2024ರ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಾರಣಾಸಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಜಯ್ ರೈ ಅವರನ್ನು 1,52,513ಕ್ಕೂ ಹೆಚ್ಚು ಮತಗಳಿಂದ ಸೋಲಿಸುವ ಮೂಲಕ ಸತತ ಮೂರನೇ ಅವಧಿಗೆ ಗೆಲುವನ್ನು ಕಂಡುಕೊಂಡಿದ್ದಾರೆ. ಕಳೆದ ಎರಡು ಅವಧಿಯ ಲೋಕಸಭೆ ಚುನಾವಣೆಯ ಫಲಿತಾಂಶವನ್ನು ಗಮನಿಸಿದರೆ ಈ ಬಾರಿ ವಾರಣಾಸಿಯಲ್ಲಿ ಮೋದಿ ಗೆಲುವಿನ ಅಂತರ ಗಣನೀಯವಾಗಿ ಕಡಿಮೆಯಾಗಿರುವುದು ಕಂಡು ಬಂದಿದೆ.
ಲೋಕಸಭೆ ಚುನಾವಣೆಯ ಒಟ್ಟಾರೆ ಫಲಿತಾಂಶದಲ್ಲಿ ಈ ಬಾರಿ ಮೋದಿ ನೇತೃತ್ವದಲ್ಲಿ ಬಿಜೆಪಿ ಬಹುಮತ ಪಡೆಯುವಲ್ಲಿ ವಿಫಲವಾಗಿದೆ. ಇದು ಜಾಗತಿಕ ನಾಯಕ ಎಂದು ಬಿಜೆಪಿ ನಾಯಕರಿಂದ ಕರೆಸಿಕೊಂಡಿರುವ, ತಾನು ಜೈವಿಕ ಅಲ್ಲ, ದೇವರು ನನ್ನನ್ನು ಕಳುಹಿಸಿದ್ದಾರೆ ಎಂದು ಸ್ವಯಂ ಹೇಳಿಕೊಂಡಿರುವ ಮೋದಿಗೆ ದೊಡ್ಡ ಹಿನ್ನಡೆಯಾಗಿದೆ. ತಾನೊಬ್ಬ ಪ್ರಶ್ನಾತೀತ ನಾಯಕ ಎಂದು ಅಂದುಕೊಂಡಿರುವ ಮೋದಿಗೆ ಬೆವರಿಳಿಸುವಂತೆ ಮಾಡಿದೆ.
ವಾರಣಾಸಿ ಕ್ಷೇತ್ರದಲ್ಲಿ ಮತ ಎಣಿಕೆಯ ಪ್ರಕ್ರಿಯೆಯನ್ನು ಗಮನಿಸಿದರೆ, ಕಾಂಗ್ರೆಸ್ ಅಭ್ಯರ್ಥ ಅಜಯ್ ರೈ ವಿರುದ್ಧ ಪೋಸ್ಟಲ್ ಮತ ಎಣಿಕೆ ವೇಳೆ ಮೋದಿ 6,223 ಮತಗಳಿಂದ ಹಿನ್ನಡೆಯನ್ನು ಸಾಧಿಸಿದ್ದರು. ದೇಶದ ಪ್ರಧಾನಿಯೋರ್ವರು ಸಾಮಾನ್ಯ ಅಭ್ಯರ್ಥಿಯ ವಿರುದ್ಧ ಹಿನ್ನಡೆಯನ್ನು ಸಾಧಿಸಿರುವುದು ವಿಶೇಷವೇ ಆಗಿದೆ.
ಪ್ರಧಾನಿ ಮೋದಿ ಅಂತಿಮವಾಗಿ 6,12,970 ಮತಗಳನ್ನು ಗಳಿಸಿದ್ದು, 4,60,457 ಮತಗಳನ್ನು ಅಜಯ್ ರೈ ಗಳಿಸಿದ್ದಾರೆ. ಈ ಬಾರಿ ಮೋದಿಯ ಗೆಲುವಿನ ಅಂತರ 1,52,513 ಆಗಿದ್ದು, ಇದು 2019 ಮತ್ತು 2014ರ ಗೆಲುವಿನ ಅಂತರಕ್ಕಿಂತ ಕಡಿಮೆಯಾಗಿದೆ.
2019ರಲ್ಲಿ ಮೋದಿ ಗೆಲುವಿನ ಅಂತರ 4,79,505 ಆಗಿತ್ತು. ಅವರು ಆ ಬಾರಿ ಸಮಾಜವಾದಿ ಪಕ್ಷದ ಶಾಲಿನಿ ಯಾದವ್ ಅವರನ್ನು ಸೋಲಿಸಿದರೆ, ಕಾಂಗ್ರೆಸ್‌ನ ಅಜಯ್ ರೈ ಮೂರನೇ ಸ್ಥಾನದಲ್ಲಿದ್ದರು. 2014ರಲ್ಲಿ ಎಎಪಿಯ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದಾಗ ಮೋದಿ 3,71,784 ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದರು. ಈ ಬಾರಿ ಪ್ರಧಾನಿ ಮೋದಿ ಗೆಲುವಿನ ಅಂತರ ದಾಖಲೆ ಸೃಷ್ಟಿಸಲಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರು. ಆದರೆ ನಿರೀಕ್ಷೆ ಹುಸಿಯಾಗಿದ್ದು, 2014ರ ಲೋಕಸಭೆ ಚುನಾವಣೆಯಲ್ಲಿ ಮೋದಿಯ ಗೆಲುವಿನ ಅಂತರ ಕುಗ್ಗಿದೆ.
ಇದನ್ನು ಓದಿ: ಮಣಿಪುರದ ಬಗ್ಗೆ ನಿರ್ಲಕ್ಷ್ಯಕ್ಕೆ ಬೆಲೆತೆತ್ತ ಬಿಜೆಪಿ


