ಬಿಜೆಪಿಯ ಹಿರಿಯ ನಾಯಕರಾಗಿದ್ದ ಮುಕುಲ್ ರಾಯ್ ತಮ್ಮ ಮಗನೊಂದಿಗೆ ಬಿಜೆಪಿ ತೊರೆದು ತಮ್ಮ ಹಳೆಯ ಟಿಎಂಸಿ ಪಕ್ಷ ಸೇರಿದ್ದು ಸರಿಯಷ್ಟೆ. ತದನಂತರ ಬಂಗಾಳ ಬಿಜೆಪಿಯಲ್ಲಿ ಆರೋಪ – ಪ್ರತ್ಯಾರೋಪಗಳು ಭುಗಿಲೆದ್ದಿದ್ದು ಬಹಳಷ್ಟು ಶಾಸಕರು ಬಹಿರಂಗವಾಗಿಯೇ ಬಿಜೆಪಿ ನಾಯಕತ್ವದ ವಿರುದ್ಧ ಪ್ರಶ್ನೆಗಳನೆತ್ತಿದ್ದಾರೆ.
ಮುಕುಲ್ ರಾಯ್‌ರವರು 2019 ರ ಲೋಕಸಭಾ ಚುನಾವಣೆಯ ಉಸ್ತುವಾರಿ ವಹಿಸಿಕೊಂಡು ಅತ್ಯುತ್ತಮವಾಗಿ ಪಕ್ಷ ಸಂಘಟಿಸಿದ್ದರು. ಹಾಗಾಗಿಯೇ 18 ಸಂಸತ್ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಆದರೆ ತದನಂತರ ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಯಿತು. 2021ರ ವಿಧಾನಸಭಾ ಚುನಾವಣೆಯಲ್ಲಿ ರಾಯ್ ಅವರ ರಾಜಕೀಯ ಕುಶಾಗ್ರಮತಿಯನ್ನು ಬಳಸಿಕೊಳ್ಳುವಲ್ಲಿ ಬಿಜೆಪಿ ನಾಯಕತ್ವ ವಿಫಲವಾಗಿದೆ ಎಂದು ಕೆಲ ಶಾಸಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವರನ್ನು ಕೇವಲ ಪಕ್ಷದ ವಿಧಾನಸಭಾ ಅಭ್ಯರ್ಥಿಯಂತೆ ನಡೆಸಿಕೊಳ್ಳಲಾಯಿತು. ಇತ್ತೀಚೆಗೆ ಪಕ್ಷ ಸೇರಿದ ಸುವೇಂದು ಅಧಿಕಾರಿ ಮತ್ತು ರಾಜ್ಬ್ ಬ್ಯಾನರ್ಜಿಯವರನ್ನು ಮುನ್ನೆಲೆಗೆ ತರಲಾಯಿತು. ಹಾಗಾಗಿಯೇ ಬಿಜೆಪಿ ಸೋಲಬೇಕಾಯಿತು ಎಂದು ಶಾಸಕರು ದೂರಿದ್ದಾರೆ.
ಉತ್ತರ 24 ಪರಗಣ ಜಿಲ್ಲೆಯ ಬಗ್ದಹ್ ಕ್ಷೇತ್ರದ ಬಿಜೆಪಿ ಶಾಸಕ ಬೈಸ್ವಜಿತ್ ದಾಸ್ ಮಾತನಾಡಿ “ಮುಕುಲ್ ರಾಯ್ ಟಿಎಂಸಿಗೆ ಮರಳಿರುವುದು ಬಂಗಾಳ ಬಿಜೆಪಿಗೆ ದೊಡ್ಡ ಹೊಡೆತವಾಗಿದೆ. ನಾನು ಮುಕುಲ್ ರಾಯ್, ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿಯೊಂದಿಗೆ ಸಾಮಾನ್ಯವಾಗಿ ಮಾತನಾಡುತ್ತಿದ್ದೇನೆಯೇ ಹೊರತು ಅದರಲ್ಲಿ ಯಾವುದೇ ರಾಜಕೀಯವಿಲ್ಲ. ನನ್ನ ಭವಿಷ್ಯದ ರಾಜಕೀಯವನ್ನು ಸಮಯ ನಿರ್ಧರಿಸುತ್ತದೆ” ಎನ್ನುವ ಮೂಲಕ ತಾವು ಟಿಎಂಸಿ ಹಾದಿಯಲ್ಲಿದ್ದೇನೆ ಎಂಬ ಸುಳಿವು ನೀಡಿದ್ದಾರೆ.
ಟಿಎಂಸಿಯಿಂದ ಬಿಜೆಪಿಗೆ ಬಂದು ನೋಪುರದಿಂದ ಶಾಸಕನಾಗಿರುವ ಸುನೀಲ್ ಸಿಂಗ್ ಮಾತನಾಡಿ “ಮುಕುಲ್ ರಾಯ್‌ರವರ ನಿರ್ಗಮನ ಬಿಜೆಪಿ ಮೇಲೆ ನಕರಾತ್ಮಕ ಪರಿಣಾಮ ಬೀರಲಿದೆ. ನಾನು ಮುಕುಲ್ ರಾಯ್‌ರವರೊಂದಿಗೆ ಬಿಜೆಪಿಗೆ ಬಂದಿದ್ದೆ. ಭವಿಷ್ಯದಲ್ಲಿ ಏನಾಗುತ್ತದೆಯೋ ನೋಡೋಣ” ಎಂದಿದ್ದಾರೆ.
ಇದಕ್ಕೆ ತದ್ವಿರುದ್ದವಾಗಿ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ “ಮುಕುಲ್ ರಾಯ್ ನಿರ್ಗಮನ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದಿದ್ದಾರೆ.
ಒಟ್ಟಿನಲ್ಲಿ ಮತ್ತಷ್ಟು ಜನ ಮುಕುಲ್ ರಾಯ್ ಹಾದಿಯಲ್ಲಿದ್ದಾರೆ. ಅತ್ತ ಟಿಎಂಸಿಯ ಮಮತಾ ಬ್ಯಾನರ್ಜಿ ಸಹ ಮತ್ತಷ್ಟು ಜನರನ್ನು ಸೆಳೆಯಲು ಮಿಷನ್ ಒಂದನ್ನು ರೂಪಿಸಿದ್ದಾರೆ. ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ ಕಾದು ನೋಡಬೇಕಿದೆ.
ಇದನ್ನೂ ಓದಿ: ಮುಕುಲ್ ರಾಯ್ ಬಿಜೆಪಿ ತೊರೆಯಲು ಕಾರಣಗಳೇನು?


