HomeUncategorizedಜೈ ಶ್ರೀರಾಮ್ ಬದಲು 'ಜೈ ಜಗನ್ನಾಥ್'..ವಿಜಯ ಭಾಷಣದಲ್ಲಿ ಯುಪಿ, ಮಹಾರಾಷ್ಟ್ರದ ಹೆಸರೇ ಎತ್ತದ ಮೋದಿ

ಜೈ ಶ್ರೀರಾಮ್ ಬದಲು ‘ಜೈ ಜಗನ್ನಾಥ್’..ವಿಜಯ ಭಾಷಣದಲ್ಲಿ ಯುಪಿ, ಮಹಾರಾಷ್ಟ್ರದ ಹೆಸರೇ ಎತ್ತದ ಮೋದಿ

- Advertisement -
- Advertisement -

ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನಗಳನ್ನು ಗೆಲ್ಲದ ಹಿನ್ನೆಲೆ ಪ್ರಧಾನಿ ಮೋದಿಯವರ ವಿಜಯ ಭಾಷಣದಲ್ಲಿ ಕೆಲವೊಂದು ಬದಲಾವಣೆಗಳು ಕಂಡು ಬಂದಿವೆ.

ಹೋದಲ್ಲಿ ಬಂದಲ್ಲಿ ‘ಜೈ ಶ್ರೀರಾಮ್’ ಘೋಷಣೆ ಕೂಗುತ್ತ ಧರ್ಮ ರಾಜಕಾರಣದ ಅಸ್ತ್ರ ಪ್ರಯೋಗಿಸುತ್ತಿದ್ದ ಮೋದಿ, ನಿನ್ನೆಯ ವಿಜಯ ಭಾಷಣದಲ್ಲಿ ‘ಜೈ ಜಗನ್ನಾಥ್’ ಎಂದು ಹೇಳುವ ಮೂಲಕ ತನ್ನ ಡೈಲಾಗ್ ಬದಲಾಯಿಸಿಕೊಂಡಿದ್ದರು. ಅಲ್ಲದೆ, ತನ್ನ ಭಾಷಣದಲ್ಲಿ ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದ ಕುರಿತು ಮಾತೇ ಎತ್ತಿಲ್ಲ.

“ಭಾರತ್ ಮಾತಾ ಕಿ ಜೈ” ಮತ್ತು “ಜೈ ಜಗನ್ನಾಥ್” ಎಂದು ಹೇಳುವ ಮೂಲಕ ಮೋದಿ 34 ನಿಮಿಷಗಳ ತನ್ನ ಭಾಷಣ ಪ್ರಾರಂಭಿಸಿದರು. ಮುಂದೆ ಸೇರಿದ್ದ ಜನರು ಜೈ ಶ್ರೀರಾಮ್ ಎಂದರೂ, ಮೋದಿ ಆ ಘೋಷಣೆ ಕೂಗಿಲ್ಲ.

ಬಿಜೆಪಿ ಪ್ರಮುಖ ರಾಜಕೀಯ ಅಸ್ತ್ರವಾಗಿದ್ದ ರಾಮ ಮಂದಿರವನ್ನು ನಿರ್ಮಾಣ ಮಾಡಿದರೂ, ಈ ಬಾರಿಯ ಚುನಾವಣೆಯಲ್ಲಿ ಅಯೋಧ್ಯೆ ರಾಮ ಮಂದಿರ ಇರುವ ಫೈಝಾಬಾದ್ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲಾಗಿದೆ. ಇಲ್ಲಿ ಸಮಾಜವಾದಿ ಪಕ್ಷದ ದಲಿತ ನಾಯಕ ಅವಧೇಶ್ ಪ್ರಸಾದ್ ಗೆದ್ದಿದ್ದಾರೆ.

ಒಡಿಶಾದಲ್ಲಿ ಬಿಜೆಪಿ ತನ್ನ ಮೊದಲ ರಾಜ್ಯ ಸರ್ಕಾರವನ್ನು ರಚಿಸಲು ಸಜ್ಜಾಗಿದೆ. ಅಲ್ಲಿ ವಿಧಾನಸಭೆಯ 147 ಸ್ಥಾನಗಳಲ್ಲಿ 78 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಆಡಳಿತರೂಢ ಬಿಜು ಜನತಾ ದಳ (ಬಿಜೆಡಿ) 51 ಸ್ಥಾನಗಳಿಗೆ ಇಳಿದಿದೆ ಮತ್ತು ಕಾಂಗ್ರೆಸ್ 14 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಈ ಮೂಲಕ ರಾಜ್ಯದಲ್ಲಿ 2000 ದಿಂದ ಅಧಿಕಾರದಲ್ಲಿರುವ ನವೀನ್ ಪಟ್ನಾಯಕ್ ಅಧಿಕಾರ ಕೊನೆಗೊಂಡಿದೆ.

ಲೋಕಸಭೆ ಚುನಾವಣೆಯ ವಿಷಯಕ್ಕೆ ಬಂದರೆ, 2014 ಮತ್ತು 2019ರಲ್ಲಿ ಒಡಿಶಾದಲ್ಲಿ ಜನರು ಬಿಜೆಪಿ ಪರವಾಗಿ ಮತ ಚಲಾಯಿಸಿದರೆ, 2024ರ ಚುನಾವಣೆಯಲ್ಲಿ 21 ಸಂಸದೀಯ ಸ್ಥಾನಗಳ ಪೈಕಿ ಬಿಜೆಪಿ 20 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಒಂದು ಸ್ಥಾನ ತನ್ನದಾಗಿಸಿಕೊಂಡಿದೆ. ಆಡಳಿತರೂಢ ಬಿಜೆಡಿ ಒಂದು ಸ್ಥಾನವನ್ನು ಗೆಲ್ಲಲೂ ವಿಫಲವಾಗಿದೆ.

ಮೋದಿ ತಮ್ಮ ಭಾಷಣದಲ್ಲಿ ಒಡಿಶಾ, ಮಧ್ಯ ಪ್ರದೇಶ, ಛತ್ತೀಸ್‌ಗಢ, ಗುಜರಾತ್, ದೆಹಲಿ, ಉತ್ತರಾಖಂಡ, ಹಿಮಾಚಲ ಪ್ರದೇಶ, ತೆಲಂಗಾಣ, ಕೇರಳ, ಬಿಹಾರ ಮತ್ತು ವಿಧಾನಸಭೆ ಚುನಾವಣೆಗಳನ್ನು ಗೆದ್ದಿರುವ ಅರುಣಾಚಲ ಪ್ರದೇಶ, ಆಂಧ್ರ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ಅನ್ನು ಉಲ್ಲೇಖಿಸಿದ್ದಾರೆ. ಆದರೆ, ಬಿಜೆಪಿಯ ಪ್ರಮುಖ ರಾಜ್ಯ, ಯೋಗಿ ಆದಿತ್ಯನಾಥ್ ಆಡಳಿತದ ಉತ್ತರ ಪ್ರದೇಶದ ಬಗ್ಗೆ ಮಾತೆತಿಲ್ಲ.

“1962ರ ಬಳಿಕ ಮೊದಲ ಬಾರಿಗೆ ಕೇಂದ್ರ ಸರ್ಕಾರ ತನ್ನ ಎರಡು ಅವಧಿಗಳನ್ನು ಪೂರ್ಣಗೊಳಿಸಿ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳಿದೆ. ಅರುಣಾಚಲ ಪ್ರದೇಶ, ಆಂಧ್ರ ಪ್ರದೇಶ, ಒಡಿಶಾ ಮತ್ತು ಸಿಕ್ಕಿಂ ವಿಧಾನಸಭೆ ಚುನಾವಣೆಗಳಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿದೆ. ಈ ರಾಜ್ಯಗಳಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ. ನನ್ನ ಬಳಿ ವಿವರಗಳಿಲ್ಲ. ಆದರೆ, ಅವರು ತಮ್ಮ ಠೇವಣಿಯನ್ನೂ ಉಳಿಸಿಕೊಂಡಿಲ್ಲ ಅನಿಸುತ್ತದೆ” ಎಂದು ಮೋದಿ ಹೇಳಿದ್ದಾರೆ.

ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರದ ಪ್ರಸ್ತಾಪವಿಲ್ಲ

2024ರ ಲೋಕಸಭೆ ಚುನಾವಣೆಯಲ್ಲಿ ಅತ್ಯಂತ ನಿರ್ಣಾಯಕ ಬದಲಾವಣೆಯು ಉತ್ತರ ಪ್ರದೇಶದಲ್ಲಿ ಆಗಿದೆ. ಅಲ್ಲಿ ಬಿಜೆಪಿ ತನ್ನ ಗುರಿಯಾದ “400 ಪಾರ್” ತಲುಪಲು 70ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಹೊಂದಿತ್ತು. 2019ರ ಚುನಾವಣೆಯಲ್ಲಿ ರಾಜ್ಯದ 80 ಸ್ಥಾನಗಳಲ್ಲಿ 62 ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. ಆದರೆ ಈ ಬಾರಿ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್‌ನ ಇಂಡಿಯಾ ಮೂತ್ರಿಕೂಟದ ಮುಂದೆ ಬಿಜೆಪಿ ಮಂಕಾಗಿದೆ.

ಎನ್‌ಡಿಎ (ಬಿಜೆಪಿ ಮತ್ತು ಆರ್‌ಎಲ್‌ಡಿ) ಕೇವಲ 35 ಸ್ಥಾನಗಳನ್ನು ಗೆದ್ದರೆ, ಇಂಡಿಯಾ ಒಕ್ಕೂಟದ ಸಮಾಜವಾದಿ ಪಕ್ಷ ಏಕಾಂಗಿಯಾಗಿ 37 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ 33, ಕಾಂಗ್ರೆಸ್ 6, ಆರ್‌ಎಲ್‌ಡಿ 2 ಮತ್ತು ಅಪ್ನಾ ದಳ (ಸೋನಿಲಾಲ್) ಮತ್ತು ಆಜಾದ್ ಸಮಾಜ ಪಕ್ಷ ತಲಾ 1 ಸ್ಥಾನ ಗಳಿಸಿದೆ.

ಮೋದಿ ತನ್ನ  ವಿಜಯ ಭಾಷಣದಲ್ಲಿ ಉತ್ತರ ಪ್ರದೇಶವನ್ನು ಒಮ್ಮೆಯೂ ಪ್ರಸ್ತಾಪಿಸಿಲ್ಲ. 2019 ರಲ್ಲಿ ಏಕಾಂಗಿಯಾಗಿ 303 ಸ್ಥಾನಗಳನ್ನು ಗೆದ್ದ ಬಿಜೆಪಿ ಈ ಬಾರಿ ತನ್ನ ‘400 ಪಾರ್’ ಗುರಿಯನ್ನು ತಲುಪಲು ಏನು ಅಡ್ಡಿಯಾಯಿತು ಎಂಬುವುದರ ಕುರಿತು ಏನನ್ನೂ ಹೇಳಿಲ್ಲ.

ನಮ್ಮ ವಿರೋಧಿಗಳು ಎಲ್ಲರೂ ಒಗ್ಗೂಡಿದರೂ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಾತ್ರ ಗೆದ್ದಷ್ಟು ಸ್ಥಾನಗಳನ್ನು ಗೆಲ್ಲಲು ಅವರಿಗೆ ಸಾಧ್ಯವಾಗಲಿಲ್ಲ ಎಂದಷ್ಟೇ ಹೇಳಿ ಮೋದಿ ಜಾರಿಕೊಂಡಿದ್ದಾರೆ.

ಬಿಜೆಪಿಯ ಮತ್ತೊಂದು ಪ್ರಮುಖ ರಾಜ್ಯವಾಗಿರುವ ಮಹಾರಾಷ್ಟ್ರದ ಬಗ್ಗೆಯೂ ಯಾವುದೇ ಪ್ರಸ್ತಾಪವನ್ನು ಮೋದಿ ತನ್ನ ಭಾಷಣದಲ್ಲಿ ಮಾಡಿಲ್ಲ. ಅಲ್ಲಿ ಶಿವಸೇನೆ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಒಡೆದು ಹೋದ ಬಣಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದರೂ, ಎನ್‌ಡಿಎ ಮುನ್ನಡೆ ಸಾಧಿಸಲು ವಿಫಲವಾಗಿದೆ.

ಎರಡನೇ ದೊಡ್ಡ ರಾಜ್ಯವಾದ ಮಹಾರಾಷ್ಟ್ರದಲ್ಲಿ ಪಕ್ಷ ವಿಭಜನೆ, ಹೆಸರು ಮತ್ತು ಚಿಹ್ನೆ ಬದಲಾವಣೆ ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ದಾಳಿಗಳು ಬಿಜೆಪಿಗೆ ಮುಳುವಾಗಿದೆ. ಮಹಾವಿಕಾಸ್ ಅಘಾಡಿ (ಕಾಂಗ್ರೆಸ್, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಶರದ್ ಪವಾರ್) ಮತ್ತು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಬಣ ರಾಜ್ಯದ 48 ಸ್ಥಾನಗಳಲ್ಲಿ 30ನ್ನು ಗೆದ್ದಿದೆ.

ಮಾಹಾರಾಷ್ಟ್ರಕ್ಕೆ ಸಂಬಂಧಪಟ್ಟಂತೆ ಛತ್ರಪತಿ ಶಿವಾಜಿಯ 350ನೇ ಜನ್ಮದಿವನ್ನು ಆಚರಿಸುವ ಕುರಿತು ಮಾತ್ರ ಮೋದಿ ಪ್ರಸ್ತಾಪಿಸಿದ್ದು, “ಛತ್ರಪತಿ ಶಿವಾಜಿ ಮಹಾರಾಜರು ನಮಗೆ ಮಾರ್ಗದರ್ಶಕರಾಗಿದ್ದಾರೆ ಮತ್ತು ಅವರ 350ನೇ ಜನ್ಮ ದಿನಾಚರಣೆ ಈ ವರ್ಷ ಬರಲಿದೆ ಎಂದು ಮಾತ್ರ ಹೇಳಿದ್ದಾರೆ.

ಒಡಿಶ್ಶಾದಲ್ಲಿ ಗೆಲುವು ದಾಖಲಿಸಿದ್ದಕ್ಕೆ ಮೋದಿ ಜೈ ಜಗನ್ನಾಥ ಎಂದು ಹೇಳಿದ್ದಾರೆ ಅಂದುಕೊಂಡರೂ, ಅವರು ಇದುವರೆಗೆ ಚುನಾವಣೆಯ ಅಸ್ತ್ರವಾಗಿಸಿದ್ದ ಜೈಶ್ರೀರಾಮ್ ಘೋಷಣೆ, ತನ್ನ ಆಪ್ತ ಯೋಗಿಯ ಉತ್ತರ ಪ್ರದೇಶದ ಬಗ್ಗೆ ಉಲ್ಲೇಖಿಸದಿರುವುದು ವಿಶೇಷ.

ಇದನ್ನೂ ಓದಿ : ಹಿಮಾಚಲ ಅಸೆಂಬ್ಲಿ ಉಪಚುನಾವಣೆ ಫಲಿತಾಂಶ: ಬಿಜೆಪಿ ಸೇರಿದ್ದ 6 ಜನರಲ್ಲಿ ನಾಲ್ವರಿಗೆ ಸೋಲು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

0
ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ)...