“ಪ್ರಸ್ತುತ ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷರಾದ ಜಗತ್ ಪ್ರಕಾಶ್ ನಡ್ಡಾ ಅವರು ಪಕ್ಷದ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ” ಎಂದು ಪಕ್ಷದ ಹಿರಿಯ ಕಾರ್ಯಕಾರಿಣಿ ಅಮಿತ್ ಶಾ ಅವರು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಘೋಷಿಸಿದ್ದಾರೆ.
2020 ರಲ್ಲಿ ಅಮಿತ್ ಶಾ ಅವರಿಂದ ಪಕ್ಷದ ಉನ್ನತ ಹುದ್ದೆಯನ್ನು ವಹಿಸಿಕೊಂಡ ನಡ್ಡಾ ಅವರ ಅಧಿಕಾರವಧಿಯು ಈ ವರ್ಷದ ಜನವರಿಯಲ್ಲಿ ಕೊನೆಗೊಳ್ಳಲಿದೆ. ಆದರೆ ಈ ವರ್ಷ ಒಂಬತ್ತು ರಾಜ್ಯಗಳ ಚುನಾವಣೆಗಳು ಮತ್ತು 2024 ರಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತಿರುವುದರಿಂದ ಅವರ ಅವಧಿಯನ್ನು ವಿಸ್ತರಿಸುವ ನಿರೀಕ್ಷೆ ಪಕ್ಷದ ಉಳಿದ ನಾಯಕರಿಗೆ ಇತ್ತು.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅಮಿತ್ ಶಾ, “ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಅವಧಿಯನ್ನು ಜೂನ್ 2024 ರವರೆಗೆ ವಿಸ್ತರಿಸಲು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸರ್ವಾನುಮತದಿಂದ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ನಡ್ಡಾ ನೇತೃತ್ವದಲ್ಲಿ ಪಕ್ಷವು 2024 ರ ಲೋಕಸಭೆ ಚುನಾವಣೆಯಲ್ಲಿ 2019 ಕ್ಕಿಂತ ದೊಡ್ಡ ಜನಾದೇಶದೊಂದಿಗೆ ಗೆಲ್ಲುತ್ತದೆ ಎನ್ನುವ ವಿಶ್ವಾಸವಿದೆ” ಎಂದು ಶಾ ಹೇಳಿದರು.
ಇದನ್ನೂ ಓದಿ: ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ಖಾಲಿ ಕುರ್ಚಿಗಳಿಗೆ ಜೆ.ಪಿ ನಡ್ಡಾ ಭಾಷಣ: ಕಾಂಗ್ರೆಸ್, ಜೆಡಿಎಸ್ ಲೇವಡಿ
“ನಡ್ಡಾ ಅವರು ಪ್ರಧಾನಿ ಮೋದಿಯವರ ವಿಶ್ವಾಸ ಗಳಿಸಿದ್ದಾರೆ. ಅವರ ಉತ್ತಮ ಕಾರ್ಯನಿರ್ವಹಣೆಯಿಂದ ಪಕ್ಷವು ಅವರ ಅಧ್ಯಕ್ಷ ಸ್ಥಾನದ ಕಾಲಾವಧಿಯನ್ನು ವಿಸ್ತರಿಸಲು ನಿರ್ಧರಿಸಿದೆ. ನಡ್ಡಾ ಅವರ ನಾಯಕತ್ವದಲ್ಲಿ ಬಿಜೆಪಿ ಅನೇಕ ರಾಜ್ಯ ಚುನಾವಣೆಗಳನ್ನು ಗೆದ್ದಿದೆ. 2024 ರಲ್ಲಿ 2019 ಕ್ಕಿಂತ ದೊಡ್ಡ ಜನಾದೇಶವನ್ನು ಸಾಧಿಸುತ್ತದೆ” ಎಂದು ಒತ್ತಿ ಹೇಳಿದರು.
ಬಿಜೆಪಿ ಪಕ್ಷದ ನಿಯಮಗಳ ಪ್ರಕಾರ, ಒಬ್ಬ ಪಕ್ಷದ ಅಧ್ಯಕ್ಷರು ತಲಾ ಮೂರು ವರ್ಷಗಳಂತೆ ಸತತ ಎರಡು ಅವಧಿಯವರೆಗೂ ಸ್ಥಾನ ಪಡೆಯಬಹುದು. ಕನಿಷ್ಠ 50% ರಾಜ್ಯ ಘಟಕಗಳಲ್ಲಿ ಸಾಂಸ್ಥಿಕ ಚುನಾವಣೆಗಳು ನಡೆದ ನಂತರ, ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಬಹುದು ಎಂಬ ನಿಬಂಧನೆಯೂ ಇದೆ.
“ಈ ವರ್ಷ ನಡೆಯಲಿರುವ ಎಲ್ಲಾ ಒಂಬತ್ತು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ನಾಯಕರು ಗೆಲುವು ಸಾಧಿಸಬೇಕು” ಎಂದು ಸೋಮವಾರ ನಡ್ಡಾ ಹೇಳಿದ್ದರು.
ಇಂದು ಸಂಜೆ ನಡೆಯಲಿರುವ ಸಮಾರೋಪ ಸಮಾರಂಭಕ್ಕೆ ಪಕ್ಷದ ಕೇಂದ್ರ ಸಚಿವರು, ರಾಜ್ಯ ಮುಖ್ಯಮಂತ್ರಿಗಳು ಮತ್ತು ದೇಶಾದ್ಯಂತದ ಸುಮಾರು 350 ನಾಯಕರು ಭಾಗವಹಿಸುತ್ತಿದ್ದು, ಈ ವೇಳೆ ಪಕ್ಷದ ರಾಜಕೀಯ ಮಾರ್ಗಸೂಚಿಯನ್ನು ಪ್ರಧಾನಿ ಮೋದಿ ವಿವರಿಸುವ ನಿರೀಕ್ಷೆಯಿದೆ.


