವ ಮೇಲ್ಮಟ್ಟದ ಯೋಜನೆ), ಹಣಕಾಸು (Fiscal) ನೀತಿಯಾಗಿಲ್ಲ (ಸರ್ಕಾರ ಮಾಡುವ ವ್ಯಯ, ತೆರಿಗೆ ಸುಧಾರಣೆಗಳು ಇತ್ಯಾದಿ).
ಅಂದರೆ 20 ಲಕ್ಷ ಕೋಟಿಯ ಬಹುತೇಕ ಪಾಲು ಉದ್ದಿಮೆಗಳಿಗೆ ಮತ್ತು ವ್ಯವಹಾರಗಳಿಗೆ ಸಾಲದ ರೂಪದಲ್ಲಿ ಸಿಗಲಿದೆ. ಇದು ಯಾವುದೂ ಸರ್ಕಾರ ನೇರವಾಗಿ ಖರ್ಚು ಮಾಡುತ್ತಿರುವುದಲ್ಲ. ಸಾರ್ವಜನಿಕ ಸಾಲದ ವಿಸ್ತರಣೆಯನ್ನು ವಿರೋಧಿಸುವ ವಿತ್ತೀಯ ಸಂಪ್ರದಾಯವಾದಿಗಳು ಇಂತಹ ಉತ್ತೇಜನ ಪ್ಯಾಕೇಜ್‍ಅನ್ನು ಸ್ವಾಗತಿಸಬಹುದು. ಆದರೆ ಈ ಸಮಯಗಳಲ್ಲಿ ಇದು ಸರಿಯಾದ ರೀತಿಯ ಉತ್ತೇಜನೆ ಅಲ್ಲ.
ಲಾಕ್‍ಡೌನ್ ಆಗುವುದಕ್ಕೆ ಮುಂಚಿತವಾಗಿಯೇ ಭಾರತೀಯ ಆರ್ಥಿಕತೆ ಹಿಂಜರಿತದ ಹಾದಿಯಲ್ಲಿದ್ದು, ಖಾಸಗಿ ಹೂಡಿಕೆ ಕುಸಿದು, ನಿರುದ್ಯೋಗ ಹೆಚ್ಚಾಗಿತ್ತು ಎಂಬುದನ್ನು ನಾವು ನೆನಪಿಡಬೇಕು. ಇದರ ಮೇಲೆ ಲಾಕ್‍ಡೌನ್ ಬೇಡಿಕೆಯ ಮೇಲೆ ದೊಡ್ಡ ಅಘಾತ ನೀಡಿತಲ್ಲದೆ, ಬಹುತೇಕ ಮಂದಿಗೆ ಖರ್ಚು ಮಾಡಲು ಸ್ವಲ್ಪವೇ ಸ್ವಲ್ಪ ದುಡ್ಡಿತ್ತು ಅಥವಾ ಇರಲೇ ಇಲ್ಲ. ಇಂತಹ ಸನ್ನಿವೇಶದಲ್ಲಿ ವ್ಯವಹಾರಸ್ಥರು ಸಾಲ ಪಡೆಯುವುದು ಅಪರೂಪ ಮತ್ತು ಅತ್ತ ಬ್ಯಾಂಕ್‍ಗಳು ಸಾಲವನ್ನು ಕೊಡುವುದಕ್ಕೂ ಹಿಂಜರಿಯುತ್ತವೆ. ಆದುದರಿಂದ ಈ ವಿತ್ತೀಯ ಕ್ರಮಗಳು ಪರಿಣಾಮಕಾರಿಯಾಗಿಲ್ಲ. ಈ ಸಮಯದಲ್ಲಿ ಕೇಂದ್ರ ಸರ್ಕಾರ ಬೇಡಿಕೆ ಮರುಕಳಿಸಲು ನೇರ ಖರ್ಚು ಮಾಡಬೇಕಿತ್ತು ಮತ್ತು ಇದೇ ಸಲುವಾಗಿ ತನ್ನ ಗಳಿಕೆಯ ಬಹುಭಾಗವನ್ನು ರಾಜ್ಯಗಳ ಜೊತೆಗೆ ಹಂಚಿಕೊಳ್ಳಬೇಕಿತ್ತು. ಈ ಖರ್ಚು ಯಾವುದರ ಮೇಲೆ ಇರಬೇಕಿತ್ತು?
ಕಳೆದ ಕೆಲವು ವಾರಗಳಿಂದ ಹಲವು ಒಳ್ಳೆಯ ಪ್ರಸ್ತಾವನೆಗಳನ್ನು ಇಡಲಾಗಿದೆ. ನಾನು ಅವುಗಳನ್ನು ಪುನರಾವರ್ತಿಸಲು ಹೋಗುವುದಿಲ್ಲ. ಬದಲಾಗಿ ತುರ್ತಾಗಿ ಕ್ರಮ ಜರುಗಿಸಲು ಸಾಧ್ಯವಾಗಿರುವ ಮತ್ತು ದೀರ್ಘ ಕಾಲದ ದೃಷ್ಟಿಯಲ್ಲಿ ತೆಗೆದುಕೊಳ್ಳಬೇಕಾದ ನಾಲ್ಕು ವಿಶಾಲ ಸಂಗತಿಗಳನ್ನು ಪಟ್ಟಿ ಮಾಡುತ್ತೇನೆ.
1. ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಮತ್ತು ಮರುಸೃಷ್ಟಿಸಲು ರಾಷ್ಟ್ರೀಯ ಉದ್ಯೋಗ ಖಾತ್ರಿ MGNREGA (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮ ಉದ್ಯೋಗ ಖಾತ್ರಿ ಕಾಯ್ದೆ) ವನ್ನು ಬಲಪಡಿಸಿ ಇದರ ವ್ಯಾಪ್ತಿಯನ್ನು ಹೆಚ್ಚಳ ಮಾಡಬೇಕು. ಇದರ ನಗರ ಆವೃತ್ತಿಯ ತುರ್ತು ಕೂಡ ಇದೆ. ಇದು ನಿರುದ್ಯೋಗಿಗಳಿಗೆ ಹಣ ನೀಡುವ ಯೋಜನೆ ಮಾತ್ರವಲ್ಲ. ಸಾರ್ವಜನಿಕ ಒಳಿತಿನ ಸೌಕರ್ಯಗಳನ್ನು ಸೃಷ್ಟಿ ಮಾಡುವ ಮತ್ತು ಭವಿಷ್ಯದ ಪ್ರಾಕೃತಿಕ ಸಮತೋಲನ ವ್ಯವಸ್ಥೆಯನ್ನು ರೂಪಿಸಿಕೊಳ್ಳುವ ಸಲುವಾಗಿ ಹಣ ಖರ್ಚು ಮಾಡುವ ಯೋಜನೆ ಇದು. ಇವುಗಳು ಇಲ್ಲದೆ ಹೋದರೆ ಮುಂದಿನ ಬಿಕ್ಕಟ್ಟುಗಳಲ್ಲಿ ನಾವು ವಿನಾಶವಾಗುವುದು ಖಂಡಿತ.
2. ಸಾರ್ವತ್ರಿಕ ಮೂಲಭೂತ ಸೇವೆಗಳು: ನಾವು ನಮ್ಮ ಸಾರ್ವಜನಿಕ ಇಚ್ಚಾಶಕ್ತಿಯನ್ನು ಮತ್ತೆ ಕಟ್ಟಬೇಕಿದೆ. ನಮ್ಮ ಮೂಲಭೂತ ಆರೊಗ್ಯ ಸೌಕರ್ಯಗಳು ಅವನತಿಯಲ್ಲಿ ಇದ್ದಿದ್ದರಿಂದಲೇ ಇಂತಹ ಅತಿ ಕಟು ಲಾಕ್‍ಡೌನ್‍ಗೆ ಒತ್ತಾಯ ಹೇರಲಾಯಿತು (ಆಸ್ಪತ್ರೆಗಳಲ್ಲಿ ಜನ ತುಂಬಿ ಒತ್ತಡ ಬೀಳುವ ಭಯದಿಂದ). ಈಗ ಚಿಕಿತ್ಸೆಯು ರೋಗಕ್ಕಿಂತಲೂ ಭೀಕರವಾಗಿ ಪರಿಣಮಿಸಿದೆ. ದುರ್ಬಲರು ಆರ್ಥಿಕವಾಗಿ ನಾಶ ಹೊಂದಬೇಕೆಂದರೆ ಒಂದು ರೋಗ ಬಂದರೆ ಸಾಕು. ಆ ರೀತಿಯ ಪರಿಸ್ಥಿತಿ ನಮ್ಮಲ್ಲಿ ಸಾಮಾನ್ಯ. ಈಗ ಅದನ್ನು ಬಹುಸಂಖ್ಯಾತರು ಅನುಭವಿಸುತ್ತಿದ್ದಾರೆ. ಹೀಗಾಗಿ ಮತ್ತೊಂದು ತುರ್ತು ನೀತಿಯನ್ನು ಜಾರಿ ಮಾಡುವುದರಿಂದ ಮಾತ್ರ ಇದಕ್ಕೆ ಪರಿಹಾರ ಸಾಧ್ಯ. ಅದೇ ಸಾರ್ವತ್ರಿಕ ಮೂಲಭೂತ ಸೇವೆಗಳು. ಇದನ್ನು ಎಲ್ಲರಿಗೂ ವಿಮೆಯ ಮೂಲಕ ಒದಗಿಸುವುದಲ್ಲ: ಆರೋಗ್ಯ, ಶಿಕ್ಷಣ, ವಸತಿ ಮತ್ತು ಇತರ ಸೇವೆಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಸಾರ್ವಜನಿಕರಿಗೆ ಸರ್ಕಾರದ ವತಿಯಿಂದ ಸಿಗುವಂತೆ ನೋಡಿಕೊಳ್ಳಬೇಕು. (ಇಂತಹ ಯಾವುದೇ ಸಮಸ್ಯೆ ಬಂದರೂ ನಮ್ಮ ಸರ್ಕಾರೀ ವ್ಯವಸ್ಥೆಯೇ ಅದೆಲ್ಲವನ್ನೂ ಎದುರಿಸಲು ಸಜ್ಜಾಗಿರುತ್ತದೆ)
3. ಸಾವಿರಾರು ನಗರಗಳು ಅರಳಲಿ: ಪ್ರಾದೇಶಿಕ ಖಾಸಗಿ ಆರ್ಥಿಕತೆಯನ್ನು ಮರುಕಟ್ಟಲು ಸಣ್ಣ ಪಟ್ಟಣಗಳಿಗೆ ಬೇಕಾದ ಸಂಪನ್ಮೂಲಗಳನ್ನು ಒದಗಿಸಿ ಈ ಬಿಕ್ಕಟ್ಟನ್ನು ಅವಕಾಶವಾಗಿ ಪರಿವರ್ತನೆ ಮಾಡಿಕೊಳ್ಳಬಹುದು. ವಿಶಾಲವಾಗಿ ಹರಡಿಕೊಂಡ (ಕೇವಲ ವಿಕೇಂದ್ರೀಕರಣ ಮಾತ್ರ ಅಲ್ಲ) ಆರ್ಥಿಕತೆಗಳು ಹೆಚ್ಚು ಸದೃಢ ಆರ್ಥಿಕ ವ್ಯವಸ್ಥೆಗಳು. ಬದುಕಲು ಅಸಾಧ್ಯವಾದ ಎಲ್ಲರ ದೃಷ್ಟಿನೆಟ್ಟ ಹತ್ತೋ ಹದಿನೈದೋ ನಗರಗಳಿಗಿಂತಲೂ ಸಾವಿರಾರು ಚಲನಶೀಲ ಪಟ್ಟಣಗಳ ಭಾರತವನ್ನು ಕಲ್ಪಿಸಿಕೊಳ್ಳುವುದು ಸೂಕ್ತ. ತಮ್ಮ ಇತಿಹಾಸಗಳೊಂದಿಗೆ, ಅವುಗಳ ಕಲಾತ್ಮಕ ಸಂಪ್ರದಾಯಗಳೊಂದಿಗೆ ಮತ್ತು ವ್ಯವಹಾರಿಕ ಸಂಸ್ಕøತಿಗಳೊಂದಿಗೆ ಈಗಾಗಲೇ ಈ ಪಟ್ಟಣಗಳು ನೆಲೆಸಿವೆ. ಆದರೆ ಅವುಗಳಿಗೆ ಅಗತ್ಯವಾದ ಸಂಪನ್ಮೂಲಗಳಿಲ್ಲದೆ ನರಳುತ್ತಿವೆ. ಹೆಚ್ಚು ಗ್ರಾಮ ಪ್ರದೇಶವಿರುವ ಭಾರತ ನಗರೀಕರಣಗೊಳ್ಳಲು ಇಂತಹ ವಿಶಾಲವಾಗಿ ಹರಡಿಕೊಂಡ ನಗರವ್ಯವಸ್ಥೆಯೇ ಹೆಚ್ಚು ಸೂಕ್ತ.
4. ಸಂಪದ್ಭರಿತ ಗ್ರಾಮಗಳತ್ತ – ಬಹಳಷ್ಟು ದೀರ್ಘ ಕಾಲ ನಾವು ಜನರನ್ನು ಅವರ ಕುಟುಂಬ ಮತ್ತು ಸಮುದಾಯಗಳ ಜೊತೆಗೆ ಬದುಕಿ ಇಲ್ಲವೇ ಒಳ್ಳೆಯ ಉದ್ಯೋಗವನ್ನು ಹುಡುಕಿಕೊಂಡು ಹೊರಡಿ ಎಂಬ ಎರಡು ಆಯ್ಕೆಗಳ ನಡುವೆ ದೂಡಿದ್ದೇವೆ. ಈ ಮಾದರಿಯ ದೌರ್ಬಲ್ಯವನ್ನು ಕೋವಿಡ್-19 ಬಹಿರಂಗಗೊಳಿಸಿದೆ. ಗ್ರಾಮ ಆರ್ಥಿಕತೆಯನ್ನು ಪುನಶ್ಚೇತನಗೊಳಿಸುವುದು ನಮ್ಮ ಆದ್ಯತೆಯ ಪ್ರಥಮ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಹಲವಾರು ನೀತಿ ಯೋಜನೆಗಳು ಸಿದ್ಧವಿದ್ದು ಅನುಷ್ಠಾನಗೊಳ್ಳಲು ಕಾಯುತ್ತಿವೆ – ಸುಸ್ಥಿರ ಕೃಷಿ, ಪ್ರತಿಫಲದಾಯಕ ಬೆಲೆ, ಪ್ರಾದೇಶಿಕ ದಾಸ್ತಾನು ಮತ್ತು ಮೌಲ್ಯವರ್ಧನೆ, ಸಣ್ಣ ಮಟ್ಟದ ಕೈಗಾರಿಕೆ – ಇವುಗಳನ್ನ ಸಮಗ್ರವಾಗಿ ಕಲ್ಪಿಸಿಕೊಂಡು ಯೋಜಿಸಿಕೊಂಡರೆ ಅವು ನಗರ ಆರ್ಥಿಕತೆಯ ವಿರುದ್ಧ ಸೆಣಸದೆ ಪೂರಕವಾಗಿ ಕೆಲಸ ಮಾಡುತ್ತವೆ.
ಈ ಎಲ್ಲಾ ನೀತಿಗಳಿಗೆ ರಾಷ್ಟೀಯ, ರಾಜ್ಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಸಾರ್ವಜನಿಕ ಸಂಪನ್ಮೂಲಗಳ ಅಗತ್ಯ ಇದೆ. ನಾವು ಭಾರತದ ಜಿಡಿಪಿಯ 10% (20 ಲಕ್ಷ ಕೋಟಿ ರೂ) ಖರ್ಚು ಮಾಡಬೇಕಿರುವುದರ ಬಗ್ಗೆ ಮಾತನಾಡುತ್ತಿದ್ದೇವೆ. ಅದು ಸುಲಭ ಸಾಲದ ಬದಲಾಗಿ ನಿಜವಾದ ಖರ್ಚು ಆಗಿರಬೇಕು, ಮಾನೆಟರಿ ಉತ್ತೇಜನಕ್ಕೆ (ಹಣಕಾಸು ಓಡಾಟಕ್ಕೆ) ಬದಲಾಗಿ (ಹಣಕಾಸು ಖರ್ಚಿನ) ಫಿಸ್ಕಲ್ ಉತ್ತೇಜನ ಆಗಿರಬೇಕು. ಇಂತಹ ಕ್ರಮಕ್ಕೆ ಸಂಪನ್ಮೂಲಗಳನ್ನು ಕ್ರೋಡೀಕರಿಸುವುದಕ್ಕೆ ವಿವಿಧ ಮಾರ್ಗಗಳನ್ನು ಹುಡುಕಬೇಕು. ಅತಿ ಹೆಚ್ಚು ಆದಾಯ ಮತ್ತು ಸಂಪತ್ತು ಇರುವವರಿಗೆ ತೆರಿಗೆ ಹಾಕಿ ಒಂದು ಭಾಗದ ಹಣವನ್ನು ಸಂಗ್ರಹಿಸಬಹುದಾದರೆ ಮತ್ತೊಂದು ಭಾಗವನ್ನು ಸಾಲಗಳಿಂದ ಮತ್ತು ಉಳಿದ ಭಾಗವನ್ನು ನೋಟು ಮುದ್ರಿಸುವುದರಿಂದ ಸಂಗ್ರಹಿಸಬಹುದು. ಆರೋಗ್ಯ, ಶಿಕ್ಷಣ, ವಸತಿ, ಸಾರಿಗೆ ಮತ್ತು ಇತರ ಸಾರ್ವಜನಿಕ ಒಳಿತಿನ ಸೌಕರ್ಯಕ್ಕಾಗಿ ಹೂಡಿಕೆ ಮಾಡಿ, ಸಂಪತ್ತು ಸೃಷ್ಟಿ ಮಾಡುವುದರಿಂದ ಮತ್ತು ಉತ್ಪಾದಕತೆಯ ಗುಣಮಟ್ಟವನ್ನು ಹೆಚ್ಚಿಸಲು ಹಣವನ್ನು ಒಳಿತಿನ ಮಾರ್ಗದಲ್ಲಿ ಖರ್ಚು ಮಾಡುತ್ತಿರುವುದರಿಂದ ಹಣದುಬ್ಬರದ ಬಗ್ಗೆ ಆತಂಕಪಡುವ ಅಗತ್ಯ ಇಲ್ಲ. ಹಿಂದೆಂದೂ ಕಾಣದ ಬಿಕ್ಕಟ್ಟು ದೂರದೃಷ್ಟಿಯುಳ್ಳ ದಿಟ್ಟ ನಿರ್ಧಾರ ಮತ್ತು ಕ್ರಮಗಳನ್ನು ಬೇಡುತ್ತದೆ. ಭಾರತವನ್ನು ಒಳಗೊಳ್ಳುವ, ನ್ಯಾಯಯುತವಾದ, ಸುಸ್ಥಿರ ಮತ್ತು ಸಧೃಢ ಸಮಾಜವನ್ನಾಗಿ ಮಾರ್ಪಡಿಸುವ ಅವಕಾಶವನ್ನು ಕೈಚೆಲ್ಲದಿರೋಣ.
- ಅಮಿತ್ ಬಾಸೋಲೆ (ಪ್ರಾಧ್ಯಪಾಕರು, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ, ಬೆಂಗಳೂರು)
ಅನುವಾದ; ಗುರುಪ್ರಸಾದ್ ಆಕೃತಿ


