ಅಯೋಧ್ಯೆಯ ರಾಮನ ದೇವಾಲಯದ ಭೂಮಿ ಪೂಜಾ ಸಮಾರಂಭ ಮಗಿದ ನಂತರ, ʼಕಾಶಿ ಮತ್ತು ಮಥುರಾವನ್ನು ವಿಮೋಚನೆʼ ಮಾಡುವುದರತ್ತ ಗಮನ ಹರಿಸುವುದಾಗಿ ರಾಜ್ಯ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.
ಸಚಿವ ಈಶ್ವರಪ್ಪ, ಅಯೋಧ್ಯೆಯಲ್ಲಿ ನಡೆಯುವ ಭೂಮಿ ಪೂಜೆಯ ಸಲುವಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಪೂಜೆ ಮತ್ತು ಹವನಗಳನ್ನು ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಈ ಮಾತನ್ನು ಹೇಳಿದ್ದಾರೆ.
ಗುಲಾಮಗಿರಿಯ ಗುರುತು ಅಳಿಸಲಾಗಿದೆ. ಕಾಶಿ ಮತ್ತು ಮಥುರಾ ಇನ್ನೂ ಎರಡು ಉಳಿದಿವೆ. ಅವುಗಳನ್ನು ಅಳಿಸಿಹಾಕಬೇಕು ಮತ್ತು ಮಸೀದಿಗಳು ಮಂದಿರಗಳಿಗೆ ದಾರಿ ಮಾಡಿಕೊಡಬೇಕು ಎಂದರು.
ಬಿಜೆಪಿಯ ಕರ್ನಾಟಕ ಘಟಕದ ಮಾಜಿ ಅಧ್ಯಕ್ಷರೂ ಆಗಿರುವ ಸಚಿವರು, ಬಲಿಷ್ಠ ಭಾರತವನ್ನು ನಿರ್ಮಿಸಲು ಗುಲಾಮಗಿರಿಯ ಇತರ ಗುರುತುಗಳನ್ನು ಅಳಿಸಿಹಾಕಲು ಎಲ್ಲಾ ಪ್ರಯತ್ನಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.
ಕಾಂಗ್ರೆಸ್ ವಕ್ತಾರ ಬಿ. ಎಲ್. ಶಂಕರ್, ಈಶ್ವರಪ್ಪ ಅವರ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿ, ಇದು ಪಕ್ಷವಾಗಿ ಬಿಜೆಪಿಯ ಅಧಿಕೃತ ನಿಲುವೋ ಅಥವಾ ಈಶ್ವರಪ್ಪ ಅವರ ವೈಯಕ್ತಿಕ ನಿಲುವೋ ಎಂದು ನಮಗೆ ತಿಳಿದಿಲ್ಲ. ಈ ಬಗ್ಗೆ ಬಿಜೆಪಿ ನಿಲುವು ತೆಗೆದುಕೊಂಡರೆ, ಆಗ ಮಾತ್ರ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸುತ್ತೇವೆ ಎಂದಿದ್ದಾರೆ.
ಕಾಂಗ್ರೆಸ್, ಅಯೋಧ್ಯೆಯಲ್ಲಿನ ಭೂಮಿ ಪೂಜೆಯನ್ನು ಸ್ವಾಗತಿಸಿದ್ದು, ಈ ವಿಷಯವನ್ನು ಜನರನ್ನು ಒಗ್ಗೂಡಿಸಲು ಬಳಸಬೇಕು ಎಂದು ಹೇಳಿದೆ.
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮಂಗಳವಾರ ಭಗವಾನ್ ರಾಮ ಎಲ್ಲ ಕಾಂಗ್ರೆಸ್ಸಿಗರ ಹೃದಯದಲ್ಲಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ: ಬೆಂಕಿ ಬರಹ-ಮಂದಿರವಲ್ಲೇ ಕಟ್ಟಿದೆವು…!


