ಬೆಂಗಳೂರಿನಾದ್ಯಂತ 1.8 ಲಕ್ಷಕ್ಕೂ ಹೆಚ್ಚು ಕಟ್ಟಡಗಳು ಅನಧೀಕೃತ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಸಿದ ಸಮೀಕ್ಷೆಯಲ್ಲಿ ಕಂಡು ಬಂದಿದೆ ಎಂದು ನ್ಯೂಸ್ ಮಿನಿಟ್ ಶನಿವಾರ ವರದಿ ಮಾಡಿದೆ. ನಗರದಲ್ಲಿನ ಅಕ್ರಮ ಮತ್ತು ಅನಧಿಕೃತ ಕಟ್ಟಡಗಳ ಕುರಿತು ಬಿಬಿಎಂಪಿ ಸಮೀಕ್ಷೆ ನಡೆಸುತ್ತಿದೆ.
‘‘ಬಿಬಿಎಂಪಿಯಿಂದ ಅನುಮತಿ ಪಡೆಯದೆ ಅಥವಾ ಬಿಬಿಎಂಪಿ ಅನುಮತಿ ನೀಡದೆ ಕಟ್ಟುವ ಕಟ್ಟಡಗಳು ಅನಧಿಕೃತವಾಗಿದ್ದು, ಇದನ್ನು ಬಿ-ಖಾತಾ ಆಸ್ತಿಗಳು ಎಂದು ಗುರುತಿಸಲಾಗುತ್ತದೆ” ಎಂದು ಬಿಬಿಎಂಪಿ ಯೋಜನೆಗಳ ವಿಶೇಷ ಆಯುಕ್ತ ರವೀಂದ್ರ ಪಿಎನ್ ಹೇಳಿದ್ದಾರೆ ಎಂದು ನ್ಯೂಸ್ ಮಿನಿಟ್ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
1.8 ಲಕ್ಷ ಅನಧಿಕೃತ ಕಟ್ಟಡಗಳು ಮಾತ್ರವಲ್ಲದೆ, ಮಂಜೂರಾದ ಯೋಜನೆಗಳನ್ನು ಬಿಟ್ಟು ಬೇರೆಯೆ ಯೋಜನೆ ರೂಪಿಸಿ ಕಟ್ಟಲಾಗಿರುವ ಸುಮಾರು 36,759 ಕಟ್ಟಡಗಳನ್ನು ಸಹ ಬಿಬಿಎಂಪಿ ಪತ್ತೆ ಮಾಡಿದೆ. ಯಾವುದೇ ಕಟ್ಟಡವನ್ನು ಕಟ್ಟುವಾಗ ಅದರ ಸುತ್ತ ಇರಬೇಕಾದ ಕನಿಷ್ಠ ಸ್ಥಳಾವಕಾಶ ನಿಯಮದ ಉಲ್ಲಂಘನೆ, ಹೆಚ್ಚುವರಿ ಮಹಡಿಗಳು ಹೊಂದಿರುವ ಕಟ್ಟಡಗಳು ಸೇರಿದಂತೆ ಹಲವು ನಿಯಮ ಪಾಲಿಸದೆ ಕಟ್ಟಿದ ಕಟ್ಟಡಗಳು ಅನಧೀಕೃತ ಕಟ್ಟಡಗಳಾಗಿವೆ.
ಇದನ್ನೂ ಓದಿ: ಬೆಂಗಳೂರು: ಮದುವೆಯಾಗಲು ನಿರಾಕರಿಸಿದ ಮಹಿಳೆ ಮೇಲೆ ಆಸಿಡ್ ದಾಳಿ, ಆರೋಪಿ ಬಂಧನ
ಸಮೀಕ್ಷೆಯ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಲು ಬಿಬಿಎಂಪಿ ಹಲವು ಗಡುವುಗಳನ್ನು ಮೀರಿದೆ. ಆದರೂ ನಡೆಯುತ್ತಿರುವ ಸಮೀಕ್ಷೆ ಮುಗಿಯಲು ಕನಿಷ್ಠ ಎರಡು ತಿಂಗಳು ಬೇಕಾಗಬಹುದು ಎಂದು ಬಿಬಿಎಂಪಿ ವಿಶೇಷ ಆಯುಕ್ತರು ತಿಳಿಸಿದ್ದಾರೆ.
“ವಿಳಂಬಕ್ಕೆ ಮಳೆಗಾಲ ಸೇರಿದಂತೆ ಹಲವು ಕಾರಣಗಳಿವೆ. ಸಮೀಕ್ಷೆ ಪೂರ್ಣಗೊಳ್ಳಲು ಇನ್ನೂ ಎರಡು ತಿಂಗಳು ಬೇಕು. ನಮ್ಮ ಬಳಿ ಈಗ ಕೇವಲ ಒಂದು ಏಕೀಕೃತ ಅಂಕಿ ಅಂಶ ಇದೆ. ಆದ್ದರಿಂದ ಯಾವ ಪ್ರದೇಶಗಳಲ್ಲಿ ಅತಿ ಹೆಚ್ಚು ಅನಧೀಕೃತ ಕಟ್ಟಡಗಳಿವೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ” ಎಂದು ಅವರು ಹೇಳಿದ್ದಾರೆ.
2022 ಮಾರ್ಚ್ ತಿಂಗಳಲ್ಲಿ ಅನಧಿಕೃತ ಆಸ್ತಿ ಮಾಲೀಕರಿಗೆ 10,000 ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. “ಈ ನೋಟಿಸ್‌ಗೆ ಕಟ್ಟಡ ಮಾಲೀಕರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ನಾವು ಹೊಸ ನೋಟಿಸ್ ಕಳುಹಿಸುತ್ತೇವೆ. ಮಂಜೂರಾದ ಯೋಜನೆಗೂ, ಕಟ್ಟಡಗಳಿಗೂ ಶೇಕಡಾವಾರು ವ್ಯತ್ಯಾಸಗಳಿರುವುದರಿಂದ ನೋಟೀಸ್‌ಗಳನ್ನು ನೀಡುವುದರ ಬಗ್ಗೆ ವಿವಿಧ ಹಂತಗಳಿವೆ. ಕೆಲವು ಕಟ್ಟಡಗಳು 10%, 12%, 15%, ಮತ್ತು ಕೆಲವು 25% ಅಸಂಗತತೆಯನ್ನು ಹೊಂದಿವೆ. ನೋಟಿಸ್ ಕಳುಹಿಸಲು ಮತ್ತೊಮ್ಮೆ ಪರಿಶೀಲಿಸಲಾಗುತ್ತದೆ” ಎಂದು ವಿಶೇಷ ಆಯುಕ್ತ ರವೀಂದ್ರ ಪಿಎನ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮುಸ್ಲಿಮರು ಕುಷ್ಠರೋಗಿಗಳು, ಕ್ರೈಸ್ತರು ಕ್ಯಾನ್ಸರ್ ಎಂದ ಬಲಪಂಥೀಯ ನಾಯಕ; ದೂರು ದಾಖಲು
ಅಕ್ರಮ ಕಟ್ಟಡಗಳನ್ನು ಕೆಡವಲು ಮತ್ತು ಅನುಪಾಲನಾ ವರದಿಯನ್ನು ಸಲ್ಲಿಸಲು ಹೈಕೋರ್ಟ್ ಆದೇಶಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಸರ್ವೆ ಪೂರ್ಣಗೊಳಿಸುವುದು ನಮ್ಮ ಗುರಿಯಾಗಿದೆ. ನಂತರ ಏಕಕಾಲದಲ್ಲಿ ಕಟ್ಟಡ ಮಾಲೀಕರಿಗೆ ನೋಟಿಸ್ ಕಳುಹಿಸುತ್ತೇವೆ. ನಿರ್ದಿಷ್ಟ ಸಂದರ್ಭಗಳಲ್ಲಿ ನಾನು ಖಂಡಿತವಾಗಿಯೂ ಕೆಡವಲು ನಿರ್ದೇಶನಗಳನ್ನು ನೀಡುತ್ತೇನೆ. ನಾವು ಸಂಪೂರ್ಣ ಅನಧಿಕೃತ ಕಟ್ಟಡಗಳನ್ನು ಗುರುತಿಸಿದ್ದೇವೆ, ಅವುಗಳನ್ನು ಖಂಡಿತವಾಗಿಯೂ ಕೆಡವುತ್ತೇವೆ. ಇದನ್ನು ಸಂಬಂಧಪಟ್ಟ ಅಧಿಕಾರಿ ನಿರ್ಧರಿಸುತ್ತಾರೆ. ಅನುಸರಣೆ ವರದಿಯನ್ನು ನಾನು ಹೈಕೋರ್ಟ್‌ಗೆ ಸಲ್ಲಿಸುತ್ತೇನೆ” ಎಂದು ಹೇಳಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ತಪ್ಪು ಯೋಜನೆಗಳಿಗೆ ಮಂಜೂರಾತಿ ನೀಡುವುದಿಲ್ಲ. ಬಿಲ್ಡರ್‌ಗಳೇ ನಿಯಮಗಳನ್ನು ಉಲ್ಲಂಘಿಸುತ್ತಾರೆ ಎಂದು ಹೇಳಿದ ಅವರು, “ಯಾವ ಯೋಜನೆಗೆ ಅನುಮೋದನೆ ನೀಡಲಾಗುತ್ತದೆಯೋ ಅವುಗಳಷ್ಟೆ ಸರಿಯಾದದು ಮತ್ತು ಕಾನೂನುಬದ್ಧವಾಗಿರುತ್ತದೆ. ಕಟ್ಟಡ ನಿರ್ಮಾಣದಲ್ಲಿ ಯಾವುದೇ ಉಲ್ಲಂಘನೆಯಾಗಿದೆಯೇ ಅಥವಾ ಬಿಲ್ಡರ್ ಸರಿಯಾದ ಕಾರ್ಯವಿಧಾನವನ್ನು ಅನುಸರಿಸಿದ್ದಾರೆಯೇ ಎಂದು ಪರಿಶೀಲಿಸುವ ಜವಾಬ್ದಾರಿ ಆಸ್ತಿಯನ್ನು ಖರೀದಿಸುವವರ ಮೇಲಿದೆ” ಎಂದು ಅವರು ಹೇಳಿದ್ದಾರೆ.


