Homeಮುಖಪುಟನಚ್ಚತಿರಂ ನಗರ್ಗಿರದು: ಮನುವಾದಕ್ಕೆ ತಿರುಗೇಟು; ಮನಪರಿವರ್ತನೆಗೆ ಅವಕಾಶ- ಇದು ಪ.ರಂಜಿತ್‌ ಪ್ರೇಮಲೋಕ

ನಚ್ಚತಿರಂ ನಗರ್ಗಿರದು: ಮನುವಾದಕ್ಕೆ ತಿರುಗೇಟು; ಮನಪರಿವರ್ತನೆಗೆ ಅವಕಾಶ- ಇದು ಪ.ರಂಜಿತ್‌ ಪ್ರೇಮಲೋಕ

- Advertisement -
- Advertisement -

ದೇವನೂರ ಮಹಾದೇವ ಅವರು ತಮ್ಮ ಕೃತಿಗಳಲ್ಲಿ ಚಿತ್ರಿಸಿದ ಮಹಿಳಾ ಪಾತ್ರಗಳು ಎಂದಿಗೂ ಕನ್ನಡ ಸಾಹಿತ್ಯ ಲೋಕದಲ್ಲಿ ಅದ್ವಿತೀಯವಾಗಿ ನೆಲೆಸಿವೆ. ದಲಿತ ಕಥನಗಳಲ್ಲಿ ಬರುವ ಮಹಿಳೆಯರು, ಗಂಡಸರ ಮುಂದೆ ನಾಚುತ್ತಾ, ಹೆಬ್ಬೆರಳು ನೆಲಕ್ಕೆ ಸವರುತ್ತಾ, ಸೆರಗು ತಲೆಯ ಮೇಲೆ ಹಾಕಿಕೊಂಡು ನಿಲ್ಲುವುದಿಲ್ಲ. ಒಡಲಾಳದ ಸಾಕವ್ವನ ಲೋಕ, ಕುಸುಮಬಾಲೆಯ ಕೆಂಪಿ, ತೂರಮ್ಮ- ಹೀಗೆ ಈ ನೆಲದ ಗಟ್ಟಿಗಿತ್ತಿಯರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪಿ.ಲಂಕೇಶರು ಕಂಡ ‘ಅವ್ವ’- ಈ ಮಣ್ಣಿನ ನಿಜದ ಹೆಣ್ಣಿನ ದರ್ಶನ. ‘ಆಕೆ- ಕಪ್ಪುನೆಲ, ಸುಟ್ಟಷ್ಟು ಕಸುವು, ನೊಂದಷ್ಟೂ ಹೂ ಹಣ್ಣು, ಬನದ ಕರಡಿ, ಭಗವದ್ಗೀತೆಯಾಚೆಯ ಬದುಕು’. ತಮಿಳು ಸಿನಿಮಾ ನಿರ್ದೇಶಕ ಪಾ.ರಂಜಿತ್‌ ಸೃಷ್ಟಿಸಿದ ಮಹಿಳಾ ಪಾತ್ರಗಳು ಕೂಡ ಇದಕ್ಕಿಂತ ಭಿನ್ನವೇನಲ್ಲ. ರಂಜಿತ್ ಸಿನಿಮಾಗಳಲ್ಲಿ ಪುರುಷ ಪಾತ್ರಗಳಿಗೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವ ಮಹಿಳಾ ಪಾತ್ರಗಳಿಗೂ ಇದೆ. ರಂಜಿತ್ ನಿರ್ದೇಶನದ, ಇತ್ತೀಚೆಗೆ ತೆರೆಕಂಡ ‘ನಚ್ಚತಿರಂ ನಗರ್ಗಿರದು’ ಸಿನಿಮಾ ಈ ಗಟ್ಟಿತನವನ್ನು ಮತ್ತಷ್ಟು ವಿಸ್ತರಿಸಿದೆ.

‘ನಚ್ಚತಿರಂ ನಗರ್ಗಿರದು’ (ನಕ್ಷತ್ರ ಚಲಿಸುತ್ತಿವೆ) ಎಂಬ ಹೆಸರು ರೂಪಕದಂತಿದೆ. ಇದೊಂದು ಆಶಾವಾದದ ಸಂಕೇತ. ಬೆಳಕಿನುಂಡೆಯೊಂದು ನೆಲವನ್ನು ಸ್ಪರ್ಶಿಸುವ ಕೌತುಕದ ಕ್ಷಣ. ಇಲ್ಲಿನ ಬಹುತೇಕ ಪಾತ್ರಗಳೂ ಆ ಚಲಿಸುವ ನಕ್ಷತ್ರಕ್ಕಾಗಿ ಧ್ಯಾನಿಸುತ್ತಿವೆ. ಪ್ರೀತಿಯ ಅನ್ವೇಷಣೆಯಲ್ಲಿ ತೊಡಗಿರುವ ಇಲ್ಲಿನ ಪ್ರತಿ ಪಾತ್ರಕ್ಕೂ ಮಹತ್ವವಿದೆ. ಆದರೆ ಆ ಕಥೆ ಚಲನೆ ಪಡೆಯುವುದು ರೆನೆ ಎಂಬ ದಲಿತ ಹುಡುಗಿಯ ಸುತ್ತ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ರೆನೆ- ಅಂಬೇಡ್ಕರ್‌ವಾದಿ. ನೋವುಂಡು ಬೆಳೆದ ಅವಳಲ್ಲಿ ತನ್ನ ಅಸ್ಮಿತೆಯ ಕುರಿತು ಯಾವುದೇ ಅಂಜಿಕೆಯಿಲ್ಲ. ‘ಇದು ನಿಮ್ಮ ಸಮಸ್ಯೆಯೇ ಹೊರತು ನನ್ನದ್ದಲ್ಲ’ ಎಂದು ದಿಟ್ಟವಾಗಿ ಹೇಳಬಲ್ಲ ಹೆಣ್ಣುಮಗಳಾಕೆ. ‘ನಾನು ಹೇಗಿರಬೇಕೆಂದು ಇನ್ನೊಬ್ಬರ ಅಪ್ಪಣೆ ನೀಡಬೇಕಿಲ್ಲ’ ಎನ್ನುವ ರೆನೆ ದನದ ಮಾಂಸ ತಿನ್ನುತ್ತಾ, ‘ಇದು ನನ್ನ ಅಸ್ಮಿತೆ’ ಎನ್ನುವವಳು. ಜಾತಿ, ಧರ್ಮಗಳ ಸಂಕೋಲೆಯಲ್ಲಿ ಸಿಲುಕಿರುವ ಮನಸ್ಸುಗಳನ್ನು ನೋಡಿ ಗಹಗಹಿಸಿ ನಗುವವಳು. ‘ತಮಿಳ್‌’ ಎಂಬ ಹೆಸರಿನ ಹುಡುಗಿ ‘ರೆನೆ’ಯಾಗಿ ಗುರುತಿಸಿಕೊಂಡಿದ್ದಾಳೆ. ಈಕೆಯ ಹೆಸರು ‘ತಮಿಳ್‌’ ಎಂದೂ, ಅವಳ ಮೂಲವನ್ನು ಹಂಗಿಸುವ ಜಾತೀಯ ಸುಪ್ತ ಮನಸ್ಥಿತಿಗಳು ಇಲ್ಲಿ ಅನಾವರಣವಾಗುತ್ತವೆ. ಅದ್ಯಾವುದಕ್ಕೂ ಕ್ಯಾರೇ ಎನ್ನದೆ, ಓದಿನ ಮೂಲಕ ಗಟ್ಟಿಯಾದವಳು ರೆನೆ.

ಇದನ್ನೂ ಓದಿರಿ: ಗಾಳಿಪಟ-2: ಯೋಗರಾಜ ಭಟ್ರ ಕಥೆಯಲ್ಲಿ ಲಾಜಿಕ್ಕೂ ಇಲ್ಲ ಮ್ಯಾಜಿಕ್ಕೂ ಇಲ್ಲ!

ಅದೊಂದು ರಂಗಭೂಮಿ ಕಲಾವಿದರ ಪುಟ್ಟ ತಂಡ. ಪ್ರೀತಿಯ ಬಗ್ಗೆ ನಾಟಕವೊಂದನ್ನು ಮಾಡಬೇಕೆಂದು ಹೊರಟಿದೆ. ಪ್ರೀತಿ ಎಂದರೇನು? ಅದಕ್ಕಿರುವ ಮಾನದಂಡ ಯಾವುದು? ಯಾವುದನ್ನು ತೆರೆಯ ಮೇಲೆ ತರಬೇಕೆಂಬ ಚರ್ಚೆಯಲ್ಲಿರುವ ತಂಡವು, ಪ್ರೀತಿಯ ಸುತ್ತಲಿನ ರಾಜಕಾರಣದ ಕುರಿತು ಮಾತನಾಡುತ್ತದೆ. ರಂಜಿತ್‌ ಶೋಧಿಸಲು ಹೊರಟಿದ್ದು ಇದನ್ನೇ. ಪ್ರೀತಿಯೆಂದರೆ ಕೇವಲ ಗಂಡು- ಹೆಣ್ಣಿನ ಸಂಬಂಧಗಳಿಗೆ ಸೀಮಿತ ಜನಪ್ರಿಯ ಗ್ರಹಿಕೆಯನ್ನು ಒಡೆಯುತ್ತಾರೆ ರಂಜಿತ್‌.

ಲೆಸ್ಬಿಯನ್, ಗೇ, ಟ್ರಾನ್ಸ್‌ಜೆಂಡರ್‌, ಗಂಡು- ಹೆಣ್ಣಿನ ನಡುವಿನ ಸಂಬಂಧ- ಇದೆಲ್ಲವನ್ನೂ ಸಮಾಜ ಒಳಗೊಂಡಿದೆ ಎಂಬುದನ್ನು ಚಿತ್ರಿಸುತ್ತಲೇ, ಪ್ರಧಾನವಾಗಿ ರಂಜಿತ್‌ ಚರ್ಚಿಸಿರುವುದು ಜಾತಿ ಸುತ್ತಲಿನ ಪ್ರೀತಿಯ ಕುರಿತು. ಮರ್ಯಾದೆಗೇಡು ಹತ್ಯೆಗಳ ಸುತ್ತಲಿನ ರಾಜಕೀಯದ ಚರ್ಚೆ ನಡೆಸುತ್ತಲೇ ಇಲ್ಲಿನ ಸಂಪ್ರದಾಯವಾದಿ ಮನಸ್ಸುಗಳ ಪರಿವರ್ತನೆಗೆ ಅವಕಾಶ ನೀಡಬೇಕೆಂಬ ಆಶಯವನ್ನು ರಂಜಿತ್ ವ್ಯಕ್ತಪಡಿಸಿದ್ದಾರೆ. ಆದರೆ ತೀವ್ರ ಮೂಲಭೂತವಾದಿಗಳಿಗೆ ‘ಗೂಸಾ’ ಕೊಡುವುದೂ ಅನಿವಾರ್ಯವೆಂದು ರಂಜಿತ್ ನಂಬಿದಂತಿದೆ.

ರೆನೆಯ ‘ನೇಚರ್‌’ (ಬುದ್ಧಿ/ಜಾತೀಯ ಗುಣ) ಬಗ್ಗೆ ಮೂದಲಿಸುವ ಆಕೆಯ ಪ್ರಿಯಕರ ಇನಿಯನ್‌ ಆನಂತರದಲ್ಲಿ ಪರಿತಪಿಸುತ್ತಾನೆ. ಆತನ ಮೂದಲಿಕೆಯನ್ನೆಲ್ಲ ಮೂಲೆಗೆ ತಳ್ಳಿ, ಸ್ವತಂತ್ರವಾಗಿ, ಸ್ವಚ್ಛಂದವಾಗಿ ಇರುವ ರೆನೆಯನ್ನು ಕಂಡು ಆತ ಹೊಟ್ಟೆಕಿಚ್ಚು ಪಡುತ್ತಿರುವವನಂತೆ ಭಾಸವಾದರೂ ಇಂಚಿಂಚೆ ಪಶ್ಚಾತ್ತಾಪವನ್ನೂ ಪಡುತ್ತಿದ್ದಾನೆ. ಇನಿಯನ್‌ನಂತೆಯೇ ಅರ್ಜುನ್ ಎಂಬ ಪಾತ್ರವನ್ನು ನೋಡಬೇಕಾಗುತ್ತದೆ. ಈ ರಂಗತಂಡವನ್ನು ಸೇರಿದ ಅರ್ಜುನ್‌ ಸಂಪ್ರದಾಯವಾದಿಯೂ ಹೌದು. ಗೇ ಸೆಕ್ಸ್‌, ಟಾನ್ಸ್‌ಜೆಂಡರ್‌ ಪ್ರೀತಿ- ಇದ್ಯಾವುದನ್ನೂ ಮುಕ್ತವಾಗಿ ನೋಡದ ಆತ, ರೆನೆಯೊಂದಿಗೆ ಅನುಚಿತವಾಗಿ ವರ್ತಿಸುತ್ತಾನೆ. ಆದರೆ ರೆನೆ ಕ್ಷಮಿಸುವ ಗುಣ ತೋರುತ್ತಾಳೆ. ಆತನ ಮನಪರಿವರ್ತನೆಗೆ ಅವಕಾಶ ನೀಡುತ್ತಾಳೆ.

ಈ ಕಲಾತಂಡ ಪ್ರದರ್ಶಿಸಲಿರುವ ನಾಟಕದಲ್ಲಿ ಮಾರ್ಯಾದೆಗೇಡು ಹತ್ಯೆಯನ್ನು ಢಾಳಾಗಿ ತೋರಿಸಲು ಇಚ್ಚಿಸಿರುವ ನಿರ್ದೇಶಕನಿಗೆ ಕೆಲವು ಸಲಹೆಗಳನ್ನು ಅರ್ಜುನ್ ನೀಡುವ ಮಟ್ಟಕ್ಕೆ ಬದಲಾಗುತ್ತಾನೆ. “ಹೆತ್ತ ಮಗಳನ್ನು ತಂದೆ ಕೊಲ್ಲುವುದು ಸರಿಯೇ? ಇಲ್ಲಿಗೆ ಬರುವ ಮುನ್ನ conservative ಆಗಿದ್ದ ನಾನು ಈಗ ಎಷ್ಟೊಂದು ಬದಲಾಗಿದ್ದೇನೆ. ಸಮಾಜದ ಬದಲಾವಣೆಗೂ ಅವಕಾಶ ನೀಡಬೇಕು” ಎಂಬ ಆಶಯವನ್ನು ಅರ್ಜುನ್ ವ್ಯಕ್ತಪಡಿಸುತ್ತಾನೆ. ರೆನೆಯ ಸ್ವಾಭಿಮಾನ, ದಿಟ್ಟತನಗಳಿಗೆ ಮನಸೋಲುವ ಅರ್ಜುನ್‌, ತನ್ನ ಜಾತಿವಾದಿ ಕೌಟುಂಬಿಕ ವ್ಯವಸ್ಥೆಯಿಂದ ಹೊರಗೆ ಕಾಲಿಡಲು ನಿರ್ಧರಿಸಿರುವುದು ಇದರ ಮುಂದುವರಿದ ಭಾಗ.

ಮನುವಾದಿ ವ್ಯವಸ್ಥೆ ಭಾರತೀಯತೆಯ ಬೇರುಗಳ ಬಗ್ಗೆ ಸದಾ ಮಾತನಾಡುತ್ತದೆ. ಈ ಬೇರುಗಳಲ್ಲಿ ಜಾತಿ ಮೀರಿದ ಪ್ರೀತಿ ನಿಷಿದ್ಧ, ವರ್ಗ ಮೀರಿದ ಸಂಬಂಧ ನಿಷಿದ್ಧ, ಹೆಣ್ಣು-ಗಂಡಿನ ಪ್ರೀತಿಯಾಚೆಯ ಗೇ ಸೆಕ್ಸ್‌, ಲೆಸ್ಬಿಯನ್‌ ಸೆಕ್ಸ್ ನಿಷಿದ್ಧ. ಇದ್ಯಾವುದೂ ನಮ್ಮ ಬೇರುಗಳಲ್ಲ ಎನ್ನುತ್ತದೆ ಮನುವಾದ. ಯಥಾಸ್ಥಿತಿಯನ್ನು ಸಂಪ್ರದಾಯವಾದಿಗಳು ಬಯಸುತ್ತಾರೆ. ಯಾವುದನ್ನು ಭಾರತದ ಬೇರುಗಳೆಂದು ಧಾರ್ಮಿಕ ಮೂಲಭೂತವಾದಿಗಳು ವಾದಿಸುತ್ತಿದ್ದಾರೋ ಅದಕ್ಕೆ ಬಲವಾದ ಕೊಡಲಿಪೆಟ್ಟು ಕೊಟ್ಟಿದ್ದು- ಬಾಬಾ ಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಬರೆದ ಸಂವಿಧಾನ. ಬುದ್ಧನ ಪ್ರೀತಿ, ಕಾರುಣ್ಯ, ಬಸವಾದಿ ಶರಣರ ಪ್ರಜಾಪ್ರಭುತ್ವ ಪರಿಕಲ್ಪನೆಯೇ ಈ ನೆಲದ ನಿಜವಾದ ಬೇರುಗಳು. ಈ ನಿಜದ ಬೇರನ್ನು ಅಲುಗಾಡಿಸಲು ಬರುವ ಮೂಲಭೂತವಾದಿಗಳನ್ನು, ಅಂಬೇಡ್ಕರ್‌ ಆಶಯದಲ್ಲಿ ನಂಬಿಕೆ ಇಟ್ಟ ಮನಸ್ಸುಗಳು ಒಂದಾಗಿ ಹೊಡೆದೋಡಿಸಬೇಕೆಂಬ ಸಂದೇಶವನ್ನು ರಂಜಿತ್‌ ನೀಡಿದ್ದಾರೆ. ಎಳೆಯ ಮಕ್ಕಳ ಮನಸ್ಸಿಗೆ ಮನುವಾದವನ್ನು ತುರುಕುವ ಪ್ರಯತ್ನ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ನಡೆಯುತ್ತಿರುವ ಹೊತ್ತಿನಲ್ಲಿ ರಂಜಿತ್‌, ‘ನಕ್ಷತ್ರಗಳು ಚಲಿಸುತ್ತಿವೆ’ ನೋಡಿದಿರಾ ಎಂದಿದ್ದಾರೆ.

ಇದನ್ನೂ ಓದಿರಿ: ಫಾಸಿಲ್‌ ನಟನೆಯ ‘ಮಲಯನ್‌ಕುಂಜು’ ಸಿನಿಮಾ ‘ಜಾತಿವಾದಿ ಮನಸ್ಥಿತಿ’ಯ ಕುರಿತು ಅನುಕಂಪ ಸೃಷ್ಟಿಸಿದೆಯೇ?

ಪ್ರೀತಿಯ ಉದಾತ್ತ ಆಶಯವನ್ನು ಪ್ರದರ್ಶಿಸುತ್ತಿರುವ ಕಲಾತಂಡದ ಮೇಲೆ ‘ಫ್ರಿಂಜ್‌ ಎಲಿಮೆಂಟ್’ ಒಬ್ಬ ದಾಳಿ ಮಾಡುತ್ತಾನೆ (ನಮ್ಮ ಕರ್ನಾಟಕದ ಶಿವಮೊಗ್ಗದಲ್ಲಿ ‘ಜೊತೆಗಿರುವನು ಚಂದಿರ’ ನಾಟಕಕ್ಕೆ ಅಡ್ಡಿಪಡಿಸಿದ್ದನ್ನು ನೆನೆಯಬಹುದು). ಇಂತಹ ಫ್ರಿಂಜ್‌ಗಳ ಹಿಂದೆ ಮಾಸ್ಟರ್‌ಗಳಿದ್ದಾರೆ, ಪೊಲೀಸ್ ವ್ಯವಸ್ಥೆಯ ರಕ್ಷಣೆ ಇದೆ. ಆದರೆ ಇದೆಲ್ಲವನ್ನೂ ಅಂಬೇಡ್ಕರ್‌ ಎಂಬ ಅಸ್ತ್ರದ ಮೂಲಕ ಸೋಲಿಸಬೇಕಿರುವುದು ಅನಿವಾರ್ಯ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂಬುದನ್ನು ರಂಜಿತ್‌ ಮನಗಾಣಿಸಿದ್ದಾರೆ.

ಇಡೀ ಸಿನಿಮಾದುದ್ದಕ್ಕೂ ಹರಿದಿರುವ ಕಲಾನಿರ್ದೇಶನದ ಸೊಗಸು, ಕಥೆಯ ಸಂದೇಶದ ತೀವ್ರತೆಯನ್ನು ಹೆಚ್ಚಿಸುವ ತೆನ್ಮಾ ಅವರ ಸಂಗೀತ, ಪ್ರೀತಿಯ ಜಿಜ್ಞಾಸೆಗೆ ಬಳಸಿರುವ ಅರ್ಥಪೂರ್ಣ ಸಂಭಾಷಣೆ, ಜಾನಪದೀಯ ರೂಪಕವಾಗಿ ಚಿತ್ರಿಸಲಾಗಿರುವ ಮಾರ್ಯಾದೆ ಹತ್ಯೆಗಳು- ಇವೆಲ್ಲವೂ ‘ನಚ್ಚತಿರಂ ನಗರ್ಗಿರದು’ ಸಿನಿಮಾದ ಕಲಾತ್ಮಕತೆಯನ್ನು ಹೆಚ್ಚಿಸಿವೆ. ರೆನೆಯಾಗಿ ದುಶಾರಾ ವಿಜಯನ್‌, ಇನಿಯನ್‌ ಪಾತ್ರದಲ್ಲಿ ಕಾಳಿದಾಸ್ ಜಯರಾಮ್‌, ಅರ್ಜುನ್ ಆಗಿ ಕಲೈ ಅರಸನ್‌- ಹೀಗೆ ಎಲ್ಲ ಕಲಾವಿದರು ಮನೋಜ್ಞವಾಗಿ ನಟಿಸಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿಯಿದೆ : ಅಖಿಲೇಶ್ ಯಾದವ್ ವ್ಯಂಗ್ಯ

ಕುಸಿಯುವುದರಲ್ಲಿ ರೂಪಾಯಿ ಮತ್ತು ಬಿಜೆಪಿ ವರ್ಚಸ್ಸಿನ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಹಾಗೂ ಅವರ ಸಹವರ್ತಿಗಳ ಭ್ರಷ್ಟಾಚಾರ ಮತ್ತು ದುರ್ನಡತೆಯ ಪ್ರಕರಣಗಳು...

ಅಂತರ್ಧರ್ಮೀಯ ‘ಲಿವ್-ಇನ್’ ಸಂಬಂಧ ಅಪರಾಧವಲ್ಲ: ಅಲಹಾಬಾದ್ ಹೈಕೋರ್ಟ್

ಅಂತರ್ಧರ್ಮೀಯ ಲಿವ್-ಇನ್ ಸಂಬಂಧವನ್ನು ನಿಷೇಧಿಸಲಾಗಿಲ್ಲ ಅಥವಾ ಯಾವುದೇ ಕಾನೂನಿನ ಅಡಿಯಲ್ಲಿ ಅಪರಾಧವಲ್ಲಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್, ಮಹಿಳೆಯ ಕುಟುಂಬದಿಂದ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆ ನೀಡಿದೆ. ಸೋನ್‌ಭದ್ರಾದ ಕಾಜಲ್ ಪ್ರಜಾಪತಿ ಮತ್ತು ಅವರ...

‘ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧಗೊಳಿಸಬೇಕು’; ರಾಜ್ಯಸಭೆಯಲ್ಲಿ ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯ

ಭಾರತದಲ್ಲಿ ವೇತನ ಸಹಿತ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಲು, ಹಂಚಿಕೆಯ ಆರೈಕೆ ಜವಾಬ್ದಾರಿಗಳನ್ನು ಒತ್ತಿಹೇಳಲು ಕಾನೂನನ್ನು ಜಾರಿಗೆ ತರಬೇಕೆಂದು ಎಎಪಿ ಸಂಸದ ರಾಘವ್ ಚಡ್ಡಾ ಒತ್ತಾಯಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ತಂದೆ ಉದ್ಯೋಗ...

ಬಿಜೆಪಿ ಇತರ ರಾಜ್ಯಗಳ ಅಕ್ರಮ ಮತದಾರರನ್ನು ಸೇರಿಸುತ್ತಿದೆ : ಮಮತಾ ಬ್ಯಾನರ್ಜಿ ಆರೋಪ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಮಾ.31) ಬಿಜೆಪಿ ಬಿಹಾರ, ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶದ ಅಕ್ರಮ ಮತದಾರರನ್ನು ರಾಜ್ಯದ ಮತದಾರರ ಪಟ್ಟಿಯಲ್ಲಿ ಸೇರಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು. ಪಶ್ಚಿಮ...