ಜುಮ್ಮಿ ಮನೆಗೆ ಬಂದ ವಾಟಿಸ್ಸೆ.
“ಯಕ್ಕಾ, ಯಕ್ಕವ್, ಕೊರೋನಾ ವಿಷಯದಲ್ಲಿ ಒಂದಿಷ್ಟು ಹ್ವಸಾ ರೂಲ್ಸು ಬಂದವೆ ಹೇಳ್ಳ” ಎಂದ.
“ಏನು ಬ್ಯಾಡ. ನೀನು ಆ ಟಿವಿ ಸೂಳೆ ಮಕ್ಕಳಂಗೆ ಆಗಿದ್ದಿ.”
“ಯಕ್ಕವ್ ಟಿವಿ ಮುಂಡೆ ಮಕ್ಕಳಿಗೆ ಓಲುಸಬ್ಯಾಡ. ಹುಟ್ಟು ಭಯೋತ್ಪಾದಕರ ತರ ಆಗ್ಯವುರೆ ಅ ನನ್ ಮಕ್ಕಳು”.
“ಊ ಕಣೊ ವಾಟಿಸ್ಸೆ. ಆ ಮೈಸೂರು ಬಗ್ಗೆ ಒಸಿ ಸುಳ್ಳೆಳಿದರೇನೊ, ನಡುಗ್ತಾಯಿದೆ ಮೈಸೂರು ಅಂದ್ರು ಮೈಸೂರ ಮ್ಯಾಲೆ ಬರಸಿಡ್ಳು ಅಂದ್ರು. ನಾನು ಪೋನು ಮಾಡಿ ಕೇಳಿದ್ರೆ ಕರೋನಾ ಆದೊರ್ಯಲ್ಲ ಉಸರಾಗಿ ಮನಿಗೆಹೋಯ್ತಾ ಅವುರಂತೆ” ಎಂದ ಉಗ್ರಿ.
“ಅದ್ಯಾಕ್ಲ ಅಂಗೆ ಸುಳ್ಳೇಳತವೆ” ಎಂದಳು ಜುಮ್ಮಿ.
“ಅವುಕೆ ಸಂಬಳ ಕೊಡದೆ ಸುಳ್ಳೇಳಕ್ಕೆ ಕಣಕ್ಕ. ಬ್ಯಾರೆ ಟಿವಿಯೋರಿಗಿಂತ ನಾವೇ ಜಾಸ್ತಿ ಸುಳ್ಳೇಳಬೇಕು ಅಂತ ಪೈಪೋಟಿ ನ್ಯಡುಸ್ತವೆ”.
“ಅಯ್ಯೋ ಅವು ಬಾಯಿಗೆ ತನ್ನ ತೊಂಬ್ಲ ಹಾಕ ಹೋಗು”.
“ತೊಂಬಲ ಅನ್ನಬ್ಯಾಡ ಕಣಕ್ಕ. ಅದು ಸೆಕ್ಸ್ ಮ್ಯಾಟ್ರಾಯ್ತದೆ”.
“ಅದ್ಯಂಗಾಯ್ತದೊ ಎಂದ ಉಗ್ರಿ”.
“ತೊಂಬಲ ಅಂದ್ರೆ ಯಲೆ ಅಡಕೆ ಹದವಾಗಿ ಅಗದದ್ದು. ಒಂಥರ ವಳ್ಳೆ ಬೀಡಾತರ ಆಗಿರತದೆ ಅಂತದ್ನ ಟಿವಿ ಆಂಕರ್ ಬಾಯಿಗಾಕಿದ್ರೆ ಮಜವಾಗಿ ಬಾಯಾಡುಸ್ತರೆ ಬ್ಯಾರೆ ಹೇಳಕ್ಕ”.
“ಅವುರ ಬಾಯಿಗೆ ನನ್ನ ಎಂಜಲಾಕ ಅನ್ಲ”.
“ಅವುರ ಬಾಯಿಗೆ ಕೊರೋನಾ ಎಂಜಲಾಕ ಅನ್ನು”.
“ಅವುರುದು ವಟ್ಟೆ ಪಾಡು ಕಣಕ್ಕ. ನೀನೇನೊ ಮನೆವಳಗೆ ಮಜ್ಜಗೆ ಕಡಕಂಡು ತಂಪಾಗಿದ್ದಿ. ಅವು ನೋಡು ಇಡೀ ದಿನ ಕರೋನಾ, ಕರೋನಾ ಅಂತ ಗೊಬಳಿ ಮರದ ಮ್ಯಾಲೆ ಕುಂತ ಕಾಗೆತರ ಬಡಕತ್ತವೆ. ಕನಸು ಮಸನಲ್ಲೂ ಕರೋನಾ ಅಂತವೆ ಪಾಪ ಅಲವೆ”.
“ಅದ್ರು ಟಿವಿಗಳಿರದು ಕರೋನಾದಿಂದ ಆಗಿರೊ ಅನಾಹುತ ಹೇಳಕ್ಕೆ. ಸರಕಾರ ಹೊಗಳಕ್ಕಲ್ಲ ಕಣೊ” ಎಂದ ಉಗ್ರಿ.
“ಟಿವಿ ನ್ಯಡಸೊವಷ್ಟು ದುಡ್ಡು ಮೋದಿನೆ ಕೊಟ್ಟಿರುವಾಗ ಹೋಗಳಲೇಬೇಕಲ್ಲೊ ಅದ್ಕೆ ಕರೋನಾ ಸುದ್ದಿ ಹೇಳುವಾಗ ಅವುನ ಪೋಟಾ ಹಾಕದು” ಎಂದ ವಾಟಿಸ್ಸೆ.
“ಅವುನೇನೊ ಅಂತ ಬುದ್ದಿವಂತಲವಂತಲ್ಲಾ” ಎಂದಳು ಜುಮ್ಮಿ.
“ಅವುನು ಬುದ್ದಿವಂತ ಅಂತ ಯಾರಕ್ಕ ಹೇಳಿದ್ದು”.
“ಆ ಸುಳ್ಳೇಗೌಡ್ರು ಅನಂತ ಅಂಗಂದಿದ್ದ”.
“ಸುಳ್ಳೇಗೌಡರ ಅನಂತ ನಿಜ ಹೇಳಕ್ಕಾಯ್ತದೇನಕ್ಕ ಈ ಮೋದಿ ಯಾವತ್ತು ಅರ್ಧ ರಾತ್ರಿಲಿ ನೋಟ ಬ್ಯಾನು ಮಾಡಿದ್ನೋ ಅವತ್ತೆ ಇವುನೆಷ್ಟು ಮಟ್ಟಿಗೆ ಬುದ್ದಿವಂತ ಅಂತ ಇಡೀ ಜಗತ್ತಿಗೆ ಗೊತ್ತಾಯ್ತು. ದೇಸ ಅದೋಗತಿಗೆ ಹ್ಹಂಡಕ್ಕೆ ಸುರುಮಾಡಿದ್ದು ಅವತ್ತೆಯ. ಇನ್ಯಾವ ಡಿಗ್ರಿ ಸರ್ಟಿಫಿಕೇಟ್ ತೊರಿದ್ರು ಜನ ನಂಬದಿಲ್ಲ ಬುಡು”.
“ನೀನಂಗಂತಿ ಕಣೊ ಜನ ಮೋದಿ ಮೋದಿ ಅಂತವೆ”.
“ಯಾಕಗಂತರೆ ಗೊತ್ತೇನೊ ಅವುನೆದ್ರಿಗ್ಯಾರು ಇಲ್ಲ ಅದಕೆ”.
“ಅದು ನಿಜ ಬುಡು”.
“ಆ ಡೆಲ್ಲಿಗೆ ಒಂದು ಚರಿತ್ರೆ ಅದೆ. ಅಲ್ಲೊಬ್ಬ ತುಘಲಕ್ ಅಂತ ದ್ವರೆ ಇದ್ದ. ವಿಪರೀತ ಬುದ್ದಿವಂತ. ಅವುನು ಈ ಡೆಲ್ಲಿ ಇಲ್ಲಿದ್ರೆ ವೈರಿಗಾಳ ದಾಳಿ ನ್ಯಡಿತಾಯಿರತದೆ ಅಂತ ಯಲ್ಲ ದೇವಗಿರಿಗೆ ವಂಡಿ ಅಂದ. ಸರಿ ಇಡೀ ಡೆಲ್ಲಿ ದೇವಗಿರಿಗೋಯ್ತು. ಆ ಊರು ರಾಜಾದಾನಿ ಅಗಕ್ಕೆ ಸರಿಲ್ಲ ತಿರಗ ಯಲ್ಲ ಡೆಲ್ಲಿಗೆ ಹೊಂಡಿ ಅಂದ. ಆಗ ತಿರಗ ಡೆಲ್ಲಿ ಹಾದಿಲಿ ನ್ಯಡಕಂಡು ವಂಟ್ರು ಹೋಗುವಾಗ ಕಾಲುಬಾಗ ಸತ್ತಿದ್ರು. ಬರುವಾಗ ಅದ್ರ ಜನ ಸತೃ. ದೊರೆ ತಿಕ್ಕಲ ಪ್ರತಿಭಟಿಸಕ್ಕೆ ಜನಗಳೆ ಇರಲಿಲ್ಲ ಈಗ್ಲು ಕೊರೋನಾ ವಿಷಯದಲ್ಲಿ ಅಂಗೆ ಆಗ್ಯದೆ ನೋಡು”.
“ನೀನೇಳಿದ್ದು ನಿಜ ಕಣೊ ಉಗ್ರಿ ದೇಶಕಟ್ಟೊ ಜನ ಬಿದಿಲಿ, ದಾರಿಲಿ, ರೈಲ್ವೆಹಳಿ ಮ್ಯಾಲೆ ಸಾಯ್ತಾ ಅವುರೆ ಪಾಪ ಅವರಿಗೆ ನಮ್ಮನ್ನ ಕಾಪಾಡೋರು ಯಾರೂ ಇಲ್ಲ ಅನ್ನಸ್ಯದೆ ಇದು ಮೋದಿಗೆ ಗೊತ್ತಾಗದಿಲ್ಲ ಅಂದ್ರೆ ಅವುನು ದಡ್ಡನೇ ಸರಿ”.
“ಅದೇನಾರ ಆಗ್ಲಿ ಜನಗಳ್ಯಲ್ಲ ಸತ್ತೋದ್ರಲ್ಲ ಹೇಳೂ” ಅಂದಳು ಜುಮ್ಮಿ.
“ !?
ಇದನ್ನೂ ಓದಿ: ಬಿ.ಚಂದ್ರೇಗೌಡರ ಕಟ್ಟೆಪುರಾಣ: ಜುಮ್ಮಕ್ಕ ಕೆಮ್ಮು ನೆಗ್ಲೆಟ್ ಮಾಡಬ್ಯಾಡ ಕಣಕ್ಕ


