ಹಲವು ತಿಂಗಳಿಂದ ಕ್ಷೇತ್ರವಾಸಿಗಳಿಗೆ ನಾಟ್ ರಿಚೇಬಲ್ ಆಗಿದ್ದ ಉತ್ತರ ಕನ್ನಡದ ಸಂಸದ ಅನಂತ್‌ಕುಮಾರ್ ಹೆಗಡೆ ತಮ್ಮ ಮಾಮುಲಿ ಅಸಹಿಷ್ಟುತೆ ಮೂಲಕ ಪ್ರತ್ಯಕ್ಷರಾಗಿದ್ದಾರೆ! ದೀಪಾವಳಿ ಹಬ್ಬದ ಹೊತ್ತಲ್ಲಿ ರಸ್ತೆಗಳಲ್ಲಿ ಪಟಾಕಿ ಸಿಡಿಸಿ ಪರಿಸರ ಮಾಲಿನ್ಯ ಮಾಡಬೇಡಿಯೆಂದು ಜಾಹೀರಾತೊಂದರಲ್ಲಿ ಹೇಳಿದ್ದ ಬಾಲಿವುಡ್‌ನ ಖ್ಯಾತ ನಟ-ಪರಿಸರವಾದಿ ಅಮೀರ್ ಖಾನ್‌ರನ್ನು ಅನಂತ್ ಹೆಗಡೆ ಮೂದಲಿಸಿದ್ದಾರೆ. ಭಾರತದಲ್ಲಿ ಇಂಥ ಹಿಂದು ವಿರೋಧಿ ನಟರಿಗೇನು ಕೊರತೆಯಿಲ್ಲ ಎಂದು ಕಿಡಿಕಾರಿದ್ದಾರೆ.

ನಟ, ಪ್ರಾಣಿ ಪ್ರೇಮಿ ಅಮೀರ್ ಖಾನ್ ಸಿಯೆಟ್ ಬೈಕ್ ಟೈರ್ ಕಂಪನಿಯ ಜಾಹೀರಾತಲ್ಲಿ ನಟಿಸುತ್ತ ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿತದಿಂದಾಗುವ ಅನಾಹುತದ ಬಗ್ಗೆ ಜಾಗೃತಿ ಮೂಡಿಸಿದ್ದರು. ಇದರಿಂದ ಕೆರಳಿರಿರುವ ಅನಂತ್ ಹೆಗಡೆ ಮುಸ್ಲಿಮರಿಂದ ಸಾರ್ವಜನಿಕ ಪ್ರದೇಶಗಳಲ್ಲಿ ಆಗುತ್ತಿರುವ ಹಲವು ಮಾಲಿನ್ಯದತ್ತ ಅಮೀರ್ ಗಮನ ಹರಿಸಿದರೆ ಅದೆಷ್ಟೋ ಸಮಸ್ಯೆ ಪರಿಹಾರವಾಗುತ್ತದೆ ಎಂದಿದ್ದಾರೆ. ಸಿಯೆಟ್ ಟೈರ್ ಕಂಪನಿಯ ಮುಖ್ಯಸ್ಥ ಅನಂತ ವರದಾನ್ ಗೋಯೆಂಕಾಗೆ ಜಾಹೀರಾತಿನ ಕುರಿತು ಆಕ್ಷೇಪಗಳಿರುವ ಪತ್ರ ಬರೆದಿರುವ ಸಂಸದ ಹೆಗಡೆ ಅದನ್ನು ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಪರಿಸರ ಮತ್ತು ಪ್ರಾಣಿಗಳ ಬಗ್ಗೆ ಅಮೀರ್ ಖಾನ್ ಕಾಳಜಿ ವ್ಯಕ್ತ ಪಡಿಸುತ್ತಿರುವುದಕ್ಕೆ ನನ್ನ ಮೆಚ್ಚುಗೆಯಿದೆ. ಆದರೆ ಅನ್ಯ ಧರ್ಮದಲ್ಲಿ ನಡೆಯುತ್ತಿರುವ ಹಲವು ಆಚರಣೆಗಳ ಬಗ್ಗೆ ಅವರೇಕೆ ಮೌನವಾಗಿದ್ದಾರೆ? ಪಟಾಕಿ ರಸ್ತೆ ಮೇಲೆ ಹೊಡೆಯುವುದರಿಂದ ಸಮಸ್ಯೆಯಾಗುತ್ತದೆಂದಾರೆ, ರಸ್ತೆ ಮೇಲೆ ನಮಾಜ್ ಮಾಡುವುದರಿಂದಲೂ ಟ್ರಾಫಿಕ್ ಸಮಸ್ಯೆಯಾಗತ್ತದೆ. ಧ್ವನಿವರ್ಧಕದಲ್ಲಿ ಆಝಾನ್ ಕೂಗುವುದರಿಂದ ಶಬ್ಧ ಮಾಲಿನ್ಯವಾಗುತ್ತದೆ. ಅದನ್ನೂ ಜಾಹೀರಾತಿನಲ್ಲಿ ತೋರಿಸಿರಿ, ಪ್ರತಿ ದಿನ ಬೆಳಗ್ಗೆ ಚೀರುವ ಧ್ವನಿ ವರ್ಧಕಗಳು, ನಡು ರಸ್ತೆಯಲ್ಲಿ ನಮಾಜ್ ಮಾಡುವುದು ಮತ್ತಿತರ ಆಚರಣೆಗಳತ್ತ ಅಮೀರ್ ಲಕ್ಷವಹಿಸಿದರೆ ಎಷ್ಟೋ ಸಮಸ್ಯೆ ಬಗೆಹರಿಯುತ್ತವೆ ಎಂದು ಅನಂತ ಹೆಗಡೆ ಸಿಯೆಟ್ ಕಂಪನಿ ಮಾಲೀಕರಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಇಂಥ ಜಾಹೀರಾತುಗಳು ಹಿಂದುಗಳ ಭಾವನೆಗಳನ್ನು ತುಳಿಯಲು ಮಾಡಿದ ಕ್ಷುಲ್ಲಕ ಕುತಂತ್ರವಲ್ಲದೆ ಮತ್ತೇನು ಅಲ್ಲ. ಈ ಜಾಹೀರಾತು ಹಿಂಪಡೆಯಬೇಕು: ಹಿಂದುಗಳೆ ಆಗಿರುವ ನೀವು ಹಿಂದುಗಳ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಂಸದ ಅನಂತ ಹೆಗಡೆ ಸಿಯೆಟ್ ಕಂಪನಿಯ ಗೋಯೆಂಕಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಬಿಎಸ್‌ಎನ್‌ಎಲ್‌ನಲ್ಲಿ ದೇಶದ್ರೋಹಿಗಳಿದ್ದಾರೆ: ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ತೀವ್ರ ವಿರೋಧ


