ಹತ್ರಾಸ್ ಅತ್ಯಾಚಾರ ಸಂತ್ರಸ್ಥರ ಭೇಟಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಯುಪಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ಗೆ ಅಥವಾ ನವದೆಹಲಿಯ ಯಾವುದೇ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರಕ್ಕೆ ಬುಧವಾರ ಸೂಚಿಸಿದೆ.
ಮಧುಮೇಹ ಮತ್ತು ಹೃದಯ ಕಾಯಿಲೆಗಳಿಂದ ಬಳಲುತ್ತಿರುವ ಕಪ್ಪನ್, ಮಥುರಾ ಜೈಲಿನಲ್ಲಿ ಕೊರೊನಾ ಸೋಂಕಿತರಾಗಿದ್ದು, ಮಥುರಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಕೋಲಾರದ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಸರ್ಕಾರದ ನಿರ್ಲಕ್ಷ್ಯ: ರೈತ ಹೋರಾಟಗಾರರ ಆರೋಪ
ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ನ್ಯಾಯಪೀಠ, ಕಪ್ಪನ್ ರೋಗದಿಂದ ಚೇತರಿಸಿಕೊಂಡ ನಂತರ ಅವರನ್ನು ಮಥುರಾ ಜೈಲಿಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.
ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ (ಕೆಯುಡಬ್ಲ್ಯುಜೆ) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿದೆ. ಕಪ್ಪನ್ ಮಥುರಾ ಜೈಲಿನಲ್ಲಿ ಸ್ನಾನಗೃಹವೊಂದರಲ್ಲಿ ಕುಸಿದು ಬಿದ್ದಿದ್ದರು. ನಂತರ ಅವರು ಕೊರೊನಾ ಪಾಸಿಟಿವ್ ಆಗಿದ್ದರು. ಅವರನ್ನು ಏಮ್ಸ್ ಗೆ ಸ್ಥಳಾಂತರಿಸಲು ನ್ಯಾಯಾಲಯವು ನಿರ್ದೇಶನವನ್ನು ನೀಡುವಂತೆ ಕೆಯುಡಬ್ಲ್ಯುಜೆ ಅರ್ಜಿಯಲ್ಲಿ ಕೋರಿತ್ತು.
ಆದರೆ ಉತ್ತರ ಪ್ರದೇಶ ಸರ್ಕಾರವು ಅವರಿಗೆ ರಾಜ್ಯದ ಹೊರಗೆ ಚಿಕಿತ್ಸೆ ಪಡೆಯಲು ಅವಕಾಶ ನೀಡುವುದನ್ನು ನ್ಯಾಯಾಲಯದಲ್ಲಿ ವಿರೋಧಿಸಿತ್ತು. ಇತರ ಕೈದಿಗಳಿಗೆ ಕೂಡಾ ರಾಜ್ಯದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸರ್ಕಾರವು ಸಮರ್ಥನೆ ನೀಡಿತ್ತು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಾವಧಿಯಲ್ಲಿ ಕೇವಲ ಒಂದೇ ಒಂದು ಏಮ್ಸ್ ಸ್ಥಾಪನೆಯಾಯಿತೆ…?
ಕಪ್ಪನ್ ಅವರ ಪತ್ನಿ ಆಸ್ಪತ್ರೆಯಲ್ಲಿ ತಮ್ಮ ಪತಿಯ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿ ಭಾರತದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದರು. ಪತ್ರದಲ್ಲಿ, “ಮಥುರಾದ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಮಂಚವೊಂದಕ್ಕೆ ಪ್ರಾಣಿಗಳ ರೀತಿಯಲ್ಲಿ, ಕಳೆದ ನಾಲ್ಕು ದಿನಗಳಿಂದ ಆಹಾರವನ್ನು ತೆಗೆದುಕೊಳ್ಳಲು ಅಥವಾ ಶೌಚಾಲಯಕ್ಕೆ ಹೋಗಲು ಬಿಡದೆ ಕಪ್ಪನ್ ಅವರನ್ನು ಕಟ್ಟಿ ಹಾಕಲಾಗಿದೆ. ಇದು ಗಂಭೀರ ವಿಚಾರವಾಗಿದೆ” ಎಂದು ಬರೆದಿದ್ದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೂಡಾ ಯುಪಿ ಸಿಎಂ ಆದಿತ್ಯನಾಥ್ ಅವರಿಗೆ ಪತ್ರ ಬರೆದು ಕಪ್ಪನ್ ಅವರಿಗೆ ಆರೋಗ್ಯ ರಕ್ಷಣೆ ನೀಡುವಂತೆ ಕೋರಿದ್ದರು.
ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ವರದಿಗೆ ತೆರಳುತ್ತಿದ್ದ ಕಪ್ಪನ್ ಅವರನ್ನು ಯುಪಿ ಪೊಲೀಸರು 2020 ರ ಅಕ್ಟೋಬರ್ 5 ರಂದು ಮಥುರಾದಲ್ಲಿ ಬಂಧಿಸಿದ್ದರು. ಅತ್ಯಾಚಾರ ಘಟನೆಯನ್ನು ಧಾರ್ಮಿಕ ದ್ವೇಷಕ್ಕೆ ಬಳಸಿಕೊಳ್ಳುವ ಪಿತೂರಿಯನ್ನು ನಡೆಸುತ್ತಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು. ಅವರನ್ನು ಕರಾಳ ಕಾನೂನಾದ, ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಬಂಧಿಸಿದ್ದಾರೆ.
ಇದನ್ನೂ ಓದಿ: ಟ್ವಿಟರ್‌ನಲ್ಲಿ ಆಕ್ಸಿಜನ್ ಕೇಳಿದ ಯುವಕನ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿದ ಯುಪಿ ಪೊಲೀಸ್!


