ಪ್ರಧಾನಿ ಮೋದಿಯವರು ಮತ್ತೊಂದು ಸೈಂಟಿಫಿಕ್ ಸಂಶೋಧನೆಯಿಂದ ಸುದ್ದಿಗೆ ಬಂದಿದ್ದಾರೆ. ಇತಿಹಾಸವನ್ನು ತಮಗಿಷ್ಟ ಬಂದಂತೆ ಬದಲಿಸುತ್ತಾ, ಬಳುಕಿಸುತ್ತಾ, ತುಳುಕಿಸುತ್ತಾ ಹೋಗುವ ನಮ್ಮ ಪ್ರಧಾನ ಸೇವಕರಿಗೆ ಸೈನ್ಸಿನ ಬಗ್ಗೆಯೂ `ಕೆಟ್ಟ’ ಕುತೂಹಲವಿದೆ; ಭಾರೀ ಪಾಂಡಿತ್ಯವೂ ಇದೆ! ಎಷ್ಟೇ ಆಗಲಿ, ಸಾಕ್ಷಾತ್ ಪರಶಿವನಿಂದ ಗಣಪತಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ, ಗಾಂಧಾರಿಯ ಸಂತಾನಗಳನ್ನು ಟೆಸ್ಟ್ ಟ್ಯೂಬ್ ಬೇಬಿಯಾಗಿಸಿದ, ರಾವಣನ ಪುಷ್ಪಕ ವಿಮಾನದ ಮೂಲಕ ಭಾರತಕ್ಕೆ ವಿಮಾನ ತಂತ್ರಜ್ಞಾನದ ಋಣಭಾರ ಹೊರಿಸಿದ, ಹವಾಮಾನ ವೈಪರೀತ್ಯವನ್ನೇ ತಲೆಕೆಳಗು ಮಾಡಿ ವಯೋವೃದ್ಧ ಸೈಕಾಲಜಿಯಾಗಿಸಿದ, ನಾರ್ಮಲ್ ಡೆಲಿವರಿಗೆ ಸೆಗಣಿ ಜೊತೆ ರಾಸುಗಳ ಮೂತ್ರ ಬೆರಕೆಯ ದಿವ್ಯ ಮೆಡಿಸಿನ್ ಶೋಧಿಸಿದ ವಿಚಾರಧಾರೆಯಿಂದ ಬಂದವರಲ್ಲವೇ ಅವರು.
ಅಷ್ಟಾದರು ಪಾಂಡಿತ್ಯ ಇರದಿದ್ದರೆ ಏನು ಚೆನ್ನ.
ಅರವತ್ತು ಸಾವಿರ ಬೆಲೆಬಾಳುವ ಅಣಬೆ ತಿಂದು ಅದುನ್ನ ಅರಗಿಸಿಕೊಳ್ಳೋ ಸಲುವಾಗಿ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಟೂರು ಹೋಗುವ ಸಂದರ್ಭದಲ್ಲಿ ಹವಾಯಿ ಜಹಾಜಿನೊಳಗೆ ಖಾಲಿ ಕೂರಬೇಕಾದ ಸಂದರ್ಭದಲ್ಲಿ ನಮ್ಮ ಪಕೀರರು ಸುಮ್ಮನೇ ಕಾಲಹರಣ ಮಾಡುವುದಿಲ್ಲ. ವಿಜ್ಞಾನದಲ್ಲಿ ಏನೆಲ್ಲ ವಿಚಿತ್ರ ಸಂಶೋಧನೆಗಳು ನುಸುಳಿಹೋಗಿವೆ ಅನ್ನೋದನ್ನು ಅಧ್ಯಯನ ಮಾಡುತ್ತಿರುತ್ತಾರೆ. ಆ ಅಧ್ಯಯನದಿಂದಲೇ ಅವರಿಗೆ ವಿಜ್ಞಾನದ ಆ ಪಾಂಡಿತ್ಯ ಸಿದ್ಧಿಸಿರೋದು! ಮೊನ್ನೆ, ಅಂದರೆ ಆಗಸ್ಟ್ 10ರಂದು ಅಂತದ್ದೊಂದು `ವಿಶಿಷ್ಟ’ ಅನ್ವೇಷಣೆಯ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಟ್ಟು ಜನರ ಶಹಬ್ಭಾಶ್‍ಗಿರಿಗೂ ಭಾಜನರಾಗಿದ್ದಾರೆ.
ಅದು ವಿಶ್ವ ಜೈವಿಕ ಅನಿಲ ದಿನ. ನ್ಯೂಡೆಲ್ಲಿಯ ವಿಜ್ಞಾನ ಭವನದ ಸಭಾಂಗಣ. ರೈತರು, ವಿದ್ಯಾರ್ಥಿಗಳಿಂದ ಶುರುವಾಗಿ ದೊಡ್ಡದೊಡ್ಡ ವಿಜ್ಞಾನಿಗಳೂ ಅಲ್ಲಿ ನೆರೆದಿದ್ದರು. ಮೈಕಿನ ಮುಂದಕ್ಕೆ ಬರುತ್ತಿದ್ದಂತೆಯೇ ಮೋದಿಯವರು ಭಾವಾವೇಶಕ್ಕೆ ತುತ್ತಾಗಿ ಮಾತು ಶುರು ಮಾಡಿದರು. ಮಾತಿನ ನಡುವೆ ಎರಡು ಅದ್ಭುತ ಸಂಶೋಧನೆಗಳನ್ನೂ ಹೊರಗೆಡವಿದರು. ಆ ವಿಚಾರವನ್ನ ಅವರ ಬಾಯಿಂದಲೇ ಕೇಳಿದರೆ ಚೆನ್ನ. ಸೋ, ಓವರ್ ಟು ಪ್ರಧಾನ ಸೇವಕ್‍ಜೀ…..
`ಮಿತ್ರೋಂ, ನಿಮುಗೆ ಒಬ್ಬ ಚಾಯ್‍ವಾಲುನ ಕಥೆ ಹ್ಯೇಳ್ತೀನಿ ಕ್ಯೇಳಿ. ಈ ಚಾಯ್‍ವಾಲುನದೇ ಕಥೆ ಯಾಕೆ ಅನ್ನೋದು ನಿಮುಗೂ ಗೊತ್ತಿರೋ ಇಚಾರುವೇ. ನನಿಗೂ, ಈ ಚಾಯ್‍ಗೂ ಅಂಥಾ ಎಮೋಷುನಲ್ ಕನೆಕ್ಸನ್ ಉಂಟು. ನನ್ನಪ್ಪ ಚಾಯ್ ಮಾಡುವಾಗ ನಾನು ಹೆಲುಪು ಮಾಡುತಿದ್ದೆ. ಹಂಗಾಗಿ ಆ ಕನೆಕ್ಸೆನ್ನು. ಈಗ ಈ ಚಾಯ್‍ವಾಲುನ ಇಚಾರುಕ್ಕೆ ಬರೋಣ. ಈತನ ಅಂಗಡಿ ಪಕ್ಕುದಲ್ಲೇ ಒಂದು ದ್ವೊಡ್ಡ ಗಟಾರ ಹರೀತಿತ್ತು. ದಿನಾ ಕೆಟ್ಟ ವಾಸುನೆ ಅದುರಿಂದ. ಸಹಿಸಿಕೊಳ್ಳಕ್ಕೇ ಆಗುತಿರಲಿಲ್ಲ. ಒಂದಿನ ಅವುನ ದಿಮಾಗಿನಲ್ಲಿ ಒಂದು ಇಚಾರ ಬಂತು. ಸಾಭುವಿಕವಾಗಿ ಕೊಳಕು ಚರಂಡಿಗುಳು ಇರೋ ಕಡೆ ಗ್ಯಾಸೂ ಉತುಪತ್ತಿಯಾಗಿ ಹೊರಕ್ಕೆ ಬರುತಿರುತ್ತೆ’
`ಅವುನು ಒಂದು ಸಣ್ಣ ಬಾಂಡ್ಲಿಯಂಥಾ ಪಾತ್ರೆ ತಕಂಡು, ಅದುನ್ನ ಆ ಗಟಾರುದ ಮ್ಯಾಲೆ ದಬಾಕಿದ. ಅದರ ತಳುಕ್ಕೆ ಒಂದು ತೂತು ಕುಟ್ಟಿ, ಅದರೊಳಕ್ಕೆ ಗ್ಯಾಸ್ ಪೈಪು ತುರುಕಿದ. ಆ ಪೈಪನ್ನು ಸೀದಾ ತಕಂಡೋಗಿ ತನ್ನ ಗ್ಯಾಸ್‍ಸ್ಟೌವ್ವಿಗೆ ಕನೆಕ್ಟು ಮಾಡಿದ. ಗಟಾರುದಿಂದ ಏನು ಗ್ಯಾಸು ಬರ್ತಿತ್ತೊ ಅದು ಪೈಪಿನ ಮೂಲಕ ಸ್ಟೌವಿಗೆ ಬಂತು. ಅವುನು ಚಾಯ್ ತಯಾರು ಮಾಡಕ್ಕೆ ಅದೇ ಗ್ಯಾಸುನ್ನ ಬಳಿಸಿಕ್ಯಂಡ…. ವ್ಹಾವ್, ಎಂಥಾ ಸಿಂಪಲ್ಲುssss ಟೆಕ್ನಾಲಜಿ.’
`ಹಂಗೆ ಇನ್ನೊಂದು ಸಿಂಪಲ್ ಸ್ಟೋರಿ ಬಿಡ್ತೀನಿ ಕ್ಯೇಳಿಸಿಕಳ್ರಿ. ನಾನಿನ್ನು ಗುಜರಾತಿನಲ್ಲಿದ್ದಾಗ, ಒಮ್ಮೆ ನನ್ನ ಬೆಂಗಾವಲು ಸವಾರಿ ಹ್ವೊಂಟಿತ್ತು. ಆಗ ನನ್ನು ಮುಂದುಗಡೇನೆ ಒಬ್ಬ ಸ್ಕೂಡರಿನ್ಯಾಗೆ ಟ್ಯಾಕ್ಟರಿಯ ದ್ವೊಡ್ಡ ಟ್ಯೂಬು ಇರುತ್ತಲ್ಲಾ, ಅದುನ್ನ ಇಟಗಂಡು, ಸರ್ಕಸ್ಸು ಮಾಡಿಕ್ಯಂತ ತಕಂಡು ಹ್ವೊಂಟಿದ್ದ. ಅವುನ ಅವುಥಾರ ನೋಡುದ್ರೆ ಹಿಂದುಗಡೆ ಬರೊ ವಾಹನುದವರಿಗೆ ಭಯ ಆಗುತ್ತಿತ್ತು. ನನಿಗೂ ತಲೆ ಕ್ಯೆಟ್ಟೋಯ್ತು. ಇವುನು ಯಾಕಪಾ ಹಿಂಗೆ ತಗಂಡು ಹೊಂಟವುನೇ ಅಂಥಾ. ತಲೇನಾಗಿ ಚೂರುಪಾರು ಬುದ್ದಿ ಇರೋ ಯಾವನೇ ಮನುಸ್ಯ, ಟ್ಯೂಬಿನಾಗಿರೋ ಗಾಳೀನೆಲ್ಲ ಹೊರಗೆ ಬಿಟ್ಟು, ಖಾಲಿ ಮಾಡಿಕ್ಯಂಡು, ಮಡುಚಿಕ್ಯಂಡು ಸುಲುಭುವಾಗಿ ಹೊಯ್ತಾರೆ. ಸೇರಬೇಕಾದ ಜಾಗ ಮುಟ್ಟಿದ ಮ್ಯಾಲೆ, ಗಾಳಿ ತುಂಬಿಸಿಗಂತಾರೆ. ನನಿಗೆ ತಲೆಕ್ಯೆಟ್ಟು ಅವುನ ಗಾಡೀನ ನಿಲ್ಸಿದೆ. `ಏಯ್, ಅಣ್ಣಾ, ಸಲುಪಾ ನಿಲ್ಲಪ್ಪಾ, ನಿಲ್ಲಪ್ಪಾ, ಅಂದೆ’. `ಯೋನಪಾ ಇದೆಲ್ಲಾ, ಯೋನ್ ಮಾಡುತಾ ಇದೀಯ ನೀನು. ಅಲ್ಲ, ಬಿದ್ದುಗಿದ್ದ್ರೆ ಏಟು ಆಗಲ್ಲುವಾ, ಗಾಯ ಮಾಡಿಕ್ಯಂತೀಯ. ಎಲ್ಲಿಗೆ ಹೊಂಟಿದೀಯ’ ಅಂದೆ. ಹೊಲುಕ್ಕೆ ಹೋಗ್ತಾ ಇವುನಿ ಅಂತ ಅಂದ.
`ಸರಿಯಪ್ಪಾ, ಇದುನ್ಯಾಕೆ ತಗಂಡು ಹೊಯ್ತಾ ಇದೀಯಾ ಅಂತ ಕ್ಯೇಳಿದೆ. ಅದುಕ್ಕೆ ಅವುನಂದ, ನೋಡಿ ಸ್ವಾಮಿ ನನ್ನ ಮನೇಲಿ ಅಡುಗೆ ಮನಿಂದ ಒಂದೀಟು ವೇಸ್ಟೇಜು ಬತ್ತದೆ, ಜ್ವೊತೀಗೆ ನನ್ನತಾವ ಇರೋ ಎಲ್ಡು ಪಸುಗಳ ಗೊಬ್ಬರನುವೇ ಸೇರುಸಿ ಮನೆ ಹತ್ರಾನೆ ಗೋಬರ್ ಗ್ಯಾಸು ಉತುಪಾದನೆ ಮಾಡಿಕ್ಯಂತೀನಿ. ಆ ಗ್ಯಾಸುನ್ನ ಈ ಟ್ಯೂಬಿನೊಳಿಕ್ಕೆ ತುಂಬಿಸಿಕ್ಯಂಡು ಹೊಲುಕ್ಕೆ ತಗೊಂಡೋಗಿ ಆ ಗ್ಯಾಸಿನಿಂದ ನನ್ನ ಪಂಪು ಓಡಿಸಿ, ನೀರು ಹಾಯಿಸಿಕೊಳ್ತೀನಿ ಅಂದ.’
`ನೀವು ಕಲುಪನೆ ಮಾಡ್ಕ್ಯಳಿ ನಮ್ಮ ದೇಶುದ ರೈತೃ ಎಂಥಾ ಟೆಕ್ನಾಲಜಿಸ್ಟುಗಳು ಅಂತಾ…’
(ಕೂತಿದ್ದ ಮಹಾತ್ಮರಿಂದ ಚಪ್ಪಾಳೆ.. ಚಪ್ಪಾಳೆ… ಚಪ್ಪಾಳೆ….)
ಮೋದಿಯವರು ಇಂಥಾ ಜೋಡಿಕಥೆ ಹೊಡೆದಿದ್ದೇ ತಡ ಟ್ವಿಟ್ಟರಿಗರು ಶ್ಯಾನೆ ತಪರಾಕಿ ಕೊಡಲು ಶುರು ಮಾಡಿದರು. ಬೆಚ್ಚಿಬಿದ್ದ ಮೋದಿ ಬ್ರ್ಯಾಂಡಿನ ಟೀವಿ ಚಾನೆಲ್ಲುಗಳು, ಭಕ್ತ ಮಂಡಳಿ ಏನೇನೊ ತೇಪೆ ಹಚ್ಚಲು ಮುಂದಾಯ್ತು. ಛತ್ತೀಸ್‍ಗಢದ ಶ್ಯಾಂ ರೈ ಎಂಬ ಚಾಯ್‍ವಾಲನ ಕಥೆಯನ್ನೇ ಮೋದಿ ಹೇಳಿದ್ದು ಅಂತ ಅವನ ಸಂಶೋಧನೆ ಬಗ್ಗೆ ವಿವರಿಸಲು ಮುಂದಾದರು. ಅಸಲಿಗೆ ಆ ಶ್ಯಾಂ ರೈ ಕೂಡಾ ಗಟಾರದ ಮೇಲೆ ಪಾತ್ರೆ ದಬಾಕಿ ಗ್ಯಾಸು ಸಂಶೋಧನೆ ಮಾಡಿರಲಿಲ್ಲ. ಗೋಬಲ್ ಪ್ಲ್ಯಾಂಟ್ ಪ್ರಕಾರ ಚರಂಡಿಯ ಕೊಚ್ಚೆಯನ್ನು ಸಂಶೋಧಿಸಿ ಗ್ಯಾಸ್ ಉತ್ಪಾದಿಸಿದ್ದ! ಇನ್ನು ಮೋದಿ ಸಾಹೇಬರಿಗೆ ಬಿಸಿ ಮುಟ್ಟಿಸಿದ ಟ್ವಿಟ್ಟರ್ ಮತ್ತು ಕಾರ್ಟೂನ್ ಸ್ಯಾಂಪಲ್‍ಗಳು ಇಲ್ಲಿವೆ ನೋಡಿ.
ಟ್ವಿಟ್ಟರ್ 1 (ಪರ್ವೇಜ್): ಜಿಪಿಜಿ (ಗಟಾರ ಉತ್ಪಾದಿತ ಗ್ಯಾಸು) ಕಂಡುಹಿಡಿದಿದ್ದಕ್ಕೆ ನಮ್ಮ ಭಾರತ ಸರ್ಕಾರ ನರೇಂದ್ರ ಹಾಕಿನ್ಸ್ ಮೋದಿಯವರ ಹೆಸರನ್ನು ನೊಬೆಲ್ ಪ್ರಶಸ್ತಿಗೆ ಶಿಫಾರಸ್ಸು ಮಾಡಬೇಕು.
ಟ್ವಿಟ್ಟರ್ 2 (ರಾಗಾ-ದಿ ವಾರಿಯರ್) : ಬಹುಶಃ ಮಿಸ್ಟೇಕ್ಕೇ ಆಗಿರಬಹುದು, ಆದರೂ ಪ್ರಧಾನಿ ಮೋದಿಯವರು ನೈಟ್ರಸ್ ಆಕ್ಸೈಡ್ ಅಲ್ಲದೆ ಹೊಸದೊಂದು ನಗೆ ಅನಿಲವನ್ನು ಶೋಧಿಸಿದ್ದಾರೆ. ಆ ಗ್ಯಾಸನ್ನ ನಮೋ ಆಕ್ಸೈಡ್ ಅನ್ನಬಹುದು.
ಟ್ವಿಟ್ಟರ್ 3 (ಪೋಲಿ ಸರ್ಕಾರ್): ಪ್ರಧಾನಮಂತ್ರಿ ಉಜ್ವಲ ಯೋಜನೆಯ ಭಾಗವಾಗಿ ಇನ್ಮುಂದೆ ಒಳಚರಂಡಿ ಮತ್ತು ಗಟಾರಗಳನ್ನ ರಾಷ್ಟ್ರೀಯ ಖಜಾನೆಗಳನ್ನಾಗಿ ಘೋಷಿಸಬಹುದು.
ಟ್ವಿಟ್ಟರ್ 4 (ಹಿಸ್ಟರಿ ಆಫ್ ಇಂಡಿಯಾ): ಡಾ.ಹೋಮಿ ಜುಬಾನ್‍ಗಿರಿ ಬಾಬಾರವರು, ಗಟಾರ ಮತ್ತು ಮ್ಯಾನ್‍ಹೋಲ್ ವಿಷಾನಿಲಗಳನ್ನು ಬಳಸಿಕೊಂಡು ಅಡುಗೆ ಮಾಡುವ ತಮ್ಮ ಸಂಶೋಧನಾ ಪ್ರಬಂಧವನ್ನು ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯ ಮುಂದೆ ಮಂಡಿಸುತ್ತಿದ್ದಾರೆ. (ಮೋದಿಯವರು ಭಾಷಣ ಮಾಡಿದ ವೀಡಿಯೋ ಲಿಂಕ್ ಉದ್ದೇಶಿಸಿ)
ಟ್ವಿಟ್ಟರ್ 5 (ಸಂಜೀವ್ ಭಟ್, ಐಪಿಎಸ್): ಎಲ್‍ಎನ್‍ಜಿ (ಲಿಕ್ವಿಡ್ ನಾಲಾ ಗ್ಯಾಸ್) ಸಂಶೋಧನೆಗಾಗಿ ಮುಂದಿನ ವರ್ಷದ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಮೋದಿಯವರ ಹೆಸರನ್ನು ನಾಮನಿರ್ದೇಶನ ಮಾಡುವುದಾಗಿ ಯುನೆಸ್ಕೋ ಘೋಷಿಸಿದೆ.
ಟ್ವಿಟ್ಟರ್ 6 (ಮಹಾರಾಣ ಬಲವರ್ಧನ್): ಬ್ರೇಕಿಂಗ್ ನ್ಯೂಸ್!…. ಮೋದಿಯವರ ಗಟಾರ ಗ್ಯಾಸ್ ಸಂಶೋಧನೆ ನಂತರ ಚರಂಡಿ ಅಕ್ಕಪಕ್ಕದ ಸೈಟುಗಳ ಬೆಲೆ ರಾಕೆಟ್ಟಿನಂತೆ ಏರತೊಡಗಿದೆ.
ಟ್ವಿಟ್ಟರ್ 7 (ರಾಣಾ ಬೇಗಂ): ಅನಿಲದ ಹೆಸರು-ಮಿತೋಜನ್, ಅನ್ವೇಷಣೆಯಾದ ವರ್ಷ-2018, ಅನುಕೂಲ-ನೇರವಾಗಿ ಚರಂಡಿಗಳಿಂದಲೇ ಸಂಗ್ರಹಿಸಬಹುದು, ಉಪಯೋಗಗಳು- ಗೃಹೋಪಯೋಗಿಯಾಗಿ ಅಡುಗೆ ಮಾಡಲು ಬಳಸಬಹುದು, ರಾಜಕೀಯವಾಗಿ ನೈಜ ಸವಾಲುಗಳಿಂದ ಜನರ ಚಿತ್ತವನ್ನು ಬೇರೆಡೆ ತಿರುಗಿಸಲು ಬಳಸಬಹುದು. ಇದನ್ನು ಸೇವಿಸಿದ ವ್ಯಕ್ತಿ ಜುಮ್ಲಾಗಳಿಗೆ ಬಲಿಯಾದರೆ, `ಭಕ್ತ’ನಾಗಿ ಬದಲಾಗುವನು.
ಟ್ವಿಟ್ಟರ್ 8 (ಜಿಯೋ ಇನ್ಸ್‍ಟಿಟ್ಯೂಟ್) : ನಾವು ಜಿಯೋ ಕ್ಯಾಂಪಸ್‍ನಲ್ಲಿ ಭಕ್ತರಿಗಾಗಿ ಚಹಾ ಮಾಡುವ ಸ್ಪರ್ಧೆಯನ್ನ ಏರ್ಪಡಿಸಿದ್ದೇವೆ. ತಳಕ್ಕೆ ತೂತು ಕುಟ್ಟಿದ ಒಂದು ಪಾತ್ರೆ, ಒಂದು ಪೈಪು, ಒಂದು ಬರ್ನರ್ ಮತ್ತು ಒಂದು ಚರಂಡಿಯನ್ನು ಸ್ಥಳದಲ್ಲಿ ವ್ಯವಸ್ಥೆ ಮಾಡಲಾಗುವುದು. ರೂಫಿ ಗಾಂಧಿಯವರು ಸ್ಪರ್ಧೆಯ ವಿಶೇಷ ಅತಿಥಿ ಮತ್ತು ತೀರ್ಪುಗಾರರೂ ಆಗಿರುತ್ತಾರೆ.
ಟ್ವಿಟ್ಟರ್ 9 (ಅರವಿಂದ ಕೇಜ್ರಿವಾಲ್); ಅದುಕ್ಕೇ ಹೇಳೋದು, ಓದು ಬರಹ ತಿಳಿದೋರೆ ಪ್ರಧಾನಮಂತ್ರಿ ಆಗಬೇಕು ಅಂತ..
ಟ್ವಿಟ್ಟರ್ 10 (ಸಾಗರಿಕಾ ಘೋಷ್): ಎಂಥಾ ನಿಬ್ಬೆರಗಾಗುವ ಸಂಶೋಧನೆ! ಪಾಶ್ಚಿಮಾತ್ಯ ವಿಜ್ಞಾನಿಗಳು ಇದುವರೆಗೆ ಇಂಥದ್ದನ್ನು ಶೋಧಿಸಿದ್ದರಾ?
ಟ್ವಿಟ್ಟರ್ 11 (ಶಾಹೀದ್ ಸಿದ್ದಿಕಿ): ಅಯ್ಯೋ, ದೇವರೆ, ಎಂಥಾ ಗ್ರೇಟ್ ಐಡಿಯಾ! ಅವರು ಯಾಕೆ ಇಷ್ಟೊಂದು ಮಹಾನ್ ನಾಯಕ ಅಂತ ಈಗ ಗೊತ್ತಾಯ್ತು. ದೇಶಕ್ಕಾಗಿ ಗಟಾರ ಆರ್ಥಿಕತೆ/ಗಟಾರ ಉದ್ಯೋಗಗಳು/ಗಟಾರ ಐಡಿಯಾಗಳು
ಟ್ವಿಟ್ಟರ್ 12 (ಅತುಲ್ ಖಾತ್ರಿ): ಕಳೆದ ರಾತ್ರಿ ನಾನು ಸಿಕ್ಕಾಪಟ್ಟೆ ಕಡ್ಲೆ ತಿಂದಿದ್ದೆ. ಬೆಳಿಗ್ಗೆ ನನ್ನ ಆ ಗ್ಯಾಸು ಬಳಸಿಕೊಂಡೇ ಚಾಯ್ ಮಾಡಿಕೊಂಡೆ….
ಟ್ವಿಟ್ಟರ್ 13 : ಮೋದಿಯವರದು, ಸ್ಥಾಪನೆಯೇ ಆಗಿರದ ಜಿಯೋ ಇನ್ಸ್‍ಟಿಟ್ಯೂಟ್‍ನ ಪ್ರಪ್ರಥಮ ಪಿಎಚ್‍ಡಿ ಸಂಶೋಧನಾ ಪ್ರಬಂಧ.
– ಜೀಟಿ ಮಾಚಯ್ಯ


