‘ಭೀಮಾ ಕೋರೆಗಾಂವ್’ ಹೋರಾಟಗಾರರ ಬಿಡುಗಡೆ ಮಾಡಿ: ಮೋದಿಗೆ ನೊಬೆಲ್ ಪ್ರಶಸ್ತಿ ವಿಜೇತರು ಮತ್ತು ಯುರೋಪಿಯನ್‌ ಸಂಸದರ ಪತ್ರ
ಭಾಷಾಶಾಸ್ತ್ರಜ್ಞ ನೋಮ್ ಚೋಮ್ಸ್ಕಿ ಹಾಗೂ ನೊಬೆಲ್ ಪ್ರಶಸ್ತಿ ವಿಜೇತರರಾದ ಓಲ್ಗಾ ಟೋಕಾರ್ಜುಕ್ ಮತ್ತು ವೋಲ್ ಸೊಯಿಂಕಾ

ಭೀಮಾ ಕೊರೆಗಾಂವ್‌ನ ರಾಜಕೀಯ ಖೈದಿಗಳನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಶಿಕ್ಷಣ ತಜ್ಞರು, ಯುರೋಪಿಯನ್ ಯೂನಿಯನ್ ಸಂಸದರು, ನೊಬೆಲ್ ಪ್ರಶಸ್ತಿ ವಿಜೇತರು ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ವ್ಯಕ್ತಿಗಳು ಪ್ರಧಾನಿ ನರೇಂದ್ರ ಮೋದಿ, ಭಾರತದ ಮುಖ್ಯ ನ್ಯಾಯಮೂರ್ತಿ, ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಇತರ ಭಾರತೀಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಭಾರತದ ಜೈಲುಗಳ ಶೋಚನೀಯವಾದ ನೈರ್ಮಲ್ಯ ಪರಿಸ್ಥಿತಿಯಲ್ಲಿ ಮಾನವ ಹಕ್ಕುಗಳ ಹೋರಾಟಗಾರರನ್ನು ಬಂಧಿಸುವುದು ಮತ್ತು ಸೂಕ್ತವಾದ ವೈದ್ಯಕೀಯ ಆರೈಕೆಯ ನೀಡದೆ ಇರುವುದರ ಬಗ್ಗೆ ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ. ಬಂಧಿತರಾಗಿರುವ ರಾಜಕೀಯ ಕೈದಿಗಳು ಹೊಸ ಮತ್ತು ಹೆಚ್ಚು ತೀವ್ರವಾದ ಕೊರೊನಾ ವೈರಸ್ ರೋಗಕ್ಕೆ ತುತ್ತಾಗುವ ಅಪಾಯವಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಕೊರೊನಾ ಹಿನ್ನಲೆಯಲ್ಲಿ ಭಾರತದ ರಾಜಕೀಯ ಕೈದಿಗಳಿಗೂ ಸೇರಿ, ಇತರ ಕೈದಿಗಳನ್ನು ಬಿಡುಗಡೆ ಮಾಡುವ ತಾತ್ಕಾಲಿಕ ಆಡಳಿತಾತ್ಮಕ ಆದೇಶವನ್ನು ನೀಡಬೇಕು ಎಂದು ಪತ್ರವು ಕೋರಿದೆ.

ಇದನ್ನೂ ಓದಿ: ಮಹಾತ್ಮ ಗಾಂಧಿಯವರ ಮರಿ ಮೊಮ್ಮಗಳು ದಕ್ಷಿಣ ಆಫ್ರಿಕಾದ ಜೈಲಿನಲ್ಲಿ ಬಂಧಿ

ಅಂತಾರಾಷ್ಟ್ರೀಯ ಖ್ಯಾತಿಯ ಗಣ್ಯರು ಈ ಪತ್ರಕ್ಕೆ ಸಹಿ ಹಾಕಿದ್ದು, ಅವುಗಳಲ್ಲಿ ಖ್ಯಾತ ಶೈಕ್ಷಣಿಕ ಮತ್ತು ಭಾಷಾಶಾಸ್ತ್ರಜ್ಞ ನೋಮ್ ಚೋಮ್ಸ್ಕಿ, ಅನಿಯಂತ್ರಿತ ಬಂಧನ ಕುರಿತ ವಿಶ್ವಸಂಸ್ಥೆಯ ಕಾರ್ಯನಿರತ ಗುಂಪಿನ ಮಾಜಿ ಅಧ್ಯಕ್ಷ ಜೋಸ್ ಆಂಟೋನಿಯೊ ಗುವೇರಾ-ಬರ್ಮಡೆಜ್, ನೊಬೆಲ್ ಪ್ರಶಸ್ತಿ ವಿಜೇತರರಾದ ಓಲ್ಗಾ ಟೋಕಾರ್ಜುಕ್ ಮತ್ತು ವೋಲ್ ಸೊಯಿಂಕಾ, ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪಾರ್ಥಾ ಚಟರ್ಜಿ, ಬ್ರೌನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅಶುತೋಷ್ ವರ್ಶ್ನಿ, ಮಾನವ ಹಕ್ಕುಗಳ ಕಾರ್ಯಕರ್ತ ಶಾಹಿದುಲ್ ಆಲಂ, ದಿ ಗಾರ್ಡಿಯನ್ ಯುಕೆ ಮಾಜಿ ಪ್ರಧಾನ ಸಂಪಾದಕ ಅಲನ್ ರಸ್ಬ್ರಿಡ್ಜರ್ ಮತ್ತು ಪತ್ರಕರ್ತ ನವೋಮಿ ಕ್ಲೈನ್ ಸಹಾಕಿದ್ದಾರೆ.

ನೀರು ಮತ್ತು ವೈದ್ಯಕೀಯ ಸೌಲಭ್ಯಗಳ ಕೊರತೆಯಿರುವ ಕಿಕ್ಕಿರಿದ ಕಾರಾಗೃಹಗಳು ರಾಜಕೀಯ ಕೈದಿಗಳಿಗೆ ಗಂಭೀರ ಆರೋಗ್ಯದ ಅಪಾಯ ಉಂಟುಮಾಡುತ್ತವೆ ಎಂದು ಪತ್ರದಲ್ಲಿ ಸೂಚಿಸಲಾಗಿದೆ. ಈ ರಾಜಕೀಯ ಕೈದಿಗಳಲ್ಲಿ ಹಲವರು ಈಗಾಗಲೇ ಕೊರೊನಾಗೆ ತುತ್ತಾಗಿದ್ದರು ಮತ್ತು ಅವರ ಆರೋಗ್ಯದ ಕುರಿತು ನಿರ್ಲಕ್ಷ್ಯ ತಾಳುವ ಬಗ್ಗೆ ಆರೋಪಗಳೂ ಕೇಳಿ ಬಂದಿತ್ತು.

ಭೀಮಾ ಕೊರೆಗಾಂವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಧೀರ್ ಧವಾಲೆ, ದಲಿತ ಹಕ್ಕುಗಳ ಹೋರಾಟಗಾರ ಮಹೇಶ್ ರೌತ್, ನಾಗ್ಪುರ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಸಾಹಿತ್ಯ ವಿಭಾಗದ ಮುಖ್ಯಸ್ಥರಾಗಿದ್ದ ಶೋಮಾ ಸೇನ್, ವಕೀಲರಾದ ಅರುಣ್ ಫೆರೇರಾ ಮತ್ತು ವಕೀಲೆ ಆದಿವಾಸಿ ಹಕ್ಕುಗಳ ಹೋರಾಟಗಾರ್ತಿ ಸುಧಾ ಭಾರದ್ವಾಜ್, ಕ್ರಾಂತಿಕಾರಿ ಬರಹಗಾರ ವರವರ ರಾವ್, ಸಾಮಾಜಿಕ ಹೋರಾಟಗಾರ ವೆರ್ನಾನ್ ಗೊನ್ಸಾಲ್ವೆಸ್, ಕೈದಿಗಳ ಹಕ್ಕುಗಳ ಹೋರಾಟಗಾರ ರೋನಾ ವಿಲ್ಸನ್, ವಕೀಲ ಸುರೇಂದ್ರ ಗ್ಯಾಡ್ಲಿಂಗ್, ಫಾದರ್ ಸ್ಟಾನ್ ಸ್ವಾಮಿ, ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಹನಿ ಬಾಬು, ವಿದ್ವಾಂಸ ಮತ್ತು ದಲಿತ ಹಕ್ಕುಗಳ ಹೋರಾಟಗಾರ ಆನಂದ್ ತೇಲ್ತುಂಬ್ಡೆ, ನಾಗರಿಕ ಸ್ವಾತಂತ್ರ್ಯ ಹೋರಾಟಗಾರ ಗೌತಮ್ ನವಲಖಾ , ಕಬೀರ್ ಕಲಾ ಮಂಚ್‌ನ ಸದಸ್ಯರಾದ ಸಾಗರ್ ಗೂರ್ಖೆ, ರಮೇಶ್ ಘೈಚೋರ್ ಮತ್ತು ಜ್ಯೋತಿ ಜಗ್ತಾಪ್ ಸೇರಿ ಒಟ್ಟು 16 ಜನರು ಬಂಧನದಲ್ಲಿದ್ದಾರೆ.

ಪಂಜಾಬ್‌- ಆಡಳಿತರೂಢ ಕಾಂಗ್ರೆಸ್‌ ಆಂತರಿಕ ಕಚ್ಚಾಟ ಬೀದಿಗೆ: ಬೆಂಬಲಿಗರ ಪೋಸ್ಟರ್‌ ಯುದ್ಧ

1 COMMENT

  1. ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಜೈ ಭೀಮ್ ಜೈ ಟಿಪ್ಪು ಸುಲ್ತಾನ್

LEAVE A REPLY

Please enter your comment!
Please enter your name here