ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕುರಿತು ವ್ಯಂಗ್ಯ ಮಾಡಿದ್ದಾರೆ ಎಂಬ ಆರೋಪದಲ್ಲಿ ಬಂಧಿತನಾಗಿದ್ದ ಸ್ಟಾಂಡ್‌ಅಪ್ ಹಾಸ್ಯ ಕಲಾವಿದ ಮುನಾವರ್ ಫಾರೂಕಿ ತಮ್ಮ ಒಂದು ತಿಂಗಳ ಬಂಧನದಿಂದ ಭಾನುವಾರ ಬಿಡುಗಡೆಗೊಂಡರು.
ಅವರಿಗೆ ಶುಕ್ರವಾರ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಆದರೆ ಬಿಡುಡೆಗೂ ಮೊದಲು ಇಂದೋರ್ ಜೈಲಿನ ಅಧಿಕಾರಿಗಳು, ನಾವು ಇನ್ನಷ್ಟೇ ಸುಪ್ರೀಂಕೋರ್ಟ್ ಆದೇಶವನ್ನು ಸ್ವೀಕರಿಸಬೇಕಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಸ್ಟಾಂಡ್‌ಅಪ್ ಹಾಸ್ಯ ಕಲಾವಿದ ಮುನಾವರ್ ಫಾರೂಕಿಗೆ ಮಧ್ಯಂತರ ಜಾಮೀನು
ಮಧ್ಯರಾತ್ರಿಯ ನಂತರ ಮುನಾವರ್ ಬಿಡುಗಡೆಗೊಂಡಿದ್ದು, “ನನಗೆ ನ್ಯಾಯಾಂಗದಲ್ಲಿ ಸಂಪೂರ್ಣ ನಂಬಿಕೆ ಇದೆ. ಪ್ರಕರಣವು ನ್ಯಾಯಾಲಯದ ಮುಂದೆ ಇರುವುದರಿಂದ, ಈ ಸಂದರ್ಭದಲ್ಲಿ ಯಾವುದೆ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ” ಎಂದು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಶುಕ್ರವಾರದಂದು ಸುಪ್ರೀಂಕೋಟ್, ಮುನಾವರ್ ಫಾರೂಕಿಯ ಬಂಧನಕ್ಕೂ ಮುನ್ನ ನಿಯಮಾವಳಿಗಳನ್ನು ಅನುಸರಿಸಲಾಗಿಲ್ಲ ಮತ್ತು ಎಫ್‌ಐಆರ್ ಅಸ್ಪಷ್ಟವಾಗಿದೆ ಎಂದು ಮಧ್ಯಪ್ರದೇಶ ಸರ್ಕಾರಕ್ಕೆ ನೋಟಿಸ್ ನೀಡಿದೆ. ಅಲ್ಲದೆ ಉತ್ತರ ಪ್ರದೇಶ ಪೊಲೀಸರು ಅವರ ವಿರುದ್ಧ ಹೊರಡಿಸಿದ ಪ್ರೊಡಕ್ಷನ್ ವಾರಂಟ್ ಅನ್ನು ಸಹ ತಡೆಹಿಡಿದಿತ್ತು.
ಮುನಾವರ್ ಫಾರೂಕಿ ಮತ್ತು ಸಹ ಆರೋಪಿ ನಳಿನ್ ಯಾದವ್ ಅವರು ಮೂರು ಬಾರಿ ಜಾಮೀನು ಅರ್ಜಿ ಹಾಕಿದ್ದರೂ ಸಹ ತಿರಸ್ಕೃತಗೊಂಡಿದ್ದವು. ಜನವರಿ 28 ರಂದು ಜಾಮೀನು ಅರ್ಜಿಯನ್ನು ಮಧ್ಯಪ್ರದೇಶದ ಹೈಕೋರ್ಟ್‌ನ ಇಂದೋರ್ ನ್ಯಾಯಪೀಠ ಗುರುವಾರ ತಿರಸ್ಕರಿಸಿತ್ತು.
ಇದನ್ನೂ ಓದಿ: ಹಿಂದೂ ಭಾವನೆಗೆ ಧಕ್ಕೆ ಆರೋಪ: ಹಾಸ್ಯ ಕಲಾವಿದ ಮುನಾವರ್ ಫಾರೂಕಿ ಜಾಮೀನು ತಿರಸ್ಕೃತ
ಹೊಸ ವರ್ಷಾಚರಣೆಯ ಕಾರ್ಯಕ್ರಮವೊಂದರಲ್ಲಿ ಹಿಂದೂ ದೇವತೆಗಳನ್ನು ಹಾಗೂ ಒಕ್ಕೂಟದ ಸರ್ಕಾರದ ಗೃಹ ಸಚಿವ ಅಮಿತ್ ಶಾ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಹಾಸ್ಯ ಕಲಾವಿದ ಮತ್ತು ಇತರೆ ನಾಲ್ಕು ಜನ ಕಾರ್ಯಕ್ರಮ ಸಂಘಟಕರನ್ನು ಪೊಲೀಸರು ಜನವರಿ 2 ರಂದು ಬಂಧಿಸಿದ್ದರು. ಬಂಧನದ ಸಮಯದಲ್ಲಿ ಪೊಲೀಸರ ಸಮ್ಮುಖದಲ್ಲೇ ವ್ಯಕ್ತಿಯೊಬ್ಬರು ಥಳಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿ ಭಾರಿ ಆಕ್ರೋಶ ಉಂಟು ಮಾಡಿತ್ತು.
ಮುನಾವರ್ ಫಾರೂಕಿ ಸ್ಥಳೀಯ ರೆಸ್ಟೋರೆಂಟ್‌ವೊಂದರಲ್ಲಿ ತಮ್ಮ ಪ್ರದರ್ಶನವನ್ನು ಪ್ರಾರಂಭಿಸುವ ಮುನ್ನ ಇಂದೋರ್‌ನ ಬಿಜೆಪಿ ಶಾಸಕ ಮಾಲಿನಿ ಸಿಂಗ್ ಗೌಡ್ ಅವರ ಪುತ್ರ, ಹಿಂದೂ ರಕ್ಷಕ ಸಂಘಟನ್ ಮುಖ್ಯಸ್ಥ ಏಕಲವ್ಯ ಸಿಂಗ್ ಗೌಡ್ ದೂರಿನ ಮೇರೆಗೆ ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಹಿಂದೂ ದೇವತೆಗಳ ಅಪಹಾಸ್ಯ: ಹಾಸ್ಯ ನಟನ ವಿರುದ್ದ ಯಾವುದೇ ಪುರಾವೆಯಿಲ್ಲ ಎಂದ ಪೊಲೀಸರು


