ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ (ಮುಡಾ)ದ ಮಾಜಿ ಆಯುಕ್ತ ಜಿ.ಟಿ ದಿನೇಶ್ ಕುಮಾರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಸರ್ಕಾರ ಆದೇಶಿಸಿದೆ. ಆಗಸ್ಟ್ 31ರಂದೇ ಆದೇಶ ಹೊರ ಬಿದ್ದಿದ್ದು, ಆ. 28ರಂದು ಅವರನ್ನು ಸರ್ಕಾರ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಹುದ್ದೆಗೆ ವರ್ಗಾವಣೆ ಮಾಡಿತ್ತು.
ಮುಡಾದ ಈ ಹಿಂದಿನ ಆಯುಕ್ತರಾಗಿದ್ದ ದಿನೇಶ್ ಕುಮಾರ್ ಮತ್ತು ಡಿ ಬಿ ನಟೇಶ್ ಇಬ್ಬರು ಮುಡಾದಲ್ಲಿನ ಭ್ರಷ್ಟಾಚಾರದಲ್ಲಿ ಪ್ರಮುಖರಾಗಿದ್ದಾರೆ. ಸರ್ಕಾರದ ಬೊಕ್ಕಸಕ್ಕೆ ಸುಮಾರು 5 ಸಾವಿರ ಕೋಟಿ ರೂಪಾಯಿಯಷ್ಟು ನಷ್ಟ ಉಂಟು ಮಾಡಿದ್ದಾರೆ ಎಂದು ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ವಕೀಲ ಅರುಣ್ ಕುಮಾರ್ ದೂರು ನೀಡಿದ್ದರು.
ಆಯುಕ್ತರ ಮೇಲಿನ ಆರೋಪಗಳ ಕುರಿತು ತಾಂತ್ರಿಕ ಸಮಿತಿ ನೀಡಿರುವ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶದಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.
ಮುಡಾ ಸಭೆಗಳಲ್ಲಿ ಪ್ರಸ್ತಾಪಿಸಲಾದ ಬಹುತೇಕ ವಿಷಯಗಳಲ್ಲಿ ಸ್ಪಷ್ಟ ಅಭಿಪ್ರಾಯ ಮಂಡಿಸದಿರುವುದು, ಸರ್ಕಾರದ ನಿರ್ದೇಶನಗಳ ಉಲ್ಲಂಘನೆ, ವಿನ್ಯಾಸ ನಕ್ಷೆಗಳಿಗೆ ನಿಯಮಬಾಹಿರವಾಗಿ ಅನುಮೋದನೆ, ನಿಯಮ ಮೀರಿ ಭೂಸ್ವಾಧೀನ ಹಾಗೂ ಬದಲಿ ನಿವೇಶನಕ್ಕೆ ಶಿಫಾರಸು, ನಿಯಮ ಮೀರಿ 50:50 ಅನುಪಾತದಲ್ಲಿ ನಿವೇಶನಗಳ ಹಂಚಿಕೆ ಇತ್ಯಾದಿ ಆರೋಪಗಳ ಮೇಲೆ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಸೇರಿದಂತೆ ಹಲವು ಮಂದಿ ಬಿಜೆಪಿ ನಾಯಕರು, ದಿನೇಶ್ ಕುಮಾರ್ ಅವರ ವಿರುದ್ದ ಕ್ರಮ ಜರುಗಿಸಬೇಕು ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಇದನ್ನೂ ಓದಿ : ಮುಡಾ ಪ್ರಕರಣ: ಸಿಎಂ ವಿರುದ್ಧದ ವಿಚಾರಣೆಗೆ ಸೆ.9 ರವರೆಗೆ ತಡೆಯಾಜ್ಞೆ ವಿಸ್ತರಿಸಿದ ಹೈಕೋರ್ಟ್


