ಮಹಾರಾಷ್ಟ್ರದ ಸಿಂಧುದುರ್ಗ ಬಳಿಯ ಮಾಲ್ವಾನ್‌ನಲ್ಲಿ ಛತ್ರಪತಿ ಶಿವಾಜಿಯ 35 ಅಡಿಯ ಪ್ರತಿಮೆ ಕುಸಿದು ಬಿದ್ದಿರುವುದು ‘ಮಹಾಯುತಿ’ (ಬಿಜೆಪಿ-ಶಿವಸೇನೆ-ಎನ್‌ಸಿಪಿ ಮೈತ್ರಿಕೂಟ) ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಭಾನುವಾರ ಪ್ರತಿಪಕ್ಷಗಳ ಒಕ್ಕೂಟ ‘ಮಹಾ ವಿಕಾಸ ಅಘಾಡಿ’ (ಕಾಂಗ್ರೆಸ್-ಶಿವಸೇನೆ ಯುಬಿಟಿ-ಎನ್‌ಸಿಪಿ ಎಸ್‌ಪಿ) ನೇತೃತ್ವದಲ್ಲಿ ಮುಂಬೈನಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ.
ನಗರದ ಹುತಾತ್ಮ ಚೌಕ್‌ನಿಂದ ಗೇಟ್‌ವೇ ಆಫ್ ಇಂಡಿಯಾದವರೆಗೆ ಭಾರೀ ಸಂಖ್ಯೆಯಲ್ಲಿ ಜನರು ಚಪ್ಪಲಿ ಹಿಡಿದು ‘ಜೋಡೆ ಮಾರೋ’ (ಚಪ್ಪಲಿಯಲ್ಲಿ ಹೊಡೆಯಿರಿ) ಘೋಷಣೆಯೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ನಾನಾ ಪಟೋಲೆ, ಶಿವಸೇನೆ-ಯುಬಿಟಿ ನಾಯಕ ಉದ್ದವ್ ಠಾಕ್ರೆ ಮತ್ತು ಎನ್‌ಸಿಪಿ-ಎಸ್‌ಪಿ ನಾಯಕ ಶರದ್ ಪವಾರ್ ಸೇರಿದಂತೆ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಕಳೆದ 8 ತಿಂಗಳ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದ ಶಿವಾಜಿ ಪ್ರತಿಮೆ ಕುಸಿದು ಬಿದ್ದಿದೆ. ಕಳಪೆ ಕಾಮಗಾರಿ ಮತ್ತು ಭ್ರಷ್ಟಾಚಾರವೇ ಇದಕ್ಕೆ ಕಾರಣ ಎಂದು ಪ್ರತಿಪಕ್ಷಗಳ ಒಕ್ಕೂಟ ಆರೋಪಿಸಿದೆ.
ಪ್ರತಿಪಕ್ಷಗಳ ಪ್ರತಿಭಟನೆ ಹಿನ್ನೆಲೆ, ಗೇಟ್‌ವೇ ಆಫ್ ಇಂಡಿಯಾ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪ್ರವಾಸಿಗರ ಸ್ಮಾರಕ ಭೇಟಿಗೆ ನಿರ್ಬಂಧ ವಿಧಿಸಲಾಗಿತ್ತು.
ಶಿವಾಜಿ ಪ್ರತಿಮೆ ಕುಸಿದು ಬಿದ್ದಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಮಹಾರಾಷ್ಟ್ರದ ಜನತೆಯ ಕ್ಷಮೆಯಾಚಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಪ್ರತಿಪಕ್ಷ ನಾಯಕರು, “ಮಹಾರಾಷ್ಟ್ರದ ಹೆಮ್ಮೆ ಶಿವಾಜಿಯ ಪ್ರತಿಮೆ ಕುಸಿದು ಬಿದ್ದಿದೆ. ಆದ್ದರಿಂದ ಶಿವದ್ರೋಹಿ ಭ್ರಷ್ಟರಿಗೆ ಕ್ಷಮೆ ಇಲ್ಲ. ಕಳಪೆ ಕಾಮಗಾರಿಯ ಮೂಲಕ ಮಹಾಯುತಿ ಸರ್ಕಾರ ಶಿವಾಜಿಯನ್ನು ಅವಮಾನಿಸಿದೆ. ಇವರಿಗೆ ತಕ್ಕ ಪಾಠ ಕಲಿಸುವ ಉದ್ದೇಶದಿಂದ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ” ಎಂದು ಹೇಳಿದ್ದಾರೆ.
ಪ್ರತಿಮೆ ಕುಸಿದು ಬಿದ್ದ ಪ್ರಕರಣ ಸಂಬಂಧ ಪ್ರತಿಮೆ ನಿರ್ಮಾಣ ಯೋಜನೆಯ ರಚನಾತ್ಮಕ ಸಲಹೆಗಾರ ಮತ್ತು ಗುತ್ತಿಗೆದಾರನನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಿರುದ್ಧ ಕೊಲೆ ಯತ್ನ, ನರಹತ್ಯೆ ಹಾಗೂ ಜೀವ ಮತ್ತು ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಆರೋಪಗಳ ಮೇಲೆ ಎಫ್‌ಐಆರ್ ದಾಖಲಾಗಿದೆ.
ಇದನ್ನೂ ಓದಿ : ಎಎಪಿ ಕೌನ್ಸಿಲರ್ ರಾಮಚಂದ್ರ ಅವರನ್ನು ಬಿಜೆಪಿ ಅಪಹರಿಸಿದೆ: ಮನೀಶ್ ಸಿಸೋಡಿಯಾ


