ಎನ್‌ಸಿಪಿ ನಾಯಕ ಬಾಬಾ ಸಿದ್ದೀಕ್ ಹತ್ಯೆ ಪ್ರಕರಣದಲ್ಲಿ ಬೇಕಾಗಿದ್ದ ಅನ್ಮೋಲ್ ಬಿಷ್ಣೋಯ್ ಅಮೆರಿಕದಿಂದ ಗಡಿಪಾರು ಮಾಡಲ್ಪಟ್ಟ ನಂತರ ಬುಧವಾರ (ನವೆಂಬರ್ 19) ದೆಹಲಿಗೆ ಬಂದಿಳಿದಿದ್ದು, ಕೂಡಲೇ ಬಂಧಿಸಲಾಗಿದೆ. ಆತನನ್ನು ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತದಲ್ಲಿ ಹಲವಾರು ಪ್ರಕರಣಗಳಿಗೆ ಸಂಬಂಧಿಸಿದಂತೆ ಬೇಕಾಗಿರುವ ಬಿಷ್ಣೋಯ್‌ನನ್ನು ಗಡಿಪಾರು ಮಾಡಿರುವುದು ಒಂದು ಮಹತ್ವದ ಬೆಳವಣಿಗೆ ಎಂದು ಪರಿಗಣಿಸಲಾಗಿದೆ.
ಇದಕ್ಕೂ ಮೊದಲು, ಕಳೆದ ವರ್ಷ ಅಕ್ಟೋಬರ್ 12ರಂದು ಮುಂಬೈನ ಬಾಂದ್ರಾದಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ನಾಯಕ ಬಾಬಾ ಸಿದ್ದೀಕ್ ಅವರ ಕುಟುಂಬಕ್ಕೆ ಅನ್ಮೋಲ್ ಅನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದೆ ಎಂದು ಅಮೆರಿಕದ ಗೃಹ ಭದ್ರತಾ ಇಲಾಖೆ ತಿಳಿಸಿತ್ತು ಎಂದು ವರದಿಯಾಗಿದೆ.
“ಫೆಡರಲ್ ಸರ್ಕಾರವು ಅನ್ಮೋಲ್ ಬಿಷ್ಣೋಯಿಯನ್ನು ಯುನೈಟೆಡ್ ಸ್ಟೇಟ್ಸ್‌ನಿಂದ ಗಡಿಪಾರು ಮಾಡಿದೆ ಎಂದು ನಿಮಗೆ ತಿಳಿಸಲು ಈ ಇ-ಮೇಲ್ ಕಳುಹಿಸಲಾಗಿದೆ. ಅಪರಾಧಿಯನ್ನು ನವೆಂಬರ್ 18, 2025 ರಂದು ಗಡಿಪಾರು ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು 1-844-442-2553 ಗೆ ಕರೆ ಮಾಡಿ. ಈ ಅಧಿಸೂಚನೆಯನ್ನು ಡಿಹೆಚ್‌ಎಸ್-ವೈನ್ ಸೇವೆಯಿಂದ ಕಳುಹಿಸಲಾಗಿದೆ. ಈ ಮಾಹಿತಿಯು ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸುತ್ತೇವೆ” ಎಂದು ಡಿಹೆಚ್‌ಎಸ್-ವೈನ್ ಸೇವೆಯಿಂದ ಸಿದ್ದೀಕ್ ಕುಟುಂಬಕ್ಕೆ ಕಳುಹಿಸಲಾದ ಇ-ಮೇಲ್‌ನಲ್ಲಿ ಬರೆಯಲಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನ ಕಿರಿಯ ಸಹೋದರನಾಗಿರುವ ಅನ್ಮೋಲ್, ಮೇ 2022ರಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಕೊಲೆ ಮತ್ತು ಅಕ್ಟೋಬರ್ 2024ರಲ್ಲಿ ಎನ್‌ಸಿಪಿ ನಾಯಕ ಬಾಬಾ ಸಿದ್ದೀಕ್ ಅವರ ಕೊಲೆ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರಿಗೆ ಬೇಕಾಗಿದ್ದ.
ಈ ವರ್ಷದ ಏಪ್ರಿಲ್ 14ರಂದು ಬಾಂದ್ರಾ ಪ್ರದೇಶದಲ್ಲಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿಯ ಹಿಂದೆಯೂ ಈತನ ಕೈವಾಡವಿದೆ ಎಂದು ಆರೋಪಿಸಲಾಗಿದೆ.
ಅನ್ಮೋಲ್ ಭಾರತದ ‘ಮೋಸ್ಟ್ ವಾಂಟೆಡ್’ ಪಟ್ಟಿಯಲ್ಲಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಆತನ ಬಗ್ಗೆ ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿತ್ತು.
ನಕಲಿ ಪಾಸ್‌ಪೋರ್ಟ್ ಬಳಸಿ ಅನ್ಮೋಲ್ ದೇಶ ಬಿಟ್ಟು ಪಲಾಯನ ಮಾಡಿ, ನೇಪಾಳಕ್ಕೆ, ನಂತರ ದುಬೈ, ಕೀನ್ಯಾಕ್ಕೆ ಪ್ರಯಾಣ ಬೆಳೆಸಿ ಕೊನೆಗೆ ಅಮೆರಿಕ ತಲುಪಿದ್ದ ಎಂದು ವರದಿಗಳು ಹೇಳಿವೆ. ಕಳೆದ ನವೆಂಬರ್‌ನಲ್ಲಿ ಆತನನ್ನು ಬಂಧಿಸಿದ್ದ ಅಮೆರಿಕದ ಅಧಿಕಾರಿಗಳು, ನಂತರ ಗಡಿಪಾರು ಪ್ರಕ್ರಿಯೆ ಪ್ರಾರಂಭಿಸಿದ್ದರು.
ಪಂಜಾಬ್‌ನ ಫಜಿಲ್ಕಾ ಮೂಲದ ಅನ್ಮೋಲ್, ಸಹೋದರ ಲಾರೆನ್ಸ್ ಬಿಷ್ಣೋಯ್‌ನ ಪ್ರಮುಖ ವಿದೇಶಿ ನಿರ್ವಾಹಕರಾಗಿದ್ದ. ಸುಲಿಗೆ ದಂಧೆಗಳನ್ನು ನಿರ್ದೇಶಿಸುತ್ತಿದ್ದ. ಬೆದರಿಕೆಯೊಡ್ಡುತ್ತಿದ್ದ ಮತ್ತು ಎನ್‌ಕ್ರಿಪ್ಟ್ ಮಾಡಿದ ಮಾರ್ಗಗಳ ಮೂಲಕ ಕಾರ್ಯಯೋಜನೆಗಳನ್ನು ಸಂಘಟಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಏಪ್ರಿಲ್ 2023ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನಡೆದ ಪಂಜಾಬಿ ಮದುವೆಯಲ್ಲಿ ಆತ ಕಾಣಿಸಿಕೊಂಡಿದ್ದ ಎನ್ನಲಾಗಿದೆ.
ಮೇ 2022ರಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯಲ್ಲಿ ಅನ್ಮೋಲ್ ಪಾತ್ರ ಸೇರಿದಂತೆ ಸುಮಾರು 18 ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ. ವಿದೇಶದಿಂದ ಕಾರ್ಯಾಚರಣೆ ನಡೆಸುವಾಗ ಸಂಚು ರೂಪಿಸಿದ ಮತ್ತು ದಾಳಿಕೋರರಿಗೆ ಶಸ್ತ್ರಾಸ್ತ್ರಗಳು ಮತ್ತು ಲಾಜಿಸ್ಟಿಕಲ್ ಬೆಂಬಲವನ್ನು ವ್ಯವಸ್ಥೆ ಮಾಡಿದ ಆರೋಪ ಆತನ ಮೇಲಿದೆ.
ಕಳೆದ ವರ್ಷ ಏಪ್ರಿಲ್‌ನಲ್ಲಿ ಮುಂಬೈನಲ್ಲಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮನೆಯ ಹೊರಗೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆಯೂ ಆತನ ಬೇಕಾಗಿದ್ದ. ಫೇಸ್‌ಬುಕ್ ಪೋಸ್ಟ್ ಮೂಲಕ ಆತ ಈ ದಾಳಿಯ ಹೊಣೆ ಹೊತ್ತಿದ್ದ.


