“ಶಾಸಕ ಮುನಿರತ್ನ ಇಬ್ಬರು ಮಾಜಿ ಮುಖ್ಯಂತ್ರಿಗಳನ್ನು ಹನಿಟ್ರ್ಯಾಪ್ ಮಾಡಿದ್ದಾರೆ. ನನಗೆ ಸರ್ಕಾರದಿಂದ ಭದ್ರತೆ ಕೊಟ್ಟರೆ ಆ ಮಾಜಿ ಮುಖ್ಯಮಂತ್ರಿಗಳ ಹೆಸರನ್ನು ಹಾಗೂ ಸಂಬಂಧಿತ ವಿಡಿಯೋವನ್ನು ಕೊಡುತ್ತೇನೆ” ಎಂದು ಮುನಿರತ್ನ ಅವರಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾರೆ ಎನ್ನಲಾದ ಮಹಿಳೆ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಹಿಳೆ “ಮುನಿರತ್ನ ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಹನಿಟ್ರ್ಯಾಪ್ ಮಾಡಿ, ಕಿರುಕುಳ ಕೊಟ್ಟು ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಮುನಿರತ್ನ ಬಳಿ ಯಾವುದೇ ಮಾಧ್ಯಮಗಳ ಬಳಿಯೂ ಇಲ್ಲದಂತಹ ತುಂಬಾ ಅಡ್ವಾನ್ಸ್ಡ್ ಕ್ಯಾಮರಾಗಳಿವೆ. ನಮ್ಮಂಥವರ ಅಸಹಾಯಕತೆ ಬಳಸಿಕೊಂಡು ಮಾಜಿ ಸಿಎಂ, ಸಚಿವರು, ಶಾಸಕರನ್ನು ಹನಿಟ್ರ್ಯಾಪ್ ಮಾಡಿ ವಿಡಿಯೋ ರೆಕಾರ್ಡ್ ಮಾಡಿಸಿದ್ದಾರೆ. ಪೊಲೀಸ್ ಇಲಾಖೆಯ ಎಸಿಪಿ, ಸಿಪಿಐ ಸೇರಿದಂತೆ ಹಿರಿಯ ಅಧಿಕಾರಿಗಳನ್ನೂ ಹನಿಟ್ರ್ಯಾಪ್ ಮಾಡಿಸಿದ್ದಾರೆ. ನನ್ನ ಹಾಗೂ ಮುನಿರತ್ನ ಅವರ ಬ್ರೈನ್ ಮ್ಯಾಪಿಂಗ್ ಮಾಡಿಸಲಿ” ಎಂದು ಶಾಸಕ ಅಶ್ವತ್ಥನಾರಾಯಣ, ಹಾಗೂ ಪ್ರತಿಪಕ್ಷ ನಾಯಕ ಆರ್ ಅಶೋಕ್‌ಗೆ ಸವಾಲು ಹಾಕಿದ್ದಾರೆ.
“ಹನಿಟ್ರ್ಯಾಪ್ ಮಾಡುವುದಕ್ಕೆ ನನ್ನನ್ನು ಬಳಕೆ ಮಾಡಿಕೊಂಡಿಲ್ಲ, ಬೇರೆ ಮಹಿಳೆಯರನ್ನು ಬಳಸಿಕೊಂಡಿದ್ದಾರೆ. ಇದರಲ್ಲಿ ಯಾವುದೇ ಸಿನಿಮಾ ನಟಿಯರು ಇಲ್ಲ. ಹನಿಟ್ರ್ಯಾಪ್‌ಗೆ ಬಳಸಿಕೊಳ್ಳಲಾದ ಸುಮಾರು ಐದಾರು ಸಂತ್ರಸ್ತ ಮಹಿಳೆಯರು ಹೆದರಿಕೊಂಡು ಸುಮ್ಮನಾಗಿದ್ದಾರೆ. ಅವರು ಕೂಡ ನನ್ನಂತೆಯೇ ಹೊರಗೆ ಬಂದರೆ ಎಲ್ಲಾ ಸತ್ಯಗಳೂ ಹೊರಗೆ ಬರಲಿವೆ” ಎಂದಿದ್ದಾರೆ.
“ಅನೇಕ ಮಹಿಳೆಯರನ್ನು ಶಾಸಕ ಮುನಿರತ್ನ ಮಾಜಿ ಮುಖ್ಯಮಂತ್ರಿಗಳು ಹಾಗೂ ಹಲವು ರಾಜಕೀಯ ನಾಯಕರ ಮೇಲೆ ಹನಿಟ್ರ್ಯಾಪ್ ಮಾಡಲು ಬಳಕೆ ಮಾಡಿಕೊಂಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ವಿಜಯೇಂದ್ರ ಅವರ 10 ನಿಮಿಷದ ಅಪಾಯಿಂಟ್‌ಮೆಂಟ್ ಬೇಕಿದೆ. ಹತ್ತೇ ಹತ್ತು ನಿಮಿಷ ಅವರ ಜೊತೆ ಮಾತಾಡಬೇಕು. ಇದಕ್ಕೆ ಅವಕಾಶ ಮಾಡಿಕೊಡಿ. ಇಷ್ಟೆಲ್ಲಾ ಆದರೂ ಮುನಿರತ್ನ ಅವರನ್ನು ಪಕ್ಷದಲ್ಲಿ ಇರಿಸಿಕೊಂಡಿದ್ದೀರಲ್ಲ? ಎಂದು ಕೇಳಬೇಕಿದೆ” ಎಂದು ಮಹಿಳೆ ಹೇಳಿದ್ದಾರೆ.
“2020ರಲ್ಲಿ ಮಮತಾ ವೆಂಕಟೇಶ್ ಎಂಬವರ ಮೂಲಕ ಮುನಿರತ್ನ ಪರಿಚಯ ಆಗಿದ್ದರು. ಒಂದು ದಿನ ನನಗೆ ವಿಡಿಯೋ ಕರೆ ಮಾಡಿದ್ದರು. ಬಳಿಕ ನನ್ನನ್ನು ಅವರ ಬಳಿ ಕರೆಸಿಕೊಂಡು ಗೋದಾಮಿನ ಬಳಿ ಕರೆದೊಯ್ದು ಹೆದರಿಸಿ ಅತ್ಯಾಚಾರ ಮಾಡಿದ್ದಾರೆ. ಅವರಿಗೆ ಜಾಮೀನು ಸಿಕ್ಕಿ ಹೊರ ಬಂದರೆ ನನಗೆ ಜೀವ ಭಯ ಇದೆ” ಎಂದಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು


