2014 ರಲ್ಲಿ ಪ್ರಧಾನ ಮಂತ್ರಿಯಾದ ತಕ್ಷಣ, ನರೇಂದ್ರ ಮೋದಿ ಅವರು ರಾಜ್ಯಗಳಿಗೆ ಮೀಸಲಿಟ್ಟ ಅನುದಾನವನ್ನು ಗಮನಾರ್ಹವಾಗಿ ಕಡಿತಗೊಳಿಸಲು ಭಾರತದ ಹಣಕಾಸು ಆಯೋಗದೊಂದಿಗೆ ‘ಹಿಂಬಾಗಿಲಿನ ಮಾತುಕತೆ’ ನಡೆಸಿದ್ದರು ಎಂದು ‘ಅಲ್ ಜಝೀರಾ’ ವರದಿ ಮಾಡಿದೆ.
‘ಕೇಂದ್ರೀಯ ತೆರಿಗೆಗಳಿಂದ ರಾಜ್ಯಗಳ ಪಾಲನ್ನು ನಿರ್ಧರಿಸುವ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಿದೆ’ ಎಂದು ಆಯೋಗದ ಮುಖ್ಯಸ್ಥರು ವಿರೋಧಿಸಿದ ನಂತರ, ಮೋದಿ ಅವರು ಹಿಂದೆ ಸರಿಯಬೇಕಾಯಿತು ಎಂದು ಹೇಳಲಾಗಿದೆ.
ಹಣಕಾಸು ಆಯೋಗದ ದೃಢವಾದ ನಿಲುವು ಮೋದಿ ಸರ್ಕಾರವು ತನ್ನ ಮೊದಲ ಪೂರ್ಣ ಬಜೆಟ್ ಅನ್ನು 48 ಗಂಟೆಗಳಲ್ಲಿ ತರಾತುರಿಯಲ್ಲಿ ಮರುಪರಿಶೀಲಿಸುವಂತೆ ಮಾಡಿತು. ತೆರಿಗೆಗಳ ಹೆಚ್ಚಿನ ಭಾಗವನ್ನು ಕೇಂದ್ರದಲ್ಲೇ ಉಳಿಸಿಕೊಳ್ಳುವ ಅವರ ಊಹೆಯು ಕಾರ್ಯಸಾಧುವಾಗದ ಕಾರಣ, ಒಕ್ಕೂಟ ಸರ್ಕಾರವು ತನ್ನ ಕಲ್ಯಾಣ ಕಾರ್ಯಕ್ರಮಗಳ ಹಣವನ್ನು ಕಡಿತಗೊಳಿಸಿತ್ತು.
ಅದೇ ಸಮಯದಲ್ಲಿ, ‘ರಾಜ್ಯಗಳಿಗೆ ಹಂಚಿಕೆ ಮಾಡಬೇಕಾದ ತೆರಿಗೆ ಭಾಗಗಳ ಕುರಿತು ಹಣಕಾಸು ಆಯೋಗದ ಶಿಫಾರಸುಗಳನ್ನು ನಾನು ಸ್ವಾಗತಿಸುತ್ತೇನೆ’ ಎಂದು ಮೋದಿ ಸಂಸತ್ತಿನಲ್ಲಿ ಸುಳ್ಳು ಹೇಳಿಕೆ ನೀಡಿದರು.
ಒಕ್ಕೂಟ ಸರ್ಕಾರ ಬಜೆಟ್ ತಯಾರಿಕೆಯಲ್ಲಿ ಹಣಕಾಸಿನ ಚೌಕಾಶಿ ಮತ್ತು ತೆರೆಮರೆಯ ಕಾರ್ಯಾಚರಣೆ ಬಗ್ಗೆ ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಅವರಿಂದ ಬಹಿರಂಗವಾಗಿದೆ. ಪ್ರಧಾನ ಮಂತ್ರಿ ಕಚೇರಿಯಲ್ಲಿ ಜಂಟಿ ಕಾರ್ಯದರ್ಶಿಯಾಗಿ, ಅವರು ಮೋದಿ ಮತ್ತು ಹಣಕಾಸು ಆಯೋಗದ ಅಧ್ಯಕ್ಷ ವೈವಿ ರೆಡ್ಡಿ ನಡುವಿನ ‘ಹಿಂಬಾಗಿಲ ಸಂಧಾನ’ದಲ್ಲಿ ಸಂವಹಕಾರರಾಗಿದ್ದರು.
ಪ್ರಧಾನ ಮಂತ್ರಿ ಮತ್ತು ಅವರ ತಂಡವು ರಾಜ್ಯಗಳ ಹಣಕಾಸು ಕಡಿತಗೊಳಿಸಲು ಮೊದಲಿನಿಂದಲೂ ಪ್ರಯತ್ನಿಸಿದೆ ಎಂದು ಪ್ರಸ್ತುತ ಭಾರತ ಸರ್ಕಾರದ ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ಸಾರ್ವಜನಿಕವಾಗಿ ಒಪ್ಪಿಕೊಂಡಿರುವುದು ಚರ್ಚಗೆ ಗ್ರಾಸವಾಗಿದೆ. ಈಗ ಬಗ್ಗೆ ಹಲವು ರಾಜ್ಯಗಳು ಪದೇ ಪದೇ ಕಳವಳ ವ್ಯಕ್ತಪಡಿಸಿವೆ.
ಸರ್ಕಾರೇತರ ಚಿಂತಕರ ಚಾವಡಿಯಾದ ‘ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯ ಕೇಂದ್ರ’ (ಸಿಎಸ್ಇಪಿ) ಆಯೋಜಿಸಿದ್ದ ‘ಭಾರತದಲ್ಲಿ ಹಣಕಾಸು ವರದಿ’ ಕುರಿತು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡುತ್ತಾ ಸುಬ್ರಹ್ಮಣ್ಯಂ ಅವರು ಈ ಮಾಹಿತಿಯನ್ನು ಹಂಚಿಕೊಂಡರು.
ಒಕ್ಕೂಟ ಸರ್ಕಾರ ಬಜೆಟ್‌ಗಳು “ಸತ್ಯವನ್ನು ಮುಚ್ಚುವ ಪ್ರಯತ್ನದ ಪದರಗಳಲ್ಲಿ ಹೇಗೆ ಆವರಿಸಲ್ಪಟ್ಟಿವೆ” ಎಂಬುದನ್ನು ಅವರು ಬಹಿರಂಗಪಡಿಸಿದರು. ‘ಸರ್ಕಾರದ ಖಾತೆಗಳು ಪಾರದರ್ಶಕವಾಗಿದ್ದರೆ, ಹಣಕಾಸಿನ ಸ್ಥಿತಿಯ ಸತ್ಯವು ಸ್ಪಷ್ಟವಾಗುತ್ತದೆ. ಅದಾನಿ ಗ್ರೂಪ್‌ನ ಹಣಕಾಸಿನ ಸ್ಥಿತಗತಿಯನ್ನು ಅಮೆರಿಕ ಮೂಲದ ‘ಹಿಂಡೆನ್ಬರ್ಗ್’ ರಿಸರ್ಚ್ ಕಳೆದ ವರ್ಷ ಹೇಗೆ ಬೆಳಕಿಗೆ ತಂದಿತು ಎಂಬುದರ ಬಗ್ಗೆ ಅವರು ಮಾತನಾಡಿದ್ದಾರೆ.
ಭಾರತದ ಅತಿ ದೊಡ್ಡ ವ್ಯಾಪಾರ ಸಮೂಹಗಳ ಲೆಕ್ಕಪತ್ರ ವಂಚನೆ ಮತ್ತು ಇತರ ಸಮಸ್ಯೆಗಳ ಆಪಾದನೆಗಳು ಅದಾನಿ ಗುಂಪಿನ ಮೌಲ್ಯಮಾಪನದಲ್ಲಿ ಸುಮಾತು $132 ಬಿಲಿಯನ್ ಮಾರುಕಟ್ಟೆ ಕುಸಿತಕ್ಕೆ ಕಾರಣವಾಯಿತು.
ಅಲ್ ಜಝೀರಾಗೆ ರಿಪೋರ್ಟರ್ಸ್ ಕಲೆಕ್ಟಿವ್ ಚರ್ಚೆಯಲ್ಲಿ ಒಂದು ದಶಕದ ಹಿಂದಿನ ಬಜೆಟ್ ಮತ್ತು ಇತರ ದಾಖಲೆಗಳ ವಿರುದ್ಧ ಸುಬ್ರಹ್ಮಣ್ಯಂ ಅವರ ಆರೋಪಗಳ ಕುರಿತು ಸ್ವತಂತ್ರವಾಗಿ ಪರಿಶೀಲಿಸಿತು.
ಸುಬ್ರಹ್ಮಣ್ಯಂ ಅವರು ಸರ್ಕಾರದ ಅನುದಾನಿತ ಮೂಲಸೌಕರ್ಯ ಯೋಜನೆಯಲ್ಲಿ ಹಣಕಾಸಿನ ದುರುಪಯೋಗ ಮತ್ತು ವಂಚನೆಯ ವಿವರಗಳನ್ನು ಬಹಿರಂಗಪಡಿಸಿ, ಅದನ್ನು “ತಮಾಷೆಯ ಪ್ರಕರಣ” ಎಂದು ಉಲ್ಲೇಖಿಸಿದ್ದಾರೆ.
ಅವರ ಬಹುಮುಖ್ಯ ಮುಚ್ಚಿಟ್ಟ ಸತ್ಯದ ಬಹಿರಂಗಪಡಿಸುವಿಕೆಯ ಹೊರತಾಗಿಯೂ, ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದ ನೇರಪ್ರಸಾರ ವಿಡಿಯೋ 500 ಕ್ಕಿಂತ ಕಡಿಮೆ ವೀಕ್ಷಣೆ ಕಂಡಿದೆ. ದಿ ರಿಪೋರ್ಟರ್ಸ್ ಕಲೆಕ್ಟಿವ್ ಪ್ರಧಾನ ಮಂತ್ರಿ ಕಚೇರಿಗೆ ವಿವರವಾದ ಪ್ರಶ್ನೆಗಳನ್ನು ಕಳುಹಿಸಿದ ಗಂಟೆಗಳ ನಂತರ, ಸಿಎಸ್ಇಪಿ ಯೂಟ್ಯೂಬ್ ಚಾನೆಲ್‌ನಲ್ಲಿ ವಿಚಾರ ಸಂಕಿರಣದ ವೀಡಿಯೋ ವೀಕ್ಷಣೆಯನ್ನು ಕಡಿತಗೊಳಿಸಲಾಯಿತು. ಸುಬ್ರಹ್ಮಣ್ಯಂ ಮತ್ತು ದಿ ರಿಪೋರ್ಟರ್ಸ್ ಕಲೆಕ್ಟಿವ್‌ನ ವಿವರವಾದ ಪ್ರಶ್ನೆಗಳಿಗೆ ಹಣಕಾಸು ಸಚಿವಾಲಯ-ಪಿಎಂಒ ಈವರೆಗೆ ಪ್ರತಿಕ್ರಿಯಿಸಿಲ್ಲ.
ಅಲ್ ಜಝೀರಾ ವರದಿ ಬಗ್ಗೆ ಕಾಂಗ್ರೆಸ್‌ನ ಜೈರಾಮ್ ರಮೇಶ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಸಾಂವಿಧಾನಿಕ ಸಂಸ್ಥೆಯ ಈ ನಿರ್ಲಕ್ಷ್ಯವು ಪ್ರಧಾನ ಮಂತ್ರಿಯ ನಿಜವಾದ ನಿಯತ್ತನ್ನು ಬಹಿರಂಗಪಡಿಸುತ್ತದೆ: ಅತಿಕೇಂದ್ರೀಕರಣ, ಸಂಪೂರ್ಣ ನಿಯಂತ್ರಣ ಮತ್ತು ಭಾರತದ ಒಕ್ಕೂಟ ವ್ಯವಸ್ಥೆಯನ್ನು ಕಿತ್ತುಹಾಕುವಿಕೆ. ರಾಜ್ಯಕ್ಕಾಗಿ ಕಡ್ಡಾಯ ನಿಧಿಗಳನ್ನು ಮೂಲೆಗುಂಪು ಮಾಡುವ ಈ ಪ್ರಯತ್ನದ ಪ್ರಭಾವವನ್ನು ನಾವು ನಿರ್ಲಕ್ಷಿಸಲಾಗುವುದಿಲ್ಲ. ನಾವು ಅವರ ಸಾಂವಿಧಾನಿಕ ಹಕ್ಕನ್ನು ನಿರಾಕರಿಸಲಾಗುವುದಿಲ್ಲ. ರಾಜ್ಯ ಸರ್ಕಾರಗಳು ಕಾನೂನು ಮತ್ತು ಸುವ್ಯವಸ್ಥೆಯಿಂದ ಶಾಲಾ ಶಿಕ್ಷಣದವರೆಗೆ ಎಲ್ಲದಕ್ಕೂ ಹಣಕಾಸು ಒದಗಿಸುತ್ತವೆ. ಜಿಎಸ್‌ಟಿಯ ಪರಿಚಯದ ನಂತರ ಕಡಿಮೆ ಆದಾಯದ ಮೂಲಗಳನ್ನು ಹೊಂದಿವೆ’ ಎಂದು ಜೈರಾಮ್ ರಮೇಶ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
This is an extraordinary revelation by a top Modi government official who is currently no less than the CEO of the NITI Aayog.
The official has revealed that PM Modi himself made a dastardly unconstitutional attempt to intimidate the 14th Finance Commission into letting him… pic.twitter.com/HYPNTT8PAC
— Jairam Ramesh (@Jairam_Ramesh) January 18, 2024
ಸೆಸ್ ಮತ್ತು ಸರ್ಚಾರ್ಜ್‌ಗಳು: ರಾಜ್ಯ ಹಕ್ಕುಗಳನ್ನು ಬದಿಗೊತ್ತುವ ಸಾಧನ
ಅಲ್ ಝಜೀರಾ ಅವರದಿಯ ಕುರಿತು ಮುಖ್ಯಮಂತ್ರಿ ಸಿದ್ದರಾನಯ್ಯ ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಅವರು, ‘ರಾಜ್ಯಗಳೊಂದಿಗೆ ಹಂಚಿಕೊಳ್ಳದಿರುವ ಸೆಸ್ ಮತ್ತು ಸರ್ಚಾರ್ಜ್‌ಗಳ ಸಂಗ್ರಹದಲ್ಲಿನ ಸ್ಥಿರವಾದ ಹೆಚ್ಚಳವು ಕರ್ನಾಟಕದಂತಹ ರಾಜ್ಯಗಳ ಆದಾಯದ ಸರಿಯಾದ ಪಾಲನ್ನು ಕಸಿದುಕೊಳ್ಳುವ ತಂತ್ರವಾಗಿ ಹೊರಹೊಮ್ಮಿದೆ. ಮಾಲಿನಿ ಚಕ್ರವರ್ತಿ ಅವರು ವಿವರಿಸಿರುವ ಈ ವಿಧಾನವು, ರಾಜ್ಯದ ಹಣಕಾಸಿನ ವೆಚ್ಚದಲ್ಲಿ ಕೇಂದ್ರ ಸರ್ಕಾರದ ಪಾಲನ್ನು ಹೆಚ್ಚಿಸಲು ಲೆಕ್ಕಾಚಾರದ ತಂತ್ರವನ್ನು ಪ್ರದರ್ಶಿಸುತ್ತದೆ. 2011-12ರಲ್ಲಿ ಒಟ್ಟು ತೆರಿಗೆಗಳ ಶೇ.10.4ರಿಂದ 2021-22ರ ವೇಳೆಗೆ ಶೇ.18.4ಕ್ಕೆ ಸೆಸ್ ಮತ್ತು ಸರ್ಚಾರ್ಜ್ಗಳ ಪಾಲು ಗಣನೀಯವಾಗಿ ಏರಿಕೆಯಾಗಲು ಬಿಜೆಪಿ ಸರ್ಕಾರದ ಆರ್ಥಿಕ ತಂತ್ರಗಳು ಕಾರಣವಾಗಿವೆ’ ಎಂದು ಆರೋಪಿಸಿದ್ದಾರೆ.
Cess and Surcharges: A Tool to Sidestep State Rights
The steady increase in the collection of cesses and surcharges, which are not shared with states, has emerged as a tactic to deprive states like Karnataka of their rightful share of revenues. This approach, as outlined by…
— Siddaramaiah (@siddaramaiah) January 18, 2024
‘ಬಿವಿಆರ್ ಸುಬ್ರಹ್ಮಣ್ಯಂ ಅವರು ಬಹಿರಂಗಪಡಿಸಿದ ಸಂಗತಿಗಳು ಮತ್ತು ಅಲ್ ಜಝೀರಾ ಅವರ ಲೇಖನದ ಒಳನೋಟಗಳು ಒಕ್ಕೂಟದ ಹಣಕಾಸು ಸಂಬಂಧಗಳ ಬಗ್ಗೆ ಮೋದಿ ಸರ್ಕಾರದ ಧೋರಣೆಯ ಚಿತ್ರವನ್ನು ಬಹಿರಂಗಪಡಿಸುತ್ತವೆ. ಕರ್ನಾಟಕದಂತಹ ರಾಜ್ಯಗಳು ಕೇಂದ್ರ ಸರ್ಕಾರದ ಆರ್ಥಿಕ ದುರುಪಯೋಗದ ಭಾರವನ್ನು ಹೊರಲು ಬಿಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಈ ವಿಷಯಗಳನ್ನು ಸಾರ್ವಜನಿಕ ಚರ್ಚೆಯ ಮುಂಚೂಣಿಗೆ ತರುವುದು ಅನಿವಾರ್ಯವಾಗಿದೆ’ ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ; ಮಸೀದಿ ಧ್ವಂಸಗೊಳಿಸಿ ರಾಮಮಂದಿರ ಕಟ್ಟುವುದನ್ನು ಒಪ್ಪುವುದಿಲ್ಲ: ಉದಯನಿಧಿ ಸ್ಟಾಲಿನ್


