ದಿಲ್ಲಿ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಆಮ್ ಆದ್ಮಿ ಪಕ್ಷವು ಅಧಿಕಾರಕ್ಕೆ ಬಂದರೆ ದೇವಾಲಯ ಹಾಗೂ ಗುರುದ್ವಾರದ ಅರ್ಚಕರಿಗೆ ಮಾಸಿಕ ತಲಾ 18 ಸಾವಿರ ಭತ್ಯೆ ನೀಡುವ ಯೋಜನೆಯನ್ನು ದಿಲ್ಲಿ ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ಪ್ರಕಟಿಸಿದ್ದಾರೆ.
ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಉಳಿಸಿಕೊಳ್ಳಲು ತೀವ್ರ ಕಸರತ್ತು ನಡೆಸಿರುವ ಕೇಜ್ರಿವಾಲ್ ಈ ಮಹತ್ಮದ ಯೋಜನೆಗಳನ್ನು ಇಂದು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.
ಅರ್ಚಕರು “ಗ್ರಂಥಿ ಸಮ್ಮಾನ್” ಯೋಜನೆಯಲ್ಲಿ ಮಾಸಿಕ 18 ಸಾವಿರ ರೂ.ಗಳನ್ನು ಪಡೆಯುತ್ತಾರೆ. ನಾಳೆಯಿಂದಲ್ಲೇ ನೋಂದಣಿ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು. ನಾಳೆ ತಾವೇ ಖುದ್ದಾಗಿ ದೆಹಲಿ ಕನ್ನಾಟ್ ನಲ್ಲಿರುವ ಹನುಮಾನ್ ಮಂದಿರಕ್ಕೆ ಭೇಟಿ ನೀಡಿ ಅಲ್ಲಿನ ಅರ್ಚಕರ ನೋಂದಣಿ ಪ್ರಕ್ರಿಯೇ ಮೇಲ್ವಿಚಾರಣೆ ನಡೆಸುವುದಾಗಿ ಹೇಳಿದರು.
ಮಹಿಳಾ ಸಮ್ಮಾನ್ ಯೋಜನೆಗೆ ದೆಹಲಿಯ ಮಹಿಳೆಯರ ವೈಯಕ್ತ ಮಾಹಿತಿ ಸಂಗ್ರಹಿಸಿರುವ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಆದೇಶ ನೀಡಿರುವ ಬೆನ್ನಲ್ಲೇ ಕೇಜ್ರಿವಾಲ್ ದೇವಾಲಯ ಗುರುದ್ವಾರದ ಅರ್ಚಕರಿಗೆ ಬಂಪರ್ ಯೋಜನೆ ಘೋಷಿಸಿದ್ದಾರೆ.
ಡಿಸೆಂಬರ್ 12ರಂದು ದೆಹಲಿ ಕ್ಯಾಬಿನೆಟ್ ಮಹಿಳೆಯರಿಗೆ ಮಾಸಿಕ ₹ 1,000 ನೀಡುವ “ಮುಖ್ಯ ಮಂತ್ರಿ ಮಹಿಳಾ ಸಮ್ಮಾನ್ ಯೋಜನೆ” ಯನ್ನು ಅನುಮೋದಿಸಿತ್ತು. ಅದೇ ದಿನ ಎಎಪಿ ಮತ್ತೆ ಅಧಿಕಾರಕ್ಕೆ ಬಂದರೆ ಯೋಜನೆಯಡಿ ಭತ್ಯೆಯನ್ನು ತಿಂಗಳಿಗೆ ₹ 2,100ಕ್ಕೆ ಹೆಚ್ಚಿಸಲಾಗುವುದು ಎಂದು ಕೇಜ್ರಿವಾಲ್ ಘೋಷಿಸಿದ್ದರು.
ಅರ್ಚಕರ ನೋಂದಣಿಯನ್ನು ತಡೆಯಲು ಪೊಲೀಸರನ್ನು ಕಳುಹಿಸಬೇಡಿ ಎಂದು ಬಿಜೆಪಿಯನ್ನು ಕೇಳಿದ ಕೇಜ್ರಿವಾಲ್, ಅರ್ಚಕರು ನಮ್ಮ ಪ್ರಾರ್ಥನೆಗಳನ್ನು ದೇವರಿಗೆ ತಲುಪಿಸುತ್ತಾರೆ. ಬಿಜೆಪಿಯವರು ನಕಲಿ ಪ್ರಕರಣ ದಾಖಲಿಸಿ, ಮಹಿಳಾ ಸಮ್ಮಾನ್ ಯೋಜನೆಯಡಿ ನೋಂದಣಿಯನ್ನು ನಿಲ್ಲಿಸುವಂತೆ ಪೊಲೀಸರನ್ನು ಕಳುಹಿಸಿದ್ದರು. ಆದರೆ ಅದನ್ನು ತಡೆಯಲು ಸಾಧ್ಯವಾಗಲಿಲ್ಲ. ಆ ನೋಂದಣಿ ಮುಂದುವರಿದಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಅರ್ಚಕರಿಗೆ ಪಾವತಿಸಲು ಸರ್ಕಾರ ಹೇಗೆ ಹಣವನ್ನು ವ್ಯವಸ್ಥೆ ಮಾಡುತ್ತದೆ ಎಂದು ಮಾಧ್ಯಮದವರು ಕೇಳಿದಾಗ, “ಈ ಯೋಜನೆಗೆ ಯಾವುದೇ ಹಣದ ಕೊರತೆಯಾಗಲು ನಾನು ಬಿಡುವುದಿಲ್ಲ” ಎಂದು ಕೇಜ್ರಿವಾಲ್ ಹೇಳಿದರು.
ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ ಪೈಕಿ ಸುಮಾರು ಐದರಲ್ಲಿ ಸಿಖ್ಖರು ಗಮನಾರ್ಹ ಹಿಡಿತ ಹೊಂದಿದ್ದಾರೆ. ಇತರ ಐದು ಕ್ಷೇತ್ರಗಳಲ್ಲಿ ಗಣನೀಯ ಪ್ರಮಾಣದ ಸಿಖ್ ಮತದಾರರಿದ್ದಾರೆ.
ಎಎಪಿ ಸರ್ಕಾರವು 2019ರಲ್ಲಿ ದೆಹಲಿ ಇಮಾಮ್‌ಗಳ ಮಾಸಿಕ ಭತ್ಯೆಯನ್ನು ಮಾಸಿಕ ₹ 10,000 ರಿಂದ ₹ 18,000ಕ್ಕೆ ಹೆಚ್ಚಿಸಿತ್ತು. ಕಳೆದ 14 ತಿಂಗಳಿಂದ ಇಮಾಮ್‌ಗಳ ವೇತನವನ್ನು ಪಾವತಿಸಲಾಗಿಲ್ಲ ಎಂದು ಇಮಾಮ್ ಗಳು ಈಗ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.
ಮನುಸ್ಮೃತಿ ಸುಟ್ಟ ಆರೋಪ: 13 ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಬಂಧನ


