ತನ್ನ ಸಹೋದ್ಯೋಗಿ ಹಾಗೂ ಮುಸ್ಲಿಂ ಗೆಳೆಯನೊಂದಿಗೆ ಹೋಟೆಲೊಂದರಲ್ಲಿ ಆಹಾರ ಸೇವಿಸುತ್ತಿದ್ದ ಮಹಿಳೆಗೆ, ಬಿಜೆಪಿ ಬೆಂಬಲಿತ ಸಂಘಟನೆಯಾದ ಬಜರಂಗದಳದ ಸುಮಾರು ಐದು ಜನರ ತಂಡವೊಂದು ಕಿರುಕುಳ ನೀಡಿದ್ದು, ಮಹಿಳೆಯ ಸ್ನೇಹಿತರೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದಲ್ಲಿ ಸೋಮವಾರ ಸಂಜೆ ನಡೆದಿದೆ. ಈ ಬಗ್ಗೆ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಇಬ್ಬರು ಭಜರಂಗದಳದ ಸದಸ್ಯರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಬೆಂಗಳೂರಿನ ಆನೇಕಲ್ ನಿವಾಸಿ ರಾಜೇಶ್ವರಿ ಎಂಬವರು, ಈ ಹಿಂದೆ ಪೊಲೀಸರು ವಶಪಡಿಸಿಕೊಂಡಿದ್ದ ತಮ್ಮ ಕಾರನ್ನು ಮರಳಿ ಪಡೆಯಲು ಬೇಕಾಗಿ ಸೆಪ್ಟೆಂಬರ್ 18 ರಂದು ಪುತ್ತೂರಿಗೆ ಆಗಮಿಸಿದ್ದರು. ಹೀಗಾಗಿ ಅಲ್ಲಿನ ಸ್ಥಳೀಯ ಲಾಡ್ಜ್ ಒಂದರಲ್ಲಿ ರೂಂ ಪಡೆದು ತಂಗಿದ್ದರು. ಸಹೋದ್ಯೋಗಿಗಳಾದ ಬೆಂಗಳೂರಿನ ಕೊಟ್ಟಿಗೇರಿ ನಿವಾಸಿ ಶಿವ ಮತ್ತು ಉಳ್ಳಾಲದ ನಿವಾಸಿ ಯು.ಕೆ ಮೊಹಮ್ಮದ್ ಅರಾಫತ್ ಕೂಡಾ ಅವರ ಜೊತೆಗೆ ಇದ್ದರು.
ಇದನ್ನೂ ಓದಿ: ಪುತ್ತೂರು-ಸುಳ್ಯದಲ್ಲಿ ಅನೈತಿಕ ಪೊಲೀಸ್‌ಗಿರಿ ಉಪದ್ರವ; ಜಿ.ಪಂ-ತಾ.ಪಂ ಚುನಾಚಣೆಗಾಗಿ ಈ ಆಟ?
ಸೆಪ್ಟೆಂಬರ್ 20 ರ ಸೋಮವಾರಂದು ಮೂವರೂ ಸಂಜೆ 7 ಗಂಟೆಗೆ ಲಾಡ್ಜ್‌ನಲ್ಲಿ ಊಟ ಮಾಡುತ್ತಿದ್ದಾಗ, ಐದು ಜನರ ತಂಡವೊಂದು ಅವರನ್ನು ಪ್ರಶ್ನಿಸಿ, ನಿಂದಿಸಲು ಆರಂಭಿಸಿದ್ದಾರೆ. ಈ ವೇಳೆ ಮಹಿಳೆಯ ಸಹೋದ್ಯೋಗಿ ಶಿವ ಎಂಬವರಿಗೆ ತಂಡದ ಸದಸ್ಯರು ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾರೆ. ಇಷ್ಟೇ ಅಲ್ಲದೆ, ತಂಡದ ಸದಸ್ಯರು ಮಹಿಳೆ ಮತ್ತು ಅವರ ಸಹೋದ್ಯೋಗಿಗಳ ಫೋಟೊಗಳನ್ನು ತೆಗೆದು ಅವಮಾನಿಸಿದ್ದಾರೆ ಎಂದು ದೂರಿದ್ದಾರೆ.
ಮಹಿಳೆ ನೀಡಿದ ದೂರಿನಂತೆ, ಘಟನೆ ನಡೆದು ಕೆಲವೆ ಗಂಟೆಗಲ್ಲಿ ಇಬ್ಬರನ್ನು ಬಂಧಿಸಿದ್ದಾಗಿ ಪುತ್ತೂರು ನಗರ ಠಾಣೆಯ ಸಿಐ ಗೋಪಾಲ್ ನಾಯಕ್ ಹೇಳಿದ್ದಾರೆ.
ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಗೋಪಾಲ್ ಅವರು, “ಮಹಿಳೆ ತನ್ನ ಸಹೋದ್ಯೋಗಿ ಮತ್ತು ಮುಸ್ಲಿಂ ಗೆಳೆಯನೊಂದಿಗೆ ಹೊಟೇಲ್‌ನಲ್ಲಿ ಆಹಾರ ಸೇವಿಸುತ್ತಿದ್ದಾಗ ಕೆಲವರು ಬಂದು ಅವರನ್ನು ಪ್ರಶ್ನಿಸಿ, ಮಹಿಳೆಯ ಗೆಳೆಯನೊಬ್ಬನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ ಮಹಿಳೆ ನೀಡಿದ ದೂರಿನ ಆಧಾರದಲ್ಲಿ, ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಇಬ್ಬರನ್ನು ಬಂಧಿಸಿದ್ದೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕನ್ನಡ: ಪೊಲೀಸ್‌ಗಿರಿ ನಡೆಸಿದ ಐವರು ಬಿಜೆಪಿ ಬೆಂಬಲಿತ ಸಂಘಟನೆಗಳ ಕಾರ್ಯಕರ್ತರ ಬಂಧನ
ರಾಜ್ಯದಲ್ಲಿ ಅನೈತಿಕ ಪೊಲೀಸ್‌ಗಿರಿ ನಡೆಯುತ್ತಿರುವ ಬಗ್ಗೆ ಇತ್ತೀಚೆಗೆ ಹಲವು ಪ್ರಕರಣಗಳು ವರದಿಯಾಗಿದೆ. ದಿನಗಳ ಹಿಂದೆಯಷ್ಟೆ ಬೆಂಗಳೂರಿನಲ್ಲಿ ಮುಸ್ಲಿಂ ಸಹೋದ್ಯೋಗಿಯೊಬ್ಬರಿಗೆ ಡ್ರಾಪ್ ನೀಡಿದ್ದನ್ನು ಪ್ರಶ್ನಿಸಿ ಅನೈತಿಕ ಪೊಲೀಸ್ ಗಿರಿ ನಡೆಸಿದ್ದ ಇಬ್ಬರನ್ನು ಬಂಧಿಸಲಾಗಿದೆ.
ದಕ್ಷಿಣ ಕನ್ನಡದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಮೂರನೆ ಘಟನೆಯಾಗಿದೆ ಇದು. ಬಂಟ್ವಾಳದಲ್ಲಿ ಕಾರಿಂಜ ದೇವಸ್ಥಾನಕ್ಕೆ ತೆರಳಿದ್ದ ಆರು ವಿದ್ಯಾರ್ಥಿಗಳನ್ನು ತಡೆದು ಹಲವು ಗಂಟೆಗಳ ಕಾಲ ಪ್ರಶ್ನಿಸಿದ್ದ ತಂಡದ ಕೆಲವರನ್ನು ಪೊಲೀಸರು ಬಂಧಿಸಿದ್ದರು. ಇದಕ್ಕಿಂಲೂ ಮುಂಚೆ ಬೆಂಗಳೂರಿನ ಕಡೆಗೆ ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ವಿಭಿನ್ನಕೋಮಿನ ಯುವಕ ಯುವತಿಯರು ಒಟ್ಟಿಗೆ ಪ್ರಯಾಣಿಸುತ್ತಿದ್ದಾರೆ ಎಂದು ಆರೋಪಿಸಿ ಬಸ್ಸನ್ನು ತಡೆದಿದ್ದು ವರದಿಯಾಗಿತ್ತು.
ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ: 4 ತಿಂಗಳಲ್ಲಿ 58 ಪ್ರಕರಣಗಳು ದಾಖಲು


