ಕೊರೊನಾ ವೈರಸ್ ಗೆ ಬಲಿಯಾದ ಜನರನ್ನು ತನ್ನ ನಿವಾಸದ ಬಳಿಯಿರುವ ಸ್ಮಶಾನದಲ್ಲಿ ಸಮಾಧಿ ಮಾಡುವುದನ್ನು ವಿರೋಧಿಸಿ ಮುಂಬೈ ನಿವಾಸಿ ಹಾಕಿದ್ದ ಮನವಿಯಲ್ಲಿ ಮಧ್ಯಪ್ರವೇಶಿಸಲು ಕೋರಿ ಜಮಿಯತ್ ಉಲಾಮಾ-ಇ-ಹಿಂದ್ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ.
ತನ್ನ ಮನೆಯ ಪಕ್ಕದಲ್ಲಿರುವ ಸ್ಮಶಾನದಲ್ಲಿ ಕೊರೊನಾ ವೈರಸಿನಿಂದ ಮೃತಪಟ್ಟವರನ್ನು ಸಮಾಧಿ ಮಾಡಬಾರದು ಎಂದು ಕೋರಿ ಬಾಂಬೆ ಹೈಕೋರ್ಟಿಗೆ ಸ್ಥಳೀಯ ನಿವಾಸಿ ಪ್ರದೀಪ್ ಘಾಂಡಿ ಅರ್ಜಿ ಸಲ್ಲಿಸಿದ್ದರು. ಇದನ್ನು ಏಪ್ರಿಲ್ 27 ರಂದು ಬಾಂಬೆ ಹೈಕೋರ್ಟ್ ತಿರಸ್ಕರಿಸಿದ ನಂತರ ಪ್ರದೀಪ್ ಸುಪ್ರೀಂಕೋರ್ಟಿಗೆ ತೆರಳಿದ್ದರು. ಅವರು ಬಾಂದ್ರಾ ವೆಸ್ಟ್ ನ ಸ್ಮಶಾನದಲ್ಲಿ ಕೊರೊನಾ ರೋಗಿಗಳ ಸಮಾಧಿ ಮಾಡುವುದರಿಂದ ಪಕ್ಕದ ಪ್ರದೇಶಗಳಿಗೂ ಹರಡುತ್ತದೆ ಎಂದು ವಾದಿಸಿದ್ದರು.
ಮೇ 4 ರಂದು ಹೈಕೋರ್ಟ್ ಆದೇಶದ ವಿರುದ್ಧ ಪ್ರದೀಪ್ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವ ಸಾಧ್ಯತೆ ಇದೆ. ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಈ ವಿಷಯವನ್ನು ಪಟ್ಟಿ ಮಾಡಲಾಗಿದೆ.
ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಪ್ರಯತ್ನಿಸುತ್ತಿರುವ ಜಮಿಯತ್ ಉಲಾಮಾ-ಇ-ಹಿಂದ್ ಕೊರೊನಾ ಸೋಂಕಿತರ ಶವಗಳನ್ನು ಹೂಳುವುದರಿಂದ ವೈರಸ್ ಹರಡುತ್ತದೆ ಎಂಬ ಆತಂಕವು ಆಧಾರರಹಿತವಾಗಿದೆ. ಸಮಾಧಿ ಮಾಡುವುದರಿಂದ ಯಾವುದೇ ಅಪಾಯವಿಲ್ಲ ಎಂದು ಹೇಳಿದೆ.
ಮೃತ ದೇಹಗಳನ್ನು ಸಮಾಧಿ ಮಾಡುವುದು ಇಸ್ಲಾಂ ಧರ್ಮದ ಆಚರಣೆಯಾಗಿದೆ. ಅದರಂತೆ ಕ್ರಿಶ್ಚಿಯನ್ ಧರ್ಮದಂತೆ ಇತರ ಧರ್ಮಗಳಲ್ಲೂ ಇದನ್ನು ಆಚರಿಸಲಾಗುತ್ತದೆ. ಇದು ಸಂವಿಧಾನ ನೀಡುವ ಹಕ್ಕಾಗಿದ್ದು, ಸಂವಿಧಾನದ 25 ನೇ ಪರಿಚ್ಛೇದದ ಅಡಿಯಲ್ಲಿ ಬರುವ ಧರ್ಮವನ್ನು ಆಚರಿಸುವ ಹಕ್ಕಿನ ಭಾಗವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕೊರನಾದಿಂದ ಸಾವನ್ನಪ್ಪಿದ ವ್ಯಕ್ತಿಗಳ ದೇಹಗಳಿಂದ ಸೋಂಕು ಹರಡುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಮನವಿಯಲ್ಲಿ ವಾದಿಸಲಾಗಿದೆ. ಅಲ್ಲದೆ ಕೊರೊನಾ ಸೋಂಕಿತ ವ್ಯಕ್ತಿಗಳ ಸಮಾಧಿ ಮಾಡಿರುವುದರಿಂದ ಅರ್ಜಿದಾರರ ನಿವಾಸವನ್ನು ಒಳಗೊಂಡಿರುವ ನೆರೆಯ ಪ್ರದೇಶಗಳಲ್ಲಿ ವೈರಲ್ ಸೋಂಕಿನ ಹರಡಿದೆ ಎಂಬುದಕ್ಕೆ ಕೂಡಾ ಯಾವುದೇ ಪುರಾವೆಗಳಿಲ್ಲ ಎಂದು ಜಮಿಯತ್ ಉಲಾಮಾ-ಇ-ಹಿಂದ್ ತನ್ನ ಮನವಿಯಲ್ಲಿ ತಿಳಿಸಿದೆ.
ಜಮಿಯತ್ ಉಲಾಮಾ-ಇ-ಹಿಂದ್ ಸಾಂಕ್ರಾಮಿಕ ಕಾಯಿಲೆಗೆ ಬಲಿಯಾದ ವ್ಯಕ್ತಿಗಳನ್ನು ದಹನ ಮಾಡಬೇಕು ಎಂಬುದು ಕಟ್ಟುಕತೆಯಲ್ಲದೆ ಮತ್ತೇನಲ್ಲ ಎಂದು ವಾದಿಸಿದೆ.
ಇದನ್ನೂ ಓದಿ: ಈ ಉನ್ಮಾದವನ್ನು ಸೃಷ್ಟಿಸಿದವರ್‍ಯಾರು? ಏನಾಗಿದೆ ನನ್ನ ಮಂಗಳೂರಿಗೆ ?


