ತುಮಕೂರು ಹೊರವಲಯದ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಏಷ್ಯಾದ ಅತಿದೊಡ್ಡ ಫುಡ್ ಪಾರ್ಕ್ ರೈತರ ಉಪಯೋಗಕ್ಕೆ ಬರುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಕನಸಿನ ಫುಡ್ ಪಾರ್ಕ್ ನಿರ್ಮಾಣವಾಗಿ ಆರು ವರ್ಷ ಕಳೆದರೂ ರೈತರು ಬೆಳೆದ ಹಣ್ಣು ಹಂಪಲುಗಳನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಿಡುವ ಯಾವ ಚಟುವಟಿಕೆಗಳು ನಡೆದ ಸೂಚನೆಗಳೇ ಸಿಕ್ಕಿಲ್ಲ. ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಸಂಸ್ಥೆ ರೈತರ ನೆರವಿಗೆ ಧಾವಿಸುವಂತಹ ಕೆಲಸ ಮಾಡಬೇಕಿತ್ತು. ಇದು ಆಗಿಲ್ಲ ಜೊತೆಗೆ ಫುಡ್ ಪಾರ್ಕ್ ಉದ್ದೇಶವೂ ಈಡೇರಿಲ್ಲ.

ರಾಜ್ಯದ ಅರ್ಧ ಭಾಗದಷ್ಟು ಜಿಲ್ಲೆಗಳ ರೈತರು ಟಮೋಟೊ, ಸಪೋಟೊ, ಕಲ್ಲಂಗಡಿ, ಕರ್ಬೂಜ, ದ್ರಾಕ್ಷಿ ಮತ್ತು ತರಕಾರಿಗಳನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹಿಸಿಡುವ ವ್ಯವಸ್ಥೆ ಮಾಡುವುದಾಗಿ ಪ್ರಧಾನಿ ಮೋದಿ 2014ರಲ್ಲಿ ಘೋಷಿಸಿದ್ದರು. ತುಮಕೂರು, ದಾವಣಗೆರೆ, ಚಿತ್ರದುರ್ಗ, ಬೆಂಗಳೂರು ಗ್ರಾಮಾಂತರ, ಕೋಲಾರ, ಹಾಸನ, ಚಿಕ್ಕಬಳ್ಳಾಪುರ, ಮೈಸೂರು, ರಾಮನಗರ, ಬಳ್ಳಾರಿ, ಶಿವಮೊಗ್ಗ ಹೀಗೆ 16 ಜಿಲ್ಲೆಗಳ ರೈತರಿಗೆ ಅನುಕೂಲ ಆಗಬೇಕಿತ್ತು. ಸಾವಿರಾರು ಟನ್ ಹಣ್ಣು ಹಂಪಲು ಮತ್ತು ತರಕಾರಿಯಲ್ಲಿ ಕೋಲ್ಡ್ ಸ್ಟೋರೇಜ್‌ನಲ್ಲಿಟ್ಟು ಒಳ್ಳೆಯ ಬೆಲೆ ಸಿಕ್ಕಾಗ ರೈತರು ಮಾರಾಟ ಮಾಡಲು ಅವಕಾಶ ಕಲ್ಪಿಸುವಂತಹ ಕೆಲಸ ಮಾಡಬೇಕಿತ್ತು. ಆದರೆ ಒಂದು ಟನ್ ಹಣ್ಣನ್ನು ಕೋಲ್ಡ್ ಸ್ಟೋರ್‌ನಲ್ಲಿಟ್ಟ ಉದಾಹರಣೆಯೇ ಇಲ್ಲ.
ಬಗೆಬಗೆಯ ಸೊಪ್ಪು, ಬದನೆ, ಮೂಲಂಗಿ, ಈರೇಕಾಯಿ, ಬೆಂಡೆ, ಟಮೋಟೊ, ಕ್ಯಾರೆಟ್, ಗೋರಿಕಾಯಿ, ತೊಂಡೆಕಾಯಿ ಸೇರಿದಂತೆ ತರಿಕಾರಿಗಳನ್ನು ಇಲ್ಲಿ ಯಥೇಚ್ಚವಾಗಿ ಬೆಳೆಯಲಾಗುತ್ತದೆ. ಕೊರೊನ ವೈರಸ್ ಹರಡಿರುವ ಸಂದರ್ಭದಲ್ಲಿ ಇವುಗಳನ್ನು ಕೋಲ್ಡ್ ಸ್ಟೋರೇಜ್‌ನಲ್ಲಿಟ್ಟಿದ್ದರೆ ರೈತರಿಗೂ ಲಾಭವಾಗುತ್ತಿತ್ತು. ತಮಗೆ ಬೇಕಾದಾಗ ಅವುಗಳನ್ನು ಮಾರಿಕೊಳ್ಳಬಹುದಿತ್ತು. ಆದರೆ ಕೊರೊನ ಹಿನ್ನೆಲೆಯಲ್ಲಿ ಭಾರತ ಲಾಕ್‌ಡೌನ್ ಆದ ಮೇಲೆ ರೈತರು ಬೆಳೆದ ಎಲ್ಲಾ ಅಲ್ಪಾವಧಿ ಬೆಳೆಯು ಹಳ್ಳಿಗಳಲ್ಲೇ ಕೊಳೆಯುವಂತಾಗಿದೆ. ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ತರಲು ಆಗುತ್ತಿಲ್ಲ. ಮಾರಲೂ ಅವಕಾಶ ಸಿಗುತ್ತಿಲ್ಲ. ಹಾಗಾಗಿ ಬಡ ರೈತರು ಇಕ್ಕಟ್ಟಿಗೆ ಸಿಲುಕಿದ್ದಾರೆ.

ಜಿಲ್ಲೆಯ ಪಾವಗಡ, ಶಿರಾ, ಮಧುಗಿರಿ ತಾಲೂಕುಗಳಲ್ಲಿ ಹೆಚ್ಚಾಗಿ ಹುಣಸೇಹಣ್ಣು ಬೆಳೆಯುತ್ತಿದ್ದು ಲಾಕ್ ಡೌನ್ ಆಗಿರುವುದರಿಂದ ಚಳ್ಳಕೆರೆ ಮತ್ತು ಹಿಂದೂಪುರ ಮಾರುಕಟ್ಟೆಗಳು ಬಂದ್ ಆಗಿವೆ. ಈಗ ಹುಣಸೇಹಣ್ಣು ಮಾರುಕಟ್ಟೆಗೆ ಹೆಚ್ಚು ಬರುವ ಕಾಲ. ಇಂತಹ ಸನ್ನಿವೇಶದಲ್ಲಿ ಮಾರುಕಟ್ಟೆ ಇಲ್ಲದೆ ಹುಣಸೇಹಣ್ಣು ಒಣಗಿ ಬೆಂಡಾಗುತ್ತಿದೆ. ಹುಣಸೇಹಣ್ಣನ್ನು ಕೋಲ್ಡ್ ಸ್ಟೋರೇಜ್‌ನಲ್ಲಿ ಇಡುವ ವ್ಯವಸ್ಥೆ ಮಾಡಿದ್ದರೆ ರೈತರು ನಿಧಾನವಾಗಿ ಮಾರಾಟ ಮಾಡಿಕೊಳ್ಳುತ್ತಿದ್ದರು. ಆದರೆ ವಸಂತನರಸಾಪುರದ ಫುಡ್ ಪಾರ್ಕ್‌ನಲ್ಲಿಯಾಗಲೀ ಹಿಂದೂಪುರ ಮತ್ತು ಚಳ್ಳಕೆರೆಯ ಹುಣಸೇಹಣ್ಣು ಮಾರುಕಟ್ಟೆಯಲ್ಲಾಗಲೀ ಕೋಲ್ಡ್ ಸ್ಟೋರೇಜ್‌ನಲ್ಲಿ ಇಡುವುದಕ್ಕೆ ಅವಕಾಶವಿಲ್ಲ. ಇದರಿಂದಾಗಿ ಹುಣಸೇಹಣ್ಣು ಬೆಳೆದ ರೈತರು ಕೈಕೈ ಹಿಸುಕಿಕೊಳ್ಳುವಂತಾಗಿದೆ.
ನಾನುಗೌರಿ.ಕಾಂ ಜೊತೆ ದೂರವಾಣಿಯಲ್ಲಿ ಮಾತನಾಡಿದ ರಾಜ್ಯ ರೈತ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಎ. ಗೋವಿಂದರಾಜು ಲಾಕ್ ಡೌನ್ ಇಡೀ ರೈತ ಸಮೂಹವನ್ನು ಆಘಾತಕ್ಕೆ ಒಳಗಾಗುವಂತೆ ಮಾಡಿದೆ. ಅಲ್ಪಾವಧಿ ಮತ್ತು ದೀರ್ಘಾವಧಿ ಎರಡೂ ಬೆಳೆಗಳು ಕೈಗೆ ಬಂದಿರುವ ಹೊತ್ತಿನಲ್ಲಿ ಕೋಲ್ಡ್ ಸ್ಟೋರೇಜ್‌ನಲ್ಲಿ ಸಂಗ್ರಹ ಮಾಡಲು ಅವಕಾಶ ಇಲ್ಲದಿರುವುದು ರೈತರನ್ನು ಕಂಗಾಲಾಗುವಂತೆ ಮಾಡಿದೆ. ಸಾಲ ಮಾಡಿ ಬೆಳೆದಿರುವ ಹಣ್ಣು, ತರಕಾರಿ ಕಣ್ಣಮುಂದೆಯೇ ಒಣಗಿ ಹೋಗುವಂಹತ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ರೈತರಿಂದ ನೇರ ಖರೀದಿ ಮಾಡಿ ಮಾರುಕಟ್ಟೆ ಕಲ್ಪಿಸಬೇಕು ನಗರದ ಜನರಿಗೆ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿ: ತುಮಕೂರಿನ ಫುಡ್ ಪಾರ್ಕ್‌ನಲ್ಲಿ ಉದ್ಯೋಗವೂ ಇಲ್ಲ – ಎಚ್ಎಎಲ್ ಹೆಲಿಕಾಪ್ಟರ್ ಹಾರಲೇ ಇಲ್ಲ
ತುಮಕೂರು ಫುಡ್ ಪಾರ್ಕ್‌ನಲ್ಲಿ ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಇದ್ದಿದ್ದರೆ ರೈತರಿಗೆ ಹೆಚ್ಚು ಪ್ರಯೋಜನ ಆಗುತ್ತಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಫುಡ್ ಪಾರ್ಕ್ ರೈತರ ನೆರವಿಗೆ ಬರುವಲ್ಲಿ ಸಂಪೂರ್ಣ ವಿಫಲವಾಗಿದೆ. ಯಾವ ಉದ್ದೇಶದಿಂದ ನಿರ್ಮಾಣವಾಗಿತ್ತೋ ಆ ಉದ್ದೇಶ ಈಡೇರಿಲ್ಲ. ನೂರಾರು ಕೋಟಿ ವೆಚ್ಚದ ಫುಡ್ ಪಾರ್ಕ್ ವ್ಯರ್ಥವಾದಂತಾಗಿದೆ. ರೈತರ ಸಹಾಯಕ್ಕಿಲ್ಲದ ಫುಡ್ ಪಾರ್ಕ್ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.


