Homeಮುಖಪುಟಮೋದಿ 2.1: ಆರ್ಥಿಕ ಸಮಸ್ಯೆಗೆ ಪರಿಹಾರ ಕಾಣದ ಕೇಂದ್ರ ಸರ್ಕಾರಕ್ಕೆ ಕೊರೊನಾ ನೆಪ!

ಮೋದಿ 2.1: ಆರ್ಥಿಕ ಸಮಸ್ಯೆಗೆ ಪರಿಹಾರ ಕಾಣದ ಕೇಂದ್ರ ಸರ್ಕಾರಕ್ಕೆ ಕೊರೊನಾ ನೆಪ!

- Advertisement -
- Advertisement -

ಮೋದಿ 2.0 ಸರ್ಕಾರದ ಮೊದಲ ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಎಂದಿನಂತೆ ಮಾಧ್ಯಮಗಳು ಅಸಲಿ ವಿಚಾರಗಳನ್ನು ದೂರವಿಟ್ಟು ವಿಶ್ಲೇಷಣೆ ಮಾಡುವ ಸಾಧ್ಯತೆಗಳೇ ಹೆಚ್ಚು. ಟ್ವಿಟ್ಟರ್‍ನಲ್ಲಿ ಹಲವಾರು ಟಿವಿ ಚಾನಲ್‍ಗಳು ಮೋದಿ ಆಡಳಿತದ ಬಗ್ಗೆ ಹಲವಾರು ಪೋಲ್‍ಗಳನ್ನು ಸೃಷ್ಟಿಸಿತ್ತು. ರಿಪಬ್ಲಿಕ್ ಟಿವಿಯು ಕೂಡಾ ಮೋದಿಯವರಿಗೆ ಅನುಕೂಲವಾಗುವಂತ ಪ್ರಶ್ನೆಯೊಂದನ್ನೇ ಕೇಳಿತ್ತು. “ಮೋದಿ ಸರ್ಕಾರದ ಒಂದು ವರ್ಷ, ಯಾರು ಹೆಚ್ಚು ಚೆನ್ನಾಗಿ ಕೆಲಸ ಮಾಡಿದ್ದು? ಮೋದಿ ಅಥವಾ ಪ್ರತಿಪಕ್ಷ” ಎಂಬ ಪ್ರಶ್ನೆಗೆ ಆಶ್ಚರ್ಯಕರ ರೀತಿಯಲ್ಲಿ ಶೇ.57 ಜನರು ವಿರೋಧ ಪಕ್ಷದವರೇ ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ಓಟ್ ಮಾಡಿದ್ದಾರೆ! ಇದೆಲ್ಲದರ ಆಚೆಗೂ ಹೆಚ್ಚಿನ ಮಾಧ್ಯಮಗಳು ಉದ್ಯೋಗ, ಆರ್ಥಿಕತೆ, ಬಡತನ, ಮಾನವ ಅಭಿವೃದ್ಧಿ ಸೂಚ್ಯಾಂಕ, ಪ್ರಜಾಪ್ರಭುತ್ವ, ಸ್ವಾತಂತ್ರ್ಯದ ಸೂಚ್ಯಂಕಗಳ ಕುರಿತು ಮಾತನಾಡುವ ಸಾಧ್ಯತೆ ಬಹಳ ಕಡಿಮೆ.

2014ರ ಸಾರ್ವತ್ರಿಕ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೋಲಲು ಬಿಜೆಪಿ ಬಳಸಿಕೊಂಡ ಅಸ್ತ್ರಗಳಲ್ಲಿ ಜಿಡಿಪಿ ಕುಸಿತ, ಭ್ರಷ್ಟಾಚಾರ ಆರ್ಥಿಕತೆ, ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿತ, ನಿರುದ್ಯೋಗ ಇತ್ಯಾದಿಗಳಿದ್ದವು. ಈ ಮುಖ್ಯ ವಿಚಾರಗಳ ಮೇಲೆ ಚುನಾವಣೆ ಪ್ರಚಾರ ನಡೆದುದಷ್ಟೇ ಅಲ್ಲದೇ ಆಶ್ವಾಸನೆ ವಚನಗಳ ಮಾಹಾಪೂರವೇ ಹರಿದಿತ್ತು. ಯುವಜನರೂ ಸಹಾ ಬಲಿಷ್ಠ ದೇಶದ ಕನಸು ಕಂಡರು. ಬಿಜೆಪಿಯನ್ನು ಗೆಲ್ಲಿಸಿಕೊಂಡರು. 2019ರ ಚುನಾವಣೆ ಹೊತ್ತಿಗೆ ಈ ಯಾವ ವಿಷಯವೂ ಚುನಾವಣೆ ಪ್ರಚಾರದ ಆಶ್ವಾಸನೆಯೇ ವಿಷಯವಾಗಲಿಲ್ಲ. ಆದರೆ ದೇಶದ ಆರ್ಥಿಕತೆ ಪಾತಾಳಕ್ಕೆ ಇಳಿದಿರುವ ಮತ್ತು ನಿರುದ್ಯೋಗವು ಗಗನಕ್ಕೇರುತ್ತಿರುವ ಸಂದರ್ಭದಲ್ಲಿ ಅವುಗಳ ಕುರಿತು ಮಾತನಾಡದಿರಲು ಸಾಧ್ಯವಿಲ್ಲ.

ಕೇವಲ ನಾಲ್ಕು ಗಂಟೆಗಳ ಕಾಲಾವಕಾಶ ನೀಡಿ ಲಾಕ್‍ಡೌನ್ ಘೋಷಿಸಿದ್ದರ ಪರಿಣಾಮವಾಗಿ ವಲಸೆ ಕಾರ್ಮಿಕರು ಇಂದಿಗೂ ತಮ್ಮ ಮನೆಗಳನ್ನು ತಲುಪಲಾಗದೆ ಬೀದಿಪಾಲಾಗಿರುವುದನ್ನು ನಾವು ನೋಡುತ್ತಲಿದ್ದವೆ. ತಯಾರಿ ಇಲ್ಲದೆ ಘೋಷಿಸಿದ ಲಾಕ್‍ಡೌನ್ ನಂತರದ ದೇಶದ ಆರ್ಥಿಕತೆಯ ಬಗ್ಗೆ ಹಲವಾರು ಆರ್ಥಿಕ ತಜ್ಞರು, ಅಂಕಿಅಂಶ ಸಂಸ್ಥೆಗಳು ಆತಂಕಕಾರಿ ವರದಿಗಳನ್ನು ನೀಡುತ್ತಿದ್ದಾರೆ. ಈ ಸದ್ಯ ಭಾರತವು ಉದಾರೀಕರಣ ನಂತರದ ಕಾಲಘಟ್ಟದಲ್ಲಿ ಇದೇ ಮೊದಲ ಬಾರಿಗೆ ದೊಡ್ಡ ಆರ್ಥಿಕ ಹಿಂಜರಿತ ಎದುರಿಸುತ್ತಿದೆ. ಕಳೆದ 69 ವರ್ಷದಲ್ಲಿ ಭಾರತವು ಕೇವಲ ಮೂರು ಬಾರಿ ದೊಡ್ಡ ಆರ್ಥಿಕ ಹಿಂಜರಿತ ಕಂಡಿದ್ದು ಇದೀಗ ನಾಲ್ಕನೆಯ ಆರ್ಥಿಕ ಹಿಂಜರಿತ ಕಾಣುತ್ತಿದೆ. 1958, 1966 ಮತ್ತು 1980ರ ನಂತರ ಇದೀಗ ನಾಲ್ಕನೆಯದು. ಈ ಹಿಂದಿನ ಹಿಂಜರಿತಗಳಲ್ಲಿ ಮುಂಗಾರು ಕೈ ಕೊಟ್ಟು ಕೃಷಿಯ ಮೇಲೆ ಬಿದ್ದ ಹೊಡೆತದಿಂದಾಗಿ ಬಿಕ್ಕಟ್ಟು ಉಂಟಾಗಿತ್ತು.

ಆದರೆ ಈ ಸಾರಿಯದ್ದು ಭಿನ್ನ. ಮಂಗಳವಾರದ ಹೊತ್ತಿಗೆ ಪ್ರಸ್ತುತ ಹಣಕಾಸು ಅವಧಿಯಲ್ಲಿ ಜಿಡಿಪಿ ಶೇ.5ರಷ್ಟು ಕುಸಿದಿದೆ ಎಂದು ಸಿ.ಆರ್.ಎಸ್.ಐ.ಎಲ್ ತಿಳಿಸಿದ್ದು ಎಸ್.ಬಿ.ಐ ಪ್ರಕಾರ ಮುಂದಿನ ಹಣಕಾಸು ಅವಧಿಗೆ ಸರಾಸರಿ ಶೇ.4.2ರಷ್ಟು ಇಳಿಯಲಿದೆ ಎಂದು ಅಂದಾಜಿಸಲಾಗಿದೆ. ಇನ್ನೂ ಸಿ.ಆರ್.ಎಸ್.ಐ.ಎಲ್ ವರದಿಯ ಪ್ರಕಾರ ಜಿಡಿಪಿ ಬೆಳವಣಿಗೆ ಮತ್ತಷ್ಟು ಕುಸಿಯಲಿದ್ದು ಜಿಡಿಪಿಯ ಶೇ.10%ರಷ್ಟು ಶಾಶ್ವತವಾಗಿ ನಷ್ಟವಾಗಲಿದೆ ಎಂದು ವರದಿ ನೀಡಿದೆ. ಎಸ್.ಬಿ.ಐನ ಆರ್ಥಿಕ ತಜ್ಞರ ಪ್ರಕಾರ ಲಾಕ್‍ಡೌನ್‍ನ ಮೊದಲ 7 ದಿನದಲ್ಲೇ ಕನಿಷ್ಠ 1.4 ಲಕ್ಷ ಕೋಟಿ ನಷ್ಟವಾಗಿದೆ. ಸುಮಾರು 50%ರಷ್ಟು ನಷ್ಟ ಕೆಂಪು ವಲಯದಿಂದ ಉಂಟಾಗಿದ್ದರೆ ಉಳಿದಂತೆ ಶೇ.90 ನಷ್ಟ ಉಂಟಾಗಿದೆ ಎಂದು ಅಂದಾಜಿಸಿದೆ.

ಹಾಗಾದರೆ ಲಾಕ್‍ಡೌನ್ ಮುಂಚೆ ಆರ್ಥಿಕತೆ ಚೆನ್ನಾಗಿತ್ತೆ? ಫೆಬ್ರವರಿ 1ರಂದು 2020-21ನೇ ಸಾಲಿನ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಿದ ಬೆನ್ನಲ್ಲೇ ಜಿಡಿಪಿ ಶೇ.5 (9 ಹಣಕಾಸು ವರ್ಷದಲ್ಲಿಯೇ ಅತ್ಯಂತ ಕಡಿಮೆ)ಗೆ ಕುಸಿದಿತ್ತು. ಇದು 1976 ನಂತರ ಭಾರತ ಕಂಡ ಐತಿಹಾಸಿಕ ಕುಸಿತವಾಗಿತ್ತು. ಅಲ್ಲದೆ 2019ರ ಅಂತ್ಯದಿಂದಲೇ ಉತ್ಪಾದನಾ, ಆಟೋಮೊಬೈಲ್ ಕ್ಷೇತ್ರದಲ್ಲಿಯೂ ಕುಸಿತ ಕಂಡಿದ್ದು ಟಿವಿಎಸ್, ಪಾರ್ಲೆಗಳಲ್ಲದೇ ಹಲವು ದೊಡ್ಡ ದೊಡ್ಡ ಉದ್ದಿಮೆಗಳು ನಷ್ಟ ಅನುಭವಿಸುತ್ತಿರುವ ವರದಿಗಳು ಹೊರಬಂದಿದ್ದವು. ಆರ್ಥಿಕ ಬಿಕ್ಕಟ್ಟಿನ ಸುಳಿವುಗಳು 2019ರಲ್ಲಿಯೇ ಸಿಕ್ಕು ಆರ್ಥಿಕ ತಜ್ಞರು ಎಚ್ಚರಿಸುತ್ತಲೇ ಬಂದಿದ್ದರು. ಇದಕ್ಕೆ ಪೂರಕವಾದ ತಯಾರಿ ಇಲ್ಲದ ಕಾರಣ ಲಾಕ್‍ಡೌನ್ ನಂತರದಲ್ಲಿ ಆರ್ಥಿಕತೆ ಮತ್ತಷ್ಟು ಹದಗೆಟ್ಟಿತು.

ಇನ್ನು ನಿರುದ್ಯೋಗದ ವಿಚಾರ. 2014ರ ಚುನಾವಣೆಯಲ್ಲಿ ಪ್ರಮುಖ ಆಶ್ವಾಸನೆಗಳಲ್ಲಿ ಒಂದಾಗಿದ್ದು ವರ್ಷಕ್ಕೆ 2 ಕೋಟಿ ಉದ್ಯೋಗದ ಭರವಸೆ. ಮೊದಲೇ ತಿಳಿಸಿದ ಹಾಗೆ 2109ರ ಚುನಾವಣೆಯಲ್ಲಿ ಈ ಮಾತು ಕಾಣೆಯಾಗಿತ್ತು. 2016ರಲ್ಲಿ ನೋಟು ಅಮಾನ್ಯೀಕರಣ ನಂತರದಲ್ಲಿ ಸಣ್ಣ ಅತಿ ಸಣ್ಣ ಕೈಗಾರಿಕೆಗಳು ಮತ್ತು ಉದ್ದಿಮೆಗಳು ದೊಡ್ಡ ಪೆಟ್ಟನ್ನು ತಿಂದ ನಂತರದಿಂದಲೇ ಮೊದಲೇ ಇದ್ದ ನಿರುದ್ಯೋಗದ ಪ್ರಮಾಣ ಹೆಚ್ಚುತ್ತಾ ಹೋಯಿತು. ಇದೀಗ ಲಾಕ್‍ಡೌನ್ ನಂತರದಲ್ಲಿ ಏನಾಗಿದೆ ಎಂದು ನೋಡೋಣ.

ಸಿ.ಎಮ್.ಐ.ಇ. (ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ) ವರದಿಯ ಪ್ರಕಾರ ಲಾಕ್‍ಡೌನ್ ನಂತರದಲ್ಲಿ ದೇಶದಲ್ಲಿ ನಿರುದ್ಯೋಗವು ಸರಾಸರಿ ಶೇ.28ರಿಂದ ಶೇ.29ಕ್ಕೆ ಏರಿಕೆ ಕಂಡಿದೆ. ಕಾರ್ಮಿಕರ ಭಾಗವಹಿಸುವಿಕೆ ಶೇ.38.7ಕ್ಕೆ ಕುಸಿದಿದೆ ಎಂದು ಹೇಳಿದೆ. ಇನ್ನೂ ಸುಮಾರು 7.7 ಕೋಟಿ ಯುವಜನರು ಉದ್ಯೋಗ ಇಲ್ಲದಿದ್ದರೂ ಉದ್ಯೋಗವನ್ನು ಹುಡುಕುತ್ತಿಲ್ಲ. ಇವರನ್ನು ನಿರುದ್ಯೋಗ ಪಟ್ಟಿಗೆ ಸೇರಿಸಿಲ್ಲ. ಇವರನ್ನೂ ಸೇರಿಸಿದರೆ ನಿರುದ್ಯೋಗದ ಪ್ರಮಾಣ ಇನ್ನಷ್ಟು ಹೆಚ್ಚಲಿದೆ ಎಂದೂ ತಿಳಿಸಿದೆ. ಸಾಮಾನ್ಯ ದಿನಗಳಲ್ಲಿ 1,17,000 ಜನರು ಉದ್ಯೋಗವನ್ನು ಅರಸುತ್ತಾ ಸಂದರ್ಶನ ನೀಡಲು ಬರುತ್ತಿದ್ದರು. ಆದರೆ ಅದು ಈಗ 11 ರಿಂದ 12 ಸಾವಿರ ಜನರಿಗೆ ಇಳಿದಿದೆ, ಅವರು ದೂರವಾಣಿ ಮುಖಾಂತರ ಸಂದರ್ಶನ ನೀಡುತ್ತಿದ್ದಾರೆ ಎಂದು ಹೇಳಿದೆ. ಬರುವ ದಿನಗಳಲ್ಲಿ 2 ಕೋಟಿ ಉದ್ಯೋಗವನ್ನು ಹೇಗೋ ಸೃಷ್ಟಿ ಮಾಡಬಹುದು. ಆದರೆ ಸವಾಲು ಇರುವುದು ಇದರ ಐದು ಪಟ್ಟು ಹೆಚ್ಚು ಅಗತ್ಯವಿರುವ 10.2 ಕೋಟಿ ಉದ್ಯೋಗಗಳನ್ನು ಹೇಗೆ ಸೃಷ್ಟಿ ಮಾಡುವುದು? ಎಂದು ಸಿಎಮ್‍ಐಇ ಆತಂಕ ವ್ಯಕ್ತಪಡಿಸಿದೆ.

ಈ ಪ್ರಮಾಣದ ನಿರುದ್ಯೋಗವೂ ಕೂಡ ಕೇವಲ ಲಾಕ್‍ಡೌನ್‍ನಿಂದಾಗಿ ಸೃಷ್ಟಿಯಾಗಿದ್ದಲ್ಲ. 2019ರಲ್ಲಿಯೇ ಎನ್‍ಎಸ್‍ಎಸ್‍ಓ ನಿರುದ್ಯೋಗದ ವರದಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿತ್ತು. ಆದರೆ ಚುನಾವಣೆ ಹತ್ತಿರವಿದ್ದ ಕಾರಣ ಕೇಂದ್ರ ಸರ್ಕಾರವು ಆ ವರದಿಯನ್ನು ಬಹಿರಂಗವಾಗದಂತೆ ನೋಡಿಕೊಂಡಿತು! ಚುನಾವಣೆ ಫಲಿತಾಂಶದ ನಂತರ ಎನ್‍ಎಸ್‍ಎಸ್‍ಓ ವರದಿಯನ್ನು ಬಿಡುಗಡೆಗೊಳಿಸಿತು. ಅದರ ವರದಿಯ ಪ್ರಕಾರ ಶೇ.6.1ರಷ್ಟು ನಿರುದ್ಯೋಗ ಏರಿಕೆಯಾಗಿತ್ತು. ಇದು ಕಳೆದ 45ವರ್ಷದಲ್ಲಿಯೇ ಐತಿಹಾಸಿಕ ಏರಿಕೆ ಎಂದು ವರದಿಯಾಗಿತ್ತು. ನಿರುದ್ಯೋಗದ ಏರಿಕೆ ಅಲ್ಲಿಗೆ ನಿಲ್ಲದೆ ಮಾರ್ಚ್ 2020ರ ಹೊತ್ತಿಗೆ ಅದು ಶೇ.8ಕ್ಕೆ ಏರುತ್ತಾ ಸಾಗಿತ್ತು.

ಒಟ್ಟಾರೆಯಲ್ಲಿ ಆರ್ಥಿಕ ಹಿಂಜರಿತ ಮತ್ತು ನಿರುದ್ಯೋಗ ಏರಿಕೆ ಲಾಕ್‍ಡೌನ್ ಮುಂಚೆಯಿಂದಲೂ ಶುರುವಾದ ಪ್ರಕ್ರಿಯೆ ಆಗಿದೆ ಎನ್ನುವುದು ನಾವು ಅರ್ಥ ಮಾಡಿಕೊಳ್ಳಬೇಕಿರುವ ಸಂಗತಿ.

ಈ ಎಲ್ಲಾ ಆತಂಕಕಾರಿ ಅಂಕಿಅಂಶದ ಹೊರತಾಗಿ ಅತ್ಯಂತ ಭಯಾನಕ ವಿಚಾರವೆಂದರೆ ಇದರ ಕುರಿತು ಸರ್ಕಾರದ ಪ್ರತಿಕ್ರಿಯೆ ಮತ್ತು ಅದಕ್ಕಾಗಿನ ತಯಾರಿಗಳು. ಆರ್ಥಿಕ ಹಿಂಜರಿತ ಮತ್ತು ನಿರುದ್ಯೋಗ ಏರಿಕೆಯ ಕುರಿತು ಮೋದಿ ಸರ್ಕಾರ ಇದನ್ನು ಸಮರ್ಥವಾಗಿ ನಿಭಾಯಿಸುವುದು ಹಾಗಿರಲಿ ಆರ್ಥಿಕ ಬಿಕ್ಕಟ್ಟು ಮತ್ತು ನಿರುದ್ಯೋಗ ಇರುವದನ್ನೇ ಒಪ್ಪಿಕೊಳ್ಳಲು ತಯಾರಿಲ್ಲ! 2014ರ ನಂತರದಲ್ಲಿ ಉದ್ಯೋಗ ಸೃಷ್ಟಿ ಮಾಡುವುದರಲ್ಲಿ ವಿಫಲವಾದ ಸ್ಕಿಲ್ ಇಂಡಿಯಾದಂತಹ ಹೆಸರಿಗಾದರೂ ಕೆಲವು ಯೋಜನೆಗಳನ್ನು ಜನಪ್ರಿಯ ಮಾಡಲು ಪ್ರಯತ್ನಿಸಿತ್ತು. ಆದರೆ 2019ರ ನಂತರದಲ್ಲಿ ಯಾವುದೇ ಪ್ರಯತ್ನಕ್ಕೆ ಗಮನ ನೀಡಿಲ್ಲ. ಲಾಕ್‍ಡೌನ್ ನಂತರದಲ್ಲಿಯೂ ಘೋಷಣೆ ಮಾಡಿದ 20 ಲಕ್ಷಕೋಟಿ ಪ್ಯಾಕೇಜ್‍ನಲ್ಲಿಯೂ ಸಣ್ಣ, ಮಧ್ಯಮ ಕೈಗಾರಿಕೆಗಳ ನಿಜವಾದ ಬೇಡಿಕೆಗಳ ಕುರಿತು ಯಾವುದೇ ಪ್ಯಾಕೇಜ್ ಇಲ್ಲ. ಕೃಷಿಗೆ ಸಂಬಂಧಿಸಿದಂತೆ ಹೊಸ ಯೋಜನೆಯೂ ಇಲ್ಲ. ಉದ್ಯೋಗ ಸೃಷ್ಟಿಯ ಬಗ್ಗೆಯೂ ನಿರ್ದಿಷ್ಟ ಮಾತುಗಳು ಕಂಡುಬಂದಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಪ್ರವಾಸೋದ್ಯಮ, ಹೋಟೆಲ್‍ನಂತಹ ಸಣ್ಣ ಕೈಗಾರಿಕೆಗಳ ಕುರಿತು ಕೇಳಿದ ಬಹುಮುಖ್ಯ ಪ್ರಶ್ನೆಗೆ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ‘ಠೀಕ್ ಹೈ’ ಎಂಬ ಉತ್ತರವನ್ನು ಕೊಟ್ಟು ಎದ್ದುಹೋದರು!

ಇದು ಪ್ರವಾಸೋದ್ಯಮ, ಹೋಟೆಲ್ ಉದ್ದಿಮೆಗಳ ವಿಚಾರವಷ್ಟೇ ಅಲ್ಲ. ಈ ಸರ್ಕಾರಕ್ಕೆ ಆರ್ಥಿಕತೆಯನ್ನು ಎದ್ದು ನಿಲ್ಲಿಸುವಂತಹ ಯಾವುದೇ ಕ್ರಮ ಗೊತ್ತಿದ್ದಂತೆ ಕಾಣಿಸುತ್ತಿಲ್ಲ. ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಆರ್ಥಿಕ ಸಮಸ್ಯೆ ಇರುವುದನ್ನು ಒಪ್ಪಿರಲಿಲ್ಲ. ತೀರಾ ಇತ್ತೀಚೆಗೆ ಲಾಕ್‍ಡೌನ್‍ನಿಂದ ಆರ್ಥಿಕತೆಗೇನೂ ಸಮಸ್ಯೆಯಿಲ್ಲ ಎಂದು ಆರ್ಥಿಕ ಖಾತೆ ರಾಜ್ಯ ಸಚಿವರೊಬ್ಬರು ಹೇಳಿದ್ದರು. ಒಂದು ವೇಳೆ ಒಪ್ಪಿಕೊಂಡರೂ, ಬೇಡಿಕೆ ಹೆಚ್ಚಿಸುವುದಕ್ಕಿಂತ ಹೆಚ್ಚೆಚ್ಚು ಸರಬರಾಜು ಹೆಚ್ಚುವ ಕಡೆಗೆ ಈ ಸರ್ಕಾರದ ಒತ್ತು ನಿರಂತರವಾಗಿರುತ್ತದೆ. ಇದು ಕೊರೊನಾ ಲಾಕ್‍ಡೌನ್‍ನ ಕಾಲದಲ್ಲೂ ಮುಂದುವರೆಯಿತು. ಹೀಗಾಗಿಯೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಿ ಎಂದು ನಿರೀಕ್ಷಿಸುವುದೇ ದುಬಾರಿಯಾಗಬಹುದು. ಹೆಚ್ಚೆಂದರೆ ಎಲ್ಲಕ್ಕೂ ಕೊರೊನಾವೇ ಕಾರಣ ಎಂಬ ಸಬೂಬನ್ನು ಅತ್ಯಂತ ಸಮರ್ಥವಾಗಿ ನೀಡುವ ದಾರಿಯನ್ನು ಹುಡುಕಿಕೊಳ್ಳಬಹುದು ಅಷ್ಟೇ. ಈ ಹಿನ್ನೆಲೆಯಲ್ಲಿ ಆರ್ಥಿಕ ತಜ್ಞರ ಅನಿಸಿಕೆಗಳನ್ನು ಅನುಸರಿಸಿ ದೇಶದ ಎಲ್ಲಾ ಜನರೂ ಅರ್ಥಸಾಕ್ಷರರಾಗುವ ಅಗತ್ಯವಿದೆ. ಆ ಮೂಲಕ ಸೂಕ್ತವಾದ ಪರಿಹಾರ ಕ್ರಮಗಳು ಜನಾಂದೋಲನದಿಂದಲೇ ಹೊರಹೊಮ್ಮುವಂತಾದರೆ ಏನಾದರೂ ಬದಲಾವಣೆ ಬರುವ ಸಾಧ್ಯತೆ ತೆರೆದುಕೊಳ್ಳುತ್ತದೆ.


ಇದನ್ನು ಓದಿ: ಜನತೆ ಮೋದಿಯವರ ಸ್ವದೇಶಿ ಘೋಷಣೆಗೆ ಮರುಳಾಗಬಾರದು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...