ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶನಗಳ ಅಕ್ರಮ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರರ ವಿರುದ್ಧ ತನಿಖೆ ಮುಂದುವರಿಸದಂತೆ ಲೋಕಾಯುಕ್ತ ನ್ಯಾಯಾಲಯಕ್ಕೆ ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಸಿಬಿಐ ತನಿಖೆಗೆ ಕೋರಿರುವ ಅರ್ಜಿಯನ್ನು ತಾನು ನಿರ್ಧರಿಸುವವರೆಗೆ ಲೋಕಾಯುಕ್ತ ತನಿಖೆ ನಡೆಸಬಾರದು ಎಂದು ನ್ಯಾಯಾಲಯ ಹೇಳಿದೆ. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಗುರುವಾರ ಅರ್ಜಿ ವಿಚಾರಣೆ ನಡೆಸಿ, ಸಿಬಿಐ ತನಿಖೆಗೆ ಕೋರಿ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜನವರಿ 15ಕ್ಕೆ ಮುಂದೂಡಿದರು.
ವಿಚಾರಣೆಗೆ ಹಾಜರಾಗಿದ್ದ ಸಿದ್ದರಾಮಯ್ಯ ಅವರ ಬಾಮೈದುನ ಮಲ್ಲಿಕಾರ್ಜುನ ಸ್ವಾಮಿ ಪರ ವಾದ ಮಂಡಿಸಿದ ವಕೀಲರು, “ಎರಡು ದಿನಗಳ ಹಿಂದೆಯಷ್ಟೇ ನೋಟಿಸ್ ಜಾರಿಯಾಗಿದೆ; ಅದಕ್ಕೆ ಆಕ್ಷೇಪಣೆ ಸಿದ್ದಪಡಿಸಬೇಕಾಗಿದೆ. ಆದ್ದರಿಂದ, ಅರ್ಜಿಯ ವಿಚಾರಣೆ ಮುಂದೂಡಬೇಕು” ಎಂದು ಮನವಿ ಮಾಡಿದರು.
ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಪರ ಹಾಜರಿದ್ದ ಹಿರಿಯ ವಕೀಲ ರವಿವರ್ಮ ಕುಮಾರ್, “ಆಕ್ಷೇಪಣೆ ಸಲ್ಲಿಸಲು ನಮಗೆ ಕಾಲಾವಕಾಶ ನೀಡಬೇಕು” ಎಂದರು. “ಜಾರಿ ನಿರ್ದೇಶನಾಲಯವನ್ನು(ಇ.ಡಿ) ಪ್ರತಿವಾದಿಯನ್ನಾಗಿಸಬೇಕು ಎಂದು ಎಂದು ಪೀಠ ಸೂಚನೆ ನೀಡಿತು.
“ನಮ್ಮ ಕಕ್ಷಿದಾರರಿಗೆ ಈವರೆಗೂ ನೋಟಿಸ್ ಜಾರಿ ಮಾಡಿಲ್ಲ. ಆದರೂ, ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ತನಿಖಾ ವರದಿಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಬಾರದೆಂದು ಆದೇಶಿಸಲಾಗಿದೆ. ಲೋಕಾಯುಕ್ತ ತನಿಖೆಗೆ ತಡೆ ನೀಡಬೇಕು ಎಂದು ಅರ್ಜಿದಾರರು ಕೇಳಿಯೇ ಇಲ್ಲ. ಆದರೂ ಈ ಆದೇಶ ನೀಡಲಾಗಿದೆ. ಲೋಕಾಯುಕ್ತ ತನಿಖೆಯಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡಬಾರದು. ನಮ್ಮ ವಾದ ಆಲಿಸದೆಯೇ ಸ್ವಯಂಪ್ರೇರಿತವಾಗಿ ಈ ಆದೇಶ ನೀಡುವುದು ಎಷ್ಟು ಸರಿ” ಎಂದು ರವಿವರ್ಮ ಕುಮಾರ್ ನ್ಯಾಯಾಲಯದ ಗಮನಕ್ಕೆ ತಂದರು.
“ಅರ್ಜಿ ಸಲ್ಲಿಕೆಯಾಗಿ 35 ದಿನಗಳಾಗಿವೆ. ಆದರೂ ಪ್ರತಿವಾದಿಗಳಿಗೆ ನೋಟಿಸ್ ಜಾರಿಯಾಗಿರಲಿಲ್ಲ. ಹೀಗಾಗಿ ಹ್ಯಾಂಡ್ ಸಮನ್ಸ್ ಜಾರಿ ಮಾಡಿ ಆದೇಶಿಸಿದೆ. ಪ್ರತಿವಾದಿಗಳು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ವಿಭಾಗೀಯ ಪೀಠ ಯಾವುದೇ ಮಧ್ಯಂತರ ತಡೆ ನೀಡಿಲ್ಲ. ಸೆಷನ್ಸ್ ಕೋರ್ಟ್ಗೆ ಡಿ.24ಕ್ಕೆ ಲೋಕಾಯುಕ್ತ ಪೊಲೀಸರು ವರದಿ ಸಲ್ಲಿಸಬೇಕಿದೆ. ಅಂತಿಮ ವರದಿ ಸಲ್ಲಿಸಿದರೆ ಅರ್ಜಿ ವಿಚಾರಣೆಗೆ ತೊಂದರೆಯಾಗುತ್ತದೆ. ಹೀಗಾಗಿ, ಅಂತಿಮ ವರದಿ ಸಲ್ಲಿಸಲು ನೀಡಿರುವ ಗಡುವು ವಿಸ್ತರಿಸಲಾಗುತ್ತಿದೆ” ಎಂದು ನ್ಯಾಯಪೀಠ ತಿಳಿಸಿತು.
“ಈ ಹಿಂದೆ ಜನವರಿ 28ರವರೆಗೆ ಅಂತಿಮ ವರದಿ ಸಲ್ಲಿಸುವುದಕ್ಕೆ ಕಾಲಾವಕಾಶ ನೀಡಲಾಗಿತ್ತು. ಇದೀಗ ಸಲ್ಲಿಕೆಗೆ ಕಾಲಾವಕಾಶ ನೀಡುತ್ತಿದ್ದೇನೆ” ಎಂದು ತಿಳಿಸಿದ ನ್ಯಾಯಾಧಿಶರು, ವಿಚಾರಣೆಯನ್ನು ಮುಂದೂಡಿದರು.
ಇದನ್ನೂ ಓದಿ; ಸದನದಲ್ಲೆ ಅಶ್ಲೀಲವಾಗಿ ನಿಂದಿಸಿದ ಸಿಟಿ ರವಿಗೆ ಮಂತ್ರಿ ಲಕ್ಷ್ಮಿ ಹೆಬ್ಬಾಲ್ಕರ್ ಅವರ ಬೆಂಬಲಿಗರಿಂದ ಹಲ್ಲೆ


