ಪ್ರಧಾನಿ ನರೇಂದ್ರ ಮೋದಿ ಕಾನೂನು ಮತ್ತು ನಿಯಮಗಳ ವ್ಯಾಪ್ತಿಗೆ ಒಳಪಡುದಿಲ್ಲವೇ? ಕಾನೂನು ಅಥವಾ ನಿಯಮಗಳು ಅವರಿಗೆ ಅನ್ವಯಿಸುವುದಿಲ್ಲವೇ ಎಂದು ಮಧ್ಯಪ್ರದೇಶದ ಮಾಜಿ ಸಿಎಂ, ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ.
ಲೋಕಸಭೆಯ ಚುನಾವಣೆಯ ಕೊನೆಯ ಹಂತದ ಮೌನ ಅವಧಿ ವೇಳೆ ಮೋದಿ ಧ್ಯಾನದ ಚಿತ್ರಗಳು ವೈರಲ್ ಆಗಿದ್ದವು, ಈ ಬಗ್ಗೆ ಪ್ರಶ್ನೆಯನ್ನು ಎತ್ತಿರುವ ದಿಗ್ವಿಜಯ್ ಸಿಂಗ್ ಪ್ರಧಾನ ಮಂತ್ರಿಗಳ ಕಾರ್ಯಾಲಯವು ಈ ಕುರಿತು ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕಪಿಲ್ ಎಂಬವರು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ವಿವೇಕಾನಂದ ಸ್ಮಾರಕದಲ್ಲಿ ಪೋಟೋ ತೆಗೆಯುವುದಕ್ಕೆ ಕಾನೂನಿನ ಪ್ರಕಾರ ಅನುಮತಿಯಿಲ್ಲ, ಇದೊಂದು ದಂಡನಾರ್ಹ ಅಪರಾಧವಾಗಿದೆ. ಹೀಗಿದ್ದೂ ಇದೇ ಪ್ರಥಮ ಬಾರಿಗೆ ನೀವು ವಿವೇಕಾನಂದ ಸ್ಮಾರಕದಲ್ಲಿನ ಧ್ಯಾನಮಂದಿರದ ಭಾವಚಿತ್ರಗಳನ್ನು ನೋಡುತ್ತಿದ್ದೀರಿ. ಕ್ಯಾಮೆರಾ ಇಲ್ಲದೆ ಕ್ಯಾಮೆರಾ ಜೀವಿ ಬದುಕುವುದಾದರೂ ಹೇಗೆ? ಎಂದು ಬರೆದುಕೊಂಡಿದ್ದರು. ಈ ಪೋಸ್ಟ್‌ನ್ನು ಮರು ಹಂಚಿಕೊಂಡಿರುವ ದಿಗ್ವಿಜಯ್ ಸಿಂಗ್ ಮೋದಿಗೆ ಕಾನೂನು ಮತ್ತು ನಿಯಮಗಳು ಅನ್ವಯಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಲೋಕಸಭೆ ಚುನಾವಣೆಯ ಕೊನೆಯ ಹಂತದ ಪ್ರಚಾರದ ಬಳಿಕ ವಿವೇಕಾನಂದ ಸ್ಮಾರಕದ ಧ್ಯಾನಮಂದಿರದಲ್ಲಿ ಪ್ರಧಾನಿ ಮೋದಿ 45 ಗಂಟೆಗಳ ಧ್ಯಾನದಲ್ಲಿದ್ದಾರೆ. ಇಂದು ಸಂಜೆ ಧ್ಯಾನ ಮುಕ್ತಾಯಗೊಳ್ಳಲಿದೆ. ಇಂದು ಲೋಕಸಭೆ ಚುನಾವಣೆಯ 7ನೇ ಹಂತದ ಮತದಾನದ ಹಿನ್ನೆಲೆ ಮೇ 30ರಿಂದ ಮೌನ ಅವಧಿ ಆರಂಭವಾಗಿತ್ತು. ಆದರೆ ಇದೇ ಸಮಯದಲ್ಲಿ ಪ್ರಧಾನಿ ಮೇ 30ರ ಸಂಜೆಯಿಂದ ತಮ್ಮ ಧ್ಯಾನವನ್ನು ಪ್ರಾರಂಭಿಸಿದ್ದಾರೆ. ಇದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಜೂನ್ 1ರ ಸಂಜೆಯಿಂದ ಪ್ರಧಾನಿ 24-48 ಗಂಟೆಗಳ ನಂತರ ತನ್ನ ಧ್ಯಾನವನ್ನು ಪ್ರಾರಂಭಿಸಬಹುದು. ಅವರು ಮೇ 30ರಿಂದ ಧ್ಯಾನ ಮಾಡಲು ಬಯಸಿದರೆ, ನಂತರ ಅದನ್ನು ಟಿವಿ ಅಥವಾ ಮುದ್ರಣ ಮಾಧ್ಯಮವು ಪ್ರಸಾರ ಮಾಡದಂತೆ ಚುನಾವಣಾ ಆಯೋಗ ನಿರ್ಬಂಧಿಸಬೇಕು ಎಂದು ಪ್ರತಿಪಕ್ಷಗಳು ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದವು.
ಕನ್ಯಾಕುಮಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ಯಾನವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಿದರೆ ಅದು ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆಯಾಗುತ್ತದೆ ಎಂದು ಮಮತಾ ಬ್ಯಾನರ್ಜಿ ಕೂಡ ಚುನಾವಣಾ ಆಯೋಗದ ಗಮನಕ್ಕೆ ತಂದಿದ್ದರು.
ಇದನ್ನು ಓದಿ: ‘ಧ್ಯಾನ’ಕ್ಕೆ ಹೊರಡುವ ಮೊದಲು ಕೊನೆಯ ಸಭೆಯಲ್ಲೂ ಸುಳ್ಳು ಹೇಳಿದ್ದ ಮೋದಿ: ಪ್ರಧಾನಿಯ 2024ರ ಚುನಾವಣಾ ಪ್ರಚಾರ ಹೇಗಿತ್ತು?


